-->
ಶಾಲಾ ಭಯ (School Phobia)

ಶಾಲಾ ಭಯ (School Phobia)

ಲೇಖಕರು : ಗಿರೀಶ್ ಎಂ ಎನ್ 
ಕೌನ್ಸೆಲಿಂಗ್ ಮನಶಾಸ್ತ್ರಜ್ಞರು 
ಮಹೇಶ್ ಆಸ್ಪತ್ರೆ ಬ್ರಹ್ಮಾವರ
ಉಡುಪಿ ಜಿಲ್ಲೆ
Mob : 8722715472

       
ಶಾಲಾ ಭಯ ಎನ್ನುವುದು ಕೆಲವು ಮಕ್ಕಳಲ್ಲಿ ಕಂಡುಬರುವ ಒಂದು ಸಾಮಾನ್ಯ ಮನೋ ಸಮಸ್ಯೆಯಾಗಿದೆ. ಈ ಸಮಸ್ಯೆ ಇರುವ ಮಕ್ಕಳು ಶಾಲೆಗೆ ಹೋಗಲು ಭಯಪಡುತ್ತಾರೆ, ಆತಂಕ ಅನುಭವಿಸುತ್ತಾರೆ ಅಥವಾ ಶಾಲೆಗೆ ಹೋಗುವುದನ್ನು ತಪ್ಪಿಸಲು ನಾನಾ ರೀತಿಯಲ್ಲಿ ಪ್ರಯತ್ನಿಸುತ್ತಾರೆ. ಇದು ಮಗುವಿನ ಸೋಮಾರಿತನ ಅಥವಾ ಹಠವಲ್ಲ. ಮಗುವಿನ ಮನಸ್ಸಿನಲ್ಲಿರುವ ಭಯ, ಆತಂಕ ಅಥವಾ ಭಾವನಾತ್ಮಕ ಒತ್ತಡದಿಂದ ಈ ಸಮಸ್ಯೆ ಉಂಟಾಗಬಹುದು.

ಶಾಲಾ ಭಯ (School Phobia) ಉಂಟಾಗಲು ಪ್ರಮುಖ ಕಾರಣಗಳು ಹಾಗೂ ಪರಿಹಾರಗಳು

1. ಪೋಷಕರಿಂದ ದೂರವಾಗುವ ಭಯ (Separation Anxiety)
ತಾಯಿ ಅಥವಾ ತಂದೆಯಿಂದ ದೂರವಾಗ ಬೇಕಾದಾಗ ಮಗುವಿಗೆ ತೀವ್ರ ಆತಂಕ ಉಂಟಾಗುವುದು. ಇದಕ್ಕೆ ಬಹಳ ಮುಖ್ಯ ಕಾರಣ ಮಕ್ಕಳ ಮುಮ್ಮೆದುಳು ಪೂರ್ಣವಾಗಿ ಬೆಳೆದಿರದ ಕಾರಣ ಆ ಕ್ಷಣಕ್ಕೆ ಅವರು ಏನನ್ನು ನೋಡುತ್ತಾರೋ ಅವರಿಗೆ ಏನು ಯೋಚನೆ ಬರುತ್ತದೋ ಅಷ್ಟೇ ನಿಜವೆಂದು ಭಾವಿಸುತ್ತಾರೆ.

  ಪರಿಹಾರ : 
▪️ ಮಕ್ಕಳು ಶಾಲೆಯ ಕುರಿತು ಆಡುವ ಪ್ರತಿಯೊಂದು ನಕರಾತ್ಮಕ ಮಾತುಗಳನ್ನು ಕೇಳಿಸಿಕೊಳ್ಳಬೇಕು. ನಿನ್ನ ಯೋಚನೆ ತಪ್ಪು ಎಂದು ವಾದಿಸಬಾರದು. ಬೇರೆಯ ಮಕ್ಕಳಿಗೆ ಹೋಲಿಸಬಾರದು.

▪️ಶಾಲೆಯಲ್ಲಿ ಮಕ್ಕಳು ಎಷ್ಟು ಆನಂದವಾಗಿರುತ್ತಾರೆ ಎಂಬುದನ್ನು ಕಥೆಯ ಮೂಲಕ ಹೇಳುತ್ತಾ ಮಕ್ಕಳಿಗೆ ಕಲ್ಪಿಸಿಕೊಳ್ಳಲು ಅವಕಾಶ ಮಾಡಿಕೊಡಬಹುದು.

▪️ ನಾಳೆಗೆ ತಪ್ಪದೇ ಶಾಲೆಗೆ ಹೋಗಬೇಕು ಎಂದು ಹಿಂದಿನ ರಾತ್ರಿ ಮಕ್ಕಳ ಮುಂದೆ ಜಪ ಮಾಡುವುದನ್ನು ನಿಲ್ಲಿಸಬೇಕು.

2. ಶಾಲೆಯಲ್ಲಿ ಕಿರುಕುಳ (Bullying)
ಸಹಪಾಠಿಗಳು ಅಥವಾ ಹಿರಿಯ ವಿದ್ಯಾರ್ಥಿಗಳಿಂದ ಹಾಸ್ಯ, ಬೆದರಿಕೆ ಅಥವಾ ಕಿರುಕುಳ ಅನುಭವಿಸುವುದು.

ಪರಿಹಾರ : ಮಕ್ಕಳಿಗೆ ಶಾಲೆಯ ಸಹಪಾಠಿಗಳಿಂದ ಅಥವಾ ಹಿರಿಯ ವಿದ್ಯಾರ್ಥಿಗಳಿಂದ ಸಮಸ್ಯೆಯಾಗುತ್ತಿದ್ದರೆ ಅದನ್ನು ಪೂರ್ತಿಯಾಗಿ ತಿಳಿದುಕೊಂಡು ಶಿಕ್ಷಕರೊಡನೆ ಚರ್ಚಿಸಿ ಪರಿಹಾರ ಕಂಡುಕೊಂಡು ಮಕ್ಕಳಿಗೆ ಮನದಟ್ಟು ಮಾಡುವುದು.

3. ಶೈಕ್ಷಣಿಕ ಒತ್ತಡ (Academic Pressure)
ಪರೀಕ್ಷೆಗಳು, ಕಡಿಮೆ ಅಂಕಗಳು ಅಥವಾ ಓದಿನಲ್ಲಿ ಹಿಂದುಳಿಯುವ ಭಯ.

• ಪರಿಹಾರ : ಸ್ಕೂಲ್ ಫೋಬಿಯ ಹೊಸದಾಗಿ ಶಾಲೆಗೆ ಸೇರಿದ ಪ್ರಾರಂಭದಲ್ಲೇ ಹೆಚ್ಚು ಕಾಣಿಸಿಕೊಳ್ಳುವುದರಿಂದ ಮಕ್ಕಳು ಓದಿಕೊಳ್ಳುವುದಕ್ಕಿಂತ  ಹೊಂದಿಕೊಳ್ಳುವುದಕ್ಕೆ  ಒಂದು ತಿಂಗಳು ಸಮಯ ಹೆಚ್ಚಿನ ಆದ್ಯತೆ   ನೀಡಬೇಕು.

  4. ಶಿಕ್ಷಕರ ಭಯ (Fear of Teachers) : 
ಶಿಕ್ಷಕರ ಕಠಿಣ ವರ್ತನೆ, ಬೈಯುವುದು ಅಥವಾ ಶಿಕ್ಷೆ ನೀಡುವ ಭಯ.

ಪರಿಹಾರ : ಎಲ್ಲಾ ಮಕ್ಕಳು ಒಂದೇ ಅಲ್ಲ ಎಂಬುದನ್ನು ಅರಿತಿರುವುದು ಶಿಕ್ಷಕರ ಪ್ರಧಾನ ಲಕ್ಷಣಗಳಲ್ಲಿ ಒಂದು. ಹಾಗಾಗಿ ಶಾಲಾ ಭಯ ಯಾವ ಮಕ್ಕಳಲ್ಲೂ ಕಾಣಿಸಿಕೊಳ್ಳಬಹುದು. ಅಂತಹ ಮಕ್ಕಳಿಗೆ ಸಿದ್ಧವಿರುವ ನಿಯಮಗಳಿಗಿಂತ ಮಾರ್ಪಡಿಸಬಹುದಾದ ನಿಯಮಗಳು ಹೆಚ್ಚು ಪೂರಕವಾಗಿರುತ್ತದೆ. ಮುಖ್ಯವಾಗಿ ಇಂತಹ ಮಕ್ಕಳಿಗೆ ಮಾತೃರೂಪಿ ಶಿಕ್ಷಕರ ಅಗತ್ಯವಿರುತ್ತದೆ.

5. ಸಾಮಾಜಿಕ ಆತಂಕ (Social Anxiety)
ಹೊಸ ಸ್ನೇಹಿತರನ್ನು ಮಾಡುವುದು, ತರಗತಿಯಲ್ಲಿ ಮಾತನಾಡುವುದು ಅಥವಾ ಇತರರ ಮುಂದೆ ತಪ್ಪು ಮಾಡುವ ಭಯ.

ಪರಿಹಾರ :  ಹೊಸ ವಾತಾವರಣಕ್ಕೆ ಹೊಂದಿಕೊಳ್ಳುವಾಗ ಪ್ರತಿ ಮಗುವಿನಲ್ಲೂ ಒಂದು ಮಟ್ಟದ ಅಂಜಿಕೆ ಇದ್ದೇ ಇರುತ್ತದೆ. ಆದರೆ ಕೆಲವರಲ್ಲಿ ಇದು ಸಾಮಾನ್ಯಕ್ಕಿಂತ ಹೆಚ್ಚಾಗಿ ಕಂಡು ಬಂದಲ್ಲಿ ಅವರು ಶಾಲೆಗೆ ಬರಲು ಹಿಂಜರಿಯಬಹುದು. ಇಂತಹ ಸಂದರ್ಭದಲ್ಲಿ ಶಿಕ್ಷಕರು ಮಧ್ಯಪ್ರವೇಶಿಸಿ ಮಕ್ಕಳಿಗೆ ಸ್ನೇಹಿತರ ಅವಶ್ಯಕತೆಯನ್ನು ತಿಳಿಸಿ ಇತರೆ ಮಕ್ಕಳನ್ನು ಇವರಿಗೆ ಪರಿಚಯಿಸುವ ಮೂಲಕ ನೆರವಾಗಬಹುದು.

 6. ಕುಟುಂಬದ ಸಮಸ್ಯೆಗಳು (Family Problems) :  ಪೋಷಕರ ಜಗಳ, ವಿಚ್ಛೇದನ, ಅನಾರೋಗ್ಯ ಅಥವಾ ಕುಟುಂಬದಲ್ಲಿನ ಒತ್ತಡ.

ಪರಿಹಾರ : ಕೌಟುಂಬಿಕ ಸಮಸ್ಯೆಯ ಹಿನ್ನಲೆ ಇದ್ದ ಮಗು ಭಾವನಾತ್ಮಕ ಸಮಸ್ಯೆಯನ್ನು ಅನುಭವಿಸುತ್ತಿದ್ದಲ್ಲಿ ಹೊಸ  ವಾತಾವರಣಕ್ಕೆ ಹಾಗೂ ವ್ಯಕ್ತಿಗಳಿಗೆ ಹೊಂದಿಕೊಳ್ಳುವಲ್ಲಿ ಸ್ವಲ್ಪ ಸಮಯ ತೆಗೆದುಕೊಳ್ಳುತ್ತಾರೆ. ಇಂತಹ ಮಕ್ಕಳನ್ನು ಶಿಕ್ಷಕರು ವೈಯಕ್ತಿಕವಾಗಿ ಮಾತನಾಡಿಸುವ ಮೂಲಕ ತಮ್ಮಲ್ಲಿ ಉಂಟಾಗುವ ಆತಂಕಗಳನ್ನು ಹೇಳಿಕೊಳ್ಳುವಂತೆ ಪ್ರಚೋದಿಸುವ ಮೂಲಕ ಅವರಲ್ಲಿರುವ ಕೀಳರಿಮೆಯನ್ನು ಕಡಿಮೆ ಮಾಡಿ ಶಾಲಾ ಭಯವನ್ನು ಹೋಗಲಾಡಿಸಬಹುದು.

7. ಮಾನಸಿಕ ಆರೋಗ್ಯ ಸಮಸ್ಯೆಗಳು (Mental Health Problems)
ಆತಂಕದ ಅಸ್ವಸ್ಥತೆ (Anxiety Disorders), ಖಿನ್ನತೆ (Depression) ಅಥವಾ ಇತರ ಭಾವನಾತ್ಮಕ ಸಮಸ್ಯೆಗಳು.

ಪರಿಹಾರ : ಕೆಲವೊಮ್ಮೆ ಕುಟುಂಬದಲ್ಲಿ ಯಾರಿಗಾದರೂ ಖಿನ್ನತೆ, ಆತಂಕ, ಮಾನಸಿಕ ಸಮಸ್ಯೆ ಇದ್ದಲ್ಲಿ ಮಕ್ಕಳಲ್ಲಿ ಒತ್ತಡ ಏರ್ಪಟ್ಟ ಸಂದರ್ಭ ಇಂತಹ ತೊಂದರೆಗಳು ಕಾಣಿಸಿಕೊಳ್ಳಬಹುದು ಅಥವಾ ಮಗು ಈ ಹಿಂದೆ ಯಾವುದಾದರು ಆಘಾತ ತರುವಂತಹ ಸನ್ನಿವೇಶವನ್ನು ಎದುರಿಸಿರಬಹುದು. ಈ ಮೇಲಿನ ಯಾವುದೇ ಲಕ್ಷಣ ಮಕ್ಕಳಲ್ಲಿ ಕಂಡು ಬಂದರೆ ತಕ್ಷಣ ಮನೋವೈದ್ಯರನ್ನು ಸಂಪರ್ಕಿಸುವ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು.

8. ನಿರ್ದಿಷ್ಟ ಕಲಿಕಾ ತೊಂದರೆಗಳು ( Specific Learning Difficulties) ಓದು, ಬರವಣಿಗೆ ಅಥವಾ ಗಣಿತದಲ್ಲಿ ಕಷ್ಟ 

ಪರಿಹಾರ : ನಿರ್ದಿಷ್ಟ ಕಲಿಕಾ ಸಮಸ್ಯೆಯನ್ನು ಎದುರಿಸುತ್ತಿರುವ ಮಗು ಕಲಿಕೆಯಲ್ಲಿ ಸಾಕಷ್ಟು ಸವಾಲುಗಳನ್ನು ಹೊಂದಿದ್ದು ಕಲಿಸುವ ರೀತಿ ಬದಲಾಗದ ಹೊರತು ಮಕ್ಕಳಲ್ಲಿ ಒತ್ತಡ ಕಡಿಮೆಯಾಗುವುದಿಲ್ಲ. ನಿರಂತರವಾದ ಒತ್ತಡ ಮಕ್ಕಳಲ್ಲಿ ಆತಂಕ ಹುಟ್ಟಿಸಿ ಶಾಲೆಯಿಂದ ದೂರವಿರಿಸುವ ಸಾಧ್ಯತೆ ಇರುತ್ತದೆ. ಹಾಗಾಗಿ ಈ ಮೇಲ್ಕಂಡ ಯಾವುದೇ ನಿರ್ದಿಷ್ಟ ಕಲಿಕಾ ಸಮಸ್ಯೆಗಳು ಮಕ್ಕಳಲ್ಲಿ ಕಂಡುಬಂದರೆ ಮನೋವೈದ್ಯರು ಹಾಗೂ ಮನಶಾಸ್ತ್ರಜ್ಞರನ್ನ ಸಂಪರ್ಕಿಸಿ  ವಿಶೇಷ ಶಿಕ್ಷಕರ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ಇಲ್ಲಿ ಮಕ್ಕಳು ಬುದ್ಧಿವಂತಿಕೆಯಲ್ಲಾಗಲಿ ಕಲಿಕೆಯಲ್ಲಾಗಲಿ ಹಿಂದಿರುವುದಿಲ್ಲ ನಾವು ಕಲಿಸುವ ಕ್ರಮದಲ್ಲಿ ಹಿಂದಿರುವುದರಿಂದ ಮಕ್ಕಳು ತೊಂದರೆ ಅನುಭವಿಸುತ್ತಿರುತ್ತಾರೆ ಎಂಬುದನ್ನು ತಿಳಿದುಕೊಳ್ಳಿ.

9. Attention deficit with hyperactivity disorder (ಏಕಾಗ್ರತೆಯ ಜೊತೆಗೆ ಅತಿ ಚಟುವಟಿಕೆಯ ಸಮಸ್ಯೆ)

ಈ ಸವಾಲನ್ನು ಹೊಂದಿರುವ ಮಕ್ಕಳು ತಮ್ಮ ಅತಿ ಚಟುವಟಿಕೆ ಹಾಗೂ ಏಕಾಗ್ರತೆಯ ಕೊರತೆಯಿಂದ ನಿರಂತರ ಶಿಕ್ಷೆಗೆ ಒಳಪಟ್ಟಾಗ ಶಾಲಾ ವಾತಾವರಣ ಭಯ ಹುಟ್ಟಿಸುತ್ತದೆ.

ಪರಿಹಾರ : ಅತಿ ಚಟುವಟಿಕೆಯ ಜೊತೆಗೆ ಏಕಾಗ್ರತೆಯ ಕೊರತೆ ಒಂದು ಮನೋವೈದ್ಯಕೀಯ ಸಮಸ್ಯೆಯಾಗಿದ್ದು ಇದಕ್ಕೆ ಸೂಕ್ತ ಚಿಕಿತ್ಸೆಯನ್ನು ನೀಡುವ ಮೂಲಕ ಮಕ್ಕಳ ಅನುಚಿತ ವರ್ತನೆಯ ಜೊತೆಗೆ ಓದಿನ ಸಮಸ್ಯೆಯೂ ಕೂಡ ಪರಿಹಾರವಾಗಿ ಮಕ್ಕಳ ಶಾಲಾ ಭಯ ನಿವಾರಣೆಯಾಗುತ್ತದೆ.

ಶಾಲಾ ಭಯವು ಕೇವಲ ಹಠ ಅಥವಾ ಸೋಮಾರಿತನವಲ್ಲ. ಇದು ಮಗುವಿನ ಭಾವನಾತ್ಮಕ ಅಥವಾ ಮಾನಸಿಕ ತೊಂದರೆಯ ಸೂಚನೆಯಾಗಿರಬಹುದು. ಸಮಸ್ಯೆ ನಿರಂತರವಾಗಿದ್ದರೆ ಮನೋವೈದ್ಯರು ಅಥವಾ ಮನಶಾಸ್ತ್ರಜ್ಞರ / ಆಪ್ತ ಸಲಹೆಗಾರರ  ಸಹಾಯ ಪಡೆದುಕೊಳ್ಳಬೇಕು.              ...................................  ಗಿರೀಶ್ ಎಂ ಎನ್ 
ಕೌನ್ಸೆಲಿಂಗ್ ಮನಶಾಸ್ತ್ರಜ್ಞರು 
ಮಹೇಶ್ ಆಸ್ಪತ್ರೆ ಬ್ರಹ್ಮಾವರ
ಉಡುಪಿ ಜಿಲ್ಲೆ
Mob : 8722715472
******************************************

Ads on article

Advertise in articles 1

advertising articles 2

Advertise under the article