-->
ನಿಷ್ಪಾಪಿ ಸಸ್ಯಗಳು : ಸಂಚಿಕೆ - 153

ನಿಷ್ಪಾಪಿ ಸಸ್ಯಗಳು : ಸಂಚಿಕೆ - 153

ನಿಷ್ಪಾಪಿ ಸಸ್ಯಗಳು : ಸಂಚಿಕೆ - 153
ಲೇಖಕರು: ವಿಜಯಾ ಬಿ ಶೆಟ್ಟಿ ಸಾಲೆತ್ತೂರು
ಸಹ ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ 
ಬಾಳೆಪುಣಿ (ಇರಾ), ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ

     
ಪ್ರೀತಿಯ ಮಕ್ಕಳೇ... ಹೇಗಿದ್ದೀರಿ? ಮಳೆಯ ಖುಷಿಯ ಜೊತೆ ರಜಾ ಕಾಲದಲ್ಲಿ ಓಡಾಡಿದ ನೆನಪುಗಳು ಕಚಗುಳಿಯಿಡುತ್ತಿರಬಹುದಲ್ವೆ.. ರಜಾ ಕಾಲದಲ್ಲಿ ನೀವು ಸಾಕಷ್ಟು ಸುತ್ತಾಡಿರಬೇಕಲ್ಲ? ಆವಾಗೆಲ್ಲ ರಸ್ತೆ ಬದಿಗಳಲ್ಲಿ, ರಿಕ್ಷಾ ಪಾರ್ಕ್, ಪೆಟ್ರೋಲ್ ಬಂಕ್ ಗಳ ಬಳಿ ಹೊಸದಾಗಿ ನೆಟ್ಟು ಬೆಳೆದು ಚಪ್ಪರದಂತೆ ಹರಡಿಕೊಂಡು ತಂಪಾದ ಮಾತ್ರವಲ್ಲದೆ ಆತ್ಮೀಯತೆಯಿಂದ ನೆರಳು ನೀಡುತ್ತಿರುವ ಸಣ್ಣ ಮರಗಳನ್ನು ನೋಡಿದ್ದೀರಾ? ಈ ಮರಗಳನ್ನು ಜಮೈಕಾ ಚೆರ್ರಿ, ಪನಾಮ ಬೆರ್ರಿ, ಜಾಮ್ ಮರ, ಸಿಂಗಾಪುರ್ ಚೆರ್ರಿ ಎಂದೆಲ್ಲಾ ಕರೆಯುತ್ತಾರೆ. ಇದು ಮುಟುಂಗಿಯಾ ಕ್ಯಾಲಬುರಾ (Muntingia caliabura) ಎಂಬ ಶುಭನಾಮಧೇಯದ ಮುದ್ದಿನ ಕೂಸು Muntingiaceae ಕುಟುಂಬಕ್ಕೆ ಸೇರಿದೆ.

ನಮ್ಮೂರಲ್ಲಿ ಪುಟಾಣಿಗಳಂತೆ ನಲಿದಾಡುವ ಈ ಸಣ್ಣ ಮರಗಳು ಇತರೆಡೆ 7 ರಿಂದ 12 ಮೀ ಎತ್ತರದವರೆಗೂ ಬೆಳೆಯುತ್ತವೆ. ಇದರ ಹಸಿರಾದ ಮೃದು ಎಲೆಗಳು ಸ್ವಲ್ಪ ಉದ್ದವಾಗಿ, ತುದಿ ಚೂಪಾಗಿದ್ದು ಅಂಚುಗಳು ಗರಗಸದ ಹಲ್ಲಿನಂತಿರುತ್ತವೆ. ಯಾವುದೇ ಮಣ್ಣಿನಲ್ಲಿ ನೆಟ್ಟರೂ ಬೇಜಾರು ಮಾಡಿಕೊಳ್ಳದೇ ಕಾಲೂರಿ ಕೆಲವೇ ವರ್ಷಗಳಲ್ಲಿ ಮೈದುಂಬಿಕೊಂಡು ನೆಟ್ಟವನ ಪ್ರೀತಿಗೆ, ಸಮಾಧಾನಕ್ಕೆ ಕಾರಣವಾಗುವುದೇ ಇದರ ಯಶಸ್ಸಿನ ಗುಟ್ಟು! ಭಾರತದ ಉಷ್ಣವಲಯದ ಹವಾಮಾನಕ್ಕೆ ಅತ್ಯುತ್ತಮವಾಗಿ ಹೊಂದಿಕೊಳ್ಳುತ್ತದೆ. ಮೆಕ್ಸಿಕೋ, ಮಧ್ಯ ಅಮೆರಿಕಾ, ಪೆರು, ಬೊಲಿವಿಯಗಳಿಗೆ ಸ್ಥಳೀಯವಾದ ಜಮೈಕಾ ಚೆರ್ರಿ ಎಂಬ ಸಣ್ಣ ಗಾತ್ರದ ಮರವು ಎಂತಹ ಬರಗಾಲ ಎದುರಾದರೂ ಪರಿಸರಸ್ನೇಹಿಯಾಗಿದ್ದು ಉದ್ಯಾನ, ಹೊಲ, ಮನೆ ಆವರಣವನ್ನು ಕಾಯುತ್ತದೆ! 

ಈ ನಿಷ್ಪಾಪಿ ಸಸ್ಯದ ಪ್ರಮುಖ ಆಕರ್ಷಣೆ ಚಪ್ಪರದಂತೆ ಸಮತಲದಲ್ಲಿ ಹರಡಿದ ಶಾಖೆಗಳ ಮೂಲಕ ನೀಡುವ ದಟ್ಟವಾದ ನೆರಳು ಒಂದೆಡೆಯಾದರೆ ತಿರುಳು ತುಂಬಿದ ಸಿಹಿ ರಸಭರಿತ ಪುಟಾಣಿ ಹಣ್ಣು ಇನ್ನೊಂದು ಕಾರಣವಾಗಿದೆ. ಮಾರುಕಟ್ಟೆಯಲ್ಲಿ ಸೇಬು, ದಾಳಿಂಬೆ, ಡ್ರ್ಯಾಗನ್‌ ಫ್ರುಟ್ ಗಳು ಭಾರೀ ಕ್ರಯಕ್ಕೆ ಮಾರಾಟವಾದರೂ ಅದಕಿಂತಲೂ ಉತ್ತಮವಾದ ಈ ಜಮೈಕಾ ಚೆರ್ರಿ ಎಲ್ಲೂ‌ ಕಾಣಸಿಗದು. ಆದರೆ ರಿಕ್ಷಾ‌ ಚಾಲಕರಂತಹ ಪೇಟೆಯ ಶ್ರಮಜೀವಿಗಳಿಗೆ ಈ ಹಣ್ಣಿನ ಬಗ್ಗೆ ಗೊತ್ತು. ತಕ್ಷಣಕ್ಕೆ ಹಸಿವೆಯನ್ನಾಗಲೀ, ನೀರಡಿಕೆಯನ್ನಾಗಲೀ ನಿವಾರಿಸಬಲ್ಲವು.

ಒಂದು ದಿನದ ಬಾಳಿನ ಬಿಳಿ ಬಣ್ಣದ ಐದೆಸಳಿನ ಮಧು ತುಂಬಿದ ಸಿಂಗಾರಿ ಪುಷ್ಪಗಳು ಚಿಟ್ಟೆ, ಕೀಟ, ಜೇನು ಇತ್ಯಾದಿಗಳಿಗೆ ರಸದೌತಣ ನೀಡಿದರೆ ಹಣ್ಣುಗಳು ಮಾಗಿದಾಗ ಪ್ರಕಾಶಮಾನವಾದ ಕೆಂಪು ಬಣ್ಣದಲ್ಲಿದ್ದು ನಿಸರ್ಗದ ಆಕರ್ಷಣೆಯಾಗಿದೆ. ಪಕ್ಷಿ, ಅಳಿಲು, ಬಾವಲಿಗಳು ಸದಾ ಈ ಮರದ ಸಖ್ಯದಲ್ಲೇ ಇರುತ್ತವೆ. ಹಣ್ಣುಗಳ ರಸದಲ್ಲಿ ಅದ್ದಿರುವ ಸಣ್ಣ ಬೀಜಗಳು ಇವುಗಳಿಂದ ಲಾಭ ಪಡೆಯಲು ಹೊಂಚು ಹಾಕುತ್ತಿರುತ್ತವೆ. ಈ ಜೀವಜಾಲವೇ ಬೀಜಪ್ರಸಾರದ ವಾಹಕಗಳೂ ಆಗಿರುವುದರಿಂದ ಪ್ರಕೃತಿಯ ಸೊಗಸಾದ ನೇಯ್ಗೆ ಅಂದರೆ ಕೊಡುಕೊಳ್ಳುವಿಕೆಯನ್ನಿಲ್ಲಿ ಕಾಣಬಹುದು. ವರ್ಷವಿಡೀ ಹೂ ಹಣ್ಣುಗಳಿಂದ ‌ತುಂಬಿರುವ ಈ ಸಸ್ಯದಲ್ಲಿ ಯಾವುದೇ ಕಾಲದಲ್ಲಿ ಹುಡುಕಿದರೂ ಒಂದಾದರೂ ಹಣ್ಣು ಸಿಗದಿರದು. 

ಹಣ್ಣು ತಿನ್ನಲು ಮಾತ್ರವಲ್ಲದೆ ಜಾಮ್ ತಯಾರಿಗೂ ಬಳಸುವರು. ಎಲೆಗಳು ತಲೆನೋವು, ಶೀತ, ಮಧುಮೇಹಕ್ಕೆ ಪ್ರಯೋಜನಕಾರಿ. ಮರವು ಹಗುರವಾದ ಮರಗೆಲಸಕ್ಕೆ ಹಾಗೂ ಉರುವಲಾಗಿ ಬಳಕೆಯಾದರೆ ತೊಗಟೆಯನ್ನು ಜ್ವರ ಹೊಟ್ಟೆನೋವು ಇತ್ಯಾದಿಗೆ, ಸೊಪ್ಪು ಸದೆ ಸಾವಯವ ಗೊಬ್ಬರಕ್ಕೂ ಬಳಕೆಯಾಗುತ್ತದೆ. ನಿರುಪದ್ರವಿ ಸಸ್ಯವೊಂದು ತನ್ನ ಉಳಿವಿಗಾಗಿ ಹೇಗೆ ಬಣ್ಣದಂಗಿಗಳ ಮೂಲಕ ನಿಸರ್ಗದಲ್ಲಿ ತನ್ನನ್ನು ತಾನು ರಕ್ಷಿಸಿಕೊಳ್ಳಲು ಪ್ರಯತ್ನಿಸುತ್ತದೆ ಎಂಬುವುದಕ್ಕೆ ಈ ಜಮೈಕಾ ಚೆರ್ರಿಯೊಂದು ಜೀವಂತ ಉದಾಹರಣೆಯಲ್ಲವೇ..?ನೀವೂ ಇದರ ಒಂದಾದರೂ ಗಿಡವನ್ನು ನೆಟ್ಟು ನೋಡಿ. ಮುಂದೊಂದು ದಿನ ನಿಮ್ಮ ನೆತ್ತಿಯನ್ನಿದು ತಂಪಾಗಿಸುವ ಮೂಲಕ ಕೃತಜ್ಞತೆ ಸಲ್ಲಿಸುವುದನ್ನೂ ಕಾಣುವಿರಿ. 

ನಿಷ್ಪಾಪಿ ಸಸ್ಯಗಳ ಪ್ರೀತಿಗೆ ಸೋತು ನೀವು ಯಾವುದಾದರೂ ಹೊಸ ಸಸ್ಯಗಳನ್ನು ಸಾಕುತ್ತಿರುವಿರಾದರೆ ಅಥವಾ ಗುರುತಿಸಿ ರಕ್ಷಿಸುತ್ತಿದ್ದರೆ ದಯವಿಟ್ಟು ನನ್ನ 7892587191 ನಂಬರ್ ಗೆ ತಿಳಿಸುವಿರಾ?

ಸರಿ ಮಕ್ಕಳೇ... ಮುಂದಿನ ವಾರ ಇನ್ನೊಂದು ನಿಷ್ಪಾಪಿ ಸಸ್ಯದ ಬಗ್ಗೆ ತಿಳಿಯೋಣ, ನಮಸ್ತೆ.
..................... ವಿಜಯಾ ಬಿ ಶೆಟ್ಟಿ ಸಾಲೆತ್ತೂರು
ಸಹ ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ 
ಶಾಲೆ , ಬಾಳೆಪುಣಿ (ಇರಾ)
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
Mob : +91 78925 87191
*****************************************


Ads on article

Advertise in articles 1

advertising articles 2

Advertise under the article