-->
ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 126

ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 126

ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 126
ಲೇಖಕರು : ದಿವಾಕರ ಶೆಟ್ಟಿ ಎಚ್
ನಿವೃತ್ತ ಪ್ರವಾಚಕರು
ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
Mob: 9448571203


ಪ್ರೀತಿಯ ಮಕ್ಕಳೇ... ಆಗಲೇ ಮಳೆ ಆರಂಭವಾಗಿಬಿಟ್ಟಿತು. ಜೂನ್ ಎಂಟನೆಯ ತಾರೀಕು ಎಂದರೆ ರೋಹಿಣಿ ಮಳೆ ಮುಗಿದು ಮೃಗಶಿರಾ ಮಳೆಯ ಆರಂಭ. ಈ ಬಾರಿಯ ರೋಹಿಣಿ ದೋಣಿ ಹಾಕುವಷ್ಟು ಮಳೆ ತರಲಿಲ್ಲ. ಆದರೆ ಮೃಗಶಿರಾ ಹೇಗಿರುತ್ತದೆಯೋ ನೋಡಬೇಕು. ಏಕೆಂದರೆ ಈ ಬಾರಿ ಎಲ್ ನಿನೋ ಪ್ರಭಾವ ಕಡಿಮೆಯಾಗಿದೆಯೇ ಅಥವಾ ಅದು ಸೂಪರ್ ಎಲ್ ನಿನೋ ಆಗಲಿದೆಯೇ ಎನ್ನುವ ಬಗ್ಗೆ ಹವಾಮಾನ ತಜ್ಞರು ಏನೂ ಹೇಳುತ್ತಿಲ್ಲ. ಇದಕ್ಕೆ ಕಾರಣ ಏನೆಂದರೆ ಹವಾಮಾನ ಎನ್ನುವುದು ಸರಳ ಗಣಿತ. ಅದರಲ್ಲಿ ಸಂಕೀರ್ಣವಾದ ವಿದ್ಯಮಾನಗಳಿವೆ. ಹವಾಮಾನವನ್ನು ನಿರ್ಧರಿಸುವುದು ಯಾವುದೋ ಒಂದು ಅಂಶವಲ್ಲ ಬದಲಾಗಿ ಅನೇಕ. ಆದ್ದರಿಂದ ಹವಾಮಾನ ಮುನ್ಸೂಚನೆಗಳು ಘಟಿಸದೇ ಇರುವ ಸಾಧ್ಯತೆಗಳೇ ಅಧಿಕ. 

ಹವಾಮಾನ ವಿವರಣೆ ನೀಡುವಾಗ ಈ ತಿಂಗಳು ಸರಾಸರಿ ಮಳೆ ಅಥವಾ ವಾಡಿಕೆ ಮಳೆಗಿಂತ ಇಷ್ಟು ಶೇಕಡಾ ಹೆಚ್ಚು ಅಥವಾ ಇಷ್ಟು ಕೊರತೆ ಎಂದು ಹೇಳಲಾಗುತ್ತದೆ. ಈ ಸರಾಸರಿ ಮಳೆ ಅಥವಾ ವಾಡಿಕೆ ಮಳೆ ಎಂದರೆ ಏನು ಗೊತ್ತಾ? ಇದು ಕಳೆದ 20 ವರ್ಷಗಳ ಮಳೆಯ ಸರಾಸರಿ. ಇದು ಒಂದು ತರಹ ಅಲ್ಪಕಾಲದ ನೆನಪು (short term memory) ಇದ್ದ ಹಾಗೆ. ನೀವು ಈ ವರ್ಷಕ್ಕೆ ಬಂದರೆ 2006 ರಿಂದ 2025 ರ ಅವಧಿಯಲ್ಲಿ ಬಿದ್ದ ಮಳೆಯ ಸರಾಸರಿ. ಮುಂದಿನ ವರ್ಷ ಇದು 2007 ರಿಂದ ಲೆಕ್ಕ ಹಾಕಲಾಗುತ್ತದೆ. ಈ ವರ್ಷ ಅತಿವೃಷ್ಟಿಯಾದರೆ ಮುಂದಿನ ವರ್ಷ ವಾಡಿಕೆ ಮಳೆಯ ಪ್ರಮಾಣ ಜಾಸ್ತಿಯಾಗುತ್ತದೆ. ಅದೇ ಈ ವರ್ಷ ಸೇರಿ ಕಳೆದ ನಾಲ್ಕ ವರ್ಷಗಳ ಕಾಲ ಅನಾವೃಷ್ಟಿಯಾದರೆ ಮುಂದಿನ ವರ್ಷ ವಾಡಿಕೆ ಮಳೆ ಕಡಿಮೆಯಾಗುತ್ತದೆ. ಆದ್ದರಿಂದ ವಾಡಿಕೆ ಮಳೆ ಎಂಬುದು ಕೇವಲ ಒಂದು ಹೋಲಿಕೆಯೇ ಹೊರತು ಬೀಳಬೇಕಾದ ಮಳೆಯ ಪ್ರಮಾಣ ಅಥವಾ ಮಳೆಯ ಅಗತ್ಯತೆಯ ಪ್ರತಿಫಲನವಲ್ಲ.

ಮಳೆ ನೀರು... ನೀರನ್ನು ಅಳೆಯುವುದು ಲೀಟರ್ ಗಳಲ್ಲಿಯಾದರೂ ಮಳೆಯನ್ನು ಅಳೆಯುವುದು ಸಂಟಿ ಮೀಟರ್ ಅಥವಾ ಮಿಲಿ ಮೀಟರ್ ಗಳಲ್ಲಿ. ಸೆಂಟಿಮೀಟರ್ ಉದ್ದದ ಅಥವಾ ಎತ್ತರದ ಏಕಮಾನ. ಇದು ಯಾಕೆ ಗೊತ್ತಾ? ಭೂಮಿಯ ಮೇಲೆ ಬಿದ್ದ ನೀರು ಒಂದು ಸ್ವಲ್ಪವೂ ಹರಡದೇ, ಒಂದು ಸ್ವಲ್ಪವೂ ಇಂಗದೇ ಒಂದು ಸ್ವಲ್ಪವೂ ಆವಿಯಾಗದೇ ಇದ್ದರೆ ಎಷ್ಟು ಎತ್ತರಕ್ಕೆ ನಿಲ್ಲುತ್ತದೆಯೋ ಆ ಎತ್ತರವೇ ಮಳೆಯ ಪ್ರಮಾಣ. ಇದನ್ನು ಮಳೆಯ ಮಾಪಕ (rain gauge) ಗಳಿಂದ ಅಳೆಯುತ್ತಾರೆ. ಮೊದಲು ಮಳೆಯನ್ನು ಅಳೆಯಲು ಮಳೆಯ ನೀರನ್ನು ಸಂಗ್ರಹಿಸಿ ಅದರ ಗಾತ್ರವನ್ನು ಎತ್ತರವಾಗಿ ಪರಿವರ್ತಿಸಿ ಮಳೆಯ ಪ್ರಮಾಣವನ್ನು ಹೇಳುತ್ತಿದ್ದರು. ಈಗ ಡಿಜಿಟಲ್ ಮಾಪಕಗಳು ಬಂದಿವೆ. ಕೇಂದ್ರ ಸರಕಾರ ಬೆಳೆ ವಿಮೆಯನ್ನು ಜಾರಿಗೆ ತಂದ ಮೇಲೆ ಪ್ರತೀ ಗ್ರಾಮ ಪಂಚಾಯತ್ ಹಂತದಲ್ಲಿ ಮಳೆ ಮಾಪನ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಆದರೆ ಈ ಬಿದ್ದ ಮಳೆ ಅಲ್ಲಿಯೇ ನಿಲ್ಲುವುದಿಲ್ಲ. ನೀರು ಎತ್ತರದಿಂದ ತಗ್ಗಿಗೆ ಹರಿಯುತ್ತದೆ. ಆದ್ದರಿಂದ ನಿಮ್ಮೂರಲ್ಲಿ ಬಿದ್ದ ಮಳೆ ತಗ್ಗಿಗೆ ಹರಿದು ನದಿಯನ್ನು ಸೇರಿ ಸಮುದ್ರದ ಕಡೆ ಓಡುತ್ತದೆ. ಆದ್ದರಿಂದ ಬೆಳ್ತಂಗಡಿ ಮತ್ತು ತುಂಬೆಯಲ್ಲಿ ಒಂದೇ ಪ್ರಮಾಣದ ಮಳೆಯಾದರೂ ತುಂಬೆಯಲ್ಲಿ ನೆರೆ ನೀರು ತುಂಬುತ್ತದೆ. ಅದೇ ತರಹ ಘಟ್ಟ ಪ್ರದೇಶಗಳಲ್ಲಿ ಮಳೆಯಾಗುತ್ತಿದ್ದರೆ ಸುಬ್ರಹ್ಮಣ್ಯದಲ್ಲಿ ಮಳೆ ಇಲ್ಲದೇ ಇದ್ದರೂ ನದಿ ತುಂಬಿ ಹರಿದು ಜನರನ್ನು ಕೊಚ್ಚಿಕೊಂಡು ಹೋದ ಉದಾಹರಣೆಗಳಿರುವುದು.

ಮಳೆಗಾಲದಲ್ಲಿ ಸಮುದ್ರದ ಶಬ್ದ ಬಹಳ ದೂರದ ವರೆಗೆ ಕೇಳಿಸುತ್ತದೆ. ಇದಕ್ಕೆ ಎರಡು ಕಾರಣಗಳಿವೆ. ಮೊದಲನೆಯದು ಮಳೆಗಾಲದಲ್ಲಿ ಗಾಳಿಯ ಅತಿ ವೇಗದ ಕಾರಣದಿಂದ ಸಮುದ್ರದ ಅಲೆಗಳ ವೇಗ ಮತ್ತು ಶಕ್ತಿ ಹೆಚ್ಚಿರುವುದರಿಂದ ಸಮುದ್ರದ ಅಬ್ಬರ ಜೋರು. 

ಎರಡನೆಯದು ವಾತಾವರಣದ ತೇವಾಂಶ. ವಾತಾವರಣದ ತೇವಾಂಶವನ್ನು ನಾವು ಹೇಳುವುದು ಸಾಪೇಕ್ಷವಾಗಿ. ಅಂದರೆ ಹೋಲಿಸಿ. ಪ್ರಯೋಗ ಶಾಲೆಯ ನಿಯಂತ್ರಿತ ಪರಿಸ್ಥಿತಿಯಲ್ಲಿ ಗಾಳಿ ಹಿಡಿದಿಟ್ಟುಕೊಳ್ಳಬಹುದಾದ ಗರಿಷ್ಠ ನೀರಾವಿಯ ಪ್ರಮಾಣವನ್ನು 100 ಎಂದು ಪರಿಗಣಿಸಿ ವಾತಾವರಣದ ತೇವವನ್ನು ಹೋಲಿಸುತ್ತೇವೆ. ಆದ್ದರಿಂದ ಇದು ಸಾಪೇಕ್ಷ ಆರ್ದ್ರತೆ (relative humidity). ಅಂಟಾರ್ಕ್ಟಿಕಾದ ಮೆಕ್ ಮರ್ಡೋ ಒಣ ಕಣಿವೆಗಳಲ್ಲಿ ತೇವಾಂಶ 0.3%, ಸಹರಾ ಮರುಭೂಮಿಯ ಬಿಸಿಲಿನ ದಿನಗಳಲ್ಲಿ ಇದು 20 ರಿಂದ 30%, ಹಿಮಾಲಯದ ಚಳಿಯ ದಿನಗಳಲ್ಲಿ 30 ರಿಂದ 40%, ಮತ್ತು ಸಮುದ್ರ ತೀರಗಳಲ್ಲಿ ಸರಾಸರಿ 55%- 60%. ಅದೇ ಪರ್ಷಿಯನ್ ಕೊಲ್ಲಿಯಲ್ಲಿ ಇದು ಅತ್ಯಂತ ಗರಿಷ್ಠ ಅಂದರೆ 70 ರಿಂದ 80%. ಆದ್ದರಿಂದ ಪರ್ಷಿಯನ್ ಕೊಲ್ಲಿಯಲ್ಲಿ ಬದುಕು ದುಸ್ತರ.

ಮಳೆಗಾಲದಲ್ಲಿ ಉಡುಪಿಯಲ್ಲಿ 95% ದಷ್ಟಿರುತ್ತದೆ. ಅಂದರೆ ಗಾಳಿ ಹೆಚ್ಚು ತೇವವಾಗಿರುತ್ತದೆ. ತೇವವಾದ ಗಾಳಿಯಲ್ಲಿ ಶಬ್ದದ ವೇಗ ಹೆಚ್ಚು. ಆದ್ದರಿಂದ ಸಮುದ್ರ ಮೊರೆತ ನಿಮ್ಮೂರಿನ ವರೆಗೂ ಕೇಳಿಸುತ್ತದೆ. ಹಾಗೆಯೇ ಮಳೆಗಾಲದ ಗಾಳಿಯಲ್ಲಿ ತೇವಾಂಶ ಹೆಚ್ಚಿರುವುದರಿಂದ ಬಟ್ಟೆ ಕೂಡಲೇ ಒಣಗುವುದಿಲ್ಲ. ಆದ್ದರಿಂದ ಯೂನಿಫಾರ್ಮ್ ಒಣಗಿಲ್ಲ ಎಂದು ಅಮ್ಮನ ಮೇಲೆ ಬೇಸರಿಸಬೇಡಿ. ಅದು ವೈಜ್ಞಾನಿಕ ತತ್ವ. ಬದಲಾಗಿ ಫ್ಯಾನ್ ನ ಗಾಳಿಯಡಿ ನಿಮ್ಮ ಬಟ್ಟೆ ಒಣ ಹಾಕಿ.
.................................... ದಿವಾಕರ ಶೆಟ್ಟಿ ಎಚ್
ನಿವೃತ್ತ ಪ್ರವಾಚಕರು
ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
Mob: 9448571203
*****************************************




Ads on article

Advertise in articles 1

advertising articles 2

Advertise under the article