-->
ಹಾಸ್ಟೆಲ್ - ಹೋಮ್ ಸಿಕ್ನೆಸ್

ಹಾಸ್ಟೆಲ್ - ಹೋಮ್ ಸಿಕ್ನೆಸ್

ಲೇಖಕರು : ಗಿರೀಶ್ ಎಂ ಎನ್ 
ಕೌನ್ಸೆಲಿಂಗ್ ಮನಶಾಸ್ತ್ರಜ್ಞರು 
ಮಹೇಶ್ ಆಸ್ಪತ್ರೆ ಬ್ರಹ್ಮಾವರ
ಉಡುಪಿ ಜಿಲ್ಲೆ
Mob : 8722715472


      
ಹಾಸ್ಟೆಲ್ - ಹೋಮ್ ಸಿಕ್ನೆಸ್ - ಪರಿಣಾಮ ಹಾಗೂ ಪರಿಹಾರಗಳು...

ಮನೆ ಬಿಟ್ಟ ಭಾವನಾತ್ಮಕ ಸಂಕಟ (Homesickness) ಎಂದರೆ, ಮಗು ತಾನು ವಾಸವಿರುವ ಮನೆ, ಕುಟುಂಬ, ಸ್ನೇಹಿತರು ಮತ್ತು ತಮ್ಮ ದಿನನಿತ್ಯದ ಪರಿಸರದಿಂದ ದೂರವಿರುವ ಸಂದರ್ಭ ಉಂಟಾಗುವ ಭಾವನಾತ್ಮಕ ಸಂಕಟ ಮತ್ತು ಹೊಂದಾಣಿಕೆಯ ತೊಂದರೆಯಾಗಿದೆ. ಈ ಸ್ಥಿತಿಯು ಸಾಮಾನ್ಯವಾಗಿ ದುಃಖ, ಆತಂಕ, ಒಂಟಿತನ, ಮನೆಗೆ ಹೋಗುವ ತೀವ್ರ ಆಸೆ, ಏಕಾಗ್ರತೆಯ ಕೊರತೆ ಹಾಗೂ ಕೆಲವೊಮ್ಮೆ ಮಾಲಿಂಗರಿಂಗ್ (ಉದ್ದೇಶಪೂರ್ವಕವಾಗಿ ಅನಾರೋಗ್ಯದ ನಟನೆ) ದೈಹಿಕ ಲಕ್ಷಣಗಳ ರೂಪದಲ್ಲಿ ಕಾಣಿಸಿಕೊಳ್ಳುತ್ತದೆ. 

◼️ ಮನೆ ನೆನಪಾಗಲು ಪ್ರಮುಖ ಕಾರಣಗಳು...

◾ಆಂತರಿಕ ಕಾರಣಗಳು : 

1. ಪೋಷಕರೊಂದಿಗೆ ಅತಿಯಾದ ಭಾವನಾತ್ಮಕ ಬಾಂಧವ್ಯ.

2. ಹೊಸ ಪರಿಸ್ಥಿತಿಗೆ ಹೊಂದಿಕೊಳ್ಳುವ ಸಾಮರ್ಥ್ಯ ಕಡಿಮೆ.

3. ಆತಂಕ (Anxiety) ಅಥವಾ ನಾಚಿಕೆ (Shyness).

4. ಕಡಿಮೆ ಆತ್ಮವಿಶ್ವಾಸ.

5. ಹಿಂದಿನ ಮಾನಸಿಕ ಒತ್ತಡ ಅಥವಾ ಭಯದ ಅನುಭವ.

◾ಬಾಹ್ಯ ಕಾರಣಗಳು....  

1. ಮೊದಲ ಬಾರಿಗೆ ಮನೆಯವರಿಂದ ದೂರವಿರುವುದು.

2. ಅಪರಿಚಿತ ಸ್ಥಳ, ಹೊಸ ಸ್ನೇಹಿತರು, ಹೊಸ ಶಾಲೆ ಇದರಲ್ಲಿ ಎದುರಾಗುವ ಸವಾಲುಗಳು.

3. ವಾರ್ಡನ್ ಅಥವಾ ಶಿಕ್ಷಕರ ಬೆಂಬಲದ ಕೊರತೆ.

4. ಪೋಷಕರ ಅತಿಯಾದ ಭರವಸೆ.

5. ರ‍್ಯಾಗಿಂಗ್, ಬುಲ್ಲಿಯಿಂಗ್ ಅಥವಾ ಸಾಮಾಜಿಕ ಒಂಟಿತನ.

◾ಯಾವ ಸಂದರ್ಭಗಳಲ್ಲಿ ಈ ಸಮಸ್ಯೆ ಹೆಚ್ಚಾಗುತ್ತದೆ.?

1. ಪೋಷಕರನ್ನು ಭೇಟಿಯಾದ ತಕ್ಷಣ ಅಥವಾ ರಜೆಯ ನಂತರ.

2. ಬೇರೆ ಪೋಷಕರು ತಮ್ಮ ಮಕ್ಕಳನ್ನು ನೋಡಲು ಅಥವಾ ಕರೆದುಕೊಂಡು ಹೋಗಲು ಬಂದ ಸಂದರ್ಭ.

3. ಹಬ್ಬ, ಹುಟ್ಟುಹಬ್ಬ, ಕುಟುಂಬ ಕಾರ್ಯಕ್ರಮಗಳ ಸಮಯದಲ್ಲಿ.

4. ಅನಾರೋಗ್ಯ ಅಥವಾ ಪರೀಕ್ಷೆಯ ಸಮಯದಲ್ಲಿ.

5. ಸ್ನೇಹಿತರಿಲ್ಲದಿರುವುದು ಅಥವಾ ಸಹಪಾಠಿಗಳಿಂದ ಕಿರುಕುಳದ ಅನುಭವ.

◾ಹಾಸ್ಟೆಲ್ ಗೆ ಹೊಂದಿಕೊಳ್ಳಲು ಎಷ್ಟು ಸಮಯ ಬೇಕು...? 

1. ಹೆಚ್ಚಿನ ಮಕ್ಕಳು 2–6 ವಾರಗಳಲ್ಲಿ ನಿಧಾನವಾಗಿ ಹೊಂದಿಕೊಳ್ಳುತ್ತಾರೆ.

2. ಕೆಲ ಮಕ್ಕಳಿಗೆ 2–3 ತಿಂಗಳು ಬೇಕಾಗಬಹುದು. ಇದು ವಿದ್ಯಾರ್ಥಿಗಳ ಮನಸ್ಥಿತಿಗಳನ್ನು ಆಧರಿಸಿರುತ್ತದೆ.

3. ಸುಮಾರು 10–20% ಮಕ್ಕಳಲ್ಲಿ ಲಕ್ಷಣಗಳು ದೀರ್ಘಕಾಲ ಮುಂದುವರಿದರೆ ಮಾನಸಿಕ ಆರೋಗ್ಯ ವೃತ್ತಿಪರರ ಸಹಾಯ ಅಗತ್ಯವಾಗಬಹುದು.

◾ಪ್ರಮುಖ ಅಧ್ಯಯನಗಳು ಏನು ಹೇಳುತ್ತವೆ? 

1. ಕ್ರಿಸ್ಟೋಫರ್ ಎ. ಥರ್ಬರ್ ಅಮೆರಿಕದ ಕ್ಲಿನಿಕಲ್ ಮನಶಾಸ್ತ್ರಜ್ಞರು ಮತ್ತು ಸಂಶೋಧಕರು ಹೇಳುವಂತೆ ಹೆಚ್ಚಿನ ಮಕ್ಕಳು ಮೊದಲ ಕೆಲವು ವಾರಗಳಲ್ಲಿ ತೀವ್ರ ಮನೆ ನೆನಪನ್ನು ಅನುಭವಿಸುತ್ತಾರೆ. ಸಾಮಾಜಿಕ ಬೆಂಬಲ, ಮಾರ್ಗದರ್ಶನ ಮತ್ತು ನಿಯಮಿತ ದಿನಚರಿಗಳು ಮಕ್ಕಳು ಬೇಗನೆ ಹೊಂದುಕೊಳ್ಳುವಂತೆ ಮಾಡುತ್ತದೆ.

2. ಶಿರ್ಲಿ ಫಿಶರ್ – ಬ್ರಿಟಿಷ್ ಮನಶಾಸ್ತ್ರಜ್ಞರು ಹೇಳುವಂತೆ ಹೊಸ ಪರಿಸರಕ್ಕೆ ಹೊಂದಿಕೊಳ್ಳುವ ಪ್ರಕ್ರಿಯೆಯಲ್ಲಿ ಮನೆ ನೆನಪು ಸಾಮಾನ್ಯ ಪ್ರತಿಕ್ರಿಯೆಯಾಗಿದ್ದು, ಬಹುತೇಕರಲ್ಲಿ ಸಮಯ ಹೋದಂತೆ ಹೊಂದಾಣಿಕೆ ಬರುತ್ತದೆ.

◾ಮೆಂಟರ್ ಮತ್ತು ವಾರ್ಡನ್‌ರ ಪಾತ್ರ : 

1. ಹೋಂ ಸಿಕ್ನೆಸ್ ಮಗುವಿನೊಂದಿಗೆ ಪ್ರತಿದಿನ ಕನಿಷ್ಠ 10–15 ನಿಮಿಷ ಮಾತನಾಡುವುದು. ಈ ಸಂದರ್ಭದಲ್ಲಿ ಸಲಹೆ ನೀಡುವುದಕ್ಕಿಂತಲೂ ಹೆಚ್ಚು ಮಕ್ಕಳ ಮನೋವೇದನೆಯನ್ನು ಕೇಳಿಸಿಕೊಳ್ಳಬೇಕು.

2. ಹೊಸ ಸ್ನೇಹಿತರನ್ನು ಪರಿಚಯಿಸುವುದು.

3. ವಸತಿ ನಿಲಯಕ್ಕೆ ಚೆನ್ನಾಗಿ ಹೊಂದಿಕೊಂಡ ಮಕ್ಕಳ ಜೊತೆಗೆ ಬೆರೆಯಲು ಬಿಡುವುದು.

4. ಬುಲ್ಲಿಯಿಂಗ್ ಅಥವಾ ರ‍್ಯಾಗಿಂಗ್ ತಡೆಯುವುದು.

5. ನಿಯಮಿತ ದಿನಚರಿ ಪಾಲಿಸಲು ಸಹಾಯ ಮಾಡುವುದು.

6. ಸಮಸ್ಯೆ ತೀವ್ರವಾದರೆ ತಕ್ಷಣ ಪೋಷಕರು ಮತ್ತು ಆಪ್ತ ಸಮಾಲೋಚಕರಿಗೆ ಮಾಹಿತಿ ನೀಡುವುದು.

7. ಧೈರ್ಯ ತುಂಬುವ ಮಾತುಗಳ ಮೂಲಕ ಭಾವನಾತ್ಮಕ ಬೆಂಬಲ ನೀಡುವುದು.

◾ಮನಶಾಸ್ತ್ರಜ್ಞರ ಪಾತ್ರ : 

1. ಆರಂಭಿಕ ಮಾನಸಿಕ ಮೌಲ್ಯಮಾಪನ.

2. ಹೊಂದಾಣಿಕೆ ಸಮಸ್ಯೆ ಗುರುತಿಸುವುದು.

3. ಬೆಂಬಲಾತ್ಮಕ ಆಪ್ತ ಸಮಾಲೋಚನೆ 

4. ಆತಂಕ ನಿರ್ವಹಣೆ ಮತ್ತು ವಿಶ್ರಾಂತಿ ತಂತ್ರಗಳನ್ನು ಕಲಿಸುವುದು.

5. ಬೌದ್ಧಿಕ ವರ್ತನಾ ಚಿಕಿತ್ಸೆ ತಂತ್ರಗಳನ್ನು ಅಗತ್ಯವಿದ್ದರೆ ಬಳಸುವುದು.

6. ಪೋಷಕರು, ಮೆಂಟರ್ ಮತ್ತು ವಾರ್ಡನ್‌ಗೆ ಮಾರ್ಗದರ್ಶನ ನೀಡುವುದು.

7. ತೀವ್ರ ಖಿನ್ನತೆ, ಆತಂಕ ಅಥವಾ ಆತ್ಮಹತ್ಯೆ ಅಪಾಯ ಕಂಡುಬಂದರೆ ಮನೋವೈದ್ಯರನ್ನು ಸಂಪರ್ಕಿಸಲು ಸಹಾಯ ಮಾಡುವುದು.

ಹೋಮ್ ಸಿಕ್ನೆಸ್ (ಮನೆ ನೆನಪಿನ ಭಾವನಾತ್ಮಕ ಸಂಕಟ) ಒಂದು ಸಾಮಾನ್ಯ ಹಾಗೂ ತಾತ್ಕಾಲಿಕ ಭಾವನಾತ್ಮಕ ಪ್ರತಿಕ್ರಿಯೆಯಾಗಿದ್ದು, ಇದು ಮಾನಸಿಕ ಕಾಯಿಲೆಯಲ್ಲ. ಹೊಸ ವಸತಿ, ಶಾಲೆ ಅಥವಾ ಕಾಲೇಜಿನ ಪರಿಸರಕ್ಕೆ ಹೊಂದಿಕೊಳ್ಳುವ ಪ್ರಕ್ರಿಯೆಯಲ್ಲಿ ಅನೇಕ ಮಕ್ಕಳು ಮತ್ತು ಹದಿಹರೆಯದವರು ಈ ಸವಾಲನ್ನು ಎದುರಿಸುತ್ತಾರೆ. ಆದ್ದರಿಂದ ಇದನ್ನು ಶಿಸ್ತು ಸಮಸ್ಯೆ, ಹಠ ಅಥವಾ ದುರ್ಬಲತೆಯಾಗಿ ಪರಿಗಣಿಸದೆ, ಸಹಾನುಭೂತಿ ಮತ್ತು ವೈಜ್ಞಾನಿಕ ದೃಷ್ಟಿಕೋನದಿಂದ ಅರ್ಥಮಾಡಿಕೊಳ್ಳುವುದು ಅಗತ್ಯ.

ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳಿಗೆ ಭಾವನಾತ್ಮಕವಾಗಿ ಸ್ಪಂದಿಸುವ ವಾತಾವರಣವನ್ನು ನಿರ್ಮಿಸಬೇಕು. ಪ್ರವೇಶದ ಆರಂಭಿಕ ವಾರಗಳಲ್ಲಿ ಮೆಂಟರ್ ವ್ಯವಸ್ಥೆ, ನಿಯಮಿತ ಸಂವಾದ, ಪೋಷಕರೊಂದಿಗೆ ಸಮತೋಲನದ ಸಂಪರ್ಕ, ಗುಂಪು ಚಟುವಟಿಕೆಗಳು, ಕ್ರೀಡೆ, ಸಹಪಠ್ಯ ಚಟುವಟಿಕೆಗಳು ಹಾಗೂ ಅಗತ್ಯವಿದ್ದಾಗ ಅನುಭವಿ ಮನಶಾಸ್ತ್ರಜ್ಞರಿಂದ ಆಪ್ತ ಸಮಾಲೋಚನೆ (Counselling) ಒದಗಿಸುವುದು ಹೊಂದಾಣಿಕೆಯನ್ನು ಸುಲಭಗೊಳಿಸುತ್ತದೆ. 

ವಾರ್ಡನ್, ಶಿಕ್ಷಕರು, ಪೋಷಕರು ಮತ್ತು ಮನಶಾಸ್ತ್ರಜ್ಞರ ಸಮನ್ವಯದಿಂದ ಹೆಚ್ಚಿನ ವಿದ್ಯಾರ್ಥಿಗಳು ವೇಗವಾಗಿ ಹೊಸ ಪರಿಸರಕ್ಕೆ ಹೊಂದಿಕೊಂಡು ಶೈಕ್ಷಣಿಕ ಸಾಧನೆ, ಮಾನಸಿಕ ಆರೋಗ್ಯ ಹಾಗೂ ವ್ಯಕ್ತಿತ್ವ ಬೆಳವಣಿಗೆಯಲ್ಲಿ ಉತ್ತಮ ಪ್ರಗತಿಯನ್ನು ಸಾಧಿಸಬಹುದು. ವಿದ್ಯಾರ್ಥಿಯ ಭಾವನಾತ್ಮಕ ಸುರಕ್ಷತೆಯನ್ನು ಆದ್ಯತೆಯಾಗಿ ಪರಿಗಣಿಸುವ ಶಿಕ್ಷಣ ಸಂಸ್ಥೆಯೇ ನಿಜವಾದ ಅರ್ಥದಲ್ಲಿ ಗುಣಮಟ್ಟದ ಶಿಕ್ಷಣ ಸಂಸ್ಥೆಯಾಗಿದೆ ಎಂದರೆ ತಪ್ಪಾಗಲಾರದು.
................................... ಗಿರೀಶ್ ಎಂ ಎನ್ 
ಕೌನ್ಸೆಲಿಂಗ್ ಮನಶಾಸ್ತ್ರಜ್ಞರು 
ಮಹೇಶ್ ಆಸ್ಪತ್ರೆ ಬ್ರಹ್ಮಾವರ
ಉಡುಪಿ ಜಿಲ್ಲೆ
Mob : 8722715472
******************************************


Ads on article

Advertise in articles 1

advertising articles 2

Advertise under the article