-->
ಮಕ್ಕಳಿಗೆ ರಜೆಯ ಓದು : ಸಂಚಿಕೆ - 24

ಮಕ್ಕಳಿಗೆ ರಜೆಯ ಓದು : ಸಂಚಿಕೆ - 24

ಮಕ್ಕಳಿಗೆ ರಜೆಯ ಓದು
ಸಂಚಿಕೆ - 24
ಓದು ಬರಹ : ಕೆ ಪಿ ಅಶ್ವಿನ್ ರಾವ್
ಪದವಿನಂಗಡಿ, ಬೊಂದೇಲ್
ಮಂಗಳೂರು, ದಕ್ಷಿಣಕನ್ನಡ ಜಿಲ್ಲೆ
ಮೊ : +91 94482 53815

          
ಸ್ವಲ್ಪ ಸಮಯದ ಬ್ರೇಕ್ ಬಳಿಕ ಕಳೆದ ವಾರ ನಾನು ಮತ್ತೆ ಪ್ರಾರಂಭಿಸಿದ ಮಕ್ಕಳಿಗೆ ರಜೆಯ ಓದು ಮಾಲಿಕೆ ಬಹಳಷ್ಟು ಪೋಷಕರಿಗೆ ಖುಷಿ ಕೊಟ್ಟಿದೆ. ಈಗಿನ ಮಕ್ಕಳಿಗೆ ಪುಸ್ತಕ ಓದುವುದರಲ್ಲಿ ಆಸಕ್ತಿ ಇದೆಯೋ ಗೊತ್ತಿಲ್ಲ. ಆದರೆ ತುಂಬಾ ಮಂದಿ ಪೋಷಕರು ಮಕ್ಕಳಿಗೆ ಉತ್ತಮ ಪುಸ್ತಕ ಖರೀದಿಸಿ ಕೊಡುವ ಉತ್ಸಾಹದಲ್ಲಂತೂ ಇದ್ದಾರೆ. ಇದು ಸಂತೋಷ ತರುವ ಸಂಗತಿ. ಈ ವಾರ ನಾನು ‘ವೇರ್ ದಿ ವೈಲ್ಡ್ ಥಿಂಗ್ಸ್ ಆರ್’ (Where the wild things are) ಎನ್ನುವ ಕಥೆ ಪುಸ್ತಕದ ಮಾಹಿತಿ ತಿಳಿಸಲಿರುವೆ.

‘ವೇರ್ ದಿ ವೈಲ್ಡ್ ಥಿಂಗ್ಸ್ ಆರ್’ ಎಂಬ ಸಚಿತ್ರ ಕಥಾ ಪುಸ್ತಕವು ಪ್ರಕಟವಾದದ್ದು ೧೯೬೩ರಲ್ಲಿ. ಇದರ ವಿಶೇಷತೆ ಎಂದರೆ ಈ ಪುಸ್ತಕದ ಕಥೆಗಾರ ಹಾಗೂ ಚಿತ್ರಗಾರ ಎರಡೂ ಒಂದೇ ವ್ಯಕ್ತಿ. ಅವರೇ ಮೌರಿಸ್ ಸೆಂಡಾಕ್ (Maurice Sendak). ಅವರ ಈ ಕಾಲ್ಪನಿಕ ಕಥೆ ಹಾಗೂ ಚಿತ್ರಗಳು ಮಕ್ಕಳ ಮನಗೆದ್ದಿದ್ದವು. ಮಕ್ಕಳ ಭಾವನೆಗಳನ್ನು ತಮ್ಮ ಚಿತ್ರಗಳ ಮೂಲಕ ಬಿಂಬಿಸುವಲ್ಲಿ ಮೌರಿಸ್ ಸೆಂಡಾಕ್ ಬಹಳ ಸಫಲತೆಯನ್ನು ಕಂಡರು. ಈ ಕಾರಣದಿಂದ ಈ ಪುಸ್ತಕ ಆ ಕಾಲಘಟ್ಟದ ಜನಪ್ರಿಯ ಮಕ್ಕಳ ಪುಸ್ತಕಗಳಲ್ಲಿ ಒಂದಾಗಿತ್ತು.  
ಈ ಪುಸ್ತಕವು ಅತೀ ಕಡಿಮೆ ಪದಗಳನ್ನು (ಸುಮಾರು ೩೩೮) ಹೊಂದಿದ್ದರೂ ಮಕ್ಕಳ ಮನಸ್ಸಿಗೆ ನಾಟುವಂತಹ ಕಥಾ ಹಂದರ ಹಾಗೂ ಚಿತ್ರಗಳನ್ನು ಒಳಗೊಂಡಿತ್ತು. ಇದು ಮ್ಯಾಕ್ಸ್ ಎನ್ನುವ ವಿಚಿತ್ರ ಹುಡುಗನ ಸಾಹಸಗಾಥೆಯ ಕಥಾನಕ. ಒಂದು ದಿನ ಮ್ಯಾಕ್ಸ್ ತೋಳದಂತೆ ಕಾಣಿಸುವ ಬಟ್ಟೆಯನ್ನು ಧರಿಸಿ ಮನೆಯಲ್ಲಿ ಆತನ ಅಮ್ಮನಿಗೆ ತೊಂದರೆ ನೀಡುತ್ತಾ ಇರುತ್ತಾನೆ. ಆಗ ಅವನ ಅಮ್ಮ ಆಟ ಸಾಕೆಂದು ಊಟಕ್ಕೆ ಬರಲು ಕರೆಯುತ್ತಾರೆ. ಆದರೆ ಆತ ಊಟಕ್ಕೆ ಹೋಗದೇ ಆಟವಾಡುವುದರಲ್ಲೇ ತಲ್ಲೀನನಾಗಿರುತ್ತಾನೆ. ಎಷ್ಟು ಕರೆದರೂ ಬಾರದಿದ್ದ ಮ್ಯಾಕ್ಸ್ ಅನ್ನು ಆತನ ಅಮ್ಮ ಕೋಪದಿಂದ ‘ಕಾಡು ಜೀವಿ ಅಥವಾ ಕಾಡು ಮೃಗ’ ಎಂದು ಕರೆಯುತ್ತಾಳೆ. ಅದಕ್ಕೆ ಆತನೂ ಕೋಪದಿಂದ ಹಾಗಾದರೆ ನಾನು ನಿನ್ನನ್ನೇ ತಿನ್ನುತ್ತೇನೆ ಎನ್ನುತ್ತಾನೆ. ಅದೇ ಕೋಪದಲ್ಲಿ ಊಟ ಮಾಡದೇ ಮಲಗುವ ಆತ ತನ್ನ ಕಲ್ಪನೆಯ ಲೋಕದಲ್ಲಿ ಒಂದು ನಾವೆಯಲ್ಲಿ ಕುಳಿತು ವಿಚಿತ್ರವಾದ ಕಾಡು ಮೃಗಗಳಿರುವ (Wild Things) ಪ್ರದೇಶಕ್ಕೆ ಪ್ರವೇಶಿಸುತ್ತಾನೆ. ನಂತರ ತೆರೆದುಕೊಳ್ಳುತ್ತದೆ ಒಂದು ಅದ್ಭುತ ಲೋಕ. ಕಾಡಿನಲ್ಲಿ ಮ್ಯಾಕ್ಸ್ ಗೆ ಸಿಗುವ ಜೀವಿಗಳಿಂದ ಅಪಾಯವಾಯಿತೇ? ಆತ ಅವುಗಳಿಂದ ಪಾರಾಗಿ ಮತ್ತೆ ಮನೆಗೆ ಬಂದನೇ? ಕಾಡಿನಲ್ಲಿ ಅವನ ಅನುಭವಗಳೇನು? ತಿಳಿಯಬೇಕಾದರೆ ಈ ಕಥೆ ಪುಸ್ತಕ ಓದಲೇ ಬೇಕು. ಅತೀ ಕಡಿಮೆ ಪದಗಳಲ್ಲಿ ಬಹಳ ಸೊಗಸಾದ ಚಿತ್ರಗಳ ಮೂಲಕ ಮೌರಿಸ್ ಸೆಂಡಾಕ್ ಮಕ್ಕಳ ಮನ ಮುಟ್ಟುವಂತೆ ಹೇಳಿದ್ದಾರೆ. ಇದರಿಂದ ಈ ಪುಸ್ತಕ ಕಿರಿಯರಿಗಷ್ಟೇ ಅಲ್ಲ ಹಿರಿಯರಿಗೂ ಅಚ್ಚುಮೆಚ್ಚು. 

ಸಣ್ಣ ಮಕ್ಕಳಲ್ಲಿ ಕಂಡು ಬರುವ ಅನಿರೀಕ್ಷಿತ ಕೋಪ, ಅದನ್ನು ನಿಗ್ರಹಿಸುವಲ್ಲಿನ ಅಸಫಲತೆ, ಪ್ರೀತಿ ಮುಂತಾದ ಭಾವನೆಗಳನ್ನು ಪುಟ್ಟ ಕಥೆಯ ಮೂಲಕ ವ್ಯಕ್ತಪಡಿಸಲಾಗಿದೆ. ಈ ಪುಸ್ತಕ ಓದುವುದಕ್ಕಿಂದ ಇಲ್ಲಿ ಮುದ್ರಿತವಾಗಿರುವ ಚಿತ್ರಗಳನ್ನು ನೋಡುವುದೇ ಸೊಗಸು. ಮಕ್ಕಳಿಗೆ ರಜೆಯ ಓದಿಗಾಗಿ ಈ ಪುಸ್ತಕವನ್ನು ನೀಡಬಹುದು.

ಇನ್ನಷ್ಟು ಹೊಸ ಪುಸ್ತಕಗಳ ಪರಿಚಯವನ್ನು ಮುಂದಿನ ವಾರ ನೋಡೋಣ...
ಚಿತ್ರ ಕೃಪೆ: ವೀಕಿಪೀಡಿಯಾ ಜಾಲತಾಣ
..................................... ಕೆ ಪಿ ಅಶ್ವಿನ್ ರಾವ್
ಪದವಿನಂಗಡಿ, ಬೊಂದೇಲ್
ಮಂಗಳೂರು, ದಕ್ಷಿಣಕನ್ನಡ ಜಿಲ್ಲೆ
ಮೊ : +91 94482 53815
******************************************





Ads on article

Advertise in articles 1

advertising articles 2

Advertise under the article