ಮಕ್ಕಳಿಗೆ ರಜೆಯ ಓದು : ಸಂಚಿಕೆ - 23
Thursday, June 11, 2026
Edit
ಮಕ್ಕಳಿಗೆ ರಜೆಯ ಓದು
ಸಂಚಿಕೆ - 23
ಓದು ಬರಹ : ಕೆ ಪಿ ಅಶ್ವಿನ್ ರಾವ್
ಪದವಿನಂಗಡಿ, ಬೊಂದೇಲ್
ಮಂಗಳೂರು, ದಕ್ಷಿಣಕನ್ನಡ ಜಿಲ್ಲೆ
ಮೊ : +91 94482 53815
ಈ ವಾರ ನಾವು ಎರಡು ಮಕ್ಕಳ ಮನ ಗೆದ್ದ ಕಾದಂಬರಿಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ.
ಮಕ್ಕಳು ಅದೃಶ್ಯ ಹುಡುಗನನ್ನು ಯಾಕೆ ತುಂಬಾ ಪ್ರೀತಿಸುತ್ತಾರೆ ಎಂದರೆ ಈ ಪುಸ್ತಕದ ಕಥಾ ವಸ್ತು ಅಷ್ಟೊಂದು ರೋಚಕವಾಗಿದೆ ಮತ್ತು ಮಕ್ಕಳಿಗೆ ತಮ್ಮದೇ ಆದ ಕಲ್ಪನಾ ಲೋಕದಲ್ಲಿ ವಿಹರಿಸಲು ಸಶಕ್ತವಾಗಿದೆ. ಟ್ರೂಡಿ ಲುಡ್ವಿಗ್ ಅವರ “The Invisible Boy” ಎಂಬ ಪುಸ್ತಕವು ಪರಸ್ಪರ ಸಹಕಾರ, ಇತರರಲ್ಲಿ ದಯೆ ಮತ್ತು ಸಹಾಯ ಮಾಡುವ ಕೈಗಳ ಪ್ರಭಾವದ ಬಗ್ಗೆ ತುಂಬಾ ಕುತೂಹಲ ಮೂಡಿಸುವ ಶಕ್ತಿಯುತ ಕಥೆಯಾಗಿದೆ.
ಬ್ರೈನ್ ಎಂಬ ಶಾಂತ ಸ್ವಭಾವದ ಹುಡುಗನನ್ನು ಅವನ ಸಹಪಾಠಿಗಳು ಆಟಗಳಿಂದ ಮತ್ತು ಚಟುವಟಿಕೆಗಳಿಂದ ಹೊರಗಿಟ್ಟಾಗ ಅವನಿಗೆ ತಾನು ಅದೃಶ್ಯನಾದಂತೆ ಭಾಸವಾಗುತ್ತದೆ. ಆದರೆ ಹೊಸ ವಿದ್ಯಾರ್ಥಿ ಜಸ್ಟಿನ್ ಬಂದು ಆತನ ಕಥೆಯನ್ನು ಅರಿತು ಅವನ ಮೇಲೆ ಪ್ರೀತಿ ಹಾಗೂ ದಯೆ ತೋರಿಸಿದಾಗ ಎಲ್ಲವೂ ಬದಲಾಗುತ್ತಾ ಹೋಗುತ್ತದೆ. ಜಸ್ಟಿನ್‌ನ ಸ್ನೇಹದಿಂದ ಬ್ರೈನ್ ಆತ್ಮವಿಶ್ವಾಸ ಗಳಿಸುತ್ತಾನೆ ಮತ್ತು ಅವನ ಭವಿಷ್ಯ ಉಜ್ವಲವಾಗಿ ಬೆಳಗುತ್ತದೆ. ಇದರಿಂದ ಸಾಬೀತಾಗುವುದೇನೆಂದರೆ, ಅತಿ ಸಣ್ಣ ಸಹಾಯ, ಸಹಕಾರವೂ ದೊಡ್ಡ ಬದಲಾವಣೆ ತರಬಲ್ಲದು ಎಂಬುದು.
ಈ ಅದ್ಭುತ ಚಿತ್ರಗಳಿಂದ ಕೂಡಿದ ಕಾದಂಬರಿ ಕೇವಲ ಕಥೆಯಲ್ಲ, ಇದು ಇತರರಲ್ಲಿ ಸಹಾನುಭೂತಿ ಮೂಡಿಸುವ ಪಾಠವಾಗಿದೆ. ಇತರರನ್ನು ಗಮನಿಸುವುದು ಮತ್ತು ಅವರನ್ನು ತಮ್ಮ ಜೊತೆ ಸೇರಿಸಿಕೊಳ್ಳುವುದು ಎಷ್ಟು ಮುಖ್ಯ ಎಂಬುದನ್ನು ಮಕ್ಕಳಿಗೆ ಕಲಿಸುತ್ತದೆ. ದಯೆ ಮತ್ತು ಪರಸ್ಪರ ಜೊತೆಯಾಗಿರುವ ಭಾವನೆಯ ಸಂಸ್ಕೃತಿಯನ್ನು ಈ ಪುಸ್ತಕದ ಕಥಾ ವಸ್ತು ಮಕ್ಕಳಲ್ಲಿ ಬೆಳೆಸುತ್ತದೆ. ಬ್ರೈನ್ ನನ್ನು ಇತರ ಮಕ್ಕಳು ಗುರುತಿಸಲು ಶುರುವಾದಂತೆ ಕಥೆಯ ಚಿತ್ರಗಳು ಬದಲಾಗುತ್ತಾ ಹೋಗುವುದು ಈ ಕಾದಂಬರಿಗೆ ವಿಶೇಷವಾದ ಆಯಾಮವನ್ನು ನೀಡುತ್ತದೆ ಮತ್ತು ಇದನ್ನು ಇನ್ನಷ್ಟು ಪ್ರಭಾವಶಾಲಿಯಾಗಿಸುತ್ತದೆ. ಅದೃಶ್ಯ ಹುಡುಗ ಕಥಾ ಪುಸ್ತಕ ಕೇವಲ ಮಕ್ಕಳಿಗೆ ಮಾತ್ರವಲ್ಲ, ಪೋಷಕರು ಮತ್ತು ಶಿಕ್ಷಕರೂ ಓದಲೇಬೇಕಾದ ಪುಸ್ತಕವಾಗಿದೆ.
ಕುತೂಹಲಕಾರಿ ಪತ್ತೇದಾರಿ ಮಕ್ಕಳ ಕಾದಂಬರಿ ಓದಲು ಮನಸ್ಸಿದ್ದವರು ‘ಆ 36 ದಿನಗಳು’ ಎನ್ನುವ ಕಾದಂಬರಿಯನ್ನು ಆಯ್ಕೆ ಮಾಡಿಕೊಳ್ಳಬಹುದು. ಮುತ್ತಳ್ಳಿ ಎಂಬ ಹಳ್ಳಿಯ ಮಕ್ಕಳು ನಡೆಸಿದ ಸಾಹಸದ ಕತೆ ‘ಆ 36 ದಿನಗಳು!’. ಈ ಕೃತಿಯ ಕರ್ತೃ ಮತ್ತೂರು ಸುಬ್ಬಣ್ಣ. ತಮ್ಮ ಊರಿನ ರಾಮದೇವರ ಗುಡಿಯ ವಿಗ್ರಹಗಳನ್ನು ಕದ್ದವರನ್ನು ಹಿಡಿಯಲು ಪೊಲೀಸರೊಂದಿಗೆ ಕಾರ್ಯಾಚರಣೆಯಲ್ಲಿ ಭಾಗವಹಿಸುವ ಕಥಾ ವಸ್ತುವನ್ನು ಹೊಂದಿದೆ. ಕಳ್ಳತನವಾದದ್ದು ಹೇಗೆ? ಮಕ್ಕಳು ಕಾರ್ಯಾಚರಣೆ ಶುರು ಮಾಡಿದ್ದು ಹೇಗೆ? ಕೊನೆಗೆ ಕಳ್ಳರು ಸಿಗುತ್ತಾರಾ? ಎಂಬ ಕುತೂಹಲ ಕಾದಂಬರಿಯುದ್ದಕ್ಕೂ ಸಾಗುವ ಅವಧಿಯೇ ‘ಆ 36 ದಿನಗಳು’. ಹಳ್ಳಿಯ ಚಿತ್ರಣ, ಮಂಗವನ್ನಾಡಿಸುವುದು ಹೀಗೆ ಬಗೆ ಬಗೆಯ ಪಾತ್ರಗಳು ಓದುಗರನ್ನು ಸೆಳೆಯುತ್ತವೆ.
ಇನ್ನಷ್ಟು ಹೊಸ ಪುಸ್ತಕಗಳ ಪರಿಚಯವನ್ನು ಮುಂದಿನ ವಾರ ನೋಡೋಣ...
ಚಿತ್ರ ಕೃಪೆ: ಅಂತರ್ಜಾಲ ತಾಣ
ಪದವಿನಂಗಡಿ, ಬೊಂದೇಲ್
ಮಂಗಳೂರು, ದಕ್ಷಿಣಕನ್ನಡ ಜಿಲ್ಲೆ
ಮೊ : +91 94482 53815
******************************************