-->
ಮಕ್ಕಳಿಗೆ ರಜೆಯ ಓದು : ಸಂಚಿಕೆ - 27

ಮಕ್ಕಳಿಗೆ ರಜೆಯ ಓದು : ಸಂಚಿಕೆ - 27

ಮಕ್ಕಳಿಗೆ ರಜೆಯ ಓದು
ಸಂಚಿಕೆ - 27
ಓದು ಬರಹ : ಕೆ ಪಿ ಅಶ್ವಿನ್ ರಾವ್
ಪದವಿನಂಗಡಿ, ಬೊಂದೇಲ್
ಮಂಗಳೂರು, ದಕ್ಷಿಣಕನ್ನಡ ಜಿಲ್ಲೆ
ಮೊ : +91 94482 53815
       
       
ಕಾಲ್ಪನಿಕ ಕಥೆಗಳ ಲೋಕದಲ್ಲಿ ಅತ್ಯಂತ ಪ್ರಸಿದ್ಧವಾಗಿರುವ "ಅಲಿಬಾಬಾ ಮತ್ತು ನಲವತ್ತು ಕಳ್ಳರು" ಕಥೆ ಪುಸ್ತಕದ ಬಗ್ಗೆ ಹೇಳುವುದಾದರೆ ಇದೊಂದು ಅರೇಬಿಕ್ ಜಾನಪದ ಕಥೆ. ಇದನ್ನು ೧೮ನೇ ಶತಮಾನದಲ್ಲಿ ಅದರ ಫ್ರೆಂಚ್ ಅನುವಾದಕ ಆಂಟೊಯಿನ್ ಗ್ಯಾಲ್ಯಾಂಡ್ ಅವರು ಸಿರಿಯನ್ ಕಥೆಗಾರ ಹನ್ನಾ ದಿಯಾಬ್ ಅವರಿಂದ ಕೇಳಿ ‘ಅರೇಬಿಯನ್ ನೈಟ್ಸ್’ ಕಥಾ ಮಾಲಿಕೆಗೆ ಸೇರಿಸಿದ್ದಾರೆ. ‘ಆಲಿಬಾಬಾ ಮತ್ತು ನಲವತ್ತು ಕಳ್ಳರು’
ಇದರ ಕಥೆ ಹೀಗೆ ಇದೆ…

“ಬಹಳ ವರ್ಷಗಳ ಹಿಂದೆ ಪರ್ಷಿಯಾ ದೇಶದ ಒಂದು ಸಣ್ಣ ನಗರದಲ್ಲಿ ಅಲಿಬಾಬಾ ಮತ್ತು ಕಾಸಿಮ್ ಎಂಬ ಇಬ್ಬರು ಸಹೋದರರಿದ್ದರು. ಕಾಸಿಮ್ ಶ್ರೀಮಂತ ಮಹಿಳೆಯೊಬ್ಬಳನ್ನು ಮದುವೆಯಾಗಿ ದೊಡ್ಡ ಉದ್ಯಮಿಯಾದನು. ಆದರೆ ಅಲಿಬಾಬಾ ತುಂಬಾ ಬಡವನಾಗಿಯೇ ಉಳಿದನು. ಅವನು ಕಾಡಿನಿಂದ ಕಟ್ಟಿಗೆಗಳನ್ನು ಕಡಿದು, ಅದನ್ನು ಪೇಟೆಯಲ್ಲಿ ಮಾರಿ ತನ್ನ ಜೀವನ ನಡೆಸುತ್ತಿದ್ದನು. ಒಂದು ದಿನ ಅಲಿಬಾಬಾ ಕಾಡಿನಲ್ಲಿ ಕಟ್ಟಿಗೆ ಕತ್ತರಿಸುತ್ತಿರುವಾಗ, ದೂರದಲ್ಲಿ ಧೂಳೆಬ್ಬಿಸುತ್ತಾ ಕುದುರೆಗಳ ಮೇಲೆ ಬರುತ್ತಿದ್ದ ಒಂದು ದೊಡ್ಡ ಗುಂಪನ್ನು ಕಂಡನು. ಹೆದರಿದ ಅಲಿಬಾಬಾ ತಕ್ಷಣವೇ ಒಂದು ದೊಡ್ಡ ಮರದ ಮೇಲೆ ಹತ್ತಿ ಅಡಗಿ ಕುಳಿತನು. ಅವರು ಒಟ್ಟು ನಲವತ್ತು ಜನ ಕಳ್ಳರಾಗಿದ್ದರು. ಆ ಕಳ್ಳರ ನಾಯಕನು ಒಂದು ದೊಡ್ಡ ಬಂಡೆಯ ಮುಂದೆ ನಿಂತು ಗಟ್ಟಿಯಾಗಿ ಹೀಗೆ ಹೇಳಿದನು:
"ಖುಲ್ ಜಾ ಸಿಮ್ ಸಿಮ್!" (Open Sesame!) ತಕ್ಷಣವೇ ಆ ದೊಡ್ಡ ಬಂಡೆ ಪಕ್ಕಕ್ಕೆ ಸರಿದು ಒಂದು ರಹಸ್ಯ ಗುಹೆಯ ದಾರಿ ತೆರೆದುಕೊಂಡಿತು. ಕಳ್ಳರೆಲ್ಲರೂ ತಾವು ಕದ್ದ ಚಿನ್ನಾಭರಣಗಳ ಮೂಟೆಗಳೊಂದಿಗೆ ಒಳಗೆ ಹೋದರು. ಸ್ವಲ್ಪ ಸಮಯದ ನಂತರ ಹೊರಗೆ ಬಂದು, ನಾಯಕನು "ಬಂದ್ ಹೋ ಜಾ ಸಿಮ್ ಸಿಮ್!" (Close Sesame!) ಎಂದ ತಕ್ಷಣ ಬಂಡೆ ಮೊದಲಿನಂತೆ ಮುಚ್ಚಿಕೊಂಡಿತು. ಕಳ್ಳರೆಲ್ಲರೂ ಅಲ್ಲಿಂದ ಹೊರಟುಹೋದರು.

ಕಳ್ಳರು ಹೋದ ನಂತರ ಮರದಿಂದ ಕೆಳಗಿಳಿದ ಅಲಿಬಾಬಾ, ಕುತೂಹಲದಿಂದ ಆ ಬಂಡೆಯ ಮುಂದೆ ನಿಂತು, ನಾಯಕ ಹೇಳಿದ ಮಂತ್ರವನ್ನೇ ಹೇಳಿದನು: "ಖುಲ್ ಜಾ ಸಿಮ್ ಸಿಮ್!". ಆಶ್ಚರ್ಯವೆಂದರೆ ಬಂಡೆ ತೆರೆದುಕೊಂಡಿತು! ಒಳಗೆ ಹೋದಾಗ ಅಲ್ಲಿ ರಾಶಿ ರಾಶಿ ಚಿನ್ನ, ವಜ್ರ ಮತ್ತು ಅಮೂಲ್ಯವಾದ ಖಜಾನೆ ಇತ್ತು. ಅಲಿಬಾಬಾ ತನಗೆ ಬೇಕಾದಷ್ಟು ಚಿನ್ನದ ನಾಣ್ಯಗಳನ್ನು ಚೀಲಗಳಲ್ಲಿ ತುಂಬಿಕೊಂಡು, ತಿರುಮಂತ್ರ ಹೇಳಿ ಗುಹೆಯನ್ನು ಮುಚ್ಚಿ ಮನೆಗೆ ಬಂದನು.

ಅಲಿಬಾಬಾ ತಂದ ಚಿನ್ನದ ನಾಣ್ಯಗಳನ್ನು ಅಳೆಯಲು ಅವನ ಹೆಂಡತಿ ಕಾಸಿಮನ ಮನೆಯಿಂದ ಅಳತೆ ಪಾತ್ರೆಯನ್ನು ತಂದಳು. ಕಾಸಿಮನ ಹೆಂಡತಿ ಬುದ್ಧಿವಂತಿಕೆಯಿಂದ ಆ ಪಾತ್ರೆಯ ತಳಕ್ಕೆ ಸ್ವಲ್ಪ ಜೇನುತುಪ್ಪ ಸವರಿದ್ದಳು. ಅಲಿಬಾಬಾನ ಹೆಂಡತಿ ನಾಣ್ಯಗಳನ್ನು ಅಳೆದು ಪಾತ್ರೆಯನ್ನು ಹಿಂದಿರುಗಿಸಿದಾಗ, ಅದರ ತಳಕ್ಕೆ ಒಂದು ಚಿನ್ನದ ನಾಣ್ಯ ಅಂಟಿಕೊಂಡಿರುವುದನ್ನು ಕಾಸಿಮನ ಹೆಂಡತಿ ನೋಡಿದಳು. ವಿಷಯ ತಿಳಿದ ಕಾಸಿಮನು ಅಲಿಬಾಬಾನನ್ನು ಹೆದರಿಸಿ ರಹಸ್ಯ ಮಂತ್ರವನ್ನು ತಿಳಿದುಕೊಂಡನು. ದುರಾಸೆಯ ಕಾಸಿಮನು ದೊಡ್ಡ ಕತ್ತೆಗಳೊಂದಿಗೆ ಗುಹೆಗೆ ಹೋದನು. ಮುಂದೇನಾಯಿತು? ದುಷ್ಟ ಕಾಸಿಮನಿಗೆ ಬಂಗಾರ ಸಿಕ್ಕಿತೇ? ಅಲಿಬಾಬಾ ಗುಹೆಯೊಳಗೆ ಹೋದ ವಿಷಯ ಕಳ್ಳರಿಗೆ ತಿಳಿಯಿತೇ? ಅಲಿಬಾಬಾನ ಕಥೆ ಏನಾಯಿತು? ಇವೆಲ್ಲಾ ತಿಳಿಯಬೇಕಾದರೆ ನೀವು ‘ಅಲಿಬಾಬಾ ಮತ್ತು ನಲವತ್ತು ಕಳ್ಳರು’ ಪುಸ್ತಕ ಓದಲೇ ಬೇಕು.

ಇದು ಕಾಲ್ಪನಿಕ ಜಾನಪದ ಕಥೆಯಾದರೂ ಮಕ್ಕಳಿಗೆ ಉತ್ತಮ ಸಂದೇಶ ನೀಡುವ ನೀತಿ ಇದೆ. ಒಳ್ಳೆಯತನಕ್ಕೆ ಯಾವತ್ತೂ ಸಾವಿಲ್ಲ. ಅದು ಎಂದೆಂದಿಗೂ ನಮ್ಮನ್ನು ಕಾಪಾಡುತ್ತದೆ. ಅಲಿಬಾಬಾ ಕಥೆ ಪುಸ್ತಕವು ಜಗತ್ತಿನ ನಾನಾ ಭಾಷೆಗಳಲ್ಲಿ ಮಾರುಕಟ್ಟೆಯಲ್ಲಿದೆ. ಕನ್ನಡ ಭಾಷೆಯಲ್ಲೂ ಮಕ್ಕಳಿಗೆ ಲಭ್ಯವಿದೆ. ವಿವಿಧ ಪ್ರಕಾಶಕರು ‘ಅಲಿಬಾಬಾ ಮತ್ತು ನಲವತ್ತು ಕಳ್ಳರು’ ಪುಸ್ತಕವನ್ನು ಹೊರತಂದಿದ್ದಾರೆ. ಪೋಷಕರು ಈ ಪುಸ್ತಕವನ್ನು ಮಕ್ಕಳಿಗೆ ಕೊಡುವುದರ ಮೂಲಕ ಅವರ ಜ್ಞಾನತೃಷೆಯನ್ನು ನೀಗಿಸಬಹುದು. 

ಚಿತ್ರ ಕೃಪೆ: ಅಮೆಜಾನ್, ಸಪ್ನ ಆನ್ ಲೈನ್ ಜಾಲತಾಣಗಳು
..................................... ಕೆ ಪಿ ಅಶ್ವಿನ್ ರಾವ್
ಪದವಿನಂಗಡಿ, ಬೊಂದೇಲ್
ಮಂಗಳೂರು, ದಕ್ಷಿಣಕನ್ನಡ ಜಿಲ್ಲೆ
ಮೊ : +91 94482 53815
******************************************


Ads on article

Advertise in articles 1

advertising articles 2

Advertise under the article