-->
ಸ್ಫೂರ್ತಿಯ ಮಾತುಗಳು : ಸಂಚಿಕೆ - 225

ಸ್ಫೂರ್ತಿಯ ಮಾತುಗಳು : ಸಂಚಿಕೆ - 225

ಸ್ಫೂರ್ತಿಯ ಮಾತುಗಳು : ಸಂಚಿಕೆ - 225
ಲೇಖಕರು : ರಮೇಶ ಎಂ. ಬಾಯಾರು 
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com 
                    
           
ಬಾಲ್ ಪಾಯಿಂಟ್ ಪೆನ್ನು ಇಂದು ಎಲ್ಲರಿಗೂ ಪರಮಾಪ್ತ. ಕೆಲವು ದಶಕಗಳಾಚೆ ಶಾಯಿ ಪೆನ್ನುಗಳದೇ ಖದರ್. ಒಮ್ಮೆ ಶಾಯಿ ಹಾಕಿದರೆ ನಾಲ್ಕು ದಿನ ಅದಕ್ಕೆ ಪವರ್. ಅಗ್ಗದ ಶಾಯಿ ಪೆನ್ ಶಾಯಿ ವಾಂತಿ ಮಾಡುವುದಿದೆ. ಪೆನ್ನು ಕಾರುತ್ತದೆಂದೇ ಅಂದು ಹೇಳುತ್ತಿದ್ದರು ಕಾರುವುದೆಂದರೆ ಶಾಯಿ “ನಿಬ್” ಮೂಲಕ ಅಗತ್ಯವಿರದಾಗಲೂ ಹೊರಗಿಳಿಯುವುದು ಅಥವಾ ಅದರ “ತ್ರೆಡ್” ಮೂಲಕ “ಲೀಕ್” ಆಗುವುದು. ಕಾರುವ ಪೆನ್ ಹಿಡಿದವನ ಮುಖದಲ್ಲಿ ಮೀಸೆ, ಅಂಗಿಯಲ್ಲಿ ನೀಲಿಯೋ ಕೆಂಪೋ ಕಪ್ಪೋ- ಶಾಯಿಯ ಕಲೆ. ಊಟ ಮಾಡುವ ಮೊದಲು ಈ ಕಲೆ ತೆಗೆಯಲು ಕೈತೊಳೆಯಬೇಕು. ಅರ್ಧ ಹಮಾಮ್, ಒಂದು ಬಕೆಟ್ ನೀರು ಬೇಕಿತ್ತು. ಬಾಲ್ ಪಾಯಿಂಟ್ ಪೆನ್ ಬಂದ ಮೇಲೆ ಈ ಆವಾಂತರಗಳು ಕಡಿಮೆ. ಆದರೂ ಟಾಪ್ ಸಡಿಲವಾಗಿ ಜೇಬಿನಂಚಿನಿಂದ ಜೇಬೊಳಗೆ ಜಾರಿದ ಪೆನ್ನು, ಗಡಿಬಿಡಿಯಲ್ಲಿ ಟಾಪ್ ಹಾಕಲು ಮರೆತು ಮೂತಿ ಕೆಳಗು ಮಾಡಿ ಜೇಬು ಕಾಣುವ ಬಾಲ್ ಪಾಯಿಂಟ್ ಪೆನ್ನು ಜೇಬನ್ನು “ಇಂಕ್ ಪಾಯಿಂಟ್” ಮಾಡುವುದಿದೆ. ಇಂಕ್ ನಿವಾರಕ ಲಾಂಡ್ರಿಯ ಡಾಕ್ಟರ್ ಬಳಿ ನಮ್ಮ ಅಂಗಿ ಎಡ್ಮಿಟ್ ಆಗಿ ಕೆಲ ದಿನ ಇದ್ದು ಜೇಬಿನ ಕಲೆ ಹಣ ಎರಡೂ ಜಾರುವುದಿದೆ. ಬಾಲ್ ಪಾಯಿಂಟ್ ಪೆನ್ನುಗಳೂ ನಾನಾ ವರ್ಣ, ವಿನ್ಯಾಸ, ಅಳತೆ ಗಾತ್ರ ಹೊಂದಿರುವಂತೆ ವಿವಿಧ ವರ್ಣದ ಶಾಯಿಯಿರುವ ಪೆನ್ನುಗಳಿವೆ. ಕೆಲವು ಟಾಪ್ ಹೊಂದಿದರೆ ಇನ್ನೂ ಕೆಲವು ಬಟನ್ ಒತ್ತಿದಾಗ ಬರೆಯಲು ರೆಡಿಯಾಗುವ ಬಟನ್ ಪ್ರೆಸ್ ಪೆನ್ನುಗಳಿವೆ, ಬಟನ್ ಆಫ್ ಮಾಡಲು ಮರೆತು ಜೇಬೊಳಗೆ ತುರುಕಿದರೆ ಗೋವಿಂದ!

ಬಾಲ್ ಪಾಯಿಂಟ್ ಪೆನ್ ಗಳಲ್ಲಿ ಜೆಲ್ ಶಾಯಿಯವು ಬರೆಯಲು ಖುಷಿ ಕೊಡುತ್ತವೆ. ನಮ್ಮ ಬದುಕಿನ ಹೂರಣವಾಗಿರುವ ಬಾಲ್ ಪಾಯಿಂಟ್ ಪೆನ್ನುಗಳ ಪುರಾಣ ಹೇಳದೇ ಇದ್ದರೆ ಹೇಗೆ. ನಮ್ಮ ಬಾಲ್ ಪಾಯಿಂಟ್ ಪೆನ್ ಕಾಲಿಟ್ಟಲ್ಲಿ ಏಕಾಕ್ಷರ, ದ್ವಿಯಕ್ಷರ, ಅಕ್ಷರ ಹೆಚ್ಚು ಆದಂತೆ ಚತುರಕ್ಷರ, ಪಂಚಾಕ್ಷರ, ದ್ವಿಪದ, ತ್ರಿಪದ ಹೆಚ್ಚೇಕೆ ವಾಕ್ಯಗಳ ಮೆರವಣಿಗೆ, ಪ್ಯಾರಾಗಳ ಸಮ್ಮೇಳನ. ಪೆನ್ನು ಹತ್ತಿದ ಮೆಟ್ಟಿಲುಗಳೆಲ್ಲ ಹೊತ್ತಗೆ. ಪಾದಯಾತ್ರೆ ದೀರ್ಘವಾದರೆ ಮಹಾ ಕಾವ್ಯ ! ಪೆನ್ನಿನ ಪವರಿಗೆ ಸಾಕ್ಷಿ ಇನ್ನೇನು ಬೇಕು ಹೇಳಿ! ಬೌದ್ಧಿಕ ವಿಕಾಸಕ್ಕೆ ಕಾರಣವಾದ ಜೇಬೊಳಗೆ ಕುಳಿತುಕೊಳ್ಳಬೇಕಾದ ಪೆನ್ನು ಮೊಬೈಲ್ ಬಂದ ಮೇಲೆ ತಿರಸ್ಕೃತ ದೋಣಿಯಾಯಿತು. ಮೊಬೈಲುಗಳು ಕಂಪ್ಯೂಟರುಗಳು ಬಂದ ಮೇಲೆ ಬರೆಯಲಾಗದವರೇ ಹೆಚ್ಚು. ಬೆರಳಿನಿಂದೊತ್ತುವುದೇ ಅವರಿಗೆ ಪ್ರಿಯ.

ಬಾಲ್ ಪೆನ್ ತುದಿಗೆ ಶಾಯಿಯಿಳಿಯಲು ಕವಾಟದಂತೆ ಸಹಕರಿಸುವ ಲೋಹದ ಬಾಲ್ ಹೊಂದಿರುವುದರಿಂದ ಆ ಹೆಸರು. ಮಸಿ ಸೋರುವ ಪೆನ್ನುಗಳಿಗೆ ಪರಿಹಾರವಾಗಿ 1943ರಲ್ಲಿ ಬಾಲ್ ಪಾಯಿಂಟ್ ಪೆನ್ನುಗಳ ಬಳಕೆ ಆರಂಭ. ಬಾಲ್ ಪಾಯಿಂಟ್ ಪೆನ್ ನ ಮಸಿ ಸ್ವಲ್ಪ ಮಂದ ಮತ್ತು ಅಂಟಿನಂತೆ ಜಿಗುಟು. ಕ್ರಯ ಕಡಿಮೆ, ಪೆನ್ನುಗಳನ್ನು ಬಳಸಿ ಎಸೆಯುವ ಯುಗವಿದು. ಕೆಲವರು ಎಸೆದ ಪೆನ್ನುಗಳ ಉಳಿಕೆ ಶಾಯಿಯನ್ನು ಬಳಸಿ ಕಲಿಯುವ ಬಡ ಮಕ್ಕಳೂ ಇದ್ದಾರೆ. ಹೆಚ್ಚಾಗಿ ಲಂಚದ ಅಧಿಕಾರಿಗಳ ಮನೆ ಮತ್ತು ಕಛೇರಿಗಳ ಸುತ್ತ ಶಾಯಿ ಪೂರ್ತಿ ಮುಗಿಯದ ಬಾಲ್ ಪಾಯಿಂಟ್ ರಿಫಿಲ್ ಗಳು ಅನಾಥವಾಗಿ ಬಿದ್ದಿರುತ್ತವೆ.

ಬರೆಯಲು ಶುರು ಮಾಡಿದ ಕೂಡಲೇ ಬಾಲ್ ಪಾಯಿಂಟ್ ಪೆನ್ನಿನ ರಿಫೀಲ್ ತುದಿಯ ಲೋಹದ ಗುಂಡು ಇದರ ಮೇಲೆ ಒತ್ತಡ ಬೀಳುತ್ತದೆ. ಆಗ ಈ ನುಣುಪು ಗುಂಡು ಜಾರಿ, ಅದರ ಹಿಂದಿರುವ ಮಸಿ ಕಾಗದದ ಮೇಲೆ ಹರಡುತ್ತದೆ. ಗಾಳಿಯ ಸಂಪರ್ಕಕ್ಕೆ ಬರುತ್ತಲೇ ಅದರ ಹಸಿ ಆರಿಹೋಗುತ್ತದೆ. ಗುಂಡು ನಯವಾಗಿದ್ದಷ್ಟೂ, ಮಸಿಯ ಸ್ನಿಗ್ಧತೆ ಚೆನ್ನಾಗಿದ್ದಷ್ಟೂ ಬರವಣಿಗೆ ಸರಾಗ. ಬಾಲ್ ಪೆನ್ನಲ್ಲಿ ಮಸಿ ಏಕೆ ಸೋರುವುದಿಲ್ಲ? ಇದಕ್ಕೆ ಉದಾಹರಣೆ ಎಂದರೆ, ಎಳನೀರು ಕುಡಿಯುವ ಸ್ಟ್ರಾ (ಹೀರುಗೊಳವೆ). ನೀರನ್ನು ಹೀರಿ, ಅದರ ಒಂದು ತುದಿಯನ್ನು ಬೆರಳಿನಿಂದ ಒತ್ತಿ ಹಿಡಿದರೆ ಸ್ಟ್ರಾದೊಳಗಿನ ನೀರು ಕೆಳಗೆ ಬೀಳುವುದಿಲ್ಲ ತಾನೆ? ಬಾಲ್ಪೆನ್ ರಿಫಿಲ್ ಸಹ ಇದೇ ಮಾದರಿಯ ಮೇಲೆ ಕೆಲಸ ಮಾಡುತ್ತದೆ.
ಬಾಲ್ ಪೆನ್ನಿನ ಮೂಲ ಲೌಡ್ ಜಾನ್ ಜೆ ಎಂಬ ಒಬ್ಬ ಸಮಗಾರ ಎಂದರೆ ನಂಬುವಿರಾ? ಅವನಿಗೆ ಚಪ್ಪಲಿಯ ಮೇಲೆ ಗೆರೆ ಮತ್ತು ಚಿತ್ರ ಬರೆಯಲು ಸರಿಯಾದ ಪೆನ್ ಇರಲಿಲ್ಲ. ಕೊಳವೆಗೆ ಮಸಿ ತುಂಬಿ ತುದಿಗೆ ಲೋಹದ ಬಾಲ್ ಸಿಕ್ಕಿಸಿ ಚರ್ಮದ ಮೇಲೆ ಒತ್ತಿದಾಗ ಮಸಿಯ ಇಳಿಕೆಯಾಯಿತು. ಇದು ಚಿತ್ರ ಬರೆಯಲು, ಗೆರೆ ಹಾಕಲು ಅವನಿಗೆ ಸಹಕರಿಸುವ ಅನ್ನದ ಬಟ್ಟಲಾಯಿತು ಈ ತತ್ವ ಆಧರಿಸಿ ಹಂಗೇರಿಯ ಲಾಸ್ಟ್ಲೋ ಜೋಸೆಫ್ ಬಿರ್ರೋ ಎಂಬವನು ಸೋದರ ಗ್ಯೋರ್ಜೀ ಬಿರ್ರೋ ಜೊತೆ ಇಂದಿನ ರೂಪದ ಬಾಲ್ ಪಾಯಿಂಟ್ ಪೆನ್ ರೂಪಿಸಿದನು. ಈ ಪೆನ್ 1938 ಜೂನ್ 15ರಂದು ಮಾರುಕಟ್ಟೆ ಪ್ರವೇಶಿಸಿತು 1985ರಲ್ಲಿ ಜೋಸೆಫ್ ಬಿರೋ ತೀರಿದ ನಂತರ ಚಿಕಾಗೋದ ಮಿಲ್ಟನ್ ರೆನಾಲ್ಡ್ ಬಾಲ್ ಪಾಯಿಂಟ್ ಪೆನ್ ಸುಧಾರಿಸಿದ. ಇದುವೇ ರೆನಾಲ್ಡ್ ಪೆನ್ ಎಂದು ಪ್ರಸಿದ್ಧವಾಯಿತು. ಬಾಹ್ಯಾಕಾಶ ಯಾನಿಗಳಿಗೆ ಶಾಯಿ ಪೆನ್ನು ಉಪಯೋಗವಾಗುತ್ತಿರದ ಸಂದರ್ಭದಲ್ಲಿ ಬಾಲ್ ಪೆನ್ ಸಹಕಾರಿಯಾಯಿತು. ಬಾಹ್ಯಾಕಾಶದಲ್ಲಿ ಗುರುತ್ವ ಬಲದ ಕೊರತೆಯಿಂದ ಶಾಯಿ ಪೆನ್ನುಗಳು ಸೋರುತ್ತಿದ್ದುವು. ಆಗ ಪೆನ್ಸಿಲ್ ಬಳಸುತ್ತಿದ್ದರು.

ಲಾಸ್ಟ್ಲೋ ಜೋಸೆಫ್ ಬಿರ್ರೋ ಮತ್ತು ಗ್ಯೋರ್ಜೀ ಬಿರ್ರೋ ಎಂಬವರು ಬಾಲ್ ಪಾಯಿಂಟ್ ಪೆನ್ ಅಧಿಕೃತ ಪೇಟೆಂಟ್ ಪಡೆದ ದಿನ ಜೂನ್ 10, 1943. ಇದೇ ಬಾಲ್ ಪಾಯಿಂಟ್ ಪೆನ್ ದಿನ
 ಈ ದಿನದ ಆಚರಣೆ ಹೇಗೆ ಆಚರಿಸೋಣ?
1. ಮೊಬೈಲ್ ಬದಿಗಿರಿಸಿ ಪೆನ್ ಕಾಗದ ಬಳಸಿ ಸಂದೇಶ ಬರೆದು ಕಳಿಸೋಣ
2. ದೀರ್ಘ ಪತ್ರ ಬರೆಯೋಣ.
3. ಪೆನ್ ಮಹಾತ್ಮ್ಯೆಯನ್ನು ವಿವರಿಸುವ ನಾಟಕ ಪ್ರಹಸನ ಕಥೆ ಅಭಿನಯಿಸೋಣ.
4. ಪೆನ್ಗಳ ಮಾಲೆ. ರಿಫೀಲ್ ಮಾಲೆ ಮಾಡಿ ದ್ವಾರ, ವೇದಿಕೆ ಅಲಂಕರಿಸೋಣ
5. ವಿವಿಧ ಬ್ರಾಂಡ್ ಪೆನ್ ಕಲೆಕ್ಷನ್ ಮಾಡೋಣ
6. ಗಿಫ್ಟ್ ಕೊಡೋಣ
7. ಬಿಸಾಡದೇ ತೆಗೆದಿರಿಸೋಣ

ವಿಶೇಷತೆ

1. ಒಂದು ಬಾಲ್ ಪಾಯಿಂಟ್ ಮಸಿ 50000 ಪದ ಬರೆಯಲು ಸಹಕಾರಿ ಪೂರಕ
2. ಅಮೇರಿಕಾದವರು ವರ್ಷವೊಂದರಲ್ಲಿ 5 ಪೆನ್ ಬಳಸುವರು
3. ಈಗ ಎರಡು ರೂಪಾಯಿಯಿಂದ 20ರೂಪಾಯಿ ತನಕ ಮಸಿ ಪೂರಕಗಳಿವೆ,
4. 4 ರೂಗಳಿಂದ 1000 ರೂ ತನಕ ಬೆಲೆ ಬಾಳುವ ಬಾಲ್ ಪಾಯಿಂಟ್ ಪೆನ್ನುಗಳಿವೆ 
5. ಎಡ ಬಲಗೈ ಬಳಕೆಯವರಿಗೂ ಸಹಾಯಕ

ಹೀಗೆ ವಿವಿಧ ರೀತಿ ಬರವಣಿಗೆಯಲ್ಲಿ ಸಹಾಯಕವಾಗುವ ಬಾಲ್ ಪಾಯಿಂಟ್ ಪೆನ್ನುಗಳು ನಮ್ಮಲ್ಲರ ಉಸಿರು.
........ರಮೇಶ ಎಂ. ಬಾಯಾರು 5
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
“ಸ್ಕಂದ” ಕುಳ ಗ್ರಾಮ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com 
*****************************************


Ads on article

Advertise in articles 1

advertising articles 2

Advertise under the article