ಸ್ಫೂರ್ತಿಯ ಮಾತುಗಳು : ಸಂಚಿಕೆ - 217
Wednesday, June 3, 2026
Edit
ಸ್ಫೂರ್ತಿಯ ಮಾತುಗಳು : ಸಂಚಿಕೆ - 217
ಲೇಖಕರು : ರಮೇಶ ಎಂ. ಬಾಯಾರು
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com
ದೇವರೆಲ್ಲಿರುವನು?
------------------------------------------
ದೇವರು ಇರುವನೇ? ಇದ್ದರೆ ಎಲ್ಲಿರುವನು? ನಮ್ಮೊಳಗಿರುವನೇ? ನಮ್ಮೊಳಗಿರದೇ ಇದ್ದರೆ ನಮ್ಮೊಳಗೆ ತರುವುದು ಹೇಗೆ ಇಂತಹ ಹಲವು ಗೊಂದಲಗಳು ನಮಗಿವೆ. ನಮ್ಮೊಳಗೆ ಭಗವಂತ ಬರಬೇಕಾದರೆ ನಮ್ಮೊಳಗೆ ಅವನಿಗೆ ಸ್ವಚ್ಛವಾದ ಸ್ಥಳವನ್ನು ಮಾಡಿ ಕೊಡಬೇಕು. ನಮ್ಮೊಳಗೆ ಬೇಡದ ಅನೇಕ ವಸ್ತುಗಳಿವೆ. ಸುಳ್ಳು, ಸಿಟ್ಟು, ಮತ್ಸರ, ಲೋಭ, ಮೋಹ, ಮೋಸ, ಕಪಟ, ಅಹಂಕಾರ, ಸೋಮಾರಿತನ ಹೀಗೆ.. ಇವುಗಳನ್ನು ಮನಸ್ಸಿನಿಂದ ಹೊರದಬ್ಬಿ ಅಂತಃಕರಣವನ್ನು ಶುದ್ಧ ಮಾಡಬೇಕು. ಪಂಚೇಂದ್ರಿಯಗಳನ್ನೂ ಹದ್ದು ಬಸ್ತಿನಲ್ಲಿಡಬೇಕು. ದೇಹ ಪ್ರೀತಿ ಕಳೆದು ದೇವ ಭಕ್ತಿ ಬೆಳೆಸಬೇಕು. ನಮ್ಮ ಗೊಂದಲಗಳಿಗೆ ಈಗ ಪರಿಹಾರ ಸಿಗುತ್ತದೆ. ದೇವರು ಸ್ವತಃ ಬಂದು ನಮ್ಮ ಹೃದಯದಲ್ಲಿ ಸದಾ ನೆಲೆಸುತ್ತಾನೆ. ಆತನಿಗೆ “ಬಾ ನನ್ನ ಆತ್ಮದಲ್ಲಿ ಇರು” ಎಂದು ನಿವೇದಿಸಬೇಕಿಲ್ಲ. ನಮ್ಮ ಬದುಕಿನ ಶೈಲಿಯೇ ಭಗವಂತನನ್ನು ನಮ್ಮ ಹತ್ತಿರಕ್ಕೆ ತರುತ್ತದೆ.
ನಮ್ಮ ಸುಕರ್ಮಗಳು, ನಿಷ್ಕಾಮ ಕರ್ಮಗಳು, ನಮ್ಮ ಸದ್ಭಾವನೆಗಳು ಭಗವಂತನನ್ನು ಸೆಳೆಯುವ ಅಯಸ್ಕಾಂತಗಳಾಗಿವೆ. ವಾಲ್ಮೀಕಿ ಮಹಾಋಷಿಯ ಪೂರ್ವಾಶ್ರಮದಲ್ಲಿ ಭಗವಂತ ಅವನ ಹತ್ತಿರವೇ ಸುಳಿಯಲಿಲ್ಲ. ಏಕೆಂದರೆ ಅವನು ಜನರನ್ನು ಕ್ರೂರವಾಗಿ ಬಡಿದು ದೋಚಿ ಬಾಳುವೆ ನಡೆಸುತ್ತಿದ್ದನು. ತನ್ನ ಕುಟುಂಬವನ್ನೂ ಇದೇ ಕುಕರ್ಮದ ಸಂಪಾದನೆಯಿಂದ ಪರಿಪಾಲಿಸಿದನು. ನಂತರದಲ್ಲಿ ಸಪ್ತರ್ಷಿಗಳ ಮಾರ್ಗದರ್ಶನದಿಂದ ಕ್ರೌರ್ಯ ತ್ಯಜಿಸಿ ಸುಧರ್ಮಿಯಾಗಿ ಪರಿವರ್ತನೆಯಾದನು. ನಂತರ ಭಗವವಂತನೇ ವಾಲ್ಮೀಕಿಗೆ ರಾಮಾಯಣದಂತಹ ಮಹಾ ಕಾವ್ಯವನ್ನು ಸಂಸ್ಕೃತದಲ್ಲಿ ರಚಿಸುವಂತಹ ಮಹಾ ಶಕ್ತಿಯನ್ನು ನೀಡಿದನು. ಸದಾಚಾರದ ಬದುಕು ನಮ್ಮನ್ನು ರೂಪಿಸುತ್ತದೆ, ಭಗವಂತನನ್ನು ಹತ್ತಿರ ತರುತ್ತದೆ. ದೇವರು ನಮ್ಮ ಜೀವನದ ವಿಧಾನದಲ್ಲಿರುವನು ಎಂಬುದು ನಿರ್ವಿವಾದದ ಮಾತು.
ಅಂದರೆ, ದೇವರನ್ನು ಹುಡುಕಲು ದೊಡ್ಡದೊಡ್ಡ ವಿಧಿ-ವಿಧಾನಗಳ ಅವಶ್ಯಕತೆ ಇಲ್ಲ. ಸತ್ಯ, ಪ್ರಾಮಾಣಿಕತೆ, ಮತ್ತು ಮನುಷ್ಯತ್ವ ಇವೇ ದೇವರ ನಿಜವಾದ ಪೂಜೆ. ನಮಗೆ ಸಾಧ್ಯವಿರುವಷ್ಟು ಒಳ್ಳೆಯ ಕೆಲಸಗಳನ್ನೇ ಮಾಡಿದರೆ ಅಷ್ಟೇ ಸಾಕು. ದೇವರು ಆ ಒಳಿತಾದ ಕಾರ್ಯಗಳಿಂದಲೇ ಪ್ರಸನ್ನನಾಗುತ್ತಾನೆ. ಇದು ಸನಾತನ ಚಿಂತನೆಯ ಸುಂದರತೆ. ಇಲ್ಲಿ ಯಾರನ್ನೂ ಬಲವಂತ ಮಾಡೋದಿಲ್ಲ, ಉತ್ತಮ ಮನುಷ್ಯರಾಗೋದು ಮುಖ್ಯ, ಆದರೆ, ಅದರ ಜೊತೆಗೆ ಭಗವಂತನನ್ನೂ ಸ್ಮರಿಸಿದರೆ ಆ ಜೀವನದ ಆನಂದಕ್ಕೆ ಮಿತಿಯೇ ಇಲ್ಲ!
ದೇವರನ್ನು ಕಾಣುವ ಅಥವಾ ಪಡೆಯುವ ಇನ್ನೊಂದು ಸಾಧನ ಕರ್ಮ ಅಥವಾ ಕಾಯಕವೆಂದು ಬಸವಣ್ಣನೇ ಹೇಳಿದ್ದಾರೆ, “ಕಾಯಕವೇ ಕೈಲಾಸʼ. ಕಾಯಕ ಮಾಡದೇ ಇರುವ ಸೋಮಾರಿಗೆ ಅಥವಾ ಉಂಡಾಡಿ ಗುಂಡನಿಗೆ ದೇವರ ದಯೆಯಿರುವುದಿಲ್ಲ. ಸೃಷ್ಟಿಸಿದವನು ಹುಲ್ಲುತಿನ್ನಿಸದೇ ಇರುವುದಿಲ್ಲ ಎಂದು ಹೇಳುವರಾದರೂ ಅದು ಸೋಮಾರಿಗೆ ಅನ್ವಯಿಸದ ಮಾತು. ಶ್ರಮದಿಂದ ಸಾಧನೆ ಮಾಡುವ ಗೈಮೆಮಾಡುವ ಸಾಧಕರ ಬೆನ್ನ ಹಿಂದೆ ಭಗವಂತನ ನೆರಳಿದ್ದೇ ಇರುತ್ತದೆ. ಕಾಯಕದೊಂದಿಗೆ ಪ್ರತಿಫಲದ ತೀವ್ರವಾದ ಬಯಕೆಯಿರಬಾರದೆಂದೂ ಹೇಳುತ್ತಾರೆ. ಕೆಲವೊಮ್ಮೆ ಕಾಯಕ ಮಾಡಿ ಏನೂ ಫಲ ದೊರೆಯದೇ ಇದ್ದರೆ ನಿರಾಸೆಯಾಗುತ್ತದೆ. ಭಗವಂತ ನಿಷ್ಕರುಣಿ ಎನ್ನುವವರೂ ಇದ್ದಾರೆ. ಆದರೆ ಕಾಯಕದ ಹಿಂದೆ ಪರಿಶ್ರಮ ಕಡಿಮೆಯಾಗಿ ಫಲದ ಆಸೆಯೇ ವಿಪುಲವಾದರೆ ಫಲವು ಕೈತಪ್ಪುತ್ತದೆ. ಕಾರ್ಯದಲ್ಲಿ ಶ್ರಮ ಮತ್ತು ಫಲಗಳ ಚಿಂತನೆಗಳೊಳಗೆ ನಮ್ಮ ಪ್ರಯತ್ನವು ವಿಭಜನೆಯಾಗುತ್ತದೆ. ಮನಸ್ಸನ್ನು ಕಾಯಕದಲ್ಲಿ ಮಾತ್ರವೇ ತೊಡಗಿಸಿದವನಿಗೆ ನಿರಾಸೆಯೇ ಆಗದು. ಫಲದ ಬಗ್ಗೆ ನಿರ್ಲಿಪ್ತಿ ಮುಖ್ಯ.
ಕೆಲವರು ಹೇಳುವುದಿದೆ. ತುಂಬಾ ಆಸ್ತಿಕನಾಗಿದ್ದರೂ ದರಿದ್ರನಾಗಿದ್ದಾನೆ. ದೇವರು ಅವನಿಗೆ ಅನುಗ್ರಹಿಸಲೇ ಇಲ್ಲ. ಜೀವನದ ಶಿಸ್ತಿಗೆ ಆಸ್ತಿಕತೆ ಬೇಕು. ಹಾಗೆಂದು ಪೂಜೆ ಮತ್ತು ಹೋಮ ದಾನಾದಿಗಳೇ ಕಾಯಕವಲ್ಲ. ಅವು ದೇವರಿಗೆ ಕೃತಜ್ಞತೆ ಸಲ್ಲಿಸಲು ಮಾಡುವ ಸಂಸ್ಕಾರವೇ ಹೊರತು ಫಲ ಉತ್ಪಾದನಾ ಮಾರ್ಗವಲ್ಲ. ಆಸ್ತಿಕ ವಿಚಾರಗಳಿಗೆ ಸಮಯದ ಮೀಸಲು ಪ್ರತೀ ದಿನ ಕೆಲವು ನಿಮಿಷಗಳಿರಬೇಕೇ ಹೊರತು ದಿನವಿಡೀ ಧ್ಯಾನ ತಪಸ್ಸು ಪೂಜೆಯೆಂದಾದರೆ ಕಾಯಕವಿಲ್ಲವೆನಿಸುತ್ತದೆ. ಆಸ್ತಿಕತೆಯಲ್ಲಿ ಕಾಯಕವು ಪ್ರಮುಖ ಭಾಗವಾಗಿದೆ. ದೇವರು ಕಾಯಕದಲ್ಲಿಯೇ ಪ್ರೀತಿಯನ್ನು ಹೊಂದಿರುವನು. ಭಗವಂತನ ಪ್ರೀತಿಗೆ ಅರ್ಹತೆ ಗಳಿಸುವುದೇ ನಮ್ಮ ಪರಮ ಧ್ಯೇಯವಾಗಿರಲಿ.
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
“ಸ್ಕಂದ” ಕುಳ ಗ್ರಾಮ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com
*****************************************