ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 132
Tuesday, July 21, 2026
Edit
ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 132
ಲೇಖಕರು : ದಿವಾಕರ ಶೆಟ್ಟಿ ಎಚ್
ನಿವೃತ್ತ ಪ್ರವಾಚಕರು
ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
Mob: 9448571203
ಪ್ರೀತಿಯ ಮಕ್ಕಳೇ... ಮಾಸ್ಟಿಂಗ್ ಬಗ್ಗೆ ನಾಲ್ಕು ಕಂತುಗಳಲ್ಲಿ ಬರೆದ ನಂತರ ಯಾಕೋ ಸಾಕು ಎನ್ನಿಸಿ ಮೊಮ್ಮಗನ ಅಚ್ಚರಿಯ ಪಾಪ್ ಕಾರ್ನ್ ಬಗ್ಗೆ ಬರೆದೆ. ಇದನ್ನು ಓದಿದ ನನ್ನ ಮಿತ್ರ ಹಾಗೂ ಹಳೆ ವಿದ್ಯಾರ್ಥಿ ಶ್ರೀ ಗೌತಮ್ ಸರ್ ಅಣ್ಣಿಗೇರಿ ತಲೆಬುರುಡೆಗಳ ಬಗ್ಗೆ ಬರೆಯದೇ ಲೇಖನ ಮಾಲೆಯನ್ನು ಹೇಗೆ ಮುಗಿಸುತ್ತೀರಿ ಸರ್ ಎಂದು ಆಕ್ಷೇಪಿಸುವ ಮೂಲಕ ಮತ್ತೊಮ್ಮೆ ಅಣ್ಣಿಗೇರಿಯ ತಲೆ ಬುರುಡೆಗಳ ಉತ್ಖನನ ಮಾಡುವಂತೆ ತಿಳಿಸಿದ್ದಾನೆ.
28 ಅಗಸ್ಟ್ 2010 ರಂದು ಧಾರವಾಡ ಜಿಲ್ಲೆಯ ಹುಬ್ಬಳ್ಳಿಗೆ ಸಮೀಪದಲ್ಲಿರುವ ಅಣ್ಣಿಗೇರಿ ಪಟ್ಟಣ ಪಂಚಾಯತಿಯ ನೌಕರರು ಹೊಸದಾಗಿ ಚರಂಡಿ ಅಗೆಯವಾಗ ಕೆಲವೊಂದು ತಲೆಬುರುಡೆಗಳು ಸಿಕ್ಕವು. ಇದರ ರಹಸ್ಯ ಭೇದಿಸಲು ಆ ನಿವೇಶನವನ್ನು ಭಾರತೀಯ ಪುರಾತತ್ವ ಇಲಾಖೆಗೆ (Archeological Survey of India ASI) ಇವರಿಗೆ ವಹಿಸಲಾಯಿತು. ಪುರಾತತ್ವ ಇಲಾಖೆ ಆ ನಿವೇಶನವನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡು ಮೇಲ್ಭಾಗದ ಮಣ್ಣನ್ನು ತೆಗೆದು ಸ್ವಚ್ಛಗೊಳಿಸಿದಾಗ 15.6 * 1.7 ಮೀಟರ್ ಜಾಗದಲ್ಲಿ ಜೋಡಿಸಿಟ್ಟ 600 ತಲೆ ಬುರುಡೆಗಳು ಮತ್ತು ದೇಹದ ಇತರ ಮೂಳೆಗಳನ್ನು ವ್ಯವಸ್ಥಿತವಾಗಿ ಜೋಡಿಸಿಟ್ಟದ್ದು ಕಂಡುಬಂತು. ಅಂದರೆ ಇದೊಂದು ದಫನ ಭೂಮಿ (burial) ಎನ್ನುವುದು ಖಾತ್ರಿಯಾಯಿತು. ಇದು ಪುರಾತತ್ವ ಇಲಾಖೆ, ವಿಧಿ ವಿಜ್ಞಾನ ಶಾಸ್ತ್ರಜ್ಞರು (forensic experts) ಮತ್ತು ಇತಿಹಾಸ ತಜ್ಞರ ನಡುವೆ ಚರ್ಚೆಗೆ ಕಾರಣವಯಿತು.
ಇತಿಹಾಸ ತಜ್ಞರು ಇದು 13ನೆಯ ಮತ್ತು 15ನೆಯ ಶತಮಾನದಲ್ಲಿ ಆದಿಲ್ ಶಾಹಿಗಳು ನಡೆಸಿದ ವ್ಯಾಪಕ ಮತೀಯ ಕಗ್ಗೊಲೆಗಳ ನಂತರದ ಸಾಮೂಹಿಕ ಸ್ಮಶಾನ ಇದಾಗಿರಬಹುದು ಎಂದು ನಂಬಲಾಯಿತು. ಇದು ವಾಮಾಚಾರ ಆಗಿರಬಹುದು ಎಂದು ಇನ್ನೊಂದು ವಾದವನ್ನು ಮುಂದಿರಿಸಲಾಯಿತು. ಆದರೆ ಅಚ್ಚರಿಯ ವಿಷಯವೆಂದರೆ ಅಲ್ಲಿ ದೇಹದ ಎಲ್ಲ ಮೂಳೆಗಳೂ ಇರಲಿಲ್ಲ. ತಲೆ ಬುರುಡೆಗಳನ್ನು ಒತ್ತಾಗಿ ಜೋಡಿಸಿದ್ದರೇ ಹೊರತು ಅಸ್ಥಿ ಪಂಜರವನ್ನಲ್ಲ. ಸಾಮೂಹಿಕ ಹತ್ಯಾಕಾಂಡವಾಗಿದ್ದಲ್ಲಿ ಅಸ್ಥಿ ಪಂಜರಗಳಿರಬೇಕಿತ್ತೇ ಹೊರತು ಬಿಡಿ ಮೂಳೆಗಳಲ್ಲ. ಆದ್ದರಿಂದ ASI ಈ ತಲೆಬುರುಡೆಗಳ ಕಾಲ ನಿರ್ಣಯಕ್ಕೆ ವಿಧಿ ವಿಜ್ಞಾನಕ್ಕೆ ಮೊರೆ ಹೋಯಿತು. ತಲೆ ಬುರುಡೆ ಮತ್ತು ಹಲ್ಲುಗಳು ಲಿಂಗ ನಿರ್ಣಯ, DNA ಸಂಗ್ರಹದಲ್ಲಿ ದೇಹದ ಉಳಿದ ಭಾಗಗಳಿಗಿಂತ ಹೆಚ್ಚು ನಿಖರವಾಗಿರುತ್ತವೆ. ಆದ್ದರಿಂದ ವಿಧಿ ವಿಜ್ಞಾನ ದಂತಶಾಸ್ತ್ರ ಅಧ್ಯಯನಕ್ಕಾಗಿ ಶ್ರೀ ಮಂಜುನಾಥೇಶ್ವರ ವೈದ್ಯ ವಿದ್ಯಾಲಯಕ್ಕೆ ಕಳುಹಿಸಲಾಯಿತು. ಅವರು ಈ ತಲೆ ಬುರುಡೆಗಳ ವಯಸ್ಸು ಮತ್ತು ಲಿಂಗ ನಿರ್ಧರಿಸಿದರು. ಅಲ್ಲಿ 6 ರಿಂದ 60 ವರ್ಷ ಪ್ರಾಯದ ಮಕ್ಕಳು ಹೆಂಗಸರು ಮತ್ತು ಗಂಡಸರ ತಲೆ ಬುರುಡೆಗಳಿದ್ದವು. ಇದು ವಾಮಾಚಾರದ ಸಾಧ್ಯತೆ ತಳ್ಳಿ ಹಾಕಿದರು.
ಈ ತಲೆ ಬುರುಡೆಗಳು ಯಾವ ಕಾಲಕ್ಕೆ ಸೇರಿದವು ಎಂದು ತಿಳಿಯಲು ಭುವನೇಶ್ವರದ ಭೌತಶಾಸ್ತ್ರ ಸಂಸ್ಥೆ (Institute of Physics IoP) ಮತ್ತು ಅಮೆರಿಕಾದ ಬೀಟಾ ವಿಶ್ಲೇಷಣಾ ಪ್ರಯೋಗ ಶಾಲೆ Beta Analytical Laboratory ಗಳಿಗೆ ಕಳುಹಿಸಲಾಯಿತು. IoP ತಲೆಬುರುಡೆಗಳು 738 ವರ್ಷಗಳಷ್ಟು ಹಳೆಯವು ಎಂದಿತು. ಆದರೆ ಆಗ ಅಂತಹ ಯಾವುದೇ ಅಂದರೆ ಪ್ರಮುಖ ಘಟನೆ ನಡೆಯದೇ ಇರುವುದರಿಂದ ಇದನ್ನು ಒಪ್ಪಲು ASI ತಯಾರಿರಲಿಲ್ಲ. ಬೀಟಾ ಲ್ಯಾಬ್ ತಲೆ ಬುರುಡೆಗಳು 180 ರಿಂದ 200 ವರ್ಷಗಳಷ್ಟು ಹಳೆಯದು ಎಂದಿತು. ASI ಅಧಿಕಾರಿಗಳು ಕಾಲದ ದಾರಿಯಲ್ಲಿ ಹಿಮ್ಮುಖ ಪ್ರಯಾಣ ಮಾಡಿದಾಗ ಅವರು ತಲುಪಿದ್ದು 1791 ಮತ್ತು 1792 ಅನ್ನು ತಲುಪಿದರು. ಇದು ಭಾರತ ಕಂಡ ಭೀಕರ ಬರ ಡೋಜಿ ಬರ ಅಥವಾ ಕಪಾಲ ಬರ (skull famine). 1789 ರಿಂದ 1795 ರ ವರೆಗೆ ಭಾರತವನ್ನು ಕಾಡಿದ ಎಲ್ ನಿನೋ ದಖ್ಖಣ ಪ್ರಸ್ಥಭೂಮಿ, ಅಂದರೆ ಕರ್ನಾಟಕ ಮತ್ತು ಮಹಾರಾಷ್ಟ್ರ ಹಾಗೂ ಗುಜರಾತ್ ಮತ್ತು ರಾಜಸ್ಥಾನದ ಮೇವಾರ್ ಭಾಗಗಳನ್ನು ಭೀಕರವಾಗಿ ಕಾಡಿತು. ಜನ ನೊಣಗಳಂತೆ ಸತ್ತರು. ಪ್ರಾಣಿಗಳು ರಣಹದ್ದುಗಳು ಹೆಣಗಳನ್ನು ಎಳೆದಾಡಿದವು. ಬಿರುಕು ಬಿಟ್ಟ ಹೊಲ ಗದ್ದೆಗಳು, ಕೆರೆಗಳು ನದಿ ಪಾತ್ರಗಳಲ್ಲಿ ತಲೆ ಬುರುಡೆಗಳು ಮೂಳೆಗಳು ಹೊರಳಾಡುತ್ತಿದ್ದವು. ಜನ ಗುಳೆ ಹೊರಟರು. ಅಶಕ್ತರು ತಮ್ಮವರೆದುರೇ ಬಿದ್ದು ಸತ್ತರು. ತಮ್ಮವರ ಹೆಣಗಳನ್ನು ತುಳಿದು ದಾಟಿ ನೀರನ್ನರಸಿ ಹೊರಟರು. ಈ ಬರದಲ್ಲಿ ಸತ್ತವರ ಸಂಖ್ಯೆ ಸರಿ ಸುಮಾರು ಒಂದು ಕೋಟಿ.
1795 ರ ನಂತರ ಮತ್ತೆ ಮಳೆಯಾಯಿತು. ಕೆರೆ ಕುಂಟೆಗಳು ತುಂಬಿದ ಸುದ್ದಿ ಕೇಳಿದ ಜನ ತಮ್ಮ ಹುಟ್ಟೂರಿಗೆ ಮರಳಿದರು. ಬಂದು ನೋಡಿದ್ದೇನು? ಈಗ ತಾನೇ ಚಿಗುರುತ್ತಿರುವ ಹುಲ್ಲು ಗರಿಕೆಗಳು. ಎಲ್ಲೆಂದರಲ್ಲಿ ಬಿದ್ದ ಮಾನವರ ತಮ್ಮ ಸಾಕು ಪ್ರಾಣಿಗಳ ತಲೆ ಬುರುಡೆಗಳು (ಕಪಾಲಗಳು) ಮೂಳೆಗಳು (ಕಂಕಾಲಗಳು). ನಮ್ಮವರು ಯಾರು ಪರಕೀಯರು ಯಾರು ಗೊತ್ತಾಗಲು ಹೆಣಗಳೇ ಇಲ್ಲ. ಶವ ಸಂಸ್ಕಾರಕ್ಕೆ ಶವಗಳೇ ಇಲ್ಲ. ಇರುವ ತಲೆಬುರುಡೆಗಳನ್ನು ವ್ಯವಸ್ಥಿತವಾಗಿ ಜೋಡಿಸಿ ಗೋರಿಗಳನ್ನು ಸಿದ್ದಪಡಿಸಿದರು. ಈ ಬರ ಕಪಾಲ ಬರ ಎಂದೇ ಕುಪ್ರಸಿದ್ದವಾಯಿತು.
ನಾವು ಕಂಡ ಇತ್ತೀಚಿನ ಬರ್ಬರ ಬರ ಇದು. ಅಂದಿನ ಮಾಸ್ಟಿಂಗ್ ಅನ್ನು ದಾಖಲಿಸಿ ಮುಂದಿನ ಪೀಳಿಗೆಗೆ ವರ್ಗಾಯಿಸಿರುವುದು ಸಾಧ್ಯವೇ? ಆದರೆ ಆ ಅವಧಿಯಲ್ಲಿ ಬಿದಿರು ಹೂವಾಗಿರಲಿಲ್ಲ ಎಂದು ದಾಖಲೆಗಳು ಹೇಳುತ್ತವೆ. ನೇರಳೆ ಹಣ್ಣುಗಳ ಮಾಸ್ಟಿಂಗ್ ಬಗ್ಗೆ ದಾಖಲೆಗಳು ಇಲ್ಲ. ಸರಿ ಸುಮಾರು 200 ವರ್ಷಗಳ ಹಿಂದಿನ ಘಟನೆಯ ದಾಖಲೆಯೂ ಇಲ್ಲದೇ ನೇರಳೆ ಹಣ್ಣುಗಳ ಸಮೃದ್ಧತೆ ಬರದ ಮುನ್ಸೂಚನೆ ಎನ್ನಲಾಗದು.
ನಿವೃತ್ತ ಪ್ರವಾಚಕರು
ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
Mob: 9448571203
*****************************************