ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 133
Tuesday, July 28, 2026
Edit
ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 133
ಲೇಖಕರು : ದಿವಾಕರ ಶೆಟ್ಟಿ ಎಚ್
ನಿವೃತ್ತ ಪ್ರವಾಚಕರು
ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
Mob: 9448571203
ಪ್ರೀತಿಯ ಮಕ್ಕಳೇ... ಬಹಳ ಹಿಂದೆ ನೀವು ಹುಟ್ಟಿದ್ದೀರಿ ಎಂದಿಟ್ಟುಕೊಳ್ಳೋಣ. ನೀವು ಹೀಗೆ ಭೂಮಿಯ ಮೇಲೆ ನಡೆದುಕೊಂಡು ಹೋಗುತ್ತಿದ್ದೀರೆಂದು ಭಾವಿಸಿ. ಒಮ್ಮೆಲೇ ಆಗಸದಲ್ಲಿ ಕಪ್ಪನೆಯ ಮೋಡ ಚಲಿಸಿದಂತೆ ಕತ್ತಲು ನಿಮ್ಮ ಕಡೆಗೆ ಚಲಿಸುತ್ತಿರುವಂತೆ ಕಾಣುತ್ತದೆ. ಕಿವಿಗಡಚಿಕ್ಕುವ ಶಬ್ದ ಕೇಳಿಸುತ್ತದೆ. ಹಾಗೆ ತಲೆ ಎತ್ತಿ ನೋಡುತ್ತಿದ್ದಂತೆ ಜಿರಾಫೆಯಂತಹ ಜೀವಿಯೊಂದು ಬಂದು ಇಳಿಯುತ್ತದೆ. 5 ರಿಂದ 6 ಮೀಟರ್ ಎತ್ತರದ ದೇಹ, 10 ರಿಂದ11 ಮೀಟರ್ ಅಗಲದ ರೆಕ್ಕೆಗಳು, 200 ರಿಂದ 250 kg ತೂಕ, ಉದ್ದವಾದ ಹಲ್ಲಿಲ್ಲದ ಕೊಕ್ಕುಗಳು, ನಾಲ್ಕು ಕಾಲುಗಳ ಮೇಲೆ ಓಡಿ ಬಲವಾದ ನೆಗೆತದೊಂದಿಗೆ ಹಾರುವ ಜೀವಿಯೊಂದು ನಿಮ್ಮೆದುರುಗಿರುವುದನ್ನು ನೋಡಿ ಬೆಚ್ಚಿ ಬೀಳುತ್ತೀರಿ.
ಹಾಗೆ ಮುಂದೆ ಹೋಗುವಾಗ ಬೃಹದ್ದೇಹಿಯೊಂದು ಎತ್ತರದ ಮರದ ಎಲೆಗಳನ್ನು ರೆಂಬೆ ಸಹಿತ ಮುರಿದು ತಿನ್ನುವುದನ್ನು ನೋಡುತ್ತೀರಿ. 42 ರಿಂದ 45000 kg ತೂಗುವ ಬೋಯಿಂಗ್ 737 ವಿಮಾನಕ್ಕಿಂತ ಹೆಚ್ಚು ಅಂದರೆ 60 ರಿಂದ 88000 kg ಗಿಂತಲೂ ಹೆಚ್ವು ತೂಗುವ ಜೀವಿ. 31 ರಿಂದ 37 ಮೀಟರ್ ಉದ್ದದ ಅರ್ಜೆಂಟಿನೋಸಾರಸ್ ನೋಡಿ ಹೆದರುತ್ತೀರಿ.
ಹಿಂದೆಯೇ ಧಪ್ ಧಪ್ ಎಂಬ ಶಬ್ದ ಕೇಳಿ ಹಿಂದಿರುಗಿ ನೋಡುತ್ತೀರಿ ಟಿರೆನೋಸಾರಸ್ ರೆಕ್ಸ್. ವಿಜ್ಞಾನ ಪುಸ್ತಕದಲ್ಲಿ ಓದಿದ್ದು ನೆನಪಾಗಿ ಒಮ್ಮೆಲೇ ಕಾಲಿಗೆ ಬುದ್ದಿ ಹೇಳುತ್ತೀರಿ. ಹೌದು ಭಯಾನಕ ಮಾಂಸಾಹಾರಿ ಜೀವಿ ಅದು. ತಲೆಯಿಂದ ಬಾಲದ ವರೆಗೆ 13 ಮೀಟರ್ ಉದ್ದ, 3.7 ಮೀಟರ್ ಎತ್ತರ, 8.8 ರಿಂದ 9.7 ಟನ್ ತೂಕದ ಈ ಜೀವಿಯ ಹೊಟ್ಟೆ ತುಂಬಲು ಅದೆಷ್ಟು ಜೀವಿಗಳು ಬಲಿಯಾಗುತ್ತಿದ್ದವೋ ದೇವರಿಗೆ ಗೊತ್ತು. ಹೌದು ಗಾಳಿಯಲ್ಲಿ, ನೆಲದ ಮೇಲೆ, ನೀರಿನಲ್ಲಿ ಎಲ್ಲೆಂದರಲ್ಲಿ ಈ ಭೀಮ ಗಾತ್ರದ ಜೀವಿಗಳದೇ ರಾಜ್ಯಭಾರ ನಡೆಯುತ್ತಿತ್ತು ಆಗ. ಇದು 252 ಮಿಲಿಯನ್ ನಿಂದ 66 ಮಿಲಿಯನ್ ವರ್ಷಗಳ ನಡುವಿನ ಕಾಲ.
ಓಹ್ ನೀವು ಜುರಾಸಿಕ್ ಪಾರ್ಕ್ ಕಥೆಯನ್ನು ಹೇಳುತ್ತಿದ್ದೀರಲ್ಲವೇ ಎಂದು ಕೇಳುತ್ತೀರಿ. ಹೌದು ಇದು ಡೈನೋಸಾರ್ಗಳು ಭೂಮಿಯನ್ನಾಳಿದ ಕಥೆ. ಅಂತಹ ಸಾವಿರ ಸಾವಿರ ಕೆಜಿ ತೂಗುವ ಜೀವಿಗಳು ಈ ಭೂಮಿಯಿಂದ ಕಣ್ಮರೆಯಾದವು. ಹೇಗೆ ಏಕೆ ಕಣ್ಮರೆಯಾದವು ಎಂಬ ಪ್ರಶ್ನೆಗೆ ನಿಖರ ಉತ್ತರ ದೊರೆತಿಲ್ಲ. ಆದರೆ ಒಂದು ಬೃಹತ್ ಉಲ್ಕೆ ಭೂಮಿಗೆ ಢಿಕ್ಕಿ ಹೊಡೆದು ಇವು ನಾಮಾವಶೇಷವಾದವು ಎಂಬ ವಾದ ಹೆಚ್ಚು ಪುರಸ್ಕೃತವಾದುದು. ಏಕೆಂದರೆ ಇತ್ತೀಚಿನ ಇತಿಹಾಸದ ಪುರಾವೆ ಲಭ್ಯವಿರುವುದೇ ಕಾರಣ.
ಹಾಗಾದರೆ ನಾವು ಈ ಡೈನೋಸಾರ್ಗಳು ಭೂಮಿಯ ಮೇಲಿನ ಓಡಾಟವನ್ನು ನೋಡಬಹುದೇ ಎಂದು ಕೇಳಿದರೆ ಖಂಡಿತವಾಗಿಯೂ. ಆದರೆ ನಿಬಂಧನೆಗಳು ಅನ್ವಯ ಎನ್ನುತ್ತಾರಲ್ಲ ಹಾಗೆ conditions apply. ಭೂಮಿಯ ಮೇಲಿನ ದೂರದರ್ಶಕದಿಂದ ಗೋಚರಿಸುವ ಸುರುಳಿ ನಿಹಾರಿಕೆ (spiral galaxy) NGC 3972 ಮೇಲೆ ನೀವಿರಬೇಕು ಅಷ್ಟೇ. ಈ ನಿಹಾರಿಕೆ ಮತ್ತು ಭೂಮಿಯ ನಡುವಿನ ಅಂತರ ಕೇವಲ 66 ಮಿಲಿಯನ್ ಬೆಳಕಿನ ವರ್ಷಗಳಷ್ಟು ದೂರ ಇದೆ ಅಷ್ಟೇ. ಇದಲ್ಲದೇ ಹಬಲ್ ದೂರದರ್ಶಕದಿಂದ ಕಾಣಿಸುವ NGC 3441 ಮೇಲಿದ್ದರೆ ಭೂಮಿಯ ಮೇಲಿನ 100 ಮಿಲಿಯನ್ ವರ್ಷಗಳ ಹಿಂದಿನ ದೃಶ್ಯಗಳನ್ನು ನೋಡಬಹುದು. ಅದು ಹೇಗೆ ಎಂದು ನೀವು ಕೇಳಬಹುದು.
ಹಗಲಿನಲ್ಲಿ ಹೊರಗೆ ಹೊರಟಾಗ ಸೂರ್ಯ ನಿಮ್ಮನ್ನು ಹಿಂಬಾಲಿಸುತ್ತಾನೆ. ತಕ್ಷಣ ಸೂರ್ಯನ ಕಡೆಗೆ ನೋಡುತ್ತೀರಿ. ಆದರೆ ಆತ ನಿಮಗೆ ತಕ್ಷಣ ಕಂಡ ಸೂರ್ಯ ಅಲ್ಲ ಬದಲಾಗಿ 8.3 ನಿಮಿಷಗಳಷ್ಟು ಹಿಂದಿನ ಸೂರ್ಯ. ಅಂದರೆ ಈಗ ಹೊರಟ ಸೂರ್ಯನಿಂದ ಹೊರಟ ಬೆಳಕು ಭೂಮಿಯನ್ನು ತಲುಪಲು 8.3 ನಿಮಿಷ ತೆಗೆದುಕೊಳ್ಳುತ್ತದೆ. ರಾತ್ರಿ ಆಗಸದತ್ತ ತಿರುಗಿ ಆಲ್ಫಾ ಸೆಂಟಾರಿಯನ್ನು ನೋಡಿದರೆ ಅದು ನಾಲ್ಕೂವರೆ ವರ್ಷಗಳಷ್ಟು ಹಿಂದಿನದ್ದು. ನೀವು ಮೋಡವಿಲ್ಲದ ರಾತ್ರಿ ನೋಡುವ ಜೇಷ್ಠಾ ನಕ್ಷತ್ರ (Antares) 550 ವರ್ಷಗಳಷ್ಟು ಹಿಂದಿನದ್ದು. ಏಕೆಂದರೆ ಅದು ನಮ್ಮಿಂದ 550 ಬೆಳಕಿನ ವರ್ಷಗಳಷ್ಟು ದೂರದಲ್ಲಿದೆ.
ನಿವೃತ್ತ ಪ್ರವಾಚಕರು
ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
Mob: 9448571203
*****************************************