ಸ್ಫೂರ್ತಿಯ ಮಾತುಗಳು : ಸಂಚಿಕೆ - 224
Monday, July 20, 2026
Edit
ಸ್ಫೂರ್ತಿಯ ಮಾತುಗಳು : ಸಂಚಿಕೆ - 224
ಲೇಖಕರು : ರಮೇಶ ಎಂ. ಬಾಯಾರು
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com
ಆ ದಿನ ಟಾಪಿಲ್ಲದ ಪೆನ್ನಿನಲ್ಲೇ ಬರೆಯುವ ಅನಿವಾರ್ಯತೆ. ಟಾಪ್ ಕಾಣೆಯಾಗಿದೆ, ಹೊಸತು ಕೊಡಿಸಿ ಎಂದಾಗ ಅಪ್ಪ ಹೇಳಿದರು, “ನಿನಗೆ ಸ್ವಯ ಇರಲಿಲ್ಲವೋ, ಈ ತಿಂಗಳು ಅದರಲ್ಲೇ ಬರಿ!” ಏನು ಮಾಡುವುದು? ಕಂಪಾಸಿನಲ್ಲಿಟ್ಟು ಟಾಪಿಲ್ಲದ ಪೆನ್ನನ್ನು ಶಾಲೆಗೆ ಸಾಗಿಸಿದೆ. ಕಂಪಾಸ್ ನಿಂದ ತೆಗೆದು ಡೆಸ್ಕ್ ಮೇಲಿಟ್ಟಿದ್ದೆ. ಕಾಪಿ ಪುಸ್ತಕ ನೋಡುತ್ತ ಮಾಸ್ಟ್ರು ನಾನಿರುವ ಮುಂದಿನ ಡೆಸ್ಕ್ ಬಳಿ ಬಂದರು. ನನ್ನ ಮುಂದೆ ನಿಂತರು. ಅವರಿಗೆ ಕಾಪಿ ನೋಡುವ ಅವಸರ. ಪೆನ್ನಿನ ನಿಬ್ ಅವರ ಅಂಗಿಗೆ ಮುಖ ಮಾಡಿದ್ದು ನನಗೂ ಗೊತ್ತಾಗಲಿಲ್ಲ. ಅವರಿಗೂ ಗೊತ್ತಾಗಲಿಲ್ಲ. ಎಲ್ಲರ ಕಾಪಿ ಪುಸ್ತಕ ನೋಡಿ ಪಾಠ ಮಾಡಲು ತರಗತಿಯ ಮುಂದೆ ನಿಂತರು. ಒಬ್ಬ ಹುಡುಗ ಅವರ ಬಿಳಿ ಅಂಗಿಯಲ್ಲಿ ಶಾಯಿಯ ರೇಖೆಗಳನ್ನು ನೋಡಿ, “ಸಾರ್ ನಿಮ್ಮ ಅಂಗಿ ನೋಡಿ" ಎಂದ. ಅವರು ನೋಡಿದರು. ಯಾರಿದು ಮಾಡಿದ್ದು ಎಂದು ಬೊಬ್ಬೆ ಹಾಕುವಾಗ ಪಕ್ಕದವನು ಹೇಳಿದ, “ಸರ್ ಇವನ ಟಾಪ್ ಇಲ್ಲದ ಪೆನ್ನು ಮಾಡಿರಬಹುದು!" ಬೇಕೇ ಬೈಗುಳಗಳ ರಾಶಿ. ಆ ಅಂಗಿ ತೊಳೆದ ಅವರ ಹೆಂಡತಿ ಹಿಡಿ ಶಾಪ ಹಾಕಿರಬಹುದು. ಹಳೆಯ ಅದೇ ಜಾತಿಯ ಪೆನ್ನೊಂದು ಮನೆಯಲ್ಲಿ ಸಿಕ್ಕಿತು. ನನ್ನ ಪುಣ್ಯ. ಅದು ಹಸುರು. ಕಾಣೆಯಾದುದು ನೀಲಿ ಟಾಪು. ನೀಲಿ ಅಂಡೆಗೆ ಹಸುರು ಟಾಪಾದರೂ ಚಿಂತೆಯಲ್ಲ. ಬೈಗಳು ಯಾರಿಗೆ ಬೇಕು? ಯಾತಕ್ಕೆ ಬೇಕು ಅಲ್ಲವೇ? ಅಂತು ಒಂದು ವರ್ಷ ಅದೇ ಪೆನ್ನನ್ನು ಉಪಯೋಗಿಸಿದೆ.
ಶಾಯಿ ಬಾಟಲಿ ಖಾಲಿಯಾದರೆ ಹೊಸ ಬಾಟಲಿ ತರುತ್ತಿರಲಿಲ್ಲವೋ ನೆನಪಿಲ್ಲ. ಅಂಗಡಿಯವನು ಇಂಕಿನ ಬಾಟಲಿಯಿಂದ ಪ್ಲಾಸ್ಟಿಕ್ಕಿನ ಲೋಟಕ್ಕೆ ಬಗ್ಗಿಸಿ ನಮ್ಮ ಹಳೇ ಬಾಟಲಿಗೆ ತುಂಬಿಸಿ ಕೊಡುತ್ತಿದ್ದ. ಕ್ರಯ ಆಗ ಮೂವತ್ತೈದು ಪೈಸೆ. ಮತ್ತೆ ಆರು ತಿಂಗಳು ಆರಾಮ. ಪೆನ್ನಿಗೆ ಶಾಯಿ ತುಂಬಿಯೂ ಕೊಡುತ್ತಿದ್ದರು. ಕೇವಲ ಎರಡೋ ಮೂರೋ ಪೈಸೆ ಕೊಡ ಬೇಕಿತ್ತು. ಶಾಯಿ ಚೆಲ್ಲಿದರೆ, ಕೈಗೆ ಹತ್ತಿದರೆ ಅದನ್ನು ತಲೆಗೆ ಹಚ್ಚಿಕೊಳ್ಳಬೇಕು ಅಂತ ಯಾರು ಸಂಶೋಧಿಸಿದರೋ! ನಾವೆಲ್ಲಾ ಹಾಗೆಯೇ ಮಾಡುತ್ತಿದ್ದೆವು. ಪೂರ್ಣಚಂದ್ರ ತೇಜಸ್ವಿಯವರ ಮನೆಯ ಚೈತ್ರ ಚಿಕ್ಕಂದಿನಲ್ಲಿ ಹೀಗೆ ಚೆಲ್ಲಿದ ಕೆಂಪು ಶಾಯಿಯನ್ನು ತಲೆಗೆ ಹಚ್ಚಿದ್ದರು. ಈ ವಿಷಯವನ್ನು ಯಾರಿಗೂ ಹೇಳಿರಲಿಲ್ಲ. ಮರುದಿನ ಬೆಳಗ್ಗೆ ಅವರಮ್ಮ ತಲೆಗೆ ಸ್ನಾನ ಮಾಡಿಸುವಾಗ ತಲೆಯಿಂದ ರಕ್ತ ಬರುತ್ತಿದೆ ಅಂತ ಗಾಬರಿಯಾಗಿ, ಬೊಬ್ಬಿಟ್ಟರು. ತೇಜಸ್ವಿಯವರ "ಅಣ್ಣನ ನೆನಪು" ಪುಸ್ತಕದಲ್ಲಿ ಈ ಉಲ್ಲೇಖವಿದೆ.
ಸಮಸ್ಯೆಗಳು, ರಗಳೆಗಳು ಎಷ್ಟೇ ಇದ್ದರೂ ಅದರ ನಡುವೆಯೂ, ಸುಂದರ ಕೈಬರಹಕ್ಕೆ ಖ್ಯಾತವಾಗಿದ್ದ ಚೆನ್ನಾಗಿ ಬರೆಯುವ ಶಾಯಿ ಪೆನ್ನೆಂದರೆ ಅದರ ಆನಂದವೇ ಬೇರೆ. ಕರಕರ ಎನ್ನದೇ, ಬೆಣ್ಣೆಯಂತೆ ನಿಬ್ಬು ಕಾಗದದ ಮೇಲೆ ಓಡುತ್ತಾ ಅಕ್ಷರಗಳನ್ನು ಮೂಡಿಸುತ್ತಿದ್ದರೆ, ಅದೇ ಒಂದು ಸುಖ ಪ್ರಪಂಚ. ಚೈನಾ ದೇಶದ ಹೀರೋ ಪೆನ್ನು ಇಟ್ಟುಕೊಳ್ಳುವುದು ಆಗ ಒಂದು ಬಿಂಕ. ಹುಡುಗರಿಗೆ ಅವರಪ್ಪ ಅಮ್ಮ "ನೋಡು, ಚೆನ್ನಾಗಿ ಓದಿ ಕ್ಲಾಸಿಗೆ ಫಸ್ಟು ಬಂದರೆ ಒಂದು ಹೀರೋ ಪೆನ್ನು ಕೊಡಿಸುವೆ" ಅಂತ ಆಸೆ ತೋರಿಸುತ್ತಿದ್ದರು.
ಶಾಯಿ ಪೆನ್ನಿಗಿಂತ ಮೊದಲಿನ ಪೆನ್ನಿನ ಕಥೆಯೇ ಬೇರೆ. ಆಗ ನಿಬ್, ನಾಲಿಗೆಯಿರುವ ಪೆನ್ ಇತ್ತು. ಆದರೆ ಶಾಯಿ ತುಂಬಿಸಿ ಬರೆಯುತ್ತಿರಲಿಲ್ಲ. ಶಾಯಿ ತುಂಬುವ ಅಂಡೆ ಇರಲಿಲ್ಲ. ಶಾಲೆಗೆ ಶಾಯಿ ಬಾಟ್ಲಿ ಒಯ್ಯ ಬೇಕಿತ್ತು. ಆ ಶಾಯಿಯ ಕತೆಯೂ ದೊಡ್ಡದೇ. ಅಂಗಡಿಯಿಂದ ಶಾಯಿ ತರುತ್ತಿರಲಿಲ್ಲವಂತೆ. ಅಣಿಲೆಕಾಯಿ ಗುದ್ದಿ ಬಾಟ್ಲಿಯಲ್ಲಿ ತುಂಬಿ ನೀರು ಹಾಕುತ್ತಿದ್ದರು. ಅದರಲ್ಲಿ ಒಂದು ಕಬ್ಬಿಣದ ತುಂಡು ಹಾಕುತ್ತಿದ್ದರು. ಕಬ್ಬಿಣ ಮತ್ತು ಅಣಿಲೆಯ ಚೊಗರು ಮಿಶ್ರವಾಗಿ ನೀರು ಕಪ್ಪಾಗುತ್ತಿತ್ತು. ಅದುವೇ ಶಾಯಿ. ಆದರೆ ಹಿರಿಯರು ಬರೆಯಲು ಮುನ್ನ ಪೆನ್ನನ್ನು ಶಾಯಿ ಬಾಟ್ಲಿಗೆ ಮುಳುಗಿಸಿ ನಿಬ್‌ನ್ನು ಶಾಯಿಯೊಂದಿಗೆ ಅದ್ದಿ ಬರೆಯಲು ಬಳಸುತ್ತಿದ್ದರು. ಒಮ್ಮೆ ಅದ್ದಿದ ಶಾಯಿ ಒಣಗುತ್ತಿದ್ದಂತೆ ಪುನಹ ಅದ್ದುವ ತ್ರಾಸವಿತ್ತು. ಶಾಯಿ ತುಂಬುವ ಅಂಡೆ ಬಂದ ಮೇಲೆ ಈ ಸಮಸ್ಯೆಯು ಹಿಮಾಲಯವೇರಿತು. ಕಾಗದವೂ ಇಲ್ಲದ ಪೆನ್ನೂ ಇಲ್ಲದ ಕಾಲ “ಓಲೆ ಪತ್ರದ ಯುಗ” ಕಬ್ಬಿಣದ ಕಂಠದಲ್ಲಿ ಓಲೆಯ ಮೇಲೆ ಅಕ್ಷರ ಮಾಡಿಸಿ, ಅಣಿಲೆಯಂತಹ ಶಾಯಿ ಹಚ್ಚಿ ಓದುವ ಕ್ರಮವಿತ್ತು. ಆ ಬಗ್ಗೆ ಇಲ್ಲಿ ಬರೆಯುವುದಿಲ್ಲ.
ನಾನು ಹೈಸ್ಕೂಲಿಗೆ ಬರುವಾಗ ಬಾಲ್ ಪೆನ್ ಶಾಯಿ ಪೆನ್ನನ್ನು ಅದುಮಿ ಮೆರೆದಾಗಿತ್ತು. ಕಾಲೇಜಿಗೆ ಬರೋ ಹೊತ್ತಿಗೆ ಶಾಯಿ ಪೆನ್ ಉಪಯೋಗ ವಿರಳವಾಗ ತೊಡಗಿತು. ಕೆಲಸಕ್ಕೆ ಸೇರಿದ ಕೆಲವೇ ವರ್ಷಗಳಲ್ಲಿ ಶಾಯಿ ಪೆನ್ನುಗಳ ಸಾಮ್ರಾಜ್ಯವನ್ನು ಬಾಲ್ ಪೆನ್ನುಗಳು ಧೂಳೀಪಟಗೊಳಿಸಿ ಕಾರುಬಾರು ಶುರುಮಾಡಿದವು.
ಚೀನಾದಿಂದ ಬಂದ Use and Throw ಬಾಲ್ ಪೆನ್ನುಗಳು. ಒಂದು ಪ್ಯಾಕೆಟ್ ಪೆನ್ನಿಗೆ ಮೂವತ್ತು ರೂಪಾಯಿ. ಅದು ಚೆನ್ನಾಗಿ ಬರೆಯುತ್ತಿತ್ತು. ಇಂಕು ಮುಗಿದಮೇಲೆ ಎಸೆದರಾಯಿತು. ಶಾಲೆಯಲ್ಲಿ ಈಗೀಗ ಜೆಲ್ ಪೆನ್ನು ಬಂದಿದ್ದು ಫೌಂಟನ್ ಪೆನ್ನಿನ ಸ್ಮರಣೆ ಮಾಡಿಸುತ್ತದೆ. ಅವೂ ಬಾಲ್ ಪೆನ್ನಿನಂತೆ ಬರೆಯಲು ಅನುಕೂಲಕರ. ಏನಿದ್ದರೂ ಪೆನ್ ಬೇಕೇ ಬೇಕು. ಗನ್ ಹಿಡಿವ ಸೈನಿಕರಿಗೂ ಪೆನ್ನು ಅಗತ್ಯ. ವಿವಾಹ ಉಪನಯನಾದಿಗಳಲ್ಲಿ ಕವರಿಗೆ ಹಣ ಹಾಕಿ ಉಡುಗೊರೆ ನೀಡುವ ಪರಿಪಾಠವೊಂದಿದೆ. ಕವರು ಯಾರದೆಂದು ತಿಳಿಯಲು ಹೊರಗಡೆ ಹೆಸರು ಬರೆಯಬೇಕು. ಅದಕ್ಕೆ ಪೆನ್ನು ಬೇಕಲ್ಲ ! ಆಗ ಕಾಣಿಸುವುದು ಮಾಸ್ಟ್ರುಗಳು ಅಥವಾ ಸಾಹಿತಿಗಳು. ಅವರ ಜೇಬಿನಲ್ಲೋ ಸಂಚಿಯಲ್ಲೋ ಅವರ ಅಭಿಮಾನ ಮತ್ತು ಸಂಪತ್ತಿನ ಕುರಹಾದ ಪೆನ್ನು ಇದ್ದೇ ಇರುತ್ತದೆ. ಹೊರ ಹೋಗುವಾಗ ಜೇಬೊಳಗೆ ಪೆನ್ನು ಸಿಕ್ಕಿಸುವುದೆಂದರೆ ಹಿಂದೆಲ್ಲಾ ಏನು ಗತ್ತು! ಏನು ಮಜಾ! ಪರಿಚಯವಿರದೇ ಇದ್ದರೂ ಜೇಬೊಳಗೆ ಪೆನ್ನಿದ್ದರೆ “ನಮಸ್ಕಾರ” ಸಲ್ಲುವ ಕಾಲವದು. ಪೆನ್ನು ಇದ್ದವ ಭಾರೀ ತಿಳಿದವನು (ಕಲಿತವನು- ಕಲ್ತಿನಾಯೆ) ಎಂಬ ನಂಬಿಕೆ ಆಗ.
ಪೆನ್ನು ಅಭಿಮಾನದ ಸಂಕೇತ, ಅಂತೆಯೇ ಅವಿಶ್ವಾಸದ ಸಂಕೇತವೂ ಹೌದೆಂದು ನನ್ನ ಅನಿಸಿಕೆ . ನಮ್ಮಲ್ಲಿ ಸಹಿಗೆಂದೋ, ಬರೆಯಲೆಂದೋ ಇತರರು ಪೆನ್ನು ಕೇಳಿದರೆ ಮೊದಲು ನಾವು ಮಾಡುವ ಕೆಲಸ ಟಾಪ್ ತೆಗೆದು ನಮ್ಮ ಜೇಬಿಗೆ ಹಾಕುವುದು. ನಂತರ ಕೇಳಿದವರಿಗೆ ಟಾಪ್ ಇರದ ಪೆನ್ನು ಹಸ್ತಾಂತರ. ಪೆನ್ ಮರಳಿ ಬರಲು ಈ ವ್ಯವಸ್ಥೆ ಎನ್ನುವರು ಕೆಲವರು. ಹೇಗೆ ನಂಬುವುದು? ಆತ ತನ್ನ ಜೇಬೊಳಗೆ ತುರುಕಿಸಿದರೆ ನನ್ನ ಆ ಪೆನ್ನಿನ ಅವಸ್ಥೆ! ಇದು ಒಬ್ಬಿಬ್ಬರ ಪೆನ್ ಫನ್! ಘಂಟಾಘೋಷವಾಗಿ ಹೇಳುತ್ತೇನೆ; ಇದು ಅವಿಶ್ವಾಸಿಯ ಲಕ್ಷಣ, ಸಂಶಯಾತ್ಮಾ ವಿನಶ್ಯತಿ ಎಂದು ಇಂತಹವರನ್ನೇ ಕುರಿತು ಶ್ರೀಕೃಷ್ಣ ಹೇಳಿರಬಹುದೆಂಬುದೇನೋ! ಎಲ್ಲ ಬ್ಯಾಂಕಿನವರೂ ಗ್ರಾಹಕರ ಸೇವೆ ಮಾಡುವರು, ಆದರೂ ಗ್ರಾಹಕರು ಪೆನ್ ಅಪಹಾರಿಗಳು ಎಂದು ಅವರು ಭಾವಿಸಿದಂತಿದೆ. ಅದಕ್ಕಾಗಿಯೇ ಕೌಂಟರಿಗೆ ಬಾಲ್ ಪಾಯಿಂಟ್ ಪೆನ್ನನ್ನು ಹೆಣದಂತೆ ನೇತು ಹಾಕುವರು.
…….ಮುಂದುವರಿಯುತ್ತದೆ
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
“ಸ್ಕಂದ” ಕುಳ ಗ್ರಾಮ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com
*****************************************