ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 129
Wednesday, July 1, 2026
Edit
ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 129
ಲೇಖಕರು : ದಿವಾಕರ ಶೆಟ್ಟಿ ಎಚ್
ನಿವೃತ್ತ ಪ್ರವಾಚಕರು
ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
Mob: 9448571203
ಪ್ರೀತಿಯ ಮಕ್ಕಳೇ... ಒತ್ತಡವಿಲ್ಲದೇ ಸಮೃದ್ದಿ ಇದ್ದರೆ ಜೀವಿಗಳು ಕಾಯಜ ಬೆಳವಣಿಗೆಯ (vegetative growth) ಬಗ್ಗೆ ಗಮನ ಹರಿಸಿದರೆ ಒತ್ತಡದ ಕ್ಷಣಗಳಲ್ಲಿ ವಂಶಾಭಿವೃದ್ಧಿಯ ಕಡಗೆ ಗಮನ ಹರಿಸುತ್ತವೆ. ಅಂದರೆ ಇದೊಂದು ಸ್ವಾಭಾವಿಕ ಪ್ರಚೋದನೆ (natural instinct). ಅಂದರೆ ಎಲ್ಲಾ ಸಂದರ್ಭಗಳಲ್ಲಿ ಇದು ಹೀಗೆ ಎನ್ನಲಾಗದು. ಅದೇ ಇಲಿಗಳನ್ನು ತೆಗೆದುಕೊಳ್ಳಿ. ಅವುಗಳು ಆಹಾರ ಲಭ್ಯತೆ ಇದ್ದಾಗ ಅನಿಯಂತ್ರಿತವಾಗಿ ವಂಶಾಭಿವೃದ್ಧಿ ನಡೆಸುತ್ತವೆ. ಆದ್ದರಿಂದಲೇ ಬಿದಿರು ಹೂವಾದ ಎರಡು ವರ್ಷಗಳಲ್ಲಿ ಬರಗಾಲ ಬರುತ್ತದೆ ಎನ್ನುವುದು. ಇದು ಇತ್ತೀಚೆಗೆ ನಮ್ಮ ಯುವಕ ಯುವತಿಯರ ಮದುವೆ ಮತ್ತು ಮಕ್ಕಳ ಬಗ್ಗೆ ಇರುವ ಅಭಿಪ್ರಾಯಗಳಿಗೆ ತೀರಾ ಸಮೀಪವಿದೆ ಅನ್ನಿಸುತ್ತದೆ. ಒಳ್ಳೆಯ ಶಿಕ್ಷಣ ಮತ್ತು ಉದ್ಯೋಗವಿರುವ ಯುವಕ ಯುವತಿಯರು ಮದುವೆ ಬೇಡವೆನ್ನುವುದು, ಮದುವೆ ಮತ್ತು ಮಕ್ಕಳನ್ನು ಮುಂದೂಡುವುದು ಸರ್ವೇಸಾಮಾನ್ಯ. ಅವರಿಗಿರುವ ಸಾಮಾಜಿಕ ಮತ್ತು ಆರ್ಥಿಕ ಭದ್ರತೆ ಅವರು ತಮ್ಮ ಕಾಯಜ ಬೆಳವಣಿಗೆ ಅಂದರೆ ತಮ್ತಮ್ಮ ಬಡ್ತಿ, ವೇತನ ಹೆಚ್ಚಳದ ಬಗ್ಗೆ ಯೋಚಿಸುತ್ತಾರೆಯೇ ಹೊರತು ತಮ್ಮ ವಂಶ ಬೆಳಸುವ ಕಡೆಗಲ್ಲ. ಇದಕ್ಕೆ ಕಾರಣ ಅವರು ಪಡೆದಿರುವ ಶಿಕ್ಷಣ ಎಂದು ಹೇಳುತ್ತಾರೆ. ಆದರೆ ಈ ಸಂದರ್ಭದಲ್ಲಿ ಮಾನವ ಉಳಿದ ಜೀವಿಗಳಂತೆ ವರ್ತಿಸುತ್ತಿದ್ದಾನೆ ಎನ್ನಿಸುವುದಿಲ್ಲವೇ? ಅಂದರೆ ಇದೂ ಒಂದು ಸ್ವಾಭಾವಿಕ ಪ್ರಚೋದನೆಯೇ. ಮನುಷ್ಯ ಉಳಿದ ಜೀವಿಗಳಿಗಿಂತ ಭಿನ್ನ ಆಗಿರಲಿಕ್ಕಿಲ್ಲ.
ಈಗ ನಾವು ನೇರಳೆ ಹಣ್ಣಿನ ಕಡೆಗೆ ಬನ್ನಿ. ನೇರಳೆ ಮರಗಳು ಕಳೆದ ಒಂದು ವರ್ಷದಿಂದ ನೇರಳೆ ಮರಗಳು ಹೊಸ ಚಿಗುರಗಳನ್ನು ಹೊರ ಹಾಕಿಲ್ಲ ಎಂದು ನನ್ನ ಸ್ನೇಹಿತರೊಬ್ಬರು ಹೇಳಿದ್ದಾರೆ. ಅಂದರೆ ಅವು ತಮ್ಮ ಕಾಯಜ ಬೆಳವಣಿಗೆಯನ್ನು ನಿಲ್ಲಿಸಿವೆ. ಅದರ ಬದಲಾಗಿ ವಿಫುಲವಾಗಿ ಯಾವುದೋ ಒತ್ತಡಕ್ಕೊಳಗಾಗಿ ಹಣ್ಣು ಬಿಟ್ಟಿವೆ. ಈ ವರ್ಷ ಮಾಂಸಲವಾದ ಹಣ್ಣುಗಳನ್ನು ತಿಂದವರು ಖುಷಿಯಾಗಿದ್ದಾರೆ. ಆದರೆ ಇದು ಒತ್ತಡಕ್ಕೊಳಗಾಗಿ ಬಿಟ್ಟ ಹಣ್ಣುಗಳಾಗಿದ್ದರೆ (stressed fruiting) ಇದು ಬರಗಾಲದ ಸೂಚನೆ ಎಂದಿದ್ದಾರೆ ನಮ್ಮ ಸ್ನೇಹಿತರ ಅಜ್ಜಿ. ಇದು ನಿಜ ಆಗಿರಬಾರದೆಂದೇನೂ ಇಲ್ಲ. ಏಕೆಂದರೆ ಇದಕ್ಕೆ ತಲೆ ತಲೆಮಾರುಗಳ ಅವಲೋಕನ ಮತ್ತು ದಾಖಲಾತಿ ಮತ್ತು ದಾಖಲೆಯ ವರ್ಗಾವಣೆ ಬಹಳ ಮುಖ್ಯವಾಗಿರುತ್ತದೆ. ನನ್ನ ತಾಯಿ ಎಲ್ ನಿನೋದ ಸಂಭಾವ್ಯತೆಯನ್ನು ಮುಂಚಿತವಾಗಿ ಹೇಳಿದ್ದನ್ನು ಹಿಂದಿನ ಲೇಖನವೊಂದರಲ್ಲಿ ಹೇಳಿದ್ದೆ. ಅದು ನಿಜವಾಗಿದೆ ಕೂಡಾ ಎಲ್ ನಿನೋದ ಬಗ್ಗೆ ಹೇಳುವುದು ಸುಲಭ. ಏಕೆಂದರೆ ಎಲ್ ನಿನೋ 2 ರಿಂದ 7 ವರ್ಷಕ್ಕೊಮ್ಮೆ ಪುನರಾವರ್ತನೆಯಾಗುತ್ತದೆ. ಅಂದರೆ 80 ವರ್ಷ ಬದುಕಿರುವ ವ್ಯಕ್ತಿಯು ಜೀವನದಲ್ಲಿ ಸರಾಸರಿ 20 ಎಲ್ ನಿನೋಗಳು ಘಟಿಸಿರುತ್ತವೆ. ಒಬ್ಬ ವ್ಯಕ್ತಿ ಅವಲೋಕನಾ ಮತ್ತು ದಾಖಲಾತಿ ಚತುರನಾಗಿದ್ದರೆ ತನ್ನ ಜೀವಿತಾವಧಿಯ ಅನುಭವಗಳಿಂದಲೇ ಎಲ್ ನಿನೋದ ಪೂರ್ವ ಸೂಚನೆ ನೀಡಬಹುದು. ಆದರೆ ಬರಗಾಲದ ಮುನ್ಸೂಚನೆ ಹಾಗೆ ಇದು ಪೀಳಿಗೆಗೆ ಒಮ್ಮೆಯೋ ಎರಡು ಪೀಳಿಗೆಗೆ ಒಮ್ಮೆಯೋ ನಡೆಯುವಂತದ್ದು ಏಕೆಂದರೆ ನನಗೀಗ 62 ಆದರೆ ನಾನು ಬರಗಾಲ ನೋಡಿಲ್ಲ. ಆದರೆ ನಮ್ಮ ಕುಂದಾಪುರದ ಕಡೆ ಆಟಿ ತಿಂಗಳಿನಲ್ಲಿ ಕಾಡಿನಲ್ಲಿ ಸಿಗುವ ಕೇನೆ ಗಡ್ಡೆಯ ಕಡುಬನ್ನು ಮಾಡುತ್ತಾರೆ. ಏಕೆ ಎಂದು ಹಿರಿಯರ ಬಳಿ ಕೇಳಿದರೆ ಒಮ್ಮೆ ಬರಗಾಲ ಬಂದಿತ್ತಂತೆ ಆಗ ಜನರ ಜೀವ ಉಳಿಸಿದ್ದೇ ಈ ಗಡ್ಡೆಗಳಂತೆ. ಆದ್ದರಿಂದ ಕೃತಜ್ಞತಾಪೂರ್ವಕವಾಗಿ ಪ್ರತಿ ವರ್ಷವೂ ತಿನುತ್ತಿದ್ದೇವೆ ಎಂದು ಹೇಳುತ್ತಾರೆ. ಅಂದರೆ ಈ ಬರಗಾಲ ಪೀಳಿಗೆಗಳಲ್ಲೊಮ್ಮೆ ನಡೆಯುವ ಘಟನೆ. ಆ ಕಾಲದಲ್ಲಿ ಆಗಿರುವ ಪ್ರಕೃತಿಯ ಅತಿರೇಖಗಳ ದಾಖಲೆಯಾಗಿರಬೇಕು. ಇವು ಪೀಳಿಗೆಯಿಂದ ಪೀಳಿಗೆಗೆ ದಾಖಲಾಗಿರಬೇಕು ಮತ್ತು ಇಂತಹ ಘಟನೆಗಳ ಸಾಮಾನ್ಯೀಕರಣ ಮಾಡಬೇಕಾದರೆ (generalisation) ಕನಿಷ್ಠ 10 ಬಾರಿಯಾದರೂ ಪುನರಾವರ್ತನೆಯಾಗಿರಬೇಕು. ಅಂದರೆ ಇದಕ್ಕೆ ಕನಿಷ್ಠ ಒಂದು ಸಾವಿರ ವರ್ಷಗಳ ಅನುಭವದ ದಾಖಲೆಯಾದರೂ ಬೇಕಾಗುತ್ತದೆ. ಆದ್ದರಿಂದ ಈ ವರ್ಷದ ನೇರಳೆ ಹಣ್ಣಿನ ವಿಫುಲ ಬೆಳೆ ನೋಡಿ ಬರಗಾಲದ ಮುನ್ಸೂಚನೆ ಎಂದು ತೀರ್ಮಾನಿಸಲಾಗದು.
ಲೇಖನ ದೀರ್ಘವಾಯಿತು ಮುಂದಿನವಾರ ಭೇಟಿಯಾಗೋಣ.
ನಿವೃತ್ತ ಪ್ರವಾಚಕರು
ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
Mob: 9448571203
*****************************************