ನಿಷ್ಪಾಪಿ ಸಸ್ಯಗಳು : ಸಂಚಿಕೆ - 155
Thursday, July 2, 2026
Edit
ನಿಷ್ಪಾಪಿ ಸಸ್ಯಗಳು : ಸಂಚಿಕೆ - 155
ಲೇಖಕರು: ವಿಜಯಾ ಬಿ ಶೆಟ್ಟಿ ಸಾಲೆತ್ತೂರು
ಸಹ ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ
ಬಾಳೆಪುಣಿ (ಇರಾ), ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
ಪ್ರೀತಿಯ ಮಕ್ಕಳೇ... ಹೇಗಿದ್ದೀರಿ? ಮಳೆರಾಯನ ಆಗಮನಕ್ಕೆ ಕಾತರದಿಂದ ಕಾಯುತ್ತಾ ಕುಳಿತವರಿಗೆಲ್ಲ ಆಗಸದಿಂದ ಶುಭಸುದ್ದಿ ಸುರಿದು ಶಾಲೆಗೆ ರಜೆಯೂ ಸಿಕ್ಕಿದಂತಾಗಿದೆ..! ಋತುಕಾಲಕ್ಕೆ ಬಹುಶ: ಹೆಚ್ಚು ಸಂತಸ ಪಟ್ಟವರೆಂದರೆ ನಿಷ್ಪಾಪಿ ಸಸ್ಯಗಳು ಹಾಗೂ ಪ್ರಾಣಿಗಳು!
ನಮ್ಮ ಬಾಲ್ಯದ ನೆನಪುಗಳಲ್ಲಿ ಮಳೆಗಾಲವೆಂದರೆ ಸುಂದರ ಕಥನ!. ಪೂರ್ವ ಪಶ್ಚಿಮದಲಿ ಒಂದಿಷ್ಟು ಉನ್ನತವಾದ ಗುಡ್ಡಗಳು, ನಡುವೆ ಭತ್ತ ಬೆಳೆಯುವ ವಿಸ್ತಾರವಾದ ಬೈಲು ಗದ್ದೆಗಳು. ಇಕ್ಕೆಲಗಳಲ್ಲಿ ತುಂಬಿ ಹರಿವ ತೋಡುಗಳು. ಮಳೆಗಾಲದಲ್ಲಿ ಒಂದೆರಡು ಬಾರಿಯಾದರೂ ಈ ತೋಡುಗಳ ದಂಡೆಗಳ ಮೇಲೆ ತುಳುಕುವ ನೀರು ಗದ್ದೆಗಳನೆಲ್ಲಾ ಮುಳುಗಿಸಿ ಪ್ರಶಾಂತವಾಗಿ ಹರಿಯುವ ನದಿಯೇ ಆಗಿ ಬಿಡುತ್ತಿತ್ತು. ಭತ್ತದ ಸಸಿಗಳ ಬಗ್ಗೆ ಸಂಕಟ ಪಡುತ್ತಾ ಹಿರಿಯರು ದು:ಖದಲ್ಲಿದ್ದರೆ ಪ್ರವಾಹದಲ್ಲಿ ಮಾವು, ದಡ್ಡಾಲು, ತೆಂಗಿನ ಕಾಯಿಗಳು ಉರುಳುತ್ತಾ ಸಾಗುತ್ತಿರುವುದನ್ನು ಕಾಣುವುದೇ ನಮ್ಮ ಕಣ್ಣುಗಳಿಗೆ ಹಬ್ಬವಾಗುತ್ತಿತ್ತು.
ಒಂದು ಬಾರಿ ಹೀಗೇ ಮಳೆಬಂದು ನೀರಿಳಿದ ಮೇಲೆ ಬೇಸಾಯ ಕಾಣದ ಹಡಿಲು ಬಿದ್ದ ಪೊಯ್ಯೆತ್ಯಾರ್ ಎಂಬ ಗದ್ದೆಯಲ್ಲಿ ಒಂದು ಜಾತಿಯ ಸುಂದರವಾದ ಹುಲ್ಲು ಬೆಳೆದಿತ್ತು. ಬೆಳೆಯುತ್ತ ಬೆಳೆಯುತ್ತ ಅದರ ಕಾಂಡಗಳು ಗಟ್ಟಿಯಾಗಿ ಒಂದು ಒಂದೂವರೆ ಮೀಟರಿನಷ್ಟೆತ್ತರ ನೇರವಾಗಿ ನಿಂತವು. ಎಲೆಗಳು ನೀಳವಾಗಿ 30-40 ಸೆಂ. ಮೀಟರುದ್ದವಿದ್ದವು. ಮಸುಕಾದ ಮಧ್ಯನಾಳವಿತ್ತು. ಎಲೆಯ ಅಗಲವೂ ಎರಡು ಮೂರು ಸೆಂ ಮೀಟರಿನಷ್ಟಿತ್ತು. ಅದರ ಬಗ್ಗೆ ಯಾರೂ ತಲೆಕೆಡಿಸಿಕೊಂಡಿರಲಿಲ್ಲ. ಅದೊಂದು ಏಕತಾನತೆಯ ಹುಲ್ಲಾಗಿತ್ತು. ಮಳೆ ಪ್ರವಾಹಕ್ಕೆ ಎಲ್ಲೆಲ್ಲಿಂದ ಯಾವ್ಯಾವುದೋ ಬೀಜ ಪ್ರಸಾರವಾಗುವುದು ಇದ್ದದ್ದೆ. ಆದರೆ ಅದು ಕೇವಲ 'ಹುಲ್ಲು' ಆಗಿರಲಿಲ್ಲವೆಂದು ತಿಳಿಯಲು ನಾಲ್ಕು ತಿಂಗಳುಗಳೇ ಉರುಳಬೇಕಾಯ್ತು. ಈಗ ಈ ಸಸ್ಯಗಳು ಹತ್ತಾರು ಕವಲೊಡೆದು ಪೊದೆಗಳಂತಾಗಿದ್ದವು. ಅಕ್ಷಾ ಕಂಕುಳಲ್ಲಿ ಮಾತ್ರವಲ್ಲದೆ ಗಿಡದ ತುದಿಯಲ್ಲೂ ಹೂಗೊಂಚಲುಗಳು ಕಾಣಿಸತೊಡಗಿದ್ದವು. ಆಗಲೂ ಆಶ್ಚರ್ಯವೆನಿಸಲಿಲ್ಲ. ಏಕೆಂದರೆ ಉಳುಮೆ ಕಾಣದ ಗದ್ದೆಯಲ್ಲಿ ಅದೆಷ್ಟೋ ಜಾತಿಯ ಹುಲ್ಲು, ಸಣ್ಣಪುಟ್ಟ ಸಸ್ಯಗಳು, ಬಣ್ಣ ಬಣ್ಣದ ಹೂ ಬಿಡುವ ಪುಟಾಣಿ ಬಳ್ಳಿಗಳಿದ್ದವು.
ಅದೊಂದು ದಿನ ಆ ಗದ್ದೆಗಳ ಅತ್ತಿತ್ತ ಮನೆಯವರಿಗೆ ಆ ಗಿಡದ ವಿಳಾಸ ಹುಡುಕಲು ಕಾರಣವಾದವಳು ವಾರಿಜ! ಆಕೆಗೆ ಮನೆಯ ದನಕರುಗಳನ್ನು ಮೇಯಿಸುವ ಜವಾಬ್ದಾರಿಯಿತ್ತು. ಒಂದು ದಿನ ಅವಳು ಈ ಸಸ್ಯದ ಬಳಿಗೆ ಕುತೂಹಲದಿಂದ ಹೋದಾಗ ಗಿಡದಲ್ಲಿ ಕಾಯಿಗಳು ತುಂಬಿಕೊಂಡಿದ್ದವು. ಎಳೆಯ ಕಾಯಿಗಳು ಹಸಿರಾಗಿದ್ದರೆ ಬೆಳೆದ ಕಾಯಿಗಳು ಬೂದು, ಕಂದು ಬಣ್ಣದವಾಗಿದ್ದವು. ಅಂದ ಕಂಡು ಕೊಯ್ಯತೊಡಗಿದಾಗ ಅಂಡಾಕಾರದ ಕಾಯಿಯ ನಡುಭಾಗದಲ್ಲಿ ಕೇಸರದಂತಹ ರಚನೆ ಕಂಡು ಎಳೆದಳಂತೆ. ಕಾಯಿಯ ಮಧ್ಯೆ ನಿಸರ್ಗ ನಿರ್ಮಿತ ರಂದ್ರವಿತ್ತು! ಕಾಯಿಯ ನಡುವಿನ ರಂದ್ರದ ಮೇಲೆ ಮತ್ತು ಕೆಳಭಾಗದಲ್ಲಿ ಜೋಡಣೆಯಾಗಿದ್ದ ಒಣಕೇಸರಗಳನ್ನು ತೆಗೆದು ಕಾಯಿಗಳನ್ನು ಇನ್ಯಾವುದೋ ಹುಲ್ಲಿನ ತೆನೆಗೆ ಪೋಣಿಸಿ ಹಾರ ಮಾಡಿಕೊಂಡು ಕೈಗೆ ಸುತ್ತಿಕೊಂಡು ಮನೆಗೆ ಬಂದಿದ್ದಳು. ಬಾಯಿಗೆ ಹಾಕಿ ಜಗಿದರೆ ಕಲ್ಲಿಗಿಂತಲು ಗಟ್ಟಿಯಾಗಿತ್ತು. ಹಿರಿಯರೆಲ್ಲ ಗಿಡದ ಭೇಟಿ ಮಾಡಿ ಬಂದು ಅದರ ಕಾಯಿಯ ಬಗ್ಗೆ ಮಾತನಾಡುವವರೇ. ಎಲ್ಲರಿಗೂ ಕಾಯಿಯ ನಡುವಿನ ನಿಸರ್ಗ ನಿರ್ಮಿತ ರಂದ್ರದ ಬಗ್ಗೆಯೇ ಸೋಜಿಗ. ದಿನ ಕಳೆದಂತೆ ನಮಗೆಲ್ಲ ಅದರದೇ ಸರ, ಬಳೆಗಳು ತಯಾರಾದುವು. 'ಓಂ ನಮ: ಶಿವಾಯ' ಎಂದು ನೂರೆಂಟು ಬಾರಿ ಹೇಳಲು ಅಜ್ಜಿಗೂ ಒಂದು ಜಪ ಮಾಲೆಯ ಸೃಷ್ಠಿಯಾಯಿತು.
ಈ ಮಧ್ಯೆ ಕಾಲೇಜಿಗೆ ಹೋಗುತ್ತಿದ್ದ ಆಚೆ ಮನೆಯ ರಾಜು ತನ್ನ ಅಧ್ಯಾಪಕರಲ್ಲಿ ಆ ಹುಲ್ಲಿನಂತಹ ಸಸ್ಯದ ಜಾತಕ ಕೇಳಿ, ಕೆಲವನ್ನು ಬರೆದು ತಂದಿದ್ದ. ಅವರು ಹೇಳಿದ ಪ್ರಕಾರ ಅದು ಜೋಬ್ಸ್ ಟಿಯರ್ಸ್ ಎಂಬ ಸಸ್ಯ. ಸಾಮಾನ್ಯವಾಗಿ ಅಡ್ಲಿ ಮಿಲ್ಲೆಟ್, ಕಣ್ಣೀರಿನ ಹುಲ್ಲು, ಬೆಯರ್ ಗ್ರಾಸ್ ಎಂದೂ ಹಿಂದಿಯಲ್ಲಿ ವೈಜಂತಿ.. ಬೈಜಂತಿ.. ವೈಜಯಂತಿ ಎಂಬೆಲ್ಲಾ ಹೆಸರು ಹೊಂದಿದ್ದು Coix lacryma jobi ಎಂಬುವುದು ಸಸ್ಯಶಾಸ್ತ್ರೀಯ ಹೆಸರಾಗಿದೆ. 780 ತಳಿಗಳನ್ನು ಪಡೆದ 12000 ಜಾತಿಗಳನ್ನು ಹೊಂದಿದೆ ಎಂದು ತಿಳಿಸುತ್ತಾ ಜಾಗತಿಕವಾಗಿ 5 ನೇ ಅತಿದೊಡ್ಡ ಕುಟುಂಬವಾದ Poaceae ಎಂಬ ತವರಿನ ಮಗಳು!' ಎಂದು ವಿವರಿಸಿದ. 'ಚೀನಾ ಮಲೇಷಿಯಾ, ಭಾರತ, ಮ್ಯಾನ್ಮಾರ್ ಗಳಿಗೆ ಸ್ಥಳೀಯ..!. ಉತ್ತರ-ಮದ್ಯ ಚೀನಾದಲ್ಲಿನ ನವಶಿಲಾಯುಗದ ಸ್ಥಳದಿಂದ ಕುಂಬಾರಿಕೆ ಅವಶೇಷ, ಸ್ಥಳೀಯವಲ್ಲದ ಬಾರ್ಲಿ, ಈ ಜೋಬ್ಸ್ ಟಿಯರ್ಸ್ ಇತರ ಸಸ್ಯಗಳ ಜೊತೆ ದೊರಕಿದೆಯೆಂದರೆ 3000 BC ಯಷ್ಟು ಹಿಂದೆಯೇ ಬಳಕೆಯಲ್ಲಿತ್ತೆನ್ನಬಹುದು. ಭಾರತದಲ್ಲೂ ಈಶಾನ್ಯ ಭಾಗದ ಪುರಾತತ್ವ ಶಾಸ್ತ್ರದ ಸ್ಥಳಗಳಲ್ಲಿ ಕಂಡುಬಂದಿದೆ. ಮಾನವ ವಿಕಾಸದ ಹಾದಿಯಲ್ಲಿನ ಆರಂಭಿಕ ನಾಲ್ಕು ಬೆಳೆಗಳಲ್ಲಿ ಇದೂ ಒಂದಾಗಿದೆಯಂತೆ. ಯುರೋಪಿಗೆ ಈ ಸಸ್ಯವನ್ನ ಅರಬ್ ವ್ಯಾಪಾರಿಗಳು ಪರಿಚಯಿಸಿದ್ದರು. ಜಪಾನಿನಲ್ಲಿ ಬೌದ್ಧ ಧರ್ಮದ ಪರಿಚಯಕ್ಕಿಂತ ಮೊದಲೇ ಈ ಸಸ್ಯದ ಮಣಿಗಳು ಬಳಕೆಯಲ್ಲಿದ್ದುವಂತೆ!'... ಹೀಗೆಲ್ಲ ರಾಜುವಿನ ಬಾಯಿಯಿಂದ ವಿವರಣೆ ಕೇಳುತ್ತಾ 'ಭಾರೀ ಪುರಾತನ ಸಸ್ಯದ ತಲೆಮಾರೊಂದು ನಮ್ಮ ಬೈಲುಗದ್ದೆಯಲ್ಲಿ ಉದಿಸಿದ ಹೆಮ್ಮೆಯಿದೆ' ಎಂದು ವಾರಿಜಳ ಕಣ್ಣುಗಳಲ್ಲಿದ್ದ ಕಾಂತಿಯೇ ತೋರ್ಪಡಿಸುತ್ತಿತ್ತು!.
ರಾಜು ಆಕೆಯ ಕೈಯಲ್ಲಿದ್ದ ಆ ನಿಷ್ಪಾಪಿ ಸಸ್ಯದ ಬೀಜಗಳು ಅಥವಾ ಸುಳ್ಳು ಹಣ್ಣುಗಳನ್ನು ತೋರಿಸುತ್ತಾ "ಇದು ಕಾಡು ಪ್ರಭೇದವಂತೆ... ಇನ್ನೊಂದು ಕೃಷಿ ಪ್ರಭೇದವೂ ಇದ್ದು ಅದರ ಮೃದುವಾದ ಕಾಯಿಯಾಗಿದ್ದು ಅಕ್ಕಿಯಂತೆ ಗಂಜಿ ಅಥವಾ ಹಿಟ್ಟಾಗಿಯೂ ಪೂರ್ವ ಏಷ್ಯಾದ್ಯಂತ ಬಳಸುವ ಬಗ್ಗೆ ತನ್ನ ಅಧ್ಯಾಪಕರು ತಿಳಿಸಿದ ಬಗ್ಗೆ ವಿವರಿಸಿದ. 'ಏಷ್ಯನ್ ಸೂಪರ್ ಮಾರ್ಕೆಟ್ ಗಳಲ್ಲಿ ಚೈನೀಸ್ ಮತ್ತು ಬಾರ್ಲಿ ಎಂಬ ಹೆಸರಿನಿಂದ ಮಾರಾಟವಾಗುತ್ತದೆ ಎಂದೂ ಈ ಬೀಜಗಳಲ್ಲಿ ನೈಸರ್ಗಿಕ ರಂಧ್ರವಿದ್ದು ಆಭರಣ, ಜಪಮಾಲೆ, ಕೈಚೀಲ, ಜಾಕೆಟ್ ಗಳಿಗೆ ಅಲಂಕಾರ, ಫೋಟೋ ಫ್ರೇಮ್ ಗಳ ತಯಾರಿಗೆ ಬಳಸುತ್ತಾರೆ ಎಂದು ತಿಳಿಸಿದ.
ಅಷ್ಟು ಮಾತ್ರವಲ್ಲದೆ ಜಪಾನ್ ನಲ್ಲಿ ಹುರಿದ ಕಾಳಿನ ಚಹಾ, ಕೊರಿಯ ಮತ್ತು ಚೀನದಲ್ಲಿ ಭಟ್ಟಿ ಇಳಿಸಿ ಮದ್ಯ ತಯಾರಿ ಮಾಡುವರಂತೆ' ಎಂದಾಗ ನಮಗೆಲ್ಲ ಆಶ್ಚರ್ಯವೋ ಆಶ್ಚರ್ಯ!. ವಿಶೇಷವಾಗಿ ಈ ಸಸ್ಯಗಳನ್ನು ಆನೆಗಳು ಇಷ್ಟ ಪಡುತ್ತವಂತೆ. ಸಂಧಿವಾತ ವಿರೋಧೀ, ನೋವು ನಿವಾರಕ, ಮೂತ್ರವರ್ಧಕ, ರಕ್ತದ ಕೊಲೆಸ್ಟರಾಲ್ ನಿವಾರಕ, ಕ್ಯಾನ್ಸರ್ ವಿರೋಧೀ, ಮುಟ್ಟಿನ ಅಸ್ವಸ್ಥತೆ ನಿವಾರಿಸುವ ಈ ವೈಜಯಂತಿ ಕಾಯಿ ಪಿಷ್ಟ, ಪ್ರೊಟೀನ್, ಲಿಪಿಡ್ ಗಳನ್ನು ಒಳಗೊಂಡಿದೆಯೆಂದು ನನಗೆ ಇತ್ತೀಚೆಗೆ ತಿಳಿಯಿತು. ವೈಜಯಂತಿ ಈಗಲೂ ನಮ್ಮ ಊರಿನ ಕೆಲವು ತೋಟ, ಗದ್ದೆಯ ಬದಿಗಳಲ್ಲಿ, ಅಡಿಕೆ ತೋಟದ ಮೂಲೆಗಳಲ್ಲಿ ಕಾಣಿಸುತ್ತಲೇ ಇದೆ. ಈಗಲೂ ಮಕ್ಕಳು ಇದರ ಬೀಜಗಳನ್ನು ಆಟಿಕೆಯಾಗಿ ಬಳಸುತ್ತಾರೆ. ಕಾಯಿಗಳನ್ನು ಒಣಗಿಸಿ ವಿವಿಧ ಬಣ್ಣಗಳನ್ನು ಹಚ್ಚಿ ಖುಷಿ ಪಡುತ್ತಾರೆ.
ಮಕ್ಕಳೇ, ನೀವೂ ಈ ಸಸ್ಯಗಳನ್ನು ಗಮನಿಸಿರಬಹುದು. ಸಸ್ಯದ ಎಲೆ ಕಾಯಿಗಳನ್ನು ಗಮನಿಸುತ್ತಾ ನಿಸರ್ಗದ ಚಮತ್ಕಾರವನ್ನು ಆನಂದಿಸುವಿರಲ್ಲವೇ..?
ನಿಷ್ಪಾಪಿ ಸಸ್ಯಗಳ ಪ್ರೀತಿಗೆ ಸೋತು ನೀವು ಯಾವುದಾದರೂ ಹೊಸ ಸಸ್ಯಗಳನ್ನು ಸಾಕುತ್ತಿರುವಿರಾದರೆ ಅಥವಾ ಗುರುತಿಸಿ ರಕ್ಷಿಸುತ್ತಿದ್ದರೆ ದಯವಿಟ್ಟು ನನ್ನ 7892587191 ನಂಬರ್ ಗೆ ತಿಳಿಸುವಿರಾ?
ಸರಿ ಮಕ್ಕಳೇ... ಮುಂದಿನ ವಾರ ಇನ್ನೊಂದು ನಿಷ್ಪಾಪಿ ಸಸ್ಯದ ಬಗ್ಗೆ ತಿಳಿಯೋಣ, ನಮಸ್ತೆ.
ಸಹ ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ
ಶಾಲೆ , ಬಾಳೆಪುಣಿ (ಇರಾ)
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
Mob : +91 78925 87191
*****************************************