-->
ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 127

ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 127

ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 127
ಲೇಖಕರು : ದಿವಾಕರ ಶೆಟ್ಟಿ ಎಚ್
ನಿವೃತ್ತ ಪ್ರವಾಚಕರು
ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
Mob: 9448571203

ಪ್ರೀತಿಯ ಮಕ್ಕಳೇ... ಈ ಬಾರಿ ಮೋಡಗಳ ಬಗ್ಗೆ ಬರೆಯಬೇಕೆಂದು ವಿಷಯ ಸಂಗ್ರಹಣೆಯಲ್ಲಿ ತೊಡಗಿದ್ದೆ. ಆಗ ನನ್ನ ಹಳೆಯ ಮಿತ್ರರಾದ ಶ್ರೀಮತಿ ಸಾವಿತ್ರಿ ಭಟ್ ಅವರು ಕಳುಹಿಸಿದ ಯಾರೋ ಅವರ ಮಿತ್ರರೊಬ್ಬರು ಮಾಡಿದ ಪೋಸ್ಟ್ ನ ಪ್ರತಿಯನ್ನು ಕಳುಹಿಸಿದ್ದಾರೆ. ಶ್ರೀಮತಿ ಸಾವಿತ್ರಿ ಭಟ್ ತನ್ನ ಸೇವಾವಧಿಯ ಕೊನೆಯ ದಿನಾಂಕದ ವರೆಗೂ ಅಧ್ಯಯನ ಮತ್ತು ಅಧ್ಯಾಪನಗಳಿಗೆ ವಿರಾಮ ನೀಡದ ಶಿಕ್ಷಕರು‌. ಅವರು ಕಳುಹಿಸಿದ ಆ ಲೇಖನ ನನ್ನ 122 ನೆಯ ಸಂಚಿಕೆಗೆ ನೇರವಾಗಿ ಸಂಬಂಧಿಸಿದ್ದು. ಆದ್ದರಿಂದ ಈ ವಾರದ ಲೇಖನಕ್ಕೆ ಅದೇ ವಿಷಯ. ಹೆಚ್ಚಿನ ವಿಷಯಗಳೂ ಆ ಲೇಖನದ್ದೇ. ಇದು ನನ್ನ ಸ್ವಂತ ಲೇಖನ ಅಲ್ಲ. ಆದರೆ ನಮ್ಮ ಹಿರಿಯರು ಪ್ರಕೃತಿಯ ಅನುಸಂಧಾನದೊಂದಿಗೆ ಬದುಕಿದರು ಎಂಬ ವಿಷಯ ನಿಮ್ಮ ಗಮನಕ್ಕೆ ತರಬೇಕಾದುದು ನನ್ನ ಆದ್ಯತೆ. ಆದ್ದರಿಂದ ಈ ಅರಿವಿಗೆ ಬಾರದ ಲೇಖಕರ ಕ್ಷಮೆ ಕೋರುತ್ತೇನೆ.

ನೇರಳೆ ಹಣ್ಣು ಒಂದು ಋತುಮಾನದ ಹಣ್ಣು (seasonal fruit). ಎಪ್ರಿಲ್ ನಿಂದ ಜೂನ್ ತನಕ ಬರುತ್ತದೆ. ಇದು ರಕ್ತದಲ್ಲಿನ ಸಕ್ಕರೆ ಪ್ರಮಾಣ ಕಡಿಮೆ ಮಾಡುತ್ತದೆ ಎಂದು ಹೇಳುತ್ತಾರೆ. ಆದ್ದರಿಂದ ಮಧುಮೇಹ ಇರುವವರು (diabetics) ಇದರ ಹಣ್ಣು, ಹಣ್ಣಿನ ರಸ, ಬೀಜದ ಕಷಾಯವನ್ನು ಸೇವಿಸುವುದರಿಂದ ಮಾರುಕಟ್ಟೆಯಲ್ಲಿ ವಿಪರೀತ ಬೇಡಿಕೆ ಇದೆ. ಕಳೆದ ವರ್ಷ ತೀರಾ ಕಡಿಮೆ ಇದ್ದ ನೇರಳೆ ಹಣ್ಣಿನ ಬೆಳೆ ಈ ವರ್ಷ ವಿಪರೀತ ನೇರಳೆ ಹಣ್ಣಿನ ಫಸಲು ನೀಡಿದೆ. ಕಾಡಿನಲ್ಲಿ ಸಾಕಷ್ಟು ಬಿದ್ದಿರುವ ನೇರಳೆ ಹಣ್ಣುಗಳನ್ನು ನೋಡಿರುವ ನಮ್ಮ ಲೇಖಕರು ಅವರ ಅಜ್ಜಿಯ ಬಳಿ ಹೇಳಿದ್ದಾರಂತೆ. ಆಗ ಅವರ ಅಜ್ಜಿ ವಿಪರೀತ ನೇರಳೆ ಹಣ್ಣುಗಳಾದ ವರ್ಷ ಬರಗಾಲ ಬರುತ್ತದೆ ಎಂದು ಹೇಳಿದರಂತೆ. ಈ ರೀತಿ ವಿಪರೀತ ನೇರಳೆ ಹಣ್ಣಿನ ಫಸಲು ಬರುವುದನ್ನು ಮಾಸ್ಟಿಂಗ್ (masting) ಅಥವಾ ಬಲವಂತದ ಫಲ ಬಿಡುವಿಕೆ (stess fruiting) ಅಥವಾ ಆತ್ಮಹತ್ಯಾ ಫಲ suicidal fruiting) ಎಂದು ಜೀವಶಾಸ್ತ್ರದಲ್ಲಿ ಹೇಳುತ್ತಾರೆ. ಧ್ವಜಸ್ತಂಭದಂತೆ ಬೆಳೆಯುವ (mast) ಮರಗಳು ತಮ್ಮ ಬೆಳವಣಿಗೆಯನ್ನು ನಿಲ್ಲಿಸಿ ಸಾವಿನ ಒತ್ತಡವನ್ನು ಊಹಿಸಿ ವಿಪರೀತ ಹಣ್ಣುಗಳನ್ನು ಬಿಟ್ಟು ತಮ್ಮ ಬದುಕನ್ನು ಮುಗಿಸಿಕೊಳ್ಳುವ ಪ್ರಕ್ರಿಯೆಯೇ ಮಾಸ್ಟಿಂಗ್ ಅಥವಾ ಆತ್ಮಹತ್ಯೆ ಅಥವಾ ಒತ್ತಡದ ಫಲಬಿಡುವಿಕೆ. 

ಪ್ರತಿಯೊಂದು ಈ ಭೂಮಿಗೆ ಬರುವ ಜೈವಿಕ ಉದ್ದೇಶವೆಂದರೆ ವಂಶಾಭಿವೃದ್ಧಿ. ಅದು ಏಕ ಕೋಶಿಕ ಬ್ಯಾಕ್ಟೀರಿಯಾ ಇರಬಹುದು ಜೀವಿ ಹೌದೋ ಅಲ್ಲವೋ ಎಂದು ನಿರ್ಧರಿಸಲಾಗದ ವೈರಸ್ ಗಳಾಗಿರಬಹುದು, 300 ಅಡಿಗಳಿಗೂ ಎತ್ತರಕ್ಕೆ ಬೆಳೆಯುವ ಸಿಕೋಯಾ ಮರಗಳಾಗಿರಬಹುದು ಅಥವಾ ಜೀವ ವಿಕಾಸದ ಉತ್ತುಂಗದಲ್ಲಿರುವ ಮಾನವನಾಗಿರಬಹುದು ಎಲ್ಲರೂ ಭೂಮಿಗೆ ಬಂದಿರುವ ಉದ್ದೇಶ ಒಂದೇ ಅದು ವಂಶಾಭಿವೃದ್ಧಿ. ನಿಮಗೆ ತೀರಾ ಪರಿಚಿತವಾದ ಬಾಳೆ ಗೊನೆ ಬಿಟ್ಟು ಸಾಯುತ್ತದೆ. ಭತ್ತ, ರಾಗಿ ಜೋಳಗಳದ್ದೂ ಅದೇ ಪರಿಸ್ಥಿತಿ. ಮಾವು, ಗೇರು, ನೇರಳೆ ಮರಗಳು ಪ್ರತಿ ವರ್ಷ ಹಣ್ಣು ಬಿಡುತ್ತವೆ. ಕಾಡಿನಲ್ಲಿ ಬೆಳೆಯುವ ಬಿದಿರು 60 ವರ್ಷಗಳಾಗುವಾಗ ಹೂ ಬಿಟ್ಟು ಬಿದರಕ್ಕಿಯನ್ನು ಉತ್ಪಾದಿಸಿ ಸಾಯುತ್ತವೆ. ಬಿದಿರು ಸತ್ತರೂ ತನ್ನ ಬೀಜದ ಮೂಲಕ ತನ್ನ ಸಂತಾನವನ್ನು ಮುಂದುವರಿಸುತ್ತವೆ. ಬಿದಿರು ಹೂವಾದ ಮುಂದಿನ ವರ್ಷಗಳಲ್ಲಿ ಬರಗಾಲ ಬರುತ್ತದೆ ಎಂಬ ಒಂದು ಮಾತಿದೆ. ಆದರೆ ಬಿದಿರು ಹೂವಾಗುವುದಕ್ಕೂ ಮಳೆಗೂ ಸಂಬಂಧವಿಲ್ಲ. ಆದರೆ ಹೇರಳವಾಗಿ ದೊರೆಯುವ ಬಿದರಕ್ಕಿಯನ್ನು ತಿಂದು ಇಲಿಗಳು ವೇಗವಾಗಿ ವಂಶಾಭಿವೃದ್ಧಿ ಮಾಡುತ್ತವೆ. ಕಾಡಿನಲ್ಲಿ ಬಿದರಕ್ಕಿ ಸಿಗದೇ ಇದ್ದಾಗ ಈ‌ ಮೂಷಿಕಗಳ ಹಿಂಡು ಸಮೀಪದ ಹೊಲಗಳಿಗೆ ದಾಳಿ ಮಾಡಿ ಬತ್ತ ರಾಗಿಗಳನ್ನು ತಿಂದು ಮುಗಿಸುತ್ತವೆ. ಆದ್ದರಿಂದ ಬರಗಾಲ ಬರುತ್ತದೆ. ಇದು ಕೇವಲ ಸಾಪೇಕ್ಷ ಅಷ್ಟೇ. ನಿಖರ ಮುನ್ಸೂಚನೆ ಅಲ್ಲ. ಆದರೆ ಈ ಬಾರಿಯದ್ದು ಹಾಗಲ್ಲ ಅನ್ನಿಸುತ್ತದೆ.

ಈ ಮಾಸ್ಟಿಂಗ್ ಬರಗಾಲದ ಮುನ್ಸೂಚನೆ ಎಂಬ ಬಗ್ಗೆ ಜೀವಶಾಸ್ತ್ರದ ವಿವರಣೆ ಏನು ಎಂದು ಮುಂದಿನ ವಾರ ನೋಡೋಣ.

ಮತ್ತೊಂದು ವಿಷಯ. ಚಂದನ ವಾಹಿನಿಯಲ್ಲಿ ಥಟ್ ಅಂತ ಹೇಳಿ ಕಾರ್ಯಗಳನ್ನು ನಡೆಸಿಕೊಡುತ್ತಿದ್ದ ಡಾ. ನಾ ಸೋಮೇಶ್ವರ ಅವರು U tube ನಲ್ಲಿ ವಿಜ್ಞಾನ ವಿಷಯಗಳನ್ನು ವಿವರಿಸುತ್ತಾರೆ ಸಮಯವಿದ್ದಾಗ ಕೇಳಿ.
.................................... ದಿವಾಕರ ಶೆಟ್ಟಿ ಎಚ್
ನಿವೃತ್ತ ಪ್ರವಾಚಕರು
ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
Mob: 9448571203
*****************************************



Ads on article

Advertise in articles 1

advertising articles 2

Advertise under the article