ಮಕ್ಕಳಿಗೆ ರಜೆಯ ಓದು : ಸಂಚಿಕೆ - 28
Thursday, July 30, 2026
Edit
ಮಕ್ಕಳಿಗೆ ರಜೆಯ ಓದು
ಸಂಚಿಕೆ - 28
ಓದು ಬರಹ : ಕೆ ಪಿ ಅಶ್ವಿನ್ ರಾವ್
ಪದವಿನಂಗಡಿ, ಬೊಂದೇಲ್
ಮಂಗಳೂರು, ದಕ್ಷಿಣಕನ್ನಡ ಜಿಲ್ಲೆ
ಮೊ : +91 94482 53815
ನಾವೆಲ್ಲಾ ಸಣ್ಣವರಿದ್ದಾಗ ನಮಗೆ ಹೆಚ್ಚಾಗಿ ಸಿಗುತ್ತಿದ್ದ ಕಥೆ ಪುಸ್ತಕಗಳು ತೆನಾಲಿರಾಮನ ಕಥೆಗಳು, ಪಂಚತಂತ್ರ ಕಥೆಗಳು, ಅಕ್ಬರ್ ಬೀರಬಲ್ಲನ ವಿನೋದ ಕಥೆಗಳು. ಪಂಚತಂತ್ರದ ಕಥೆಗಳ ಬಗ್ಗೆ ನಾವು ಈಗಾಗಲೇ ತಿಳಿದುಕೊಂಡಿದ್ದೇವೆ. ಈ ವಾರ ತೆನಾಲಿರಾಮನ ಕಥೆಗಳು ಎನ್ನುವ ಪುಸ್ತಕದ ಬಗ್ಗೆ ತಿಳಿದುಕೊಳ್ಳುವ.
ತೆನಾಲಿರಾಮನ ಕಥೆಗಳು : ತೆನಾಲಿ ರಾಮಕೃಷ್ಣ ಅಥವಾ ತೆನಾಲಿ ರಾಮನ್ ಭಾರತದ ಇತಿಹಾಸ ಮತ್ತು ಜಾನಪದ ಕಥೆಗಳಲ್ಲಿ ಅತ್ಯಂತ ಜನಪ್ರಿಯವಾಗಿರುವ ಒಬ್ಬ ಹಾಸ್ಯ ಕವಿ ಮತ್ತು ಚತುರ ರಾಜತಾಂತ್ರಿಕ. ವಿಜಯನಗರ ಸಾಮ್ರಾಜ್ಯದ ಪ್ರಸಿದ್ಧ ದೊರೆ ಶ್ರೀ ಕೃಷ್ಣದೇವರಾಯನ ಆಸ್ಥಾನದಲ್ಲಿದ್ದ ಎಂಟು ಜನ ಪ್ರಮುಖ ಕವಿಗಳಲ್ಲಿ (ಅಷ್ಟದಿಗ್ಗಜರು) ಈತನೂ ಒಬ್ಬನಾಗಿದ್ದನು. ತೆನಾಲಿ ರಾಮನ ಕಥೆಗಳು ಕೇವಲ ಮನರಂಜನೆ ನೀಡುವುದಲ್ಲದೆ, ಬುದ್ಧಿವಂತಿಕೆ, ಸಮಯಪ್ರಜ್ಞೆ ಮತ್ತು ನೈತಿಕ ಮೌಲ್ಯಗಳನ್ನು ಒಳಗೊಂಡಿರುತ್ತವೆ. ತೆನಾಲಿ ರಾಮನ ಕಥೆಗಳ ಮುಖ್ಯ ವೈಶಿಷ್ಟ್ಯಗಳ ಬಗ್ಗೆ ಹೇಳುವುದಾದರೆ ಆತನ ಬುದ್ಧಿವಂತಿಕೆ ಮತ್ತು ಸಮಯಪ್ರಜ್ಞೆ. ಯಾವುದೇ ಕಠಿಣ ಸಮಸ್ಯೆ ಎದುರಾದರೂ ರಾಮ ತನ್ನ ಚುರುಕಾದ ಬುದ್ಧಿಯಿಂದ ಅದಕ್ಕೆ ಸುಲಭ ಪರಿಹಾರ ಕಂಡುಕೊಳ್ಳುತ್ತಿದ್ದನು. ಆಸ್ಥಾನದಲ್ಲಿದ್ದ ಅಹಂಕಾರಿ ಪಂಡಿತರು ಮತ್ತು ಮಂತ್ರಿಗಳ (ಮುಖ್ಯವಾಗಿ ರಾಜಗುರು ತಾತಾಚಾರ್ಯರ) ಗರ್ವಭಂಗ ಮಾಡಲು ವ್ಯಂಗ್ಯ ಹಾಗೂ ಹಾಸ್ಯಭರಿತ ತಂತ್ರಗಳನ್ನು ಬಳಸುತ್ತಿದ್ದನು. ಕೃಷ್ಣದೇವರಾಯನೊಂದಿಗಿನ ಉತ್ತಮ ಬಾಂಧವ್ಯ ಹೊಂದಿದ್ದನು. ಮಹಾರಾಜ ಕೃಷ್ಣದೇವರಾಯನಿಗೆ ತೆನಾಲಿ ರಾಮನೆಂದರೆ ಅಪಾರ ಪ್ರೀತಿ ಮತ್ತು ಗೌರವ. ಆದರೆ ಕೆಲವೊಮ್ಮೆ ರಾಮನ ನೇರ ಮಾತುಗಳು ಮತ್ತು ದಿಟ್ಟತನವು ರಾಜನಿಗೆ ಕೋಪ ತರಿಸುತ್ತಿತ್ತು. ಆದರೂ ಅಂತಿಮವಾಗಿ ರಾಮನು ತನ್ನ ತಪ್ಪನ್ನು ಒಪ್ಪಿಕೊಂಡು ರಾಜನ ಮನಸ್ಸನ್ನು ಗೆಲ್ಲುತ್ತಿದ್ದನು.
ತೆನಾಲಿ ರಾಮನ ಕಥೆಗಳನ್ನು ಓದುವ ಮುಖಾಂತರ ಮಕ್ಕಳು ಕಠಿಣ ಪರಿಸ್ಥಿತಿಗಳಲ್ಲೂ ಧೃತಿಗೆಡದೆ ಶಾಂತವಾಗಿ ಯೋಚಿಸುವುದು ಹೇಗೆ?, ದುರಾಶೆ ಮತ್ತು ಅಹಂಕಾರ ಯಾವಾಗಲೂ ಪತನಕ್ಕೆ ಕಾರಣವಾಗುತ್ತದೆ ಎನ್ನುವ ನೀತಿ, ದೈಹಿಕ ಶಕ್ತಿಗಿಂತ ಬೌದ್ಧಿಕ ಶಕ್ತಿ (ಬುದ್ಧಿವಂತಿಕೆ) ದೊಡ್ಡದು ಎನ್ನುವ ಉತ್ತಮ ಸಂಗತಿಗಳನ್ನು ಕಲಿಯಬಹುದು. ಇಂದಿಗೂ ಬಹಳಷ್ಟು ಮಂದಿ ಪೋಷಕರು ಹಾಗೂ ಶಿಕ್ಷಕರು ಮಕ್ಕಳಲ್ಲಿ ನೈತಿಕತೆ ಮತ್ತು ಚಾಣಾಕ್ಷತನವನ್ನು ಬೆಳೆಸಲು ತೆನಾಲಿ ರಾಮನ ಕಥೆಗಳನ್ನು ಪುಸ್ತಕಗಳು, ಕಾರ್ಟೂನ್ ಮತ್ತು ಚಲನಚಿತ್ರಗಳ ಮೂಲಕ ಓದಲು ಅಥವಾ ನೋಡಲು ಪ್ರೇರೇಪಿಸುತ್ತಾರೆ. ತೆನಾಲಿರಾಮನ ಕಥೆಗಳು ಬಹುತೇಕ ಭಾರತೀಯ ಭಾಷೆಗಳಲ್ಲಿ ಓದಲು ಲಭ್ಯವಿದೆ. ದೂರದರ್ಶನಗಳ ಧಾರಾವಾಹಿ, ಸಿನೆಮಾ, ಕಾರ್ಟೂನ್ ಚಿತ್ರಗಳ ಮೂಲಕ ತೆನಾಲಿರಾಮ ಈಗಾಗಲೇ ಜನಜನಿತನಾಗಿದ್ದಾನೆ. ಆದರೂ ತೆನಾಲಿ ರಾಮಕೃಷ್ಣನ ಕಥೆಗಳನ್ನು ಪುಸ್ತಕದಲ್ಲಿ ಓದುವುದು ಮಜಾ ಕೊಡುತ್ತದೆ. ಮಕ್ಕಳಿಗೆ ಈ ಅಭ್ಯಾಸ ಮಾಡಿಸಿ. ಕನ್ನಡದ ಬಹುತೇಕ ಪುಸ್ತಕ ಪ್ರಕಾಶಕರು ತೆನಾಲಿ ರಾಮಕೃಷ್ಣನ ಕಥೆಗಳ ವಿವಿಧ ಬಗೆಗಳ ಪುಸ್ತಕಗಳನ್ನು ಹೊರತಂದಿದ್ದಾರೆ. ಇತ್ತೀಚೆಗೆ ‘ಮಕ್ಕಳಿಗಾಗಿ ಮತ್ತೊಮ್ಮೆ ಹೇಳಿದ ತೆನಾಲಿ ರಾಮನ ಕಥೆಗಳು’ ಎನ್ನುವ ಪುಸ್ತಕವೂ ಪ್ರಕಟವಾಗಿವೆ. ಇದರಿಂದಲೇ ತಿಳಿಯುತ್ತದೆ ರಾಮಕೃಷ್ಣನ ಮೋಜಿನ ಕಥೆಗಳಿಗೆ ಇನ್ನೂ ಬೇಡಿಕೆ ಇದೆ ಎಂದು. ಹಾಗಾದರೆ ಇನ್ನೇಕೆ ತಡ ತೆನಾಲಿ ರಾಮಕೃಷ್ಣನ ಕಥೆಗಳ ಪುಸ್ತಕಗಳನ್ನು ಖರೀದಿಸಿ, ಓದಲು ಪ್ರಾರಂಭಿಸಿ…
(ಆಧಾರ)
ಪದವಿನಂಗಡಿ, ಬೊಂದೇಲ್
ಮಂಗಳೂರು, ದಕ್ಷಿಣಕನ್ನಡ ಜಿಲ್ಲೆ
ಮೊ : +91 94482 53815
******************************************