ಜೀವನ ಸಂಭ್ರಮ : ಸಂಚಿಕೆ - 244
Tuesday, June 2, 2026
Edit
ಜೀವನ ಸಂಭ್ರಮ : ಸಂಚಿಕೆ - 244
ಲೇಖಕರು : ಎಂ.ಪಿ. ಜ್ಞಾನೇಶ್
ಶಿಕ್ಷಣಾಧಿಕಾರಿ
ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ
(ಮಧ್ಯಾಹ್ನ ಉಪಹಾರ ಯೋಜನೆ)
ಜಿಲ್ಲಾ ಪಂಚಾಯತ್ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ
ಮಕ್ಕಳೇ, ಇಂದು ದೇಹ, ಇಂದ್ರಿಯ ಮತ್ತು ಮನ ಸಾಧನ ಹೇಗೆ? ನೋಡೋಣ. ನಾವೆಲ್ಲ ಜೀವನದ ತುಂಬಾ ಗಳಿಸುತ್ತೇವೆ, ಸಂಗ್ರಹಿಸುತ್ತೇವೆ. ಅನುಭವಿಸುವುದಿಲ್ಲ. ದಿನದ ತುಂಬಾ ಸಾಮಾನು ಸಂಗ್ರಹಿಸುವುದು, ಅಡುಗೆ ಮಾಡುವುದು ಮಾಡಿದ್ದೇವೆ. ಇನ್ನೇನು ಊಟ ಮಾಡಬೇಕು ಅಷ್ಟರಲ್ಲಿ ಪ್ರಾಣ ಹೋಯಿತು. ಯಾಕೆ?. ದಿನದ ತುಂಬಾ ಸಂಗ್ರಹಿಸುವುದರಲ್ಲಿ ಅಡುಗೆ ಮಾಡುವುದರಲ್ಲೇ ಕಾಲ ಹೋಯ್ತು. ಊಟ ಮಾಡುವುದನ್ನು ಮರೆತ. ಬರಿ ಮಾಡೋದೇ ಆಯ್ತೆ ವಿನಹ ಅನುಭವಿಸುವುದು ಯಾವಾಗ?. ಸ್ವಲ್ಪವೇ ಇರಲಿ ಅನುಭವಿಸಬೇಕು. ಬಹಳ ಆದಮೇಲೆ ಅನುಭವಿಸುತ್ತೇವೆ ಅಂತ ಅಲ್ಲ. ಯಾವ ಕ್ಷಣದಲಿ?. ಎಷ್ಟು ನಮ್ಮ ಹತ್ತಿರ ಇದೆ?. ಅಷ್ಟನ್ನ ಬಳಸಿ ಅನುಭವಿಸಬೇಕು. ಅದಕ್ಕೆ ಜೀವನದ ಬೆಲೆ ಇರುತ್ತದೆ. ಇದೇ ಜೀವನದ ವೈಭವ.
ಬಹಳ ಬೆಳೆಯುಳ್ಳದ್ದು ಬದುಕು. ಯಾಕೆ?. ನಮಗೆ ಈ ಬದುಕನ್ನು ಬಳಸಲಿಕ್ಕೆ ಬರುತ್ತದೆ. ಯಾಕೆ ಬಳಸಬೇಕು?. ಅಂದರೆ ಪರಮ ಸಂತೋಷ ಅಥವಾ ಪರಮ ಶಾಂತಿ ಅನುಭವಿಸುವುದಕ್ಕೆ. "ಶರೀರಂ ಆದ್ಯಂ ಕಲು ಧರ್ಮ ಸಾಧನಂ." ಏನನ್ನಾದರೂ ಸಾಧಿಸಲು ದೇಹ ಸಮರ್ಥವಾಗಿರಬೇಕು. ಎಷ್ಟು ಸುಂದರ ಕೆಲಸ ಮಾಡುವ ದೇಹ ದೊರೆತಿದೆ ನಮಗೆ?. ಒಂದು ಪಕ್ಷಿ ಆಕಾಶದಲ್ಲಿ ಹಾರುತ್ತದೆ. ಒಂದು ಸಣ್ಣ ದೇಹ. ಒಂದೆರಡು ಎಲೆ, ಕಾಳು, ಹಣ್ಣು ತಿಂದು ಹಾಡಲು ಶುರುಮಾಡುತ್ತದೆ. ಅದರ ದ್ವನಿ ಎಷ್ಟು ಅದ್ಭುತ! ಆ ಪಕ್ಷಿಗೆ ಹೇಗೆ ಬದುಕಬೇಕು ?ಅನ್ನೋದು ಗೊತ್ತಿದೆ. ಒಂದು ಮರದಲ್ಲಿ ಒಂದು ಕೋಗಿಲೆ ಹಾಡುತ್ತಾ ಕುಳಿತಿತ್ತು. ಆ ಮರದ ಕೆಳಗೆ ಒಬ್ಬ ಸಿರಿವಂತ ಮನುಷ್ಯ ಬಂದು ಕುಳಿತ. ಹಾಡುತ್ತಿದ್ದ ಕೋಗಿಲೆಗೆ ಕೇಳಿದ "ಎಷ್ಟು ವರ್ಷದಿಂದ ಈ ಗಿಡದಲ್ಲಿ ಇದ್ದೀಯ". ಅದಕ್ಕೆ ಕೋಗಿಲೆ ಹೇಳಿತು "ಎಣಿಸಿಲ್ಲ". "ಇಲ್ಲಿದ್ದು ಏನು ಮಾಡಿದೆ? ಮನೆ ಕಟ್ಟಿದೆ ಏನು"?. ಎಂದು ಶ್ರೀಮಂತ ಕೇಳಿದ. ಆಗ ಕೋಗಿಲೆ ಹೇಳಿತು, "ಇಲ್ಲ". ಶ್ರೀಮಂತ ಕೇಳಿದ "ಏನಾದರೂ ಸಂಪಾದನೆ ಮಾಡಿದ್ದಿ ಏನು?". ಕೋಗಿಲೆ ಹೇಳಿತು "ಇಲ್ಲ". ಶ್ರೀಮಂತ ಹೇಳಿದ "ಸುಮ್ಮನೆ ಹಾಡಿಕೊಳ್ಳುತ್ತಾ ಕುಳಿತರೆ ಜೀವನ ಅಂತಾರೇನು?". ಅದಕ್ಕೆ ಕೋಗಿಲೆ ಹೇಳಿತು "ಬರೀ ಗಳಿಸುತ್ತಾ ಕುಳಿತರೆ ಜೀವನ ಅಂತಾರೇನು. ಮನೆ ಕಟ್ಟಿದ್ದಿ, ಸಂಪಾದನೆ ಮಾಡಿದ್ದಿ, ನಾನೇನು ಮಾಡಿಲ್ಲ. ಬರಿ ಹಾಡೋದಿಕ್ಕೆ ಕಲಿತಿದ್ದೇನೆ. ನೀನು ಹಾಡು ಒಂದು ಬಿಟ್ಟು ಎಲ್ಲಾ ಕಲಿತಿದ್ದೀಯಾ ಅದನ್ನು ತೆಗೆದುಕೊಂಡು ಏನು ಮಾಡೋದು" ಅಂದಿತು. "ದೇವರು ನಮಗೆ ರೆಕ್ಕೆ ಕೊಟ್ಟಿದ್ದು ಮನೆ ಕಟ್ಟುವುದಕ್ಕೆ ಅಲ್ಲ ಹಾರುವುದಕ್ಕೆ. ಧ್ವನಿ ಕೊಟ್ಟಿದ್ದು ಏನಾದರೂ ಸಂಗ್ರಹಿಸಲು ಅಲ್ಲ ಹಾಡೋದಿಕ್ಕೆ. ಹಾರೋದಕ್ಕೆ ಹಾಡೋದಕ್ಕೆ. ಮನುಷ್ಯರೇ, ನೀವು ಕೂಡಿಸುವುದು ಅದೇ, ಹೋಗೋದು ಅದೆ. ಕೂಡಿಸುವುದು ಬೇಡ ಅಂತ ಅಲ್ಲ, ಅನುಭವಿಸುವುದನ್ನು ಮರೆಯಬಾರದು. ನಮ್ಮಲ್ಲಿ ಕೆಲವರು ಬೇರೆ ಬೇರೆ ಊರಿನಲ್ಲಿ ಅದ್ಭುತ ಮನೆ ಕಟ್ಟಿದ್ದಾರೆ. ಆದರೆ ಅಲ್ಲಿ ಒಂದು ದಿವಸ ಉಳಿಯಲು ಸಮಯವಿಲ್ಲ. ಆ ಮನೆಯಲ್ಲಿ ಸ್ವಚ್ಛ ಮಾಡುವವರು ಆರಾಮಾಗಿ ಇರುತ್ತಾರೆ. ಮಾಲೀಕರು ಎಲ್ಲಿದ್ದಾರೆ?. ಮಾಲೀಕರು ವರ್ಷಕ್ಕೆ ಒಮ್ಮೆ ಬರುತ್ತಾರೆ. ಉಳಿದ ದಿವಸ ನಾವೇ ಇರೋದು ಒಂದು ರೂಪಾಯಿ ನಾವು ಖರ್ಚು ಮಾಡುವುದಿಲ್ಲ. ಅವರೇ ನಮಗೆ ಸಂಬಳ ಕೊಡುತ್ತಾರೆ ನಾವು ಇಲ್ಲಿ ಇರಲು. ಇದು ಜೀವನ. ಈ ಜೀವನವನ್ನು ಅನುಭವಿಸಲು ಬಳಸಬೇಕು. ಹೂಗಳು ಇವೆ ಯಾಕೆ?. ಆದರ ವಾಸನೆ, ರೂಪ, ಬಣ್ಣ ನೋಡಿ ಸಂತೋಷ ಪಡುವುದಕ್ಕೆ. ಹೂ ಚೆನ್ನಾಗಿದೆ ಬಹಳ ಬೆಳೆಯುಳ್ಳದ್ದು ಎಂದು ತೆಗೆದುಕೊಂಡು ಹೋಗಿ ಪೆಟ್ಟಿಗೆಯಲ್ಲಿ ಇಟ್ಟು ಬಳಿಕ ನೋಡಿದರೆ ಎಲ್ಲಾ ಬಾಡಿ ಹೋಗಿರುತ್ತದೆ. ಅನುಭವಿಸಲು ಭಾರಿ ಹೂ ಬೇಕಾಗಿಲ್ಲ. ಒಂದು ಹೂ ಸಾಕು. ದೇಹದ ತೂಕ , ಎತ್ತರ, ವಯಸ್ಸು ಮುಖ್ಯವಲ್ಲ. ಅನುಭವಿಸುವುದು ಮುಖ್ಯ.
ಅರವಿಂದ ಮಹರ್ಷಿ ಹೇಳಿದ್ದು "ನಾವು ಈ ಜಗತ್ತಿಗೆ ಬಂದಿದ್ದು, ಅನುಭವಿಸಿ ಸಂತೋಷಪಡುವುದಕ್ಕೆ ಬಂದಿದ್ದು. ಅನುಭವಿಸುವುದಕ್ಕೆ ಏನೇನು ಬೇಕು? ಅದನ್ನೆಲ್ಲ ನಿಸರ್ಗ ನಮಗೆ ಅಳವಡಿಸಿ ಕೊಟ್ಟಿದೆ. ಆದ್ದರಿಂದ ನಾವು ನಿಸರ್ಗಕ್ಕೆ ಋಣಿಯಾಗಿರಬೇಕು. ಅನುಭವಿಸಲು ಏನೇನು ಬೇಕು? ರೂಪ ಅನುಭವಿಸಲು ಕಣ್ಣು ಬೇಕು. ಶಬ್ದ ಅನುಭವಿಸಲು ಕಿವಿ ಬೇಕು, ವಾಸನೆ ಅನುಭವಿಸಲು ಮೂಗು ಬೇಕು. ರಸ ಅನುಭವಿಸಲು ನಾಲಿಗೆ ಬೇಕು. ಸ್ಪರ್ಶ ಅನುಭವಿಸಲು ಚರ್ಮ ಬೇಕು. ಹಿಡಿದು ಅನುಭವಿಸಲು ಕೈ ಬೇಕು. ನಡೆದು ಅನುಭವಿಸಲು ಕಾಲು ಬೇಕು. ಮಾಡಿ ಅನುಭವಿಸಲು ದೇಹ ಬೇಕು. ಅಷ್ಟೇ ಅಲ್ಲ ಅನುಭವಿಸಲು ಮನಸ್ಸು ಬೇಕು. ದೇಹ, ಮನಸ್ಸು ಮತ್ತು ಇಂದ್ರಿಯಗಳು ಇವೆಲ್ಲ ಅನುಭವಿಸಲು ಬೇಕಾದ ಅತ್ಯಾವಶ್ಯಕ ಸಾಧನಗಳು. ಇವುಗಳನ್ನು ನಾವು ಮಾಡಿದ್ದಲ್ಲ ನಿಸರ್ಗ ಅಳವಡಿಸಿದೆ. ಇವುಗಳನ್ನು ಬಜಾರಿನಿಂದ ತರುವುದಕ್ಕೆ ಆಗುವುದಿಲ್ಲ. ನಿಸರ್ಗ ಕೊಟ್ಟಿದ್ದ, ಅಳವಡಿಸಿದ್ದ ಈ ಸಾಧನಗಳನ್ನು ಚೆನ್ನಾಗಿ ಬಳಸಿದರೆ, ದಿವ್ಯಾನುಭೂತಿ ಆಗುತ್ತದೆ. ಇವುಗಳನ್ನು ಚೆನ್ನಾಗಿ ಸ್ವಚ್ಛವಾಗಿ ಇಟ್ಟುಕೊಳ್ಳಬೇಕು. ಏಕೆಂದರೆ ಇವುಗಳನ್ನು ಬಳಸುವುದಿದೆ. ಕಣ್ಣು ಸರಿಯಾಗಿ ಇಟ್ಟುಕೊಳ್ಳದಿದ್ದರೆ, ನೋಡಬೇಕಾದುದ್ದನ್ನು ನೋಡದೆ ಇದ್ದರೆ, ಅನುಭವವಾಗುವುದಿಲ್ಲ. ಕಿವಿಯನ್ನು ಸರಿಯಾಗಿ ಇಟ್ಟುಕೊಳ್ಳದಿದ್ದರೆ, ಸರಿಯಾಗಿ ಬಳಸದೆ ಇದ್ದರೆ ಮಧುರ ಶಬ್ದದ ಅನುಭವವಾಗುವುದಿಲ್ಲ. ಹಾಗೆ ಮೂಗು, ನಾಲಿಗೆ ಮನಸ್ಸು ಮತ್ತು ದೇಹ. ಮನಸ್ಸು ಒಳ ಸಾಧನ. ಇಂದ್ರಿಯ, ದೇಹ ಹೊರ ಸಾಧನ. ಇವು ಅಪ್ರತಿಮ, ಅಪರೂಪ. ಇವು ಮತ್ತೆ ಮತ್ತೆ ದೊರೆಯುತ್ತೆ ಅಂತ ಹೇಳಲು ಸಾಧ್ಯವಿಲ್ಲ. ಇವುಗಳನ್ನು ಚೆನ್ನಾಗಿ ಇಟ್ಟು ಕೊಂಡಿರಬೇಕು. ಏಕೆ? ನಾವು ಅನುಭವಿಸುವುದು ಇದೆ. ಇವು ಕೆಟ್ಟುಹೋದರೆ ಅನುಭವಿಸುವುದೇನು?.
ಬಸವಣ್ಣ ಹೇಳಿದ್ದು, "ಶರೀರ ದೇವಾಲಯ ಅಂತ. ಎನ್ನ ಕಾಲೇ ಕಂಬ, ಶಿರವೇ ಹೊನ್ನ ಕಳಸ ಅಂತ." ಯಾವಾಗ ಕೆಡುತ್ತದೆ?. ಮಾಡಬಾರದು ಮಾಡಿದರೆ, ಕೇಳಬಾರದ ಕೇಳಿದರೆ, ನೋಡಬಾರದ ನೋಡಿದರೆ, ನೆನೆಸಬಾರದು ನೆನೆಸಿದರೆ, ಕೆಡುತ್ತದೆ. ಇಂತಹ ಸುಂದರ ಶರೀರ ಕೆಡಿಸಬಾರದು. ದೇವಾಲಯ ಅಂದರೆ ಹೇಗೆ ಇಡಬೇಕು ಹಾಗೆ ಇಡುವುದು. ಕಂಡ ಕಂಡಲ್ಲಿ ವಸ್ತು ಚೆಲುವುದಲ್ಲ. ಶಿಸ್ತಾಗಿ, ಚೆಂದಾಗಿ ಜೋಡಿಸಿಡಬೇಕು.. ಏನು ಹಾಕಬೇಕು ಅದನ್ನೇ ಹಾಕಬೇಕು. ಹಾಕಬಾರದ್ದ ಹಾಕಬಾರದು. ಯಾವುದಕ್ಕೆ ಬಳಸಬೇಕು ಅದಕ್ಕೆ ಬಳಸಬೇಕು. ಸ್ವಚ್ಛವಾಗಿ ಇಡಬೇಕು. ದೇಹ ಯಾವ ಬಣ್ಣವಿದ್ದರೇನು. ದೇವಾಲಯ. ಕೂದಲು ಕಪ್ಪಿದ್ದರೆ ಏನು? ಕೆಂಪಿದ್ದರೆ ಏನು?. ಬಿಳಿ ಇದ್ದರೇನು?. ಕಂಡ ಕಂಡದ್ದನ್ನು ತಿನ್ನಲು ಮನಸ್ಸು ಬರುವುದಿಲ್ಲ. ನಮ್ಮ ಶರೀರದತ್ತ ನೋಡುವ ದೃಷ್ಟಿ ಬದಲಾಗಬೇಕು. ಈ ದೇಹವನ್ನು ಜೀವಕೋಶ, ಅಣು, ಪರಮಾಣುಗಳಿಂದ ನಿರ್ಮಿಸಿದೆ. ಅಷ್ಟು ಸೂಕ್ಷ್ಮ ಜೀವಕಣಗಳಿಂದ ನಿರ್ಮಿಸಿದೆ. ಅನುಪಾತ ಪ್ರಮಾಣ ಕ್ರಮವಾಗಿದೆ. ಏನಾದರೂ ತೊಂದರೆ, ಗಾಯವಾದರೆ ತಾನೇ ರಿಪೇರಿ ಮಾಡಿಕೊಳ್ಳುವ ದೇಹ. ಅಷ್ಟು ಅದ್ಭುತ. ಆದ್ದರಿಂದ ಇದನ್ನು ಸಾಧನ ಅಂತ ಪ್ರೀತಿಸೋಣ. ಅಲ್ಲವೆ ಮಕ್ಕಳೇ...?
ಶಿಕ್ಷಣಾಧಿಕಾರಿ
ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ
(ಮಧ್ಯಾಹ್ನ ಉಪಹಾರ ಯೋಜನೆ)
ಜಿಲ್ಲಾ ಪಂಚಾಯತ್ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ
*****************************************