-->
ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 131

ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 131

ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 131
ಲೇಖಕರು : ದಿವಾಕರ ಶೆಟ್ಟಿ ಎಚ್
ನಿವೃತ್ತ ಪ್ರವಾಚಕರು
ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
Mob: 9448571203


ಪ್ರೀತಿಯ ಮಕ್ಕಳೇ.... ಮೊನ್ನೆ ಮೊಮ್ಮಗನೊಂದಿಗೆ ಒಂದು ಮಾಲ್ ಗೆ ಹೋಗಿದ್ದೆ. ಎಲ್ಲ ಸುತ್ತಿದ ಮೇಲೆ ಹೊರಗಡೆ ಬಂದೆವು. ಅಲ್ಲಿ ಹೊರಗಡೆ ಇರುವ ಸಿಡಿಯುವ ಪಾಪ್ ಕಾರ್ನ್ ನೋಡಿದವನು ನನ್ನನ್ನು ಅಲ್ಲಿಗೆ ಎಳೆದುಕೊಂಡು ಹೋದ. ಅದು ಸಿಡಿಯುವುದನ್ನು ಅದು ಹೇಗೆ ಸಿಡಿಯುತ್ತದೆ ಎಂದು ಕೇಳಿದ. ನಾವೂ ಮನೆಗೆ ಹೋಗಿ ಮಾಡೋಣ ಎಂದೆ. ಅವನನ್ನು ಅವನ ಅಮ್ಮನೊಂದಿಗೆ ಕೂರಿಸಿ ಒಳಗಡೆ ಹೋಗಿ ಒಂದು ಪ್ಯಾಕೆಟ್ ಪಾಪ್ ಕಾರ್ನ್ ತಂದೆ. ಮನೆಗೆ ಬಂದ ಕೂಡಲೇ ಪಾಪ್ ಕಾರ್ನ್ ಮಾಡು ಎಂದು ಹಠ ಹಿಡಿದ. ಒಂದು ಕುಕರ್ ಇಟ್ಟು ಪಾಪ್ ಕಾರ್ನ್ ಕಾಳುಗಳನ್ನು ಹಾಕಿದೆ. ಆ ಕಾಳುಗಳು ಸಿಡಿಯುವುದನ್ನು ಅಚ್ಚರಿಯಿಂದ ನೋಡಿದ. ಖುಷಿಯಿಂದ ಕುಣಿದ. ಅಜ್ಜ ಇಷ್ಟು ದೊಡ್ಡದಾಗುವುದು ಹೇಗೆ..? ಎಂದು ಕೇಳಿದ. ಅವನಿಗೆ ಅರ್ಥವಾಗುವುದಿಲ್ಲ. ಆದ್ದರಿಂದ ಏನೋ ಒಂದು ಕಾರಣ ಹೇಳಿದೆ. ಆದರೆ ನಿಮ್ಮನ್ನೂ ಈ ಪ್ರಶ್ನೆ ಕಾಡಿರಬಹುದಲ್ಲವೇ..?

ಮುಸುಕಿನ ಜೋಳದ ಕಾಳುಗಳಿಂದ ಪಾಪ್ ಕಾರ್ನ್ ತಯಾರಿಸುತ್ತೇವೆ. ಆದರೆ ನಮ್ಮ ರೈತರು ಇದಕ್ಕಾಗಿಯೇ ಒಂದು ಪ್ರತ್ಯೇಕ ಜಾತಿಯ ಜೋಳವನ್ನು ತಮಗೆ ಬೇಕಾಗುವಷ್ಟು ಬೆಳೆದುಕೊಳ್ಳುತ್ತಾರೆ. ನಾವು ಜನ್ಮಾಷ್ಟಮಿ ಬಂತೆಂದರೆ ಬತ್ತದಿಂದ ಅರಳು ಮಾಡುತ್ತೇವಲ್ಲವೆ ಅವು ಪಾಪ್ ಕಾರ್ನ್ ನ ತಮ್ಮಂದಿರು ಅಷ್ಟೇ.  

ನಾವು ಬಳಸುವ ಜೋಳದ ಕಾಳುಗಳಿವೆಯಲ್ಲ ಅವುಗಳು ಆವೃತ್ತ ಬೀಜಗಳು. ಇವುಗಳ ಸುತ್ತ ಎರಡು ಕೋಟೆಗಳಿರುತ್ತವೆ. ಇವುಗಳು ಬೀಜ ಪೊರೆಗಳು (seed coats). ಹೊರಗಿನದ್ದು ಕಠಿಣವಾದ ಟೆಸ್ಟಾ (tests). ಬಿಸಿಲು, ಒಣಹವೆ, ಕೀಟಗಳು ಮತ್ತು ಇತರ ಆಘಾತಗಳಿಂದ ಬೀಜಗಳನ್ನು ರಕ್ಷಿಸುತ್ತದೆ. ಟೆಸ್ಟಾದ ಒಳಗಿರುವುದು ತೆಳುವಾದ ಟೆಗ್ಮಾ (tegma). ಇದು ಒಳಗಿರುವ ಭ್ರೂಣವನ್ನು ರಕ್ಷಿಸುತ್ತದೆ. ಜೋಳದ ಕಾಳಿನ ಹೊರಗಿರುವ ಕಠಿಣವಾದ ಅಬೇಧ್ಯ ಟೆಸ್ಟಾ ಎನ್ನುವ ಮಂತ್ರದಂಡವೇ ನಿಮ್ಮ ಪಾಪ್ ಕಾರ್ನ್ ತಯಾರಿಸುವುದು ಎನ್ನುವುದು ನಿಮಗೆ ಗೊತ್ತಾ.

ಬೀಜಗಳು ಎಷ್ಟೇ ಒಣಗಿದ್ದರೂ 13% ದಷ್ಟು ತೇವಾಂಶ ಹೊಂದಿರುತ್ತವೆ. ಈ ತೇವಾಂಶದಲ್ಲಿ ಕಾಳುಗಳು ಮೊಳಕೆಯೊಡೆಯುವುದಿಲ್ಲ. ಇದನ್ನು ಸುಪ್ತಾವಸ್ಥೆ (dormancy) ಎನ್ನುವುದು. ಈ ಕಾಳುಗಳನ್ನು ಬಿಸಿ ಮಾಡುತ್ತೀರಲ್ಲ ಆಗ ಒಳಗಿನ ನೀರು ಬಿಸಿಯಾಗುತ್ತದೆ. ಹಿಗ್ಗುತ್ತದೆ. ಆದರೆ ಕಠಿಣವಾದ ಸಿಪ್ಪೆ ಇದನ್ನು ಹೊರ ಹೋಗಲು ಬಿಡುವುದಿಲ್ಲ. ಅಂದರೆ ಪ್ರತಿಯೊಂದು ಜೋಳದ ಕಾಳು ಒಂದು ಸಣ್ಣ ಪ್ರೆಶರ್ ಕುಕ್ಕರ್ ನಂತೆ ವರ್ತಿಸುತ್ತದೆ. ಒತ್ತಡದಲ್ಲಿರುವ ಈ ಬಿಸಿ ಹಬೆ ನೀರಿನಲ್ಲಿ ಕರಗದ ಪಿಷ್ಟದ ಹರಳುಗಳೊಂದಿಗೆ (starch) ವರ್ತಿಸಿ ಮೃದುವಾದ ಜೆಲ್ ನಂತಹ ಅಧಿಕ ಗಾತ್ರದ ಮೃದುವಾದ ಸ್ಥಿತಿಸ್ಥಾಪಕ ಗುಣವುಳ್ಳ ಜಿಲೆಟಿನೈಸ್ಡ್ ಪಿಷ್ಟವಾಗಿ (gelatinized starch) ಬದಲಾಯಿಸುತ್ತದೆ. ಇನ್ನೂ ಒತ್ತಡ ತಡೆಯಲಾರೆನೆನ್ನುವಾಗ ಕಾಳು ಒಡೆದು ಪಾಪ್ ಕಾರ್ನ್ ಗಳು ಅರಳುತ್ತವೆ. ನೀವು ಸೇರಿಸಿದ ಎಣ್ಣೆಯಲ್ಲಿನ ಬಣ್ಣ, ಉಪ್ಪು, ಸಾಂಬಾರು ಪದಾರ್ಥಗಳು ನಿಮ್ಮ ಪಾಪ್ ಕಾರ್ನ್ ಗೆ ಬಣ್ಣ ಮತ್ತು ರುಚಿಯನ್ನು ಕೊಡುತ್ತವೆ. 

ಈ ಪಾಪ್‌ ಕಾರ್ನ್ ಗಳು ಸುಲಭವಾಗಿ ಜೀರ್ಣವಾಗುತ್ತವೆ. ಆದ್ದರಿಂದ ಸಕ್ಕರೆ ಒಮ್ಮೆಲೇ ರಕ್ತಕ್ಕೆ ಸೇರುವುದರಿಂದ ರಕ್ತದ ಸಕ್ಕರೆಯ ಮಟ್ಟ ಒಮ್ಮೆಲೇ ಏರುತ್ತದೆ. ಮಿತ ಪ್ರಮಾಣದಲ್ಲಿ ಸೇವಿಸುವುದು ಯಾವುದೇ ಪರಿಣಾಮ ಬೀರುವುದಿಲ್ಲ. ಅಗತ್ಯಕ್ಕಿಂತ ಜಾಸ್ತಿಯಾದರೆ ಅಮೃತವೂ ವಿಷವೆನ್ನುವಂತೆ ಬೊಜ್ಜು ಮತ್ತು ಚಯಾಪಚಯ ಕ್ರಿಯೆಯ ಅಸಮತೋಲನಕ್ಕೆ ಕಾರಣವಾಗಬಹುದು. ಆದ್ದರಿಂದಲೇ ಐನಾಕ್ಸ್ ನಂತಹ ಆಧುನಿಕ ಸಿನಿಮಾ ಮಂದಿರಗಳಲ್ಲಿ ಬಕೆಟ್ ಪಾಪ್ ಕಾರ್ನ್ ಮತ್ತು ಕೋಕ್ ಗಳ ಕಾಂಬಿ ಆಫರ್ ಇಟ್ಟಿರುತ್ತಾರೆ. ಒಬ್ಬರೇ ಇದ್ದರೆ ಈ ಆಫರ್ ಗೆ ಹೋಗಬೇಡಿ. ಇದು ಔಷಧಿ ಕಂಪನಿಗಳ ಪಿತೂರಿ.

ಏಕೆಂದರೆ ಬಕೆಟ್ ಗಟ್ಟಲೆ ಪಾಪ್ ಕಾರ್ನ್ ನಿಮ್ಮ ಆರೋಗ್ಯ ಹಾಳು ಮಾಡಬಹುದು.
.................................... ದಿವಾಕರ ಶೆಟ್ಟಿ ಎಚ್
ನಿವೃತ್ತ ಪ್ರವಾಚಕರು
ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
Mob: 9448571203
*****************************************



Ads on article

Advertise in articles 1

advertising articles 2

Advertise under the article