ಜೀವನ ಸಂಭ್ರಮ : ಸಂಚಿಕೆ - 251
Sunday, July 12, 2026
Edit
ಜೀವನ ಸಂಭ್ರಮ : ಸಂಚಿಕೆ - 251
ಲೇಖಕರು : ಎಂ.ಪಿ. ಜ್ಞಾನೇಶ್
ಶಿಕ್ಷಣಾಧಿಕಾರಿ
ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ
(ಮಧ್ಯಾಹ್ನ ಉಪಹಾರ ಯೋಜನೆ)
ಜಿಲ್ಲಾ ಪಂಚಾಯತ್ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ
ಮಕ್ಕಳೇ, ಈ ಕಥೆ ಓದಿ. ಒಬ್ಬ ಅಗರ್ಭ ಶ್ರೀಮಂತನಿದ್ದನು. ಆಗಿನ ಕಾಲದಲ್ಲಿ ಆತ ಸಂಪತ್ತನ್ನು ಬಂಗಾರದ ನಾಣ್ಯಕ್ಕೆ ಮಾರ್ಪಡಿಸಿ, ಅದನ್ನು ನೆಲದಲ್ಲಿ ಹೂತುಹಾಕಲು ತೀರ್ಮಾನಿಸಿದನು. ಅದರಂತೆ ನಾಣ್ಯಗಳನ್ನು ಗಳಿಸಿದನು. ಇದನ್ನು ಮನೆಯಲ್ಲಿ ಗುಂಡಿ ತೆಗೆದು ಹೂತು ಹಾಕಿದರೆ ಎಲ್ಲರಿಗೂ ಗೊತ್ತಾಗುತ್ತದೆ. ನಂತರ ಅದನ್ನು ಯಾರಾದರೂ ಗೊತ್ತಾಗದಂತೆ ಮೋಸ ಮಾಡಿದರೆ ಏನು ಮಾಡುವುದು? ಎಂದು ಯೋಚಿಸಿದ. ಕಡೆಗೆ ಆತನಿಗೆ ಒಂದು ಉಪಾಯ ಹೊಳೆಯಿತು. ಮಧ್ಯರಾತ್ರಿ ಜಮೀನಿಗೆ ಹೋಗುವುದು. ಎಲ್ಲಿ ವ್ಯವಸಾಯ ಮಾಡದೆ ಗಿಡಗಳು ಬೆಳೆದಿವೆಯೋ, ಅಲ್ಲಿ ಗುಂಡಿ ತೆಗೆದು ಹೂತು ಹಾಕುವುದು ಎಂದು ತೀರ್ಮಾನಿಸಿದನು. ಒಂದು ದಿನ ಮಧ್ಯರಾತ್ರಿ ಶ್ರೀಮಂತ ಗುದ್ದಲಿ, ಹಾರೆ ತೆಗೆದುಕೊಂಡು ಹೊರಟನು. ಸುತ್ತ ಮುತ್ತ ನೋಡಿದ ಗಾಢವಾದ ಕತ್ತಲೆ ಯಾರು ಇಲ್ಲ ಎಂದು ಭಾವಿಸಿ ಜಮೀನಿನ ಬಳಿ ಹೊರಟನು. ಆತನ ಮನೆಯ ಆಳು, ಈತನ ನಡೆಯನ್ನು ಗಮನಿಸಿ ಆತನಿಗೆ ಗೊತ್ತಾಗದಂತೆ ಆತನನ್ನು ಹಿಂಬಾಲಿಸುತ್ತಾನೆ. ಮತ್ತೆ ಆತ ಏನು ಮಾಡುತ್ತಿದ್ದಾನೆ ಅನ್ನುವುದನ್ನು ದೂರದಿಂದ ಆತನಿಗೆ ಗೊತ್ತಾಗದಂತೆ ಗಮನಿಸುತ್ತಿದ್ದನು. ಶ್ರೀಮಂತ ಬಂಗಾರದ ನಾಣ್ಯಗಳನ್ನು ಪೆಟ್ಟಿಗೆಯಲ್ಲಿ ಹಾಕಿ, ಗುಂಡಿಯೊಳಗೆ ಹಾಕಿ ಮಣ್ಣು ಮುಚ್ಚಿ ಅದರ ಮೇಲೆ ಗಿಡಗಳನ್ನು ಹಿಂದಿನಂತೆ ನೆಟ್ಟನು. ಸುತ್ತ ಮುತ್ತ ನೋಡಿದ ಯಾರೂ ನೋಡುತ್ತಿಲ್ಲ ಎಂಬುದನ್ನು ಖಾತ್ರಿ ಮಾಡಿಕೊಂಡು ಮನೆಗೆ ವಾಪಸ್ ಆದನು. ಆತ ಅಂದ "ನನ್ನಷ್ಟು ಶ್ರೀಮಂತ ಈ ಊರಿನಲ್ಲಿ ಯಾರು ಇಲ್ಲ" ಅಂದನು.
ವಾರಕ್ಕೊಮ್ಮೆ ಅಲ್ಲಿ ಹೋಗುವುದು, ಕೂರುವುದು ನನ್ನಷ್ಟು ಶ್ರೀಮಂತ ಯಾರು ಇಲ್ಲ ಅಂದುಕೊಂಡು ಬರುತ್ತಿದ್ದನು. ಆರು ತಿಂಗಳಿಗೊಮ್ಮೆ ವರ್ಷಕ್ಕೊಮ್ಮೆ ಗುಂಡಿ ಮಣ್ಣು ತೆಗೆದು, ಪೆಟ್ಟಿಗೆ ಎತ್ತಿ ನೋಡುತ್ತಿದ್ದನು .ತೂಕ ಸರಿಯಾಗಿ ಇದ್ದಿದ್ದರಿಂದ ಆತನಿಗೆ ನಾಣ್ಯ ಪೆಟ್ಟಿಗೆಯಲ್ಲಿ ಸರಿಯಾಗಿದೆ ಎಂದುಕೊಂಡು ಬರುತ್ತಿದ್ದನು. ಹೀಗೆ ಸುಮಾರು 40, 50 ವರ್ಷಗಳು ಆದವು. ಒಂದು ದಿನ ತೀರ್ಮಾನಿಸಿದ. ಈ ದಿನ ಮಧ್ಯರಾತ್ರಿ ಹೋಗಿ, ಪೆಟ್ಟಿಗೆ ತೆಗೆದು, ನಾಣ್ಯ ಪರಿಶೀಲಿಸಬೇಕೆಂದು ತೀರ್ಮಾನಿಸಿ, ಮಧ್ಯರಾತ್ರಿ ಲಾಟಿನನ್ನು ತೆಗೆದುಕೊಂಡು, ಗುದ್ದಲಿ ಹಾರೆ ಹಾಕಿಕೊಂಡು ಹೊರಟನು. ಸುತ್ತಮುತ್ತ ಯಾರೂ ಇಲ್ಲದೆ ಇರೋದನ್ನು ಖಾತ್ರಿ ಮಾಡಿಕೊಂಡು ಜಮೀನಿನ ಬಳಿ ಹೋಗಿ ಗುದ್ದಲಿ, ಹಾರೆ ಸಹಾಯದಿಂದ ಗುಂಡಿ ತೆಗೆದು ಪೆಟ್ಟಿಗೆ ಹೊರ ತೆಗೆದು ಪೆಟ್ಟಿಗೆ ತೆರೆದನು. ಗಾಬರಿಯಾಗಿತ್ತು. ಅಲ್ಲಿ ನಾಣ್ಯಗಳು ಇರಲಿಲ್ಲ. ನಾಣ್ಯದ ತೂಕದಷ್ಟು ಕಲ್ಲುಗಳು ಇದ್ದವು. ಗಾಬರಿಯಿಂದ ಎದ್ದು ಸುತ್ತಮುತ್ತ ನೋಡಿದ. ಆ ಸಮಯಕ್ಕೆ ಮನೆಯ ಆಳು ಅಲ್ಲಿ ಪ್ರತ್ಯಕ್ಷ ಆದನು. ಕೇಳಿದ ಯಜಮಾನರೇ ಏನು ಮಾಡುತ್ತಿದ್ದೀರಿ? ಎಂದನು. ಆಗ ನಡೆದ ಘಟನೆಯನ್ನು ಶ್ರೀಮಂತ ಹೇಳಿ ಈಗ ನಾನು ಬಡವನಾದೆ ಎಂದು ಗೋಳಾಡಿದ. ಆಗ ಆ ಸೇವಕ ಹೇಳಿದ. ಆ ಚಿನ್ನದ ನಾಣ್ಯವನ್ನು ನಾನೇ ತೆಗೆದುಕೊಂಡು ಊರಿನ ಉಪಯೋಗಕ್ಕೆ ಬಳಸಿದೆ. ನೀನು ಹೂತು ಹಾಕಿದ ದಿನದಂದೇ ಅದನ್ನು ನಾನು ತೆಗೆದಿದ್ದು. ಅಷ್ಟೇ ತೂಕದ ಚಿನ್ನದ ನಾಣ್ಯಕ್ಕೆ ಬದಲಾಗಿ ಕಲ್ಲು ಹಾಕಿ, ಮತ್ತೆ ತಾವು ಮುಚ್ಚಿದಂತೆ ಮುಚ್ಚಿ, ಗಿಡ ನೆಟ್ಟಿದ್ದೆ ಎಂದನು. ನಿಮ್ಮ ನಡೆಯಲ್ಲಿ ವ್ಯತ್ಯಾಸ ಬಂದಿದ್ದರಿಂದ ನಿಮ್ಮ ಚಲನವಲನ ಗಮನಿಸುತ್ತಿದ್ದೆನು. ನಿಮ್ಮನ್ನು, ನಿಮಗೆ ಕಾಣದಂತೆ ಹಿಂಬಾಲಿಸುತ್ತಿದ್ದೆ ಎಂದನು. ಈ ಹಣ ದುರುಪಯೋಗ ಆಗಿಲ್ಲ. ಬಳಕೆಯಾಗಿ ಊರು ಶ್ರೀಮಂತವಾಗಿದೆ. ಊರು ಶ್ರೀಮಂತವಾದುದ್ದು ನಿಮ್ಮ ಹಣದಿಂದಲೇ ಎಂದನು. ಊರೇನೋ ಶ್ರೀಮಂತವಾಗಿದೆ, ನಾನು ಬಡವನಾದೆ ಎಂದು ದುಃಖಿಸಿದ.
ಈ ಕಥೆಯನ್ನು ಸರಿಯಾಗಿ ಗಮನಿಸಿ. ಶ್ರೀಮಂತ ದೊಡ್ಡ ಶ್ರೀಮಂತನಾಗಬೇಕೆಂದು ತೀರ್ಮಾನಿಸಿ, ಚಿನ್ನದ ನಾಣ್ಯ ಯಾರಿಗೂ ಗೋಚರಿಸದಂತೆ ಜಮೀನಿನಲ್ಲಿ, ಪೆಟ್ಟಿಗೆಯಲ್ಲಿ ತುಂಬಿ ಹೂತು ಹಾಕಿದ್ದನು. ಅಂದು ಹೇಳಿದ "ನನ್ನಷ್ಟು ಶ್ರೀಮಂತರು ಯಾರಿಲ್ಲ" ಎಂದು. ಸಂಪತ್ತು ನನ್ನ ಭೂಮಿಯಲ್ಲಿ ಸುಭದ್ರವಾಗಿದೆ ಎನ್ನುವ ಭಾವ ಮನಸ್ಸನ್ನು ತುಂಬಿತ್ತು. ಮನಸ್ಸು ತುಂಬಿದ ಬಾವದಿಂದಲೇ ಈತ ಶ್ರೀಮಂತನಾಗಿದ್ದನು. ವಾರಕ್ಕೊಮ್ಮೆ ಹೋಗಿ ಗಿಡ ಜಾಗ ನೋಡಿ ಮನಸ್ಸಿಗೆ ಹೇಳಿಕೊಳ್ಳುತ್ತಿದ್ದನು ನಾನು ಶ್ರೀಮಂತ ಅಂತ. ಹಾಗಾಗಿ ಆತ ಶ್ರೀಮಂತನೆ ಆಗಿದ್ದನು. ಆದರೆ ಹೂತು ಹಾಕಿದ ದಿನವೇ ಪೆಟ್ಟಿಗೆಯಲ್ಲಿದ್ದ ಚಿನ್ನ ತೆಗೆದು, ಕಲ್ಲು ಹಾಕಲಾಗಿತ್ತು. ಭೂಮಿಯಲ್ಲಿ ಸಂಪತ್ತು ಇರಲಿಲ್ಲ ಆದರೆ ಆತನ ಮನಸ್ಸಿನಲ್ಲಿ ಮಾತ್ರ ಸಂಪತ್ತಿನ ಭಾವ ತುಂಬಿತ್ತು. ಹಾಗಾಗಿ ಆತ ಶ್ರೀಮಂತನೇ ಆಗಿದ್ದನು. ಆರು ತಿಂಗಳಿಗೊಮ್ಮೆ, ವರ್ಷಕ್ಕೊಮ್ಮೆ ತೂಕ ನೋಡುತ್ತಿದ್ದನು. ತೂಕ ಸರಿಯಾಗಿತ್ತು. ಆಗಲೂ ಆತನ ಮನಸ್ಸಿನಲ್ಲಿ ಶ್ರೀಮಂತಿಕೆ ಭಾವ ತುಂಬಿತ್ತು. ಆದರೆ 40-50 ವರ್ಷದ ನಂತರ ತೆಗೆದು ನೋಡಿದಾಗ ಚಿನ್ನ ಇರಲಿಲ್ಲ. ಕಲ್ಲು ಕಂಡುಬಂದಿತ್ತು. ಆ ದಿನ ಬಡವ ಎಂದು ದುಃಖಿತನಾಗಿದ್ದ. ಪೆಟ್ಟಿಗೆ ತೆಗೆದಾಗ ಕಲ್ಲು ನೋಡಿ ಮನಸ್ಸನ್ನು ತುಂಬಿದ್ದ ಶ್ರೀಮಂತಿಕೆಯ ಭಾವ ಖಾಲಿಯಾಗಿತ್ತು. ಮನಸ್ಸಿನಲ್ಲಿ ಶ್ರೀಮಂತಿಕೆಯ ಭಾವ ಯಾವತ್ತು ಖಾಲಿಯಾಯಿತು ಅಂದಿನಿಂದ ಬಡವನಾಗಿದ್ದನು.
ಮಕ್ಕಳೇ ಈಗ ಹೇಳಿ ಶ್ರೀಮಂತನನ್ನು ಶ್ರೀಮಂತ ಮಾಡಿದ್ದು ಭೂಮಿಯಲ್ಲಿದ್ದ ಸಂಪತ್ತೋ ಅಥವಾ ಮನಸ್ಸನ್ನು ತುಂಬಿದ ಭಾವವೋ?. ಭೂಮಿಯಲ್ಲಿದ್ದ ಸಂಪತ್ತಲ್ಲ ಏಕೆಂದರೆ ಅದೇ ದಿನ ಆ ಪೆಟ್ಟಿಗೆಯೊಳಗೆ ಕಲ್ಲು ಹಾಕಲಾಗಿತ್ತು. ಆತ 40-50 ವರ್ಷ ಶ್ರೀಮಂತನಾಗಿದ್ದ. ಅದು ಆತನ ಮನಸ್ಸು ತುಂಬಿದ ಭಾವದಿಂದ. ಹೇಳಿ ನಮ್ಮನ್ನು ಶ್ರೀಮಂತ ಮಾಡಿದ್ದು ಸಂಪತ್ತಲ್ಲ ಮನಸ್ಸನ್ನು ತುಂಬಿದ ಭಾವ. ಭಾವನೆ ನಮ್ಮನ್ನು ಶ್ರೀಮಂತ ಮಾಡುತ್ತದೆ. ಅಲ್ಲವೇ ಮಕ್ಕಳೇ...?
ಶಿಕ್ಷಣಾಧಿಕಾರಿ
ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ
(ಮಧ್ಯಾಹ್ನ ಉಪಹಾರ ಯೋಜನೆ)
ಜಿಲ್ಲಾ ಪಂಚಾಯತ್ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ
*****************************************