ಸ್ಫೂರ್ತಿಯ ಮಾತುಗಳು : ಸಂಚಿಕೆ - 223
Monday, July 13, 2026
Edit
ಸ್ಫೂರ್ತಿಯ ಮಾತುಗಳು : ಸಂಚಿಕೆ - 223
ಲೇಖಕರು : ರಮೇಶ ಎಂ. ಬಾಯಾರು
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com
ಇಂದಿನ ನಮ್ಮ ತರಗತಿಯ ಮಗುವಿನ ಕೈಯಲ್ಲಿರುವುದು ಬಾಲ್ ಪೆನ್. ಬಾಲ್ ಪಾಯಿಂಟ್ ಪೆನ್ ಎಂದರೂ ಸರಿಯೇ. ಬಾಲ್ ಪೆನ್ ಆಗಿರಲಿ ಇಂಕ್ ಪೆನ್ ಆಗಿರಲಿ - ಅವು ನಿರ್ಜೀವಿಗಳಲ್ಲ. ಅವು ಭಾವನೆಗಳ ಆಗರ, ಜ್ಞಾನದ ಸಾಗರ, ನಿತ್ಯ ನಮ್ಮ ಜೊತೆಗಿರುವ ಅಭಿಮಾನದ ಮಿತ್ರ.
ನಾವು ಇಂದು ನೋಡುವ ಗುಂಡು ಬಿಂದು ಲೇಖನಿ (ಬಾಲ್ ಪಾಯಿಂಟ್ ಪೆನ್) ಹಲವು ದಶಕಗಳಾಚೆಗೆ ಇರಲಿಲ್ಲ. ಇದ್ದುದು ಶಾಯಿತುಂಬುವ ಪೆನ್. ಅವನ್ನು ನಮ್ಮ ಹಿರಿಯರು ಫೌಂಟನ್ ಪೆನ್ ಅಂತ ಹೇಳುತ್ತಿದ್ದರು. ಐದನೆಯ ತರಗತಿಗೆ ಪ್ರವೇಶಿಸಿದಾಗ ಪೆನ್ನಿನಲ್ಲಿ ಬರೆಯುವ ಅರ್ಹತೆ ಸಿಗುತ್ತಿತ್ತು. ಅಷ್ಟರ ತನಕ ಬಳಪದಲ್ಲಿ ಕಡ್ಡಿಯಲ್ಲಿ ಬರೆದರೆ ಪುಸ್ತಕದಲ್ಲಿ ಬರೆಯಲು ಪೆನ್ಸಿಲ್. ಆಗ ಮೋಹನ್, ಅಶೋಕ, ಏರ್ಮೇಲ್ ಹೀಗೆ ಬೇರೆ ಬೇರೆ ಪೆನ್ನುಗಳು ಸಿಗುತ್ತಿದ್ದುವು. ಬರೆಯುವವರ ಫೇವರಿಟ್ಟು ಯಾವುದಿದ್ದರೂ ಬೆಲೆ ಐವತ್ತು ಪೈಸೆಯಿಂದ ಒಂದು ರೂಪಾಯಿ ತನಕದ ಪೆನ್ನುಗಳು ಲಭ್ಯವಿದ್ದುವು. ಇವೆಲ್ಲ ಶಾಯಿ ಪೆನ್ನುಗಳು. ನೀಲಿ, ಕೆಂಪು, ಹಸುರು, ಕಪ್ಪು ಬಣ್ಣದ ಶಾಯಿಗಳನ್ನು ಬರೆಯಲು ಬಳಸಿದ ಅನುಭವ ನಮ್ಮ ಹಿರಿಯರಿಗೆ ಈಗಲೂ ಇದೆ.
ಶಾಯಿ ಪೆನ್ನಿನ ಭಾಗಗಳು : ಶಾಯಿ ತುಂಬುವ ಅಂಡೆ, ನಿಬ್ ಮತ್ತು ನಾಲಗೆ, ಇವುಗಳನ್ನು ಅಂಡೆಗೆ ಜೋಡಿಸಿದ ʼತ್ರೆಡ್ʼ. ʼನಿಬ್ʼ ಮತ್ತು ನಾಲಿಗೆಗೆ ರಕ್ಷಾ ಕವಚವಾಗಿ ಮುಚ್ಚಳ. ಅದಕ್ಕೆ “ಪೆನ್-ಟಾಪ್” ಎಂದೇ ಹೇಳುವುದು. ಶಾಯಿ ಬಾಟ್ಲಿ ಮತ್ತು ʼಇಂಕ್ ಫಿಲ್ಲರ್ʼ ಇದ್ದರೆ ಆರಾಮ. ಶಾಲೆಯಲ್ಲಿ ಕಚೇರಿಯಲ್ಲಿ ಶಾಯಿ ಮುಗಿದರೆ....? ಒಂದು ಶಾಯಿ ಬಾಟ್ಲಿ ಜೊತೆಗಿರಬೇಕು. ಕೆಲವು ಶಾಲೆಗಳಲ್ಲಿ ಎರಡು ಪೈಸೆ ಕೊಟ್ಟರೆ ಶಾಯಿ ತುಂಬಿಸಿ ಕೊಡುತ್ತಿದ್ದರು. ಎರಡೆರಡು ಪೆನ್ ಇಟ್ಟುಕೊಂಡವರಿಗೆ ಶಾಯಿಯ ಸಮಸ್ಯೆ ಎದುರಾಗುತ್ತಿರಲಿಲ್ಲ. ಮಿತ್ರರಿಗೆ ತರಗತಿಯೊಳಗೆ ಶಾಯಿ ಎರವಲು ಕೊಡುವ ಕ್ರಮವೂ ಆಗ ಇತ್ತು. ಪೆನ್ ತ್ರೆಡ್ ಸಡಿಲಗೊಳಿಸಿ ಮತ್ತೊಬ್ಬನ ಪೆನ್ನಿನ ಅಂಡೆಗೆ ನಿಬ್ ಮೂಲಕ ಬಿಂದು ಬಿಂದುವಾಗಿ ಇಳಿಸಿದರೆ ಶಾಯಿಯ ವರ್ಗಾವಣೆ ನಡೆಯುತ್ತದೆ. ಎಷ್ಟು ಬಿಂದು ನೀಡಿದೆಯೋ ಅಷ್ಟು ಬಿಂದುಗಳನ್ನು ಮರುದಿನ ಮರಳಿಸಬೇಕು. ಕೆಲವರು ಶಾಯಿ ಬದಲಿಗೆ ಪೆನ್ಸಿಲ್ ತುಂಡು, ರಬ್ಬರ್ ಯಾ ಚಾಕಲೇಟು ವಿನಿಮಯಿಸುವ ಕ್ರಮವೂ ಇತ್ತು. . ಬಹಳ ಆತ್ಮೀಯರಾದರೆ ಶಾಯಿಯ ವಿನಿಮಯ ಸಹಕಾರವಷ್ಠೇ ನಡೆಯುತ್ತದೆ.
ಹೊಸ ಪೆನ್ನು ಬಂದಾಗ ನಮಗೆ ಸಂಭ್ರಮವೋ ಸಂಭ್ರಮ. ಅಂಡೆಯಲ್ಲಿ ಶಾಯಿ ತುಂಬಿಸುವುದೇನು! ಶಾಯಿ ತುಂಬುವ ಪ್ರಯತ್ನದಲ್ಲಿ ಅರ್ಧಕ್ಕರ್ಧ ಕೆಳಗೆ ಚೆಲ್ಲುವುದೇನು! ಅದನ್ನೆಲ್ಲಾ ಬೇಗ ಬೇಗ ಬಳಿಯುವುದೇನು. ಅಷ್ಟೆಲ್ಲಾ ಕಷ್ಟಪಟ್ಟು ಶಾಯಿ ತುಂಬಿಸಿ, ಬರೆಯತೊಡಗಿದರೆ, ನಿಬ್ಬಿನಿಂದ ಶಾಯಿ ಇಳಿಯದೇ ಇದ್ದರೆ ! ಶಕ್ತಿಯೆಲ್ಲಾ ಪ್ರಯೋಗಿಸಿ ಪೆನ್ನು ಕೊಡವಿದರೆ ಎದುರಿನ ಗೋಡೆಯ ಮೇಲೆಲ್ಲಾ ನೀಲಿ ಚಿತ್ತಾರ. ನಮ್ಮ ಮುಂದೆ ಕುಳಿತವರ ಬಟ್ಟೆ ಶಾಯಿ ಮಯ. ಪೆನ್ನಿನಿಂದ ಶಾಯಿಯ ಕಾರಿಕೆ ಬಹಳ ಅಪಾಯಕರ. ಕಾಗದದ ಮೇಲೆ ಇಂಕಿನ ಗೊಣ್ಣೆಗಳು. ಅದನ್ನು ಹೀರಿದ ಕಾಗದದ ಮೇಲೆ ನೀಲಿ ಬಣ್ಣ ನಿಧಾನವಾಗಿ ಅಗಲಗಲವಾಗುತ್ತಿದ್ದಂತೆ ಬರೆದ ಪುಟ ಮತ್ತು ಬರವಣಿಗೆ ವಿಷಯ ಕಾಣಿಸದು.
ಇನ್ನು ʼತ್ರೆಡ್ʼ ಮೂಲಕ ಇಂಕು ಒಸರುವುದು. ಅಂಡೆಯ ಬುಡ ಅದು ಹೇಗೆ ಒಡೆಯುತ್ತಿತ್ತೋ ಪರಮಾತ್ಮನೇ ಬಲ್ಲ. ಒಡೆದ ಭಾಗವೂ ಕಣ್ಣಿಗೇ ಕಾಣಿಸದು. ಕೆಲವೊಮ್ಮೆ ತ್ರೆಡ್ ಸವೆದರೂ ಸೋರಿಕೆಯಾಗುತ್ತದೆ. ಜಂಭದಿಂದ ಪೆನ್ನು ಜೇಬಿಗೆ ಇಳಿಬಿಟ್ಟುಕೊಂಡು ಸ್ಕೂಲಿಗೆ ಹೋದರೆ, ಜೇಬು ಮತ್ತು ಸುತ್ತಲಿನ ಬಾಗದಲ್ಲಿ ನಾನಾ ಭೂಖಂಡಗಳ ಚಿತ್ರಗಳು ಅರಳುತ್ತಿದ್ದುವು. ಸಂಜೆ ಮನೆಗೆ ಮರಳಿದಾಗ ಅಮ್ಮನ ಬೈಗಳು ಬೇರೆ. ಅಂಗಿಯ ಮೇಲೇ ಮೂಡಿದ ಡಿಸೈನ್ ನೋಡಿ ನಕ್ಕ ಮಿತ್ರ ರು ಅದೆಷ್ಟೋ . ಛೇ !
ಕೆಲವೊಮ್ಮೆ ಕೈಜಾರಿ ಪೆನ್ನು ಕೆಳಗೆ ಬಿದ್ದಾಗ ಉಂಟಾಗುವ ಆವಾಂತರ ಒಂದೆರಡಲ್ಲ. ಅದರ ನಿಬ್ಬು ಒಂದರ್ಧ ಉತ್ತರ ದಿಕ್ಕು ಇನ್ನೊಂದರ್ಧ ದಕ್ಷಿಣ ದಿಕ್ಕು ಮಾಡಿ ಸೊಟ್ಟ ಮೂತಿಯಾಗಿರುತ್ತದೆ. ನಾವು ಅಳದೇ ಇರುವುದಿಲ್ಲ. ಅಳುತ್ತಾ ಮುಖ ಉಜ್ಜುವಾಗ ಪೆನ್ ಬಿದ್ದ ರಭಸದಲ್ಲಿ ಜಿನುಗಿದ ಶಾಯಿ ಕೈಯ ಮೂಲಕ ಮುಖದಲ್ಲಿ ಮೂಡಿಸುವ ವಿವಿಧ ಚಿತ್ತಾರಗಳು. ಆಹಾ ಸೂರಪ್ಪನಿಗೆ ಮೀಸೆ! ಎಂದು ಹಂಗಿಸುವ ಸಹಪಾಠಿಗಳು. ನಿಬ್ಬನ್ನು ಒಂದೇ ನೇರಕ್ಕೆ ತರಲಿಕ್ಕೆ ಒತ್ತುವುದು, ಕುಟ್ಟುವುದು ಎಲ್ಲಾ ಮಾಡುವಾಗ , ಲಟಕ್ ಎಂಬ ಶಬ್ದ , ನಿಬ್ಬು ಮುರಿದಿದೆ. ಹೊಸಾ ನಿಬ್ಬಿಗೆ ನಾಕಾಣೆಗೆ ಅಪ್ಪನಿಗೆ ಕೊಟೇಶನ್. ಆಗ ಬೈಯುವ ಸರದಿ ಅಪ್ಪನದು. ನಮ್ಮದಲ್ಲದ ತಪ್ಪಿಗೆ ನಮ್ಮನ್ನು ಶಿಕ್ಷೆಗೊಳಪಡಿಸುವ ಪೆನ್ನಿನ ಮೇಲೆ ನಮಗೆ ಎಲ್ಲಿಲ್ಲದ ಕೋಪ. ಆದರೆ ಎಸೆಯುವಂತಿಲ್ಲ. ಪೆನ್ನು ಇಲ್ಲದವರಿಗೆ ತರಗತಿಯಿಂದ “ಗೆಟ್ ಔಟ್" ಆದೇಶ ಬರುತ್ತದೆ.
ಕೆಲವು ಬಾರಿ ಪೆನ್ನಿನ ʼಟಾಪ್ʼ ಕಾಣೆಯಾಗುವುದಿತ್ತು. ಪೆನ್ನಿನ ಅಂಡೆಯ ಹಿಂಭಾಗಕ್ಕೆ ಟಾಪು ಜೋಡಿಸಿ ಬರೆಯುವ ಜಾಣತನ ಇಲ್ಲದವರು (ದಡ್ಡರಲ್ಲ) ʼಟಾಪ್ʼ ಡೆಸ್ಕ್ನ ಮೇಲಿಡುತ್ತಿದ್ದರು. ಅದನ್ನು ನಮ್ಮ ಪಕ್ಕದವನು ಮಾಯ ಮಾಡುವುದೂ ಇದೆ. ಅಧ್ಯಾಪಕರು ನಮ್ಮ ಬಳಿ ಡೆಸ್ಕಿಗೆ ತಾಗಿ ನಿಂತಾಗ ಅದು ಅವರ ಅಂಗಿಯು ತಾಗಿ ಮುಂದೆ ಜಾರಿ ಕೆಳಗೆ ಬೀಳುವುದು, ಹಿಂದೆ ಕುಳಿತವನು ಅವನ ಕಾಲಿನಿಂದ ಡಿಬ್ ಎಂದು ಒದ್ದು ಮತ್ತೂ ಹಿಂದಕ್ಕೆ ಜಾರಿಸುವುದು ಹೀಗೆಲ್ಲಾ ಆಗುವುದುಂಟು. ಮುಂದಿನ ಬೆಂಚಿನಲ್ಲಿ ಕುಳಿತವರಿಗೆ ಇಂತಹ ಅಪಾಯ ಜಾಸ್ತಿ. ಒಮ್ಮೆ ಟಾಪ್ ಕಾಣೆಯಾಯಿತು. ಆಚೆ ಈಚೆ ಹುಡುಕಿದೆ, ಸಿಗಲ್ಲಿಲ್ಲ. ಕೈಯಲ್ಲೇ ಹಿಡಿದು ಪಾಠ ಆಲಿಸುತ್ತಿದ್ದೆ. ಕೈಯ ಪೆನ್ನು ನನಗರಿವಿಲ್ಲದೆ ಮುಖದ ಮೇಲೆ ಓಡುತ್ತಿತ್ತು. ಟೀಚರ್ ನೋಡಿ ಗದರಿ ಹೇಳಿದರು- “ಮುಖದಲ್ಲಿ ಡ್ರಾಯಿಂಗ್ ಮತ್ತೆ ಮಾಡುವಿಯಂತೆ. ಈಗ ಪಾಠ ಕೇಳು” ಎಂದು.
ಮುಂದಿನ ವಾರಕ್ಕೆ ಭಾಗ-2
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
“ಸ್ಕಂದ” ಕುಳ ಗ್ರಾಮ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com
*****************************************