ಸ್ಫೂರ್ತಿಯ ಮಾತುಗಳು : ಸಂಚಿಕೆ - 221
Wednesday, July 1, 2026
Edit
ಸ್ಫೂರ್ತಿಯ ಮಾತುಗಳು : ಸಂಚಿಕೆ - 221
ಲೇಖಕರು : ರಮೇಶ ಎಂ. ಬಾಯಾರು
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com
ಎಲ್ಲೋ ಕೇಳಿದ ನೆನಪು. ಕೇಳಿರುವ ಆ ಘಟನೆ ಬಹಳ ಸರಳ, ಆದರೆ ಬಲು ಆಘಾತಕಾರಿ. ಅದಕ್ಕೆಂದೇ ಆ ಘಟನೆ ಇಂದಿನ ಲೇಖನದ ವಿಷಯ. ಪ್ರತಿಯೊಬ್ಬರೂ ಚಿಂತನ ಮಾಡಲೇ ಬೇಕಾದ ವಿಚಾರ.
ಅದೊಂದು ಸುಂದರವಾದ ಮನೆ, ಚಿಕ್ಕ ಚೊಕ್ಕ ಸಂಸಾರ. ಆ ಮನೆಯ ತಂದೆ ತಾಯಿಗೆ ಇಬ್ಬರು ಮಕ್ಕಳು. ಮೊದಲನೆಯವಳು ತಮ್ಮನೊಂದಿಗೆ ಬಹಳ ಆತ್ಮೀಯವಾಗಿದ್ದಳು. ಬಹಳ ಪ್ರೀತಿಯಿಂದ ತಮ್ಮನನ್ನು ನೋಡಿಕೊಳ್ಳುತ್ತಿದ್ದಳು. ಆಕೆಗಿಂತ ಆತ ನಾಲ್ಕು ವರ್ಷ ಚಿಕ್ಕವನು. ತಮ್ಮನ ಬಾಯಿಗೆ ಕೈತುತ್ತು ಕೊಡುತ್ತಿದ್ದಳು. ಜೊತೆಯಾಗಿ ಆಡುತ್ತಿದ್ದಳು. ಪಾಠ ಹೇಳಿಕೊಡುತ್ತಿದ್ದಳು. ಚಾಪೆ ಹಾಸಿ ಮಲಗಿಸುತ್ತಿದ್ದಳು. ಬಹಳ ಸಂತೋಷದಿಂದ, ಸ್ನೇಹದಿಂದ ಒಡನಾಡುತ್ತಲಿರುವ ಅಕ್ಕ ಮತ್ತು ತಮ್ಮಇಬ್ಬರನ್ನೂ ನೋಡಿ ಹೆಡೆದ ಆ ತಂದೆ ತಾಯಿಗಳಿಗಿನ್ನೇನು ಬೇಕು? ಪರಮಾನಂದದ ಸುಪ್ಪತ್ತಿಗೆಯಲ್ಲೇ ಅವರ ನಿತ್ಯ ವಿಹಾರ. ಜೊತೆಯಾಗಿ ಮನೆಯಿಂದ ಶಾಲೆಗೆ, ಶಾಲೆಯಿಂದ ಮನೆಗೆ ಮರಳುವುದು, ಜೊತೆಯಾಗಿ ಓದು, ಜೊತೆಯಾಗಿ ಊಟ, ಜೊತೆಯಾಗಿಯೇ ಎಲ್ಲವೂ ನಿರಂತರವಾಗಿ ನಿರಾತಂಕವಾಗಿ ನಡೆಯುತ್ತಿತ್ತು.
ಆ ವರ್ಷದ ವಾರ್ಷಿಕ ಪರೀಕ್ಷೆಯ ಫಲಿತಾಂಶ ಪ್ರಕಟವಾಯಿತು. ಅಕ್ಕ ಮತ್ತು ತಮ್ಮ ಅನುಕ್ರಮವಾಗಿ ಎಂಟನೇ ತರಗತಿ ಮತ್ತು ನಾಲ್ಕನೇ ತರಗತಿಯಲ್ಲಿ ಓದುತ್ತಿದ್ದರು. ಶಾಲೆಯಿಂದ ಅಂಕಪಟ್ಟಿ ಕೊಟ್ಟಿದ್ದರು. ಅಂಕ ಪಟ್ಟಿಗಳನ್ನು ನೋಡಿದಾಗ ತಂದೆಗೆ ಅತೀವ ಖುಷಿಯಾಯಿತು. ಮಗಳಿಗೆ ಮತ್ತು ಮಗನಿಗೆ ನೂರಕ್ಕೆ ನೂರು ಅಂಕ. ತಂದೆ ಮತ್ತು ತಾಯಿಗೆ ತಮ್ಮ ಮಕ್ಕಳ ಕಲಿಕಾ ಸಾಧನೆ ಮಿತಿ ಮೀರಿದ ಆನಂದವನ್ನು ಒದಗಿಸಿತು. ಮಕ್ಕಳಿಗೆ ಶಹಬ್ಬಾಸ್! ಎಂದು ಶ್ಲಾಘಿಸಿ ಬೆನ್ನುತಟ್ಟಿದರು. ಪಾಯಸದ ಊಟವನ್ನೇ ಏರ್ಪಡಿಸಿದರು. ಆದರೆ ಈ ಸಂತಸ ಬಹಳ ದಿನ ಉಳಿಯಲಿಲ್ಲ. ಅವರು ಘೋರ ದುರಂತವೊಂದನ್ನು ಕಣ್ಣಾರೆ ಕಾಣುವಂತಾಯಿತು. ಆ ದುರಂತ ನಮ್ಮನ್ನು ಒಂದು ಕ್ಷಣ ಯೋಚಿಸುವಂತೆ ಮಾಡುತ್ತದೆ. ಘಟನೆ ಅರಿತಾಗ ನಮ್ಮ ಮನಸ್ಸು ಮುದುಡುತ್ತದೆ
ಅಂತಹ ವಿನಾಶಕಾರಿಯಾದ ಘಟನೆ ಏನದು ಎಂಬ ಕುತೂಹಲ ನಿಮಗಿರಲೂ ಬಹುದು. ಆದರೆ ಆ ರೋಚಕವಾದ ಘಟನೆಯ ಮೊದಲಾರ್ಧವನ್ನು ಹೇಳಿದಾಗ ನಿಮ್ಮನ್ನು “ಇಷ್ಟೇನಾ?” ಎಂದು ಉದ್ಗರಿಸುವಂತೆ ಮಾಡಿದರೂ ಆಶ್ಚರ್ಯವಿಲ್ಲ. ಅಪ್ಪನಿಗೆ, “ಮಕ್ಕಳು ಚೆನ್ನಾಗಿ ಓದುತ್ತಾರೆ, ಈ ವರ್ಷ ಮಗಳಿಗೆ ಒಳ್ಳೆಯ ಸ್ಪರ್ಷ ಪರದೆಯ ಮೊಬೈಲೊಂದನ್ನು ಕೊಡಿಸೋಣ” ಎಂದೆನಿಸಿತು. ಮಗಳಲ್ಲಿ ಮೊಬೈಲ್ ಕೊಡಿಸುವ ಅಭಿಪ್ರಾಯ ಹೇಳಿದರು. ಇನ್ನು ಕೇಳಬೇಕೇ ಅವಳ ಖುಷಿಗೆ ಪಾರವೇ ಇಲ್ಲ! ಆನಂದದಿಂದ ಕುಣಿಯುವುದೊಂದೇ ಬಾಕಿ. ಅಪ್ಪನನ್ನು ಬಿಗಿದಪ್ಪಿದಳು.
ನಂತರದ ವಾರದಲ್ಲಿ ಮಗಳಿಗೊಂದು ಅಂದದ ಹೊಸ ಮೊಬೈಲೊಂದು ಬಂತು. ಅದರಲ್ಲಿ ಎಲ್ಲ “ಏಪ್” ಗಳನ್ನು ತುಂಬಿಸಲಾಯಿತು. ಮೊದ ಮೊದಲು ಆಕೆಯ ಮೊಬೈಲಿನ ಬಳಕೆ ಮಿತಿಯಲ್ಲಿತ್ತು. ಬರ ಬರುತ್ತಾ ಅವಳಿಗೆ ಮೊಬೈಲೇ ಸರ್ವಸ್ವವಾಯಿತು. ಮೊಬೈಲೇ ಅವಳಿಗೀಗ ಪಂಚ ಪ್ರಾಣ. ಶಾಲೆಗೆ ಹೋಗುವಾಗ ತಮ್ಮನ ಜೊತೆ ಹೋಗುವುದನ್ನು ಬಿಟ್ಟಳು. ಹಿಂದಿರುಗುವಾಗಲೂ ಆಕೆಗೆ ಮೊಬೈಲೇ ಸಂಗಾತಿ. ತಮ್ಮನಿಗೆ ಕೈ ತುತ್ತು ಇಲ್ಲ. ಆತನಿಗೆ ಚಾಪೆ ಬಿಡಿಸಿಕೊಡುವುದು, ಪಾಠ ಕಲಿಸುವುದು ನಿಂತಿತು. ತಮ್ಮನೊಂದಿಗೆ ದಿನಾ ಆಡುತ್ತಿದ್ದ ಮಗಳು ಕೋಣೆ ಸೇರಿ ಮೊಬೈಲಿನಲ್ಲಿ ಒಂಟಿಯಾಗಿ ಆಡುತ್ತಿದ್ದಳು. ಮುಂದುವರಿದಂತೆ ತಮ್ಮನಲ್ಲಾಗಲೀ ಹೆತ್ತವರೊಂದಿಗೆಯಾಗಲೀ ಮಾತುಕತೆಗೂ ಅವಳಿಗೆ ಸಮಯವಿರದಂತಾಯಿತು. ಅಕ್ಕನ ಬದಲಾವಣೆ ತಮ್ಮನನ್ನು ಕೊರಗುವಂತೆ ಮಾಡಿತು.
ಅಪ್ಪ ಮತ್ತು ಅಮ್ಮ ಇದನೆಲ್ಲವನ್ನೂ ಗಮನಿಸುತ್ತಿದ್ದರಾದರೂ ಏನೂ ಮಾಡುವಂತಿಲ್ಲ. ಮೊಬೈಲು ಹುಚ್ಚು ಹಿಡಿಸಿದ ಪಾಪಪ್ರಜ್ಞೆ ಅವರಲ್ಲಿ ಬೇರೂರಿತು. ಮೊಬೈಲ್ ಎಂಬ ಶತ್ರು ಅಕ್ಕ ಮತ್ತು ತಮ್ಮನ ನಡುವಣ ಮಧುರ ಸಂಬಂಧಗಳನ್ನು ಕೊಚ್ಚೆಗೊಳಿಸಿರುವುದನ್ನು ಗಮನಿಸಿದಾಗ ರೋದನವೊಂದೇ ಬಾಕಿಯಿತ್ತು. 100ಕ್ಕೆ ನೂರು ಅಂಕ ತಂದ ಅಕ್ಕ ಒಂಭತ್ತನೇ ತರಗತಿಯಲ್ಲಿ ಉತ್ತೀರ್ಣಳಾಗಲು ಏದುಸಿರು ಬಿಡುವಂತಾಯಿತು. ಹತ್ತನೇ ತರಗತಿಯಲ್ಲಿ “ಫೈಲ್” ಆಗಿಯೇ ಬಿಟ್ಟಳು. ಮಗನು ಮಾತ್ರ ಇದಾವುದರ ಗೊಡವೆಯೂ ಇಲ್ಲದೆ ತನ್ನ ಸಾಧನೆಯಲ್ಲೇ ಮುಂದುವರಿದು ಕೀರ್ತಿಶಾಲಿಯಾದನು.
ಅನುಭವಿಗಳು ಹೀಗೆ ಎಚ್ಚರಿಸುತ್ತಾರೆ , “ನೀನು ನನ್ನನ್ನು ಒಮ್ಮೆ ನೋಡು, ಮತ್ತೆ ನೀನು ತಲೆಯೆತ್ತದಂತೆ ಮಾಡುತ್ತೇನೆ” ಎಂದು ಮೊಬೈಲ್ ಹೇಳುತ್ತದೆ. ಆಗ ಪುಸ್ತಕವು , “ ನೀನು ಸದಾ ನನ್ನನ್ನು ನೋಡುತ್ತಿರು, ನಿನ್ನನ್ನು ತಲೆಯೆತ್ತುವಂತೆ ಮಾಡುವೆ” ಎಂದು ಹೇಳುತ್ತದೆ. ಎಂತಹ ಅನುಸರಣೀಯ ಮಾತು! ಈ ಮಾತು ಆಬಾಲವೃದ್ಧರಾದಿಯಾಗಿ ಎಲ್ಲರಿಗೂ ಅನ್ವಯ. ನಾವು ನೀವು ಒಂದು ಕ್ಷಣ ಯೋಚಿಸೋಣವೇ?
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
“ಸ್ಕಂದ” ಕುಳ ಗ್ರಾಮ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com
*****************************************