-->
ಮಕ್ಕಳ ಕಥೆಗಳು - ಸಂಚಿಕೆ : 17

ಮಕ್ಕಳ ಕಥೆಗಳು - ಸಂಚಿಕೆ : 17

ಮಕ್ಕಳ ಕಥೆಗಳು - ಸಂಚಿಕೆ : 17
ಸ್ವರಚಿತ ಕಥೆ : ಮಕ್ಕಳ ಜಗಲಿಯ ವಿದ್ಯಾರ್ಥಿಗಳು :

◾ ವೇದಾಂತ್, 8ನೇ ತರಗತಿ 
◾ ಲೇಖನಿ, 7ನೇ ತರಗತಿ
◾ ರಚಿತ ನಟರಾಜ್, 6ನೇ ತರಗತಿ  


            
ಒಬ್ಬ ಹುಡುಗ, ಒಂದು ರಾತ್ರಿ ಹಾಯಾಗಿ ಮಲಗಿದ್ದನು. ಹಠಾತ್ತನೆ ಕಣ್ಣು ತೆರೆದು ಗಡಿಯಾರ ನೋಡಿದಾಗ ರಾತ್ರಿ 12 ಗಂಟೆಯಾಗಿತ್ತು. ಅವನಿಗೆ ಬಹಳ ಹಸಿವಾಗಿದ್ದರಿಂದ ಹೊರಗೆ ಊಟ ಮಾಡಲು ಹೊರಟನು.

ದಾರಿಯಲ್ಲಿ ಹೋಗುತ್ತಿರುವಾಗ ಒಂದು ನಾಯಿ ನದಿಯಲ್ಲಿ ಸಿಕ್ಕಿಕೊಂಡಿರುವುದನ್ನು ಕಂಡನು. ತಕ್ಷಣ ನದಿಗೆ ಇಳಿದು ಅದನ್ನು ರಕ್ಷಿಸಿದನು. ಆದರೆ ಹಿಂದಿರುಗುವಾಗ ಭೀಕರ ಸುನಾಮಿ ಬಂದು ಅವನನ್ನು ಕೊಚ್ಚಿಕೊಂಡು ಹೋಯಿತು.

ಸ್ವಲ್ಪ ಸಮಯದ ನಂತರ ಆತ ಕಣ್ಣು ತೆರೆದಾಗ ಕತ್ತಲೆಯಾದ ವಿಚಿತ್ರ ಸ್ಥಳದಲ್ಲಿ ತನ್ನನ್ನು ಕಂಡನು. ಮುಂದೆ ನಡೆದಾಗ ಐದು ಮೂರ್ತಿಗಳು ಕಾಣಿಸಿಕೊಂಡವು. 

ಅವುಗಳಲ್ಲಿ ಒಂದು ದೊಡ್ಡ ಮೂರ್ತಿ ಹೇಳಿತು, “ಇವನು ಇನ್ನೂ ಭೂಲೋಕದವನೇ. ಆದರೆ ಈಗ ಇವನಿಗೆ ವಿಶೇಷ ದೈವಿಕ ಶಕ್ತಿ ದೊರಕಲಿದೆ.”

ಆ ಬಳಿಕ ಆತ ಒಂದು ಹೊಸ ಲೋಕಕ್ಕೆ ತಲುಪಿದನು. ಅಲ್ಲಿ ರಿಯಾ, ಜಾನ್, ಮೇರಿ ಮತ್ತು ಪ್ಯಾಟ್ರಿಕ್ ಎಂಬ ನಾಲ್ವರು ಯುವಕರನ್ನು ಭೇಟಿಯಾದನು. ಇವರಲ್ಲಿ ಪ್ರತಿಯೊಬ್ಬರಿಗೂ ವಿಶೇಷ ಶಕ್ತಿಗಳಿದ್ದವು. ರಿಯಾಗೆ ನೀರಿನ ಶಕ್ತಿ, ಜಾನ್‌ಗೆ ಭೂಮಿಯ ಶಕ್ತಿ, ಮೇರಿಗೆ ಚಿಕಿತ್ಸಾ ಶಕ್ತಿ ಹಾಗೂ ಪ್ಯಾಟ್ರಿಕ್‌ಗೆ ಗಾಳಿಯ ಶಕ್ತಿ ಇತ್ತು.

ಒಂದು ದಿನ ಅವರು ಪ್ರಯಾಣ ಮಾಡುತ್ತಿದ್ದಾಗ ಒಬ್ಬ ಬಾಲಕ ರಾಕ್ಷಸನಿಂದ ತಪ್ಪಿಸಿಕೊಳ್ಳಲು ಓಡಿಬಂದನು. ರಾಕ್ಷಸನು ಬೆಂಕಿಯ ದಾಳಿ ಮಾಡಿದರೂ ರಿಯಾ ಮತ್ತು ಅವಳ ಸ್ನೇಹಿತರು ತಮ್ಮ ಶಕ್ತಿಯಿಂದ ಅದನ್ನು ತಡೆದರು. ಕೊನೆಗೆ ರಾಕ್ಷಸನನ್ನು ಸೋಲಿಸಿ ಬಾಲಕನನ್ನು ರಕ್ಷಿಸಿದರು.

ನಂತರ ರಿಯಾ ಆತನಿಗೆ ತನ್ನ ಶಕ್ತಿಯನ್ನು ಅರಿಯುವ ವಿಧಾನವನ್ನು ಕಲಿಸಿದಳು. ಒಂದು ವಾರದ ಅಭ್ಯಾಸದ ಬಳಿಕ ಆತ ತನ್ನೊಳಗಿನ ವಿಶಿಷ್ಟ ಶಕ್ತಿಯನ್ನು ಕಂಡುಕೊಂಡನು. ಅವನ ಶಕ್ತಿ ಬೆಳಕಿನ ಚಕ್ರದ ರೂಪದಲ್ಲಿ ವ್ಯಕ್ತವಾಗುತ್ತಿತ್ತು.

ಪ್ರಯಾಣದ ವೇಳೆ ಅವರು ಒಂದು ಗುಹೆಯಲ್ಲಿ ಅಮೂಲ್ಯವಾದ “ಬೀಸ್ಟ್ ಕೋರ್” ಗಳನ್ನು ಕಂಡುಹಿಡಿದರು. ಅವುಗಳಿಂದ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದಾಗಿತ್ತು. ಮತ್ತೊಂದು ಗುಹೆಯಲ್ಲಿ ಆತ ಒಂದು ಪುರಾತನ ಆಯುಧ ಮತ್ತು ವಿಚಿತ್ರ ಡ್ರ್ಯಾಗನ್ ಮೊಟ್ಟೆಯನ್ನು ಕಂಡನು. ಆ ಆಯುಧವು ಯಾವುದೇ ರೂಪವನ್ನು ತಾಳುವ ಸಾಮರ್ಥ್ಯ ಹೊಂದಿತ್ತು.

ಕಾಲಕ್ರಮೇಣ ಆತ ಇನ್ನಷ್ಟು ಶಕ್ತಿಶಾಲಿಯಾದನು. ಒಂದು ದಿನ ಅವನಿಗೆ ಬಿಳಿ ಬಣ್ಣದ, ನೀಲಿ-ನೇರಳೆ ಗೆರೆಗಳಿದ್ದ ಮಾಯಾ ಮುಖವಾಡ ಸಿಕ್ಕಿತು. ಅದನ್ನು ಧರಿಸಿದ ನಂತರ ಅವನ ಶಕ್ತಿಗಳು ಮತ್ತಷ್ಟು ಹೆಚ್ಚಾದವು.

ಆದರೆ ಇದೇ ಸಮಯದಲ್ಲಿ “ರೋಗ” ಎಂಬ ದುಷ್ಟಶಕ್ತಿ ತನ್ನ ನಿಜ ರೂಪದಲ್ಲಿ ಕಾಣಿಸಿಕೊಂಡಿತು. ಮೊದಲು ಜನರನ್ನು ರಕ್ಷಿಸಬೇಕಾಗಿದ್ದ ರಕ್ಷಕರು ಅಧಿಕಾರ ಮತ್ತು ಸಂಪತ್ತಿನ ಆಸೆಗೆ ಒಳಗಾಗಿದ್ದರು. ಇದರಿಂದ ಎರಡು ಬಣಗಳ ನಡುವೆ ಭೀಕರ ಯುದ್ಧ ಶುರುವಾಯಿತು.

ಯುದ್ಧದಲ್ಲಿ ಅನೇಕರು ಗಾಯಗೊಂಡರು. ದೇವತೆಗಳಿಗೂ ಹಾನಿಯಾಯಿತು. ಎಲ್ಲರೂ ಸೋಲಿನ ಅಂಚಿನಲ್ಲಿದ್ದಾಗ ಆತ ತನ್ನ ನಿಜವಾದ ಶಕ್ತಿಯನ್ನು ಅರಿತುಕೊಂಡನು. ಅವನು ದೇವರ ಶಕ್ತಿ ಮತ್ತು ಭೂತಶಕ್ತಿ ಎರಡನ್ನೂ ಬಳಸಬಲ್ಲನೆಂಬುದು ತಿಳಿಯಿತು.

ಆತ ತನ್ನ ಹೊಸ ಶಕ್ತಿಯಿಂದ ಶತ್ರುಗಳನ್ನು ಸೋಲಿಸಿದನು. ನಂತರ ಯುದ್ಧದಲ್ಲಿ ಬಿದ್ದಿದ್ದ ಅನೇಕ ಯೋಧರಿಗೆ ಪುನಃ ಜೀವ ನೀಡಿದನು. ದೇವತೆಗಳು ಅವನ ಸಾಹಸ ಮತ್ತು ತ್ಯಾಗವನ್ನು ಮೆಚ್ಚಿ ಅವನನ್ನು ಲೋಕಗಳ ರಕ್ಷಕನಾಗಿ ಘೋಷಿಸಿದರು.

ಆ ದಿನದಿಂದ ಆತ ನ್ಯಾಯ, ಶಾಂತಿ ಮತ್ತು ಸಮತೋಲನವನ್ನು ಕಾಪಾಡುವ ಮಹಾನ್ ವೀರನಾಗಿ ಪ್ರಸಿದ್ಧನಾದನು.
.................................................. ವೇದಾಂತ್
8 ನೇ ತರಗತಿ
ಸರಕಾರಿ ಪ್ರೌಢಶಾಲೆ ಸರ್ವೆ
ಪುತ್ತೂರು ತಾಲ್ಲೂಕು, ದಕ್ಷಿಣ ಕನ್ನಡ ಜಿಲ್ಲೆ
******************************************


            

ಒಂದು ಊರಿನಲ್ಲಿ ಒಂದು ಪಾಳು ಬಿದ್ದ ಮನೆ ಇತ್ತು. ಮನೆಯಲ್ಲಿ ಯಾರೂ ವಾಸವಾಗಿರಲಿಲ್ಲ. ಒಂದು ದಿನ ರಾಮ ಎನ್ನುವವನು ಒಂದು ಮನೆಯನ್ನು ಹುಡುಕಿಕೊಂಡು ಆ ಊರಿಗೆ ಬಂದ. ಅಲ್ಲಿ ಒಬ್ಬ ರೈತನಿದ್ದ. ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದ ರೈತನಲ್ಲಿ ರಾಮನು ಕುತೂಹಲದಿಂದ, "ಇಲ್ಲಿ ಹತ್ತಿರದಲ್ಲಿ ಯಾವುದಾದರೂ ಖಾಲಿ ಮನೆ ಇದೆಯೇ ?" ಎಂದು ಕೇಳಿದ. ಅದಕ್ಕೆ ರೈತನು, "ಈ ಊರಿನ ಹತ್ತಿರದಲ್ಲಿರುವುದು ಒಂದು ಹಳೆಯ ಮನೆ. ಅಲ್ಲಿ ಯಾರೂ ಹೋಗುವುದಿಲ್ಲ. ಕಳೆದ ಎರಡು ದಿನಗಳಿಂದ ರಾತ್ರಿ ಯಾರೋ ಜೋರಾಗಿ ಕಿರುಚುವ ಶಬ್ದವು ಕೇಳಿಸುತ್ತಿದೆ" ಎಂದನು. ಇದನ್ನು ಕೇಳಿ ರಾಮನಿಗೆ ಸ್ವಲ್ಪ ಹೆದರಿಕೆಯಾಯಿತು. ಆದರೆ ಅವನಿಗೆ ಬೇರೆ ದಾರಿ ಇರಲಿಲ್ಲ. ಹಾಗಾಗಿ ಅವನು ಆ ಮನೆಯಲ್ಲಿ ಇರುತ್ತೇನೆ ಎಂದು ರೈತನ ಹತ್ತಿರ ಹೇಳಿ ಮನೆಯ ಕಡೆ ಹೊರಟ. 

ಸಂಜೆ ಆಗುತ್ತಿದ್ದಂತೆ ಆ ಮನೆ ಭಯಾನಕವಾಗಿ ಕಾಣಿಸತೊಡಗಿತು. ರಾತ್ರಿ ಮಲಗುವಷ್ಟರಲ್ಲಿ ನರಳಾಟದ ಸದ್ದು ಕೇಳಿಸಿತು. ರಾಮನು ಗಟ್ಟಿ ಮನಸ್ಸು ಮಾಡಿ, ದೀಪ ಹಿಡಿದು ನೋಡಿದರೆ ಮೂಲೆಯಲ್ಲಿ ಒಬ್ಬಳು ಅಜ್ಜಿ ಮಲಗಿದ್ದಳು. ಕಾಲಿಗೆ ದೊಡ್ಡ ಗಾಯವಾಗಿದ್ದರಿಂದ ಅದರ ಜೊತೆ ಎರಡು ದಿನಗಳಿಂದ ಊಟ ಮಾಡಿರದಿದ್ದ ಕಾರಣ ಹಸಿವು ಮತ್ತು ನೋವಿನಿಂದಾಗಿ ನರಳುತ್ತಿದ್ದಳು. ಊರವರು ಅವಳ ನರಳಾಟ ಕೇಳಿ ದೆವ್ವ ಎಂದು ಭಾವಿಸಿದ್ದರು.

ರಾಮನು ಓಡಿ ಹೋಗಿ ರೈತನ ಮನೆಯಿಂದ ಗಾಯಕ್ಕೆ ಹಚ್ಚುವ ಔಷಧಿ ಹಾಗೂ ಸ್ವಲ್ಪ ಗಂಜಿ ತಂದ. ಅಜ್ಜಿಗೆ ಉಪಾಚಾರ ಮಾಡಿದ. ಬೆಳಿಗ್ಗೆ ಊರವರಿಗೆ ನಡೆದ ವಿಷಯವನ್ನೆಲ್ಲ ತಿಳಿಸಿದ. ಇದನ್ನು ಕೇಳಿದ ಊರವರು ಇವನ ಒಳ್ಳೆಯತನವನ್ನು ಮೆಚ್ಚಿ ಇಂತಹ ಮನುಷ್ಯರು ನಮ್ಮ ಊರಿಗೆ ಬೇಕು ಎಂಬ ಭಾವನೆಯಿಂದ ಆ ಪಾಳು ಬಿದ್ದ ಮನೆಯನ್ನು ರಿಪೇರಿ ಮಾಡಿಸಿದರು. ಆ ಮನೆಯಲ್ಲಿ ರಾಮನನ್ನು ಉಳಿಯಲು ಹೇಳಿದರು. ಅಜ್ಜಿಯು ಒಬ್ಬಳೇ ಇದ್ದ ಕಾರಣ ರಾಮನ ಜೊತೆ ಅದೇ ಮನೆಯಲ್ಲಿ ವಾಸವಾದಳು. ಇದರಿಂದ ರಾಮನಿಗೆ ಮನೆಯ ಜೊತೆಗೆ ಅಜ್ಜಿಯು ಸಿಕ್ಕಳು. 

ಇದರ ನೀತಿ ಏನೆಂದರೆ ಕಷ್ಟದಲ್ಲಿರುವವರಿಗೆ ಸಹಾಯ ಮಾಡಿದರೆ ದೇವರೇ ಮೆಚ್ಚುತ್ತಾನೆ.
.................................................. ಲೇಖನಿ 
7ನೇ ತರಗತಿ 
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, 34 ನೆಕ್ಕಿಲಾಡಿ
ಪುತ್ತೂರು ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
******************************************


                

ರಾಮನಾಥಪುರ ಎಂಬ ಊರಿನಲ್ಲಿ ಒಬ್ಬ ಬಡವನಿದ್ದ. ಅವನ ಹೆಸರು ರಾಮಯ್ಯ. ಅವನ ಹೆಂಡತಿ ಧಾಮಿನಿ, ಮಗಳು ರಾಧ. ರಾಮಯ್ಯ ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದ. ಧಾಮಿನಿ ಮನೆ ಮನೆಗೆ ಹೋಗಿ ಮನೆಕೆಲಸ ಮಾಡುತ್ತಿದ್ದಳು. 

ಇಬ್ಬರು ದುಡಿದು ಬಂದ ಹಣದಲ್ಲಿ ಸ್ವಲ್ಪ ಹುಂಡಿಯಲ್ಲಿ ಹಾಕಿ ಇಡುತ್ತಿದ್ದರು. ಅವಳ ಮಗಳು ಸರ್ಕಾರಿ ಶಾಲೆಯಲ್ಲಿ ನಾಲ್ಕನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಳು. 

ನಾಲ್ಕು ವರ್ಷದ ನಂತರ ಹುಂಡಿಯಲ್ಲಿ ಎಷ್ಟು ಹಣ ಕೂಡಿಸಿಟ್ಟಿದ್ದಿವಿ ನೋಡೋಣವೆಂದು ಹೆಂಡತಿ ಧಾಮಿನಿ ಎಂದಳು. ಅವರಿಬ್ಬರು ಹಣ ಎಣಿಸಿದಾಗ ಅದರಲ್ಲಿ ಐದು ಸಾವಿರ ನಾಣ್ಯ ಗಳಿದ್ಧವು. 

ಅದರಲ್ಲಿ ಎರಡು ಸಾವಿರದಲ್ಲಿ ಸಣ್ಣ ಮನೆ ಕಟ್ಟಿಸಿಕೊಂಡರು. ಮತ್ತು ಒಂದು ಸಾವಿರಕ್ಕೆ ಕಾರು ಕೊಂಡು ಕೊಂಡರು. ಮತ್ತ ಉಳಿದ ಎರಡು ಸಾವಿರಕ್ಕೆ ಚಿಕ್ಕ ಚಿಕ್ಕ ಮನೆಗಳನ್ನು ಬಡವರಿಗಾಗಿ ಮನೆಗಳನ್ನು ಕಟ್ಟಿಸಿಕೊಟ್ಟರು.
......................................... ರಚಿತ ನಟರಾಜ್ 
6ನೇ ತರಗತಿ 
ಶರತ್ ಮೆಮೋರಿಯಲ್ ಪಬ್ಲಿಕ್ ಸ್ಕೂಲ್
ರಾಮನಗರ ತಾಲ್ಲೂಕು, ರಾಮನಗರ ಜಿಲ್ಲೆ  
******************************************


Ads on article

Advertise in articles 1

advertising articles 2

Advertise under the article