-->
ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 130

ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 130

ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 130
ಲೇಖಕರು : ದಿವಾಕರ ಶೆಟ್ಟಿ ಎಚ್
ನಿವೃತ್ತ ಪ್ರವಾಚಕರು
ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
Mob: 9448571203


ಪ್ರೀತಿಯ ಮಕ್ಕಳೇ.. ನೇರಳೆ ಹಣ್ಣುಗಳು ವಿಫುಲವಾಗಿ ಬಿಟ್ಟ ವರ್ಷ ಬರಗಾಲ ಬರುತ್ತದೆ ಎನ್ನುವುದು ತಲತಲಾಂತರಗಳಿಂದ ವರ್ಗಾವಣೆಯಾದ ಮಾಹಿತಿಯಾಗಿದ್ದರೆ ಅದು ಸರಿಯಾಗಿರಬಹುದು. ಆದರೆ ಈಗ ಒಂದು ವಾದ ಪ್ರಬಲವಾಗುತ್ತಿದೆ ಭಾರತೀಯ ಪರಂಪರಲೆಯಿಂದ ಹರಿದು ಬಂದ ಜ್ಞಾನ ಜ್ಞಾನವೇ ಅಲ್ಲ ಅದು ಕಸದ ಬುಟ್ಟಿಗೆ ಶೋಭೆ ಎಂಬುದು. ಇದು 1835 ರಲ್ಲಿ ಜಾರಿಗೆ ಬಂದ ಮೆಕಾಲೆ ವರದಿಯ (Mecauley's Minutes) ಯಶಸ್ವಿ ಅನುಷ್ಠಾನದ ಫಲಶ್ರುತಿ ಅಷ್ಟೇ. ಮೆಕಾಲೆ ತನ್ನ ವರದಿಯಲ್ಲಿ ಹೇಳುತ್ತಾರೆ "ಹೊಸ ಶಿಕ್ಷಣ ಪದ್ಧತಿಯಲ್ಲಿ ಆಂಗ್ಲ ಭಾಷೆ ಏಕಮಾತ್ರ ಶಿಕ್ಷಣ ಮಾಧ್ಯಮವಾಗಿರಬೇಕು. ಅದು ಚರ್ಮದ ಬಣ್ಣದಲ್ಲಿ ಮಾತ್ರ ಭಾರತೀಯನಾಗಿದ್ದು ಆಸಕ್ತಿ ಮತ್ತು ಯೋಚನಾ ವಿಷಯದಲ್ಲಿ ಪಕ್ಕಾ ಇಂಗ್ಲೀಷನಾಗಿರುವ ಉಚ್ಛ ಭಾರತೀಯ ಪೀಳಿಗೆಯನ್ನು ಸಿದ್ಧ ಮಾಡಬೇಕು. (English as the sole medium of instruction to create an elite class "Indian in blood but English in tastes and intellect."). ಆದ್ದರಿಂದ ಲೇಖಕರ ಅಜ್ಜಿಯ ಅಭಿಪ್ರಾಯವನ್ನು ಖಂಡಿಸುವ ವಿತಂಡವಾದವೊಂದು ಹರಡುತ್ತಿದೆ. ಅವರ ವಾದ ವೈಜ್ಞಾನಿಕವಾಗಿದೆ ಅನ್ನಿಸುತ್ತದೆ. ಆದರೆ ಅದು ವೈಜ್ಞಾನಿಕ ಅಲ್ಲ. ಏಕೆಂದರೆ ಅದರಲ್ಲಿ ವಾದವನ್ನು ಸಾಧಿಸಲು ಬೇಕಾದ ಅಧಿಕೃತ ಸಾಕ್ಷ್ಯಗಳೇ ಇಲ್ಲ. ಅವರು ಹೀಗೆ ಹೇಳುತ್ತಾರೆ.

ಈ ರೀತಿಯ ಹಣ್ಣು ಬಿಡಲು ಕಾರಣ ಕಳೆದ ವರ್ಷ ಚೆನ್ನಾಗಿ ಮಳೆ ಬಂದಿರುವುದು. ಮೊದಲನೆಯದಾಗಿ ಸಸ್ಯಗಳಿಗೆ ನೀರು ಮತ್ತು ಪೋಷಕಾಂಶಗಳನ್ನು ಒದಗಿಸಿದಾಗ ಅವುಗಳು ಕಾಯಜ ಬೆಳವಣಿಗೆಯ ಕಡೆಗೆ ಗಮನ ನೀಡುತ್ತವೆ ಹೊರತು ಹಣ್ಣು ನೀಡುವ ಕಡೆಗಲ್ಲ. ಎರಡನೆಯದಾಗಿ ಈ ವರೆಗೆ ಎಷ್ಟು ಬಾರಿ ಉತ್ತಮ ಮಳೆಯಾದಾಗ ನೇರಳೆ ಹಣ್ಣುಗಳ ವಿಪರೀತ ಬೆಳೆಯಾಗಿರುವ ಬಗ್ಗೆ ಯಾವುದೇ ಮಾಹಿತಿಯೂ ಇವರ ಬಳಿ ಇರುವುದಿಲ್ಲ.

ಅವರ ಎರಡನೆಯ ವಾದ ಈ ವರ್ಷ ಜೇನುನೊಣಗಳ ಚಟುವಟಿಕೆ ವಿಪರೀತವಾಗಿರುವುದರಿಂದ ಉತ್ತಮ ಪರಾಗ ಸ್ಪರ್ಶವಾಗಿರುವುದರಿಂದ ಹಣ್ಣಿನ ಬೆಳೆ ಚೆನ್ನಾಗಿ ಬಂದಿದೆ. ಇದು ನಿಜವಾಗಿದ್ದರೆ ಜೇನು ಉತ್ಪಾದನೆ ಕೂಡಾ ಜಾಸ್ತಿಯಾಗಿರಬೇಕು. ಆ ಬಗ್ಗೆ ಯಾವುದೇ ಅಂಕಿ ಅಂಶಗಳಿಲ್ಲ. ಕಾಡಿನಲ್ಲಿ ಎಲ್ಲ ಹೂಗಳೂ ಕಾಯಿ ಕಚ್ಚುವುದಿಲ್ಲ (initiation). ಕಾಯಿ ಕಚ್ಚಿದ ಎಲ್ಲವೂ ಹಣ್ಣಾಗುವುದಿಲ್ಲ. ಎಲ್ಲ ಬೀಜಗಳೂ ಮೊಳೆತು ಗಿಡಗಳಾಗುವುದಿಲ್ಲ. ಇದು ಸಂಖ್ಯಾ ನಿಯಂತ್ರಣಕ್ಕೆ ಪ್ರಕೃತಿ ವಿಧಿಸಿರುವ ಸಂತಾನ ನಿಯಂತ್ರಣ. ಉದಾಹರಣೆಗೆ ಮಾವು. ದಂಡಿಯಾಗಿ ಹೂ ಬಿಡುತ್ತದೆ. ಇದರಲ್ಲಿ ಕೇವಲ 15 ರಿಂದ 18% ಮಾತ್ರ ಕಾಯಿ ಕಚ್ಚುತ್ತದೆ ಮತ್ತು ಗರಿಷ್ಠ ಎಂದರೆ 1 ರಿಂದ 2% ಮಾತ್ರ ಹಣ್ಣಾಗುತ್ತವೆ. ಬಿಟ್ಟ ಹೂಗಳೆಲ್ಲಾ ಹಣ್ಣಾದರೆ ಮಾವಿನ ಮರದ ಗೆಲ್ಲುಗಳೂ ಉಳಿಯಲಾರವು ಮತ್ತು ಗುಣಮಟ್ಟದ ಹಣ್ಣುಗಳನ್ನು ನಿರೀಕ್ಷಿಸುವುದೂ ಕಷ್ಟ. ಆದ್ದರಿಂದ ಇದು ಪ್ರಕೃತಿಯ ನಿಯಂತ್ರಣಾ ಕ್ರಮ. ನಾವು ನರ್ಸರಿ ಮಾಡುವಾಗ ಬೀಜಗಳನ್ನು ತಂದು ನೆಟ್ಟು ಗಿಡ ಮಾಡುತ್ತೇವೆ. ಆದರೆ ಕಾಡಿನಲ್ಲಿ ಗಿಡಗಳನ್ನು ಆಯ್ಕೆ ಮಾಡಲಾಗುತ್ತದೆ. ಉದಾಹರಣೆಗೆ ಹಲಸು. ಹಲಸು ಹಣ್ಣಾಗಿ ಕೆಳಕ್ಕೆ ಬೀಳುತ್ತವೆ. ಬಿದ್ದ ಹಣ್ಣುಗಳು ಅಲ್ಲಿಯೇ ಕೊಳೆತು ಬೀಜಗಳನ್ನು ಅನಾವರಣಗೊಳಿಸಬಹುದು ಅಥವಾ ತಿಂದ ಪ್ರಾಣಿಗಳ ಮಲದಲ್ಲಿ ಒಂದೇ ಕಡೆ ಬಿದ್ದು ಬಿಡಬಹುದು. ಅವುಗಳಲ್ಲಿ ಒಂದೇ ಕಡೆ ಮೊಳೆಯುತ್ತವೆ. ಅವು ನೀರು, ಬಿಸಿಲು ಮತ್ತು ಪೋಷಕಾಂಶಗಳಿಗಾಗಿ ಸ್ಪರ್ಧಿಸುತ್ತವೆ. ಯಾವುದು ಬಲಿಷ್ಠವಾಗಿರುತ್ತವೆಯೋ ಅದು ಉಳಿಯುತ್ತದೆ. ಉಳಿದವು ಹಾಗೆಯೇ ಅಳಿದು ಹೋಗುತ್ತವೆ. ಇದು ಜೀವ ವಿಕಾಸದಲ್ಲಿ ಹೇಳುವ ಬಲಿಷ್ಠರ ಉಳಿವು ಮತ್ತು ಪ್ರಕೃತಿಯ ಆಯ್ಕೆ (survival of the fittest and natural selection). ಆದ್ದರಿಂದ ಇಲ್ಲಿ ಎರಡು ಅಂಶಗಳು ಈ ವರ್ಷ ಜೇನು ಉತ್ಪಾದನೆ ಹೆಚ್ಚಿದೆ ಎಂಬ ಯಾವುದೇ ಅಂಕಿ ಅಂಶಗಳಿಲ್ಲ. ಎರಡನೆಯದು ನೇರಳೆ ಮರದಲ್ಲಿ ಹಣ್ಣಾಗುವ ಹೂವಿನ ಪ್ರಮಾಣ ಎಷ್ಟು ಎನ್ನುವ ಅಂಕಿ ಅಂಶಗಳೂ ಇಲ್ಲ. ಆದ್ದರಿಂದ ಇದು ವಾದಕ್ಕೆ ಪ್ರತಿವಾದವೇ ಹೊರತು ವೈಜ್ಞಾನಿಕ ವಿಶ್ಲೇಷಣೆ ಅಲ್ಲ. 

ಅಂದರೆ ನೀವು ಬರಗಾಲ ಬರುತ್ತದೆ ಎಂದು ಹೇಳುತ್ತೀರಾ ಎಂದು ಕೇಳಿದರೆ ಖಂಡಿತಾ ಇಲ್ಲ. ಹೇರಳವಾಗಿ ನೇರಳೆ ಹಣ್ಣುಗಳಾದಾಗ ಬರಗಾಲ ಬರುತ್ತದೆ ಎಂಬ ಬಗ್ಗೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ. ಸಾಕಷ್ಟು ಮಳೆಯಾದ ಮಾರನೆಯ ವರ್ಷ ಮತ್ತು ಜೇನುನೊಣಗಳ ಚಟುವಟಿಕೆ ಸಾಕಷ್ಟಿದ್ದ ವರ್ಷ ವಿಫುಲವಾಗಿ ನೇರಳೆ ಹಣ್ಣುಗಳು ದೊರೆಯುತ್ತವೆ ಎಂಬುದಕ್ಕೂ ವೈಜ್ಞಾನಿಕ ಅಂಕಿ ಅಂಶಗಳಿಲ್ಲ. ಆದರೆ ನಮಗೆ ಈ ವರ್ಷ ಎಲ್ ನಿನೋ ಇರುವುದರಿಂದ ಮಳೆ ಕಡಿಮೆಯಾಗಿದೆ. ಇದು‌ ಸೂಪರ್ ಎಲ್ ನಿನೋ ಆದರೆ ಬರಗಾಲ ಬರುತ್ತದೆಯೇ ಎಂದು ನೋಡಬಹುದು. ಈ ಮಾಹಿತಿಯನ್ನು ಮುಂದಿನ ಪೀಳಿಗೆಗೆ ವರ್ಗಾಯಿಸಿ ಇನ್ನೊಮ್ಮೆ ವಿಫುಲವಾಗಿ ನೇರಳೆ ಹಣ್ಣಾದ ವರ್ಷ ಬರಗಾಲ ಬರುತ್ತದೆಯೇ ಎಂದು ನೋಡಲು ಹೇಳಬಹುದು. 

ಅಂದರೆ ನೈಸರ್ಗಿಕ ವಿದ್ಯಮಾನವೊಂದಕ್ಕೆ ಪ್ರಕೃತಿಯ ಬದಲಾವಣೆಯೊಂದನ್ನು ತಳುಕು ಹಾಕುವ ಅವಕಾಶ ಬಂದಿದೆ.
.................................... ದಿವಾಕರ ಶೆಟ್ಟಿ ಎಚ್
ನಿವೃತ್ತ ಪ್ರವಾಚಕರು
ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
Mob: 9448571203
*****************************************



Ads on article

Advertise in articles 1

advertising articles 2

Advertise under the article