-->
ಮಕ್ಕಳಿಗೆ ರಜೆಯ ಓದು : ಸಂಚಿಕೆ - 25

ಮಕ್ಕಳಿಗೆ ರಜೆಯ ಓದು : ಸಂಚಿಕೆ - 25

ಮಕ್ಕಳಿಗೆ ರಜೆಯ ಓದು
ಸಂಚಿಕೆ - 25
ಓದು ಬರಹ : ಕೆ ಪಿ ಅಶ್ವಿನ್ ರಾವ್
ಪದವಿನಂಗಡಿ, ಬೊಂದೇಲ್
ಮಂಗಳೂರು, ದಕ್ಷಿಣಕನ್ನಡ ಜಿಲ್ಲೆ
ಮೊ : +91 94482 53815

         
ಈ ವಾರ ನಾನು ಆಂಗ್ಲ ಕಥೆ ಪುಸ್ತಕದ ಮಾಹಿತಿಯ ಬದಲು ಪ್ರಸಿದ್ಧ ಕನ್ನಡ ಪುಸ್ತಕ ಸರಣಿಯ ಬಗ್ಗೆ ತಿಳಿಸಲಿರುವೆ. ನಾವೆಲ್ಲಾ ಸಣ್ಣವರಿರುವಾಗ ಈ ಪುಸ್ತಕ ಸರಣಿಯಲ್ಲಿ ಪ್ರಕಟವಾದ ಪುಸ್ತಕದ ಕಥೆಗಳು ನಮ್ಮ ಮೇಲೆ ಬಹಳಷ್ಟು ಪ್ರಭಾವ ಬೀರಿದ್ದವು. ಆಗೆಲ್ಲಾ ಪೈಸೆಗಳ ಲೆಕ್ಕಾಚಾರದಲ್ಲಿ ದೊರೆಯುತ್ತಿದ್ದ ಪುಸ್ತಕದ ಬೆಲೆ ಈಗಲೂ ಅಷ್ಟೇನೂ ಹೆಚ್ಚಾಗಿಲ್ಲ. ಈ ಪುಸ್ತಕ ಸರಣಿಯ ಹೆಸರು ‘ಭಾರತ-ಭಾರತಿ ಪುಸ್ತಕ ಸಂಪದ’ (ಭಾರತ-ಭಾರತಿ ಪುಸ್ತಕ ಮಾಲೆ). ಇದು ಬೆಂಗಳೂರಿನ ರಾಷ್ಟ್ರೋತ್ಥಾನ ಸಾಹಿತ್ಯ ಪ್ರಕಾಶನವು ದೇಶದ ಮಹನೀಯರ ಜೀವನ ಹಾಗೂ ಭಾರತೀಯ ಸಂಸ್ಕೃತಿಯನ್ನು ಮಕ್ಕಳಿಗೆ ಹಾಗೂ ಯುವಕರಿಗೆ ಸುಲಭವಾಗಿ ಪರಿಚಯಿಸುವುದಕ್ಕಾಗಿ ಹೊರ ತಂದ ಸರಣಿ. ಈ ಸರಣಿಯಲ್ಲಿ ಇಲ್ಲಿಯವರೆಗೆ ಸುಮಾರು ೬೦೦ ವಿವಿಧ ಮಾಹಿತಿಗಳ ಪುಸ್ತಕಗಳು ಹೊರಬಂದಿವೆ. ೭೦ರ ದಶಕದಲ್ಲಿ ಪ್ರೊ. ಎಲ್ ಎಸ್ ಶೇಷಗಿರಿ ರಾವ್ ಅವರ ಸಂಪಾದಕತ್ವದಲ್ಲಿ ವಾಲ್ಮೀಕಿಯಿಂದ ಮೊದಲ್ಗೊಂಡು ಈ ತನಕ ನೂರಾರು ಸಾಧಕರ ಮಾಹಿತಿಯುಳ್ಳ ಕೃತಿಗಳು ಹೊರಬಂದಿವೆ.  

ಅನಾದಿಕಾಲದಿಂದ ಆಧುನಿಕ ಕಾಲದವರೆಗಿನ ಭಾರತಮಾತೆಯ ಪುತ್ರರತ್ನರ ಬದುಕಿನ ಕ್ಷಣಗಳ ಮೇಲೆ ಬೆಳಕು ಚೆಲ್ಲಿ, ಯಾಕೆ ಬದುಕಬೇಕು-ಹೇಗೆ ಬದುಕಬೇಕು ಎಂಬುದನ್ನು ಭವಿಷ್ಯದ ಕುಡಿಗಳಿಗೆ ತಿಳಿಸಿ, ಆದರ್ಶದ ಕನಸುಕಟ್ಟಬಲ್ಲ ಪುಸ್ತಕಮಾಲೆ.
ಜೇಬಿನ ತುಂಬ ಹೊಳೆಹೊಳೆಯುವ ವಜ್ರಗಳು, ದಾರಿಯ ಉದ್ದಕ್ಕೂ ಜಗಮಗಿಸುವ ದೀಪಗಳು. ಇಷ್ಟೆಲ್ಲ ಇದ್ದೂ ಕಣ್ಣು ಮುಚ್ಚಿಕೊಂಡು ’ನಾನು ಬಡವ, ಸುತ್ತ ಕತ್ತಲೆ’ ಎಂದು ಅಳುವವರನ್ನು ಕುರಿತು ನಾವು ಏನನನ್ನು ಕೇಳುತ್ತೇವೆ? ಎಂತಹ ದುರದೃಷ್ಟವಂತ ಅವನು, ಅಲ್ಲವೆ? ಭಾರತದಲ್ಲಿ ಹುಟ್ಟಿದ ನಾವು ಎಂತಹ ಭಾಗ್ಯವಂತರು ಎಂದು ತಿಳಿದುಕೊಳ್ಳದೇ ಹೋದರೆ ನಾವೂ ಅವನಂತೆಯೇ. ಎಷ್ಟು ನದಿಗಳ ಕೃಪೆ, ಎಷ್ಟು ಗಣಿಗಳ ಕೊಡುಗೆ, ಎಷ್ಟು ಗಿರಿವನಗಳ ಸಂಪತ್ತು ನಮ್ಮದು! ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಕಣ್ಣಿಗೆ ಹಬ್ಬವಾಗಿ, ಹೃದಯವನ್ನು ಸೂರೆಗೊಳ್ಲುವ ಪ್ರಕೃತಿಯ ಚೆಲುವು, ವೈಭವ; ಮನಸ್ಸಿಗೆ ಶಾಂತಿ ನೀಡುವ ಪುಣ್ಯಕ್ಷೇತ್ರಗಳು, ಹೆಜ್ಜೆಹೆಜ್ಜೆಗೆ ಬೆಳಕು ಚೆಲ್ಲುವ ಉಜ್ವಲ ದೀಪಗಳಂತೆ ಸಾವಿರಾರು ವರ್ಷಗಳ ಇತಿಹಾಸದಲ್ಲಿ ಬೆಳಗುವ ಪುಣ್ಯಚೇತನರು, ಜ್ಞಾನನಿಧಿಗಳು, ಶೌರ್ಯದ ಮೂರ್ತಿಗಳು, ಹುತಾತ್ಮರು. ಎಲ್ಲ ಭಾರತೀಯರ ಈ ಭಾಗ್ಯವನ್ನು ತಿಳಿಸಿಕೊಡುವ ಪುಸ್ತಕ ಮಾಲೆಯೇ ’ಭಾರತ-ಭಾರತಿ ಪುಸ್ತಕ ಸಂಪದ’.

ತಮ್ಮ ಮಕ್ಕಳ ಬಾಳು ಹಸಿರಾಗಬೇಕು, ಹೊನ್ನಾಗಬೇಕು ಎಂದು ಪ್ರತಿ ಮನೆಯಲ್ಲಿ ಹಿರಿಯರು ಎಷ್ಟು ಸಾಧನ ಸಂಪತ್ತುಗಳನ್ನು ಒದಗಿಸುತ್ತಾರೆ, ಉಡುಗೊರೆಗಳನ್ನು ಕೊಡುತ್ತಾರೆ! ಆದರೆ ಅವರಿಗೆ ಅಗತ್ಯವಾಗಿ ಕೊಡಬೇಕಾದುದು ದಾರಿದೀಪಗಳ ಉಡುಗೊರೆ, ಅಲ್ಲವೆ? ಪುಣ್ಯಭೂಮಿ ಭಾರತದ ಮಕ್ಕಳ ಭಾಗ್ಯವನ್ನು ನಮ್ಮ ಮಕ್ಕಳಿಗೆ ತಿಳಿಸಿಕೊಡುವುದು ನಾವು ತಾಯಿಗೆ ಸಲ್ಲಿಸಬೇಕಾದ ಕರ್ತವ್ಯ, ಮಕ್ಕಳಿಗೆ ಸಲ್ಲಿಸಬೇಕಾದ ಕರ್ತವ್ಯ. ನಮ್ಮೆಲ್ಲರ ಈ ಕರ್ತವ್ಯಪ್ರಜ್ಞೆಯನ್ನು ನಮ್ಮ ತಾಯಿ ಎಚ್ಚರಿಸಲಿ. ಭಾರತದ ಮಕ್ಕಳಾಗಿ, ಪ್ರಪಂಚದ ಪ್ರಜೆಗಳಾಗಿ ನಾವು ಸಾರ್ಥಕವಾಗಿ ಬಾಳುವಂತಾಗಲಿ.

ಈ ಸರಣಿಯ ವಿಶೇಷತೆಗಳು:
▪️ ಮಕ್ಕಳ ಸಾಹಿತ್ಯಲೋಕದಲ್ಲಿ ಹೊಸಶಕೆ ಪ್ರಾರಂಬಿಸಿದ ಕೀರ್ತಿ ಭಾರತ-ಭಾರತಿ ಪುಸ್ತಕ ಮಾಲೆ’ಯದ್ದು.
▪️ ಮಾಹಿತಿಗಳೇ ದುರ್ಲಭವಾಗಿದ್ದ ೭೦ರ ದಶಕದಲ್ಲಿ ಪ್ರೊ. ಎಲ್.ಎಸ್. ಶೇಷಗಿರಿರಾವ್ ಅವರ ಸಂಪಾದಕತ್ವದಲ್ಲಿ ೫ ವರ್ಷಗಳಲ್ಲಿ ೫೧೦ (ವಾಲ್ಮೀಕಿಯಿಂದ ಜೆ.ಪಿ. ವರೆಗೆ) ರಾಷ್ಟ್ರೀಯ ಮಹಾಪುರುಷರ ಶೀರ್ಷಿಕೆಯ ಪುಸ್ತಕಗಳ ಪ್ರಕಟಣೆ.
▪️ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಎಲ್ಲ ಪ್ರಾಂತಗಳಿಗೂ ಸೇರಿದ ಸಂತರು, ವಿಜ್ಞಾನಿಗಳು, ಕಲಾವಿದರು, ಸಂಗೀತಗಾರರು, ಸ್ವಾತಂತ್ರ್ಯ ಹೋರಾಟಗಾರರು, ಸಮಾಜ ಸುಧಾರಕರು, ಯೋಧರು, ರಾಜರು ಮತ್ತು ಕ್ರೀಡಾಪಟುಗಳು ಹೀಗೆ ಸಮಾಜದ ಎಲ್ಲಾ ಕ್ಷೇತ್ರಗಳನ್ನು ಪ್ರತಿನಿಧಿಸಿದ ಮಹಾಪುರುಷರ ಬಗ್ಗೆ ಪುಸ್ತಕಗಳು.
▪️ ಮೊದಲ ಸರಣಿಯ ಬಿಡುಗಡೆಯ ದಿನದಂದೇ ೧,೩೦,೦೦೦ಕ್ಕೂ ಹೆಚ್ಚು ಪುಸ್ತಕಗಳ ಮಾರಾಟ.
▪️ ಹಿಂದಿ, ಇಂಗ್ಲೀಷ್, ಮರಾಠಿ, ಮಲೆಯಾಳಂ ಸೇರಿದಂತೆ ಅನೇಕ ಭಾಷೆಗಳಿಗೆ ಅನುವಾದ. ಇಲ್ಲಿಯವರೆಗೂ ಸುಮಾರು ಎರಡು ಕೋಟಿಗೂ ಹೆಚ್ಚು ಪುಸ್ತಕಗಳ ಮಾರಾಟ.
▪️ ಕನ್ನಡ ಸಾಹಿತ್ಯ ಲೋಕದ ಅತ್ಯಂತ ಹಿರಿಯ ಲೇಖಕರಾದ ದ.ರಾ. ಬೇಂದ್ರೆ, ದೇಜಗೌ, ಶಿವರಾಮ ಕಾರಂತ, ಮಾಸ್ತಿ ವೆಂಕಟೇಶ ಅಯ್ಯಂಗಾರ್, ತ.ಸು. ಶಾಮರಾವ್, ರಂ.ಶ್ರೀ. ಮುಗಳಿ, ಜಿ.ಎಸ್. ಶಿವರುದ್ರಪ್ಪ, ಎಂ.ವಿ. ಸೀತಾರಾಮಯ್ಯ, ವಿ.ಎಂ. ಇನಾಂದಾರ್, ಪಾ.ವೆಂ. ಆಚಾರ್ಯ, ತಿ.ತಾ. ಶರ್ಮ, ವ್ಯಾಸರಾಯ ಬಲ್ಲಾಳ, ಎಸ್.ಕೆ. ರಾಮಚಂದ್ರರಾವ್, ನಾ. ಡಿ’ಸೋಜಾ, ಎಚ್ಚೆಸ್ಕೆ, ಹಾಮಾನಾ, ಎಚ್.ಎಸ್. ಪಾರ್ವತಿ, ಟಿ.ಸುನಂದಮ್ಮ, ಹೊ.ವೆ. ಶೇಷಾದ್ರಿ, ಖಾದ್ರಿ ಶಾಮಣ್ಣ, ಎನ್. ರಂಗನಾಥ ಶರ್ಮಾ ಮೊದಲಾದವರು ಈ ಮಾಲೆಯ ಬರಹಗಾರರು ಎಂಬ ಹೆಮ್ಮೆ.
▪️ ಲೇಖಕ, ಪತ್ರಕರ್ತ ಶ್ರೀ ’ಚಿರಂಜೀವಿ’ ಅವರ ನೇತೃತ್ವದಲ್ಲಿ ೨೦೦ ಶೀರ್ಷಿಕೆಗಳ (೨೦೧೫ರಲ್ಲಿ) ಪ್ರಕಟಣೆ.
▪️ ೨೦೦ ಶೀರ್ಷಿಕೆಗಳನ್ನು ಇಂಗ್ಲಿಷ್‌ಗೆ ಅನುವಾದಿಸಿ, ಪ್ರಕಟಣೆ. ಉಳಿದ ಪುಸ್ತಕಗಳ ಅನುವಾದ ಕಾರ್ಯ ಪ್ರಗತಿಯಲ್ಲಿದೆ.

ಕಳೆದ ನಾಲ್ಕು ದಶಕದಲ್ಲಿ ದಾಖಲೆ ಮಾರಾಟ ಕಂಡ ಮಕ್ಕಳ ಸಾಹಿತ್ಯ. ಇಂದಿಗೂ ಬಹುಬೇಡಿಕೆಯ ಸಾಹಿತ್ಯ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಪೋಷಕರು ಅಗತ್ಯವಾಗಿ ಮಕ್ಕಳಿಗೆ ಸಾಹಿತ್ಯ ಮಾಲೆಯ ಎಲ್ಲಾ ಪುಸ್ತಕಗಳನ್ನು (ಪುಸ್ತಕವೊಂದಕ್ಕೆ ರೂ ೧೪.೦೦ ರಿಂದ ೧೫.೦೦) ಖರೀದಿಸಿ ಉಡುಗೊರೆಯಾಗಿ ನೀಡಿದರೆ ಮಕ್ಕಳಲ್ಲಿ ಓದುವ ಹವ್ಯಾಸ ಬೆಳೆಯುವುದರ ಜೊತೆಗೆ ಉತ್ತಮ ಜ್ಞಾನಾರ್ಜನೆಗೂ ದಾರಿಯಾಗುತ್ತದೆ. 

◾(ಮಾಹಿತಿ ಸಂಗ್ರಹ ಕೃಪೆ : ಉತ್ಥಾನ ಪತ್ರಿಕೆಯ ಜಾಲತಾಣ). ಚಿತ್ರ ಕೃಪೆ: ರಾಷ್ಟ್ರೋತ್ಥಾನ ಸಾಹಿತ್ಯ ಮತ್ತು ಕನ್ನಡ ಪುಸ್ತಕ ಹಬ್ಬ ಜಾಲತಾಣಗಳು
..................................... ಕೆ ಪಿ ಅಶ್ವಿನ್ ರಾವ್
ಪದವಿನಂಗಡಿ, ಬೊಂದೇಲ್
ಮಂಗಳೂರು, ದಕ್ಷಿಣಕನ್ನಡ ಜಿಲ್ಲೆ
ಮೊ : +91 94482 53815
******************************************


Ads on article

Advertise in articles 1

advertising articles 2

Advertise under the article