ಸ್ಫೂರ್ತಿಯ ಮಾತುಗಳು : ಸಂಚಿಕೆ - 219
Monday, June 15, 2026
Edit
ಸ್ಫೂರ್ತಿಯ ಮಾತುಗಳು : ಸಂಚಿಕೆ - 219
ಲೇಖಕರು : ರಮೇಶ ಎಂ. ಬಾಯಾರು
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com
ಈ ಸಾಲಿನ ಶಾಲಾರಂಭದ ಪ್ರಥಮ ವಾರದಲ್ಲಿ ನನಗೆ ವಿಶೇಷ ಕಾರ್ಯಕ್ರಮವೊಂದರಲ್ಲಿ ಭಾಗವಹಿಸುವ ಆತ್ಮೀಯ ಆಹ್ವಾನ ಬಂತು. ಈ ಕಾರ್ಯಕ್ರಮವನ್ನು ಮಂಚಿ ಕೊಳ್ನಾಡು ಸರಕಾರಿ ಪ್ರೌಢ ಶಾಲೆಯು ಸಂಘಟಿಸಿತ್ತು. ವಿದ್ಯಾರ್ಥಿಗಳು ದೀರ್ಘಾವಧಿ ರಜೆಯಿಂದ ಮರಳಿ ಶಾಲೆಗಾಗಮಿಸಿ ಶಾಲಾ ಪಠ್ಯಗಳಿಗೆ ಕಿವಿಯಾಗಲು ಸಹಜವಾಗಿಯೇ ಸಿದ್ಧರಾಗಿರುವುದಿಲ್ಲ. ಇದು ಮನಃ ಶಾಸ್ತ್ರೀಯ. ಅವರ ಔದಾಸೀನ್ಯವನ್ನು ನೀಗುವುದಕ್ಕೆಂದು ಮಂಚಿ ಕೊಳ್ನಾಡು ಪ್ರೌಢ ಶಾಲೆಯು ಹಮ್ಮಿಕೊಂಡ ವಿನೂತನ ಸಹಪಠ್ಯ ಕಾರ್ಯಕ್ರಮ “ಮಳೆ ಹಬ್ಬ”
ಮಳೆಹಬ್ಬ- ಮಳೆಗಾಲಕ್ಕೆ ಸಂಬಂಧಿತ ಕಾರ್ಯಕ್ರಮವಿರಬಹುದು, ಆಟಿ ಹಬ್ಬದಂತೆ ಹಪ್ಪಳ, ಹಲಸಿನ ಸೋಂಟೆ- ದೋಸೆ- ಗಟ್ಟಿ- ಪಾಯಸ, ಮಾವಿನ ರಸಾಯನ… ಹೀಗೆ ಬಗೆ ಬಗೆಯಾಗಿ ತಿಂಡಿ ತಿನಿಸುಗಳಿರುತ್ತವೆ ಎಂದು ಬಗೆದಿದ್ದೆ. ಆದರೆ ಪ್ರೌಢ ಶಾಲೆಗೆ ತಲುಪಿದಾಗ ನನ್ನ ಊಹೆ ಅಡಿಮೇಲಾಗಿ ನನ್ನನ್ನು ಅಚ್ಚರಿಯಲ್ಲಿ ಮುಳುಗಿಸಿತು. ಇದು ತಿಂದು ತೇಗುವ “ಆಹಾರ” ಕಾರ್ಯಕ್ರಮವಲ್ಲ, ಶೈಕ್ಷಣಿಕವಾಗಿ ಮಕ್ಕಳನ್ನು ತೊಡಗಿಸುವ “ಆಧಾರ” ಕಾರ್ಯಕ್ರಮ ಎಂದರಿತಾಗ ಪುಳಕಿತನಾದೆ.
ಮಂಚಿ ಕೊಳ್ನಾಡು ಸರಕಾರಿ ಪ್ರೌಢಶಾಲೆಯಲ್ಲಿ ಜರಗಿದ ಮಳೆ ಹಬ್ಬದ ಬಗ್ಗೆ ನನಗೆ ಸರಿಯಾದ ಚಿತ್ರಣವನ್ನು ನೀಡಿದವರು ಆ ಶಾಲಾ ಚಿತ್ರಕಲಾ ಶಿಕ್ಷಕ ಶ್ರೀಯುತ ತಾರಾನಾಥ ಕೈರಂಗಳ. ತಾರಾನಾಥರು ಕೈಯಾಡಿಸಿದ ಕಾರ್ಯಕ್ರಮವೆಂದಾಗ ಅದರಲ್ಲಿ ಹೊಸ ಚಿಂತನೆ, ಹೊಸ ಆಯಾಮ ಖಚಿತ. ಸಭಾಂಗಣದಲ್ಲಿ ಸುಮಾರು 300 ವಿದ್ಯಾರ್ಥಿಗಳು. ಏಕ ಕಾಲಕ್ಕೆ ಇವರನ್ನು ಹೇಗೆ ಸಂಭಾಳಿಸುವುದೆಂಬ ಸಣ್ಣ ನಡುಕ ಕಾರ್ಯಕ್ರಮ ನೀಡುವುದಕ್ಕೆ ಮೊದಲಿಗೆ ನನ್ನ ಅಂತರಂಗದಲ್ಲಿತ್ತು ಎನ್ನುವುದು ಸತ್ಯ. ಆದರೆ ಕಾರ್ಯಕ್ರಮ ಆರಂಭಿಸಿ ಮುಂದುವರಿದಂತೆ ನನಗೆ ಏನೂ ಸಮಸ್ಯೆಯಾಗಲಿಲ್ಲ. “ನೀರು- ಬೇರು” ಈ ವಿಷಯದಲ್ಲಿ 75 ನಿಮಿಷ ಮಾಹಿತಿ ನೀಡಿದೆ. ಅಂದು ವಿಶ್ವ ಪರಿಸರ ದಿನವೂ ಆಗಿತ್ತೆನ್ನುವುದು ನನ್ನ ವಿಷಯಕ್ಕೆ ಕಾಕತಾಳೀಯ. ಕಾರ್ಯಕ್ರಮದ ಸೂಕ್ಷ್ಮ ವರದಿಯಿಂದ ಈ ಕಾರ್ಯಕ್ರಮ ಹೇಗೆ ಮಿಂಚಿರಬಹುದೆಂಬುದನ್ನು ಅರ್ಥೈಸುವಿರೆಂದು ಭಾವಿಸಿರುವೆ.
ಶಾಲೆಗಳು ವಿದ್ಯಾರ್ಥಿ ಸ್ನೇಹಿಯಾಗಿರಬೇಕು, ಮಕ್ಕಳು ಸಂಭ್ರಮದಿಂದ ಕಲಿಕೆಯಲ್ಲಿ ತೊಡಗಬೇಕೆನ್ನುವ ಮಹತ್ವಕಾಂಕ್ಷೆ ಎಲ್ಲರಲ್ಲೂ ಇದೆ. ಬೇಸಿಗೆ ರಜೆಯ ಮಜಾವನ್ನು ಕಳೆದು ಸಪ್ಪೆ ಮೋರೆಯಲ್ಲಿ ಶಾಲೆಯ ಕಡೆಗೆ ಹೆಜ್ಜೆ ಹಾಕುವ ಮಕ್ಕಳು ಶಾಲೆಯಲ್ಲಿ ಮತ್ತೆ ನಿತ್ಯದ ಪಾಠ ಮತ್ತು ಟಿಪ್ಪಣಿಗಳಿಗೆ ಒಗ್ಗಿಕೊಳ್ಳಲು ಸ್ವಲ್ಪ ದಿನಗಳಾದರೂ ಬೇಕೆನ್ನುವುದು ಸಾಮಾನ್ಯ ಸಂಗತಿ. ಮಕ್ಕಳು ಸಂತಸದ ಕಲಿಕೆಯಲ್ಲಿ ಪಾಲ್ಗೊಳ್ಳುವಂತಾಗಬೇಕು ಮತ್ತು ಇಷ್ಟಪಟ್ಟು ಓದಿಕೊಳ್ಳುವಂತಾಗಬೇಕೆಂದು ಮಂಚಿ - ಕೊಳ್ನಾಡು ಸರಕಾರಿ ಪ್ರೌಢಶಾಲೆಯಲ್ಲಿ ಮಳೆ ಹಬ್ಬವೆನ್ನುವ ಕಲಿಕಾ ಚೈತನ್ಯ ಶಿಬಿರದ ಆಯೋಜನೆಯಾಗಿದೆ.
ಮಳೆ ಹಬ್ಬ ಕಾರ್ಯಕ್ರಮದ ವಿಶೇಷ ಅತಿಥಿಯಾಗಿ ಶಾಲಾ ಹಿರಿಯ ವಿದ್ಯಾರ್ಥಿನಿ ಶ್ರೀಮತಿ ವೀಣಾ ಸರಸ್ವತಿ ಮಾತನಾಡಿ, "ನಮ್ಮ ಜೀವನದ ವ್ಯವಸ್ಥೆಯಲ್ಲಿ ಬಾಲ್ಯದ ಶಾಲಾ ಜೀವನವೆನ್ನುವುದು ಅಮೂಲ್ಯ ಘಟ್ಟ. ಭವಿಷ್ಯವನ್ನು ನಿರ್ಮಾಣ ಮಾಡುವ ಈ ಹಂತದಲ್ಲಿ ಸಂಸ್ಕಾರ ಭರಿತ ಶಿಕ್ಷಣ ಮತ್ತು ಶಿಕ್ಷಕರ ಹಾಗೂ ಹಿರಿಯರ ಮೌಲ್ಯ ತುಂಬಿದ ಹಿತ ನುಡಿಗಳು ವ್ಯಕ್ತಿತ್ವವನ್ನು ಬೆಳೆಸುತ್ತದೆ. ಮಳೆ ಹಬ್ಬದಂತಹ ಪಠ್ಯಪೂರಕ ಶಿಬಿರಗಳು ವಿದ್ಯಾರ್ಥಿಗಳ ಕಲಿಕಾ ಚೈತನ್ಯವನ್ನು ಇಮ್ಮಡಿಗೊಳಿಸುವುದರಲ್ಲಿ ಸಂದೇಹವಿಲ್ಲ." ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾದ ಶ್ರೀ ಶಿವಶಂಕರ ರಾವ್ ಮಾತನಾಡಿ, "ಶಾಲೆಯ ವಿಶೇಷ ಕಾರ್ಯಕ್ರಮವಾದ ಮಳೆ ಹಬ್ಬವು ವಿದ್ಯಾರ್ಥಿಗಳಲ್ಲಿ ಸಂತಸ ಮತ್ತು ಸಂಭ್ರಮವನ್ನು ಸೃಷ್ಟಿಸುವುದರ ಜೊತೆಗೆ ಕಲಿಕೆಯಲ್ಲಿ ತಮ್ಮನ್ನು ಸ್ವಯಂ ಪ್ರೇರಿತವಾಗಿ ತೊಡಗಿಸಿಕೊಳ್ಳಲು ಅನುಕೂಲಕರ ವಾತಾವರಣವನ್ನು ನಿರ್ಮಿಸಿದೆ." ಎಂದರು.
ಒಟ್ಟು ಮೂರು ದಿನಗಳ ಕಾಲ ನಡೆದ ಮಳೆಹಬ್ಬ ಸಹಪಠ್ಯ ಕಾರ್ಯಕ್ರಮದಲ್ಲಿ ಶಾಲಾ ವಿದ್ಯಾರ್ಥಿಗಳೆಲ್ಲರೂ ಬಹಳ ಆಸಕ್ತಿಯಿಂದ ಭಾಗವಹಿಸಿದರು. ವಿವಿಧ ರೀತಿಯ ಜಾಗೃತಿ ಹಾಡುಗಳು, ಚಪ್ಪಾಳೆಗಳ ವೈವಿಧ್ಯತೆಗಳೊಂದಿಗೆ ಸಂಪನ್ಮೂಲ ವ್ಯಕ್ತಿಯಾದ ಮಕ್ಕಳ ರಂಗಭೂಮಿ ಕಲಾವಿದ ಕೃಷ್ಣಪ್ಪ ಬಂಬಿಲ ಮಕ್ಕಳೊಂದಿಗೆ ಮಗುವಾದರು. ಮಕ್ಕಳು ತರಗತಿಯೊಳಗೆ ಕಲಿಯ ಬೇಕಾಗಿರುವುದನ್ನೇ ಮಳೆ ಹಬ್ಬದಲ್ಲೂ ಕಲಿತರು.
ಕತ್ತಲೆ ಹಾಡು ಖ್ಯಾತಿಯ ನಾದ ಮಣಿನಾಲ್ಕೂರು ಅವರು ವಿದ್ಯಾರ್ಥಿಗಳಿಗೆ ಸಾಧನೆ ಮತ್ತು ಸಾಧ್ಯತೆಗಳ ಕುರಿತಾದ ಅರಿವಿನ ಪಯಣದ ಬುತ್ತಿಯನ್ನು ಹಂಚಿದರು. ವಿವಿಧ ರೀತಿಯ ಹಾಡುಗಳು ಹಾಗೂ ಪ್ರಸಕ್ತ ಬದುಕಿನ ಸುಂದರ ಘಟನೆಗಳನ್ನು ಹೆಣೆಯುತ್ತಾ ವಿದ್ಯಾರ್ಥಿಗಳಲ್ಲಿ ಅರಿವಿನ ಬೆಳಕನ್ನು ಚೆಲ್ಲಿದರು.
ಪರಿಸರ ತ್ಯಾಜ್ಯ ಮತ್ತು ಅದರ ನಿರ್ವಹಣೆ ಕುರಿತಾಗಿ ಹಸಿರು ದಳದ ಸಾಮಾಜಿಕ ಕಾರ್ಯಕರ್ತ ಶ್ರೀ ನಾಗರಾಜ್ ಬಜಾಲ್ ಸುಂದರವಾದ ಮಾಹಿತಿಯನ್ನು ಒದಗಿಸಿದರು. ಮನೆಯೊಳಗಿನ ಕಸವನ್ನು ವಿಲೇವಾರಿ ಮಾಡುವ ಬಗೆ ಮತ್ತು ಪರಿಸರದ ಜೊತೆಗಿನ ನಮ್ಮ ಸಂಬಂಧವನ್ನು ಸಕಾರಾತ್ಮಕವಾಗಿ ಬಲಪಡಿಸಬೇಕೆನ್ನುವ ಸಂದೇಶವನ್ನು ಅವರು ವಿದ್ಯಾರ್ಥಿಗಳಿಗೆ ನೀಡಿದರು.
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರಾದ ಶ್ರೀಯುತ ರಮೇಶ ಎಂ. ಬಾಯಾರು ಪ್ರಕೃತಿಯ ಉಳಿವಿನಲ್ಲಿ ನಮ್ಮ ಪಾತ್ರದ ಅಗತ್ಯವನ್ನು ಪ್ರತಿಬಿಂಬಿಸುವ ನೀರು - ಬೇರು ವಿಷಯದ ಕುರಿತಂತೆ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು. ಸಣ್ಣ ಸಣ್ಣ ಸುಲಭ ಉದಾಹರಣೆಗಳ ಮೂಲಕ ವಿದ್ಯಾರ್ಥಿಗಳಿಗೆ ಭೂಗರ್ಭ ಜಲ ಸಂವರ್ಧನೆ, ಜಲಮರುಪೂರಣ, ಜಲ ಸಂರಕ್ಷಣೆ, ಮಿತ ಜಲಬಳಕೆ, ಜಲ ಮರು ಬಳಕೆ ಮುಂತತಾದುವುಗಳ ವಿಧಾನ ಮತ್ತು ಮಹತ್ವಗಳನ್ನು ಪರಿಚಯಿಸಿದರು.
ಇದೇ ಸಂದರ್ಭದಲ್ಲಿ ಸಭಾ ವೇದಿಕೆಯಲ್ಲಿ ಶಾಲಾ ಹಿರಿಯ ವಿದ್ಯಾರ್ಥಿ ಹಾಗೂ ಮಾಜಿ ಸೈನಿಕರಾದ ರಮೇಶ್ ರಾವ್ ನೂಜಿಪ್ಪಾಡಿ, ಹಿರಿಯ ವಿದ್ಯಾರ್ಥಿ ಹಾಗೂ ನಿವೃತ್ತ ಶಿಕ್ಷಕರಾದ ಶ್ರೀಮತಿ ದೇವಕಿ ಎಚ್, ನಿವೃತ್ತ ಶಿಕ್ಷಕಿಯಾದ ಶ್ರೀಮತಿ ಅನುಸೂಯ ರಾವ್ ಮೊದಲಾದ ಗಣ್ಯರು ಉಪಸ್ಥಿತರಿದ್ದರು.
ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಸುಶೀಲ ಇವರ ಪ್ರಾಸ್ತಾವಿಕ ಮಾತುಗಳು, ಹಿಂದಿ ಭಾಷಾ ಶಿಕ್ಷಕಿ ಶ್ರೀಮತಿ ಶಾಂತ ಎಸ್ ಇವರಿಂದ ಸ್ವಾಗತ, ಕಲಾ ಶಿಕ್ಷಕ ಶ್ರೀ ಜಗನ್ನಾಥ್ ರವರಿಂದ ವಂದನೆ, ಚಿತ್ರಕಲಾವಿದ ತಾರಾನಾಥ ಕೈರಂಗಳ ಇವರ ಕಾರ್ಯಕ್ರಮ ಸಂಯೋಜನೆ ಮಳೆಹಬ್ಬದ ಮೆರುಗನ್ನು ಇನ್ನಷ್ಟು ದೇದಿಪ್ಯಗೊಳಿಸಿತು.
ಅಂಕಗಳು ಮತ್ತು ಕಂಠಪಾಠಗಳನ್ನು ಮೀರಿ ಮಕ್ಕಳನ್ನು ಜಾಗೃತಿಗೊಳಿಸುವ ವಿಶೇಷ ಚಿಂತನೆಯ ಫಲಸ್ವರೂಪವೇ ಮಕ್ಕಳ ಹಬ್ಬ. ಮಕ್ಕಳಲ್ಲಿ ಜೀವನ ಮೌಲ್ಯಗಳನ್ನು ತುಂಬ ಬೇಕು, ಅವರಲ್ಲಿ ಭಾವನೆಗಳು ವಿಕಾಸ ಹೊಂದಬೇಕು-ಪ್ರೀತಿಸುವ ಆದರಿಸುವ ಗೌರವಿಸುವ ಸಹಿಸುವ – ಮಕ್ಕಳಾಗಿ ಸಮಾಜಕ್ಕೆ ಹಿತಕಾರಕರಾಗಬೇಕು. ಶಿಕ್ಷಣದ ಆಶಯಗಳನ್ನು ಬೆಂಬಲಿಸುವ ಒಂದು ಉಪಕರಣವಾಗಿ ಮಳೆ ಹಬ್ಬ ಸಹಪಠ್ಯ ಕಾರ್ಯಕ್ರಮ ಮಕ್ಕಳ ಮನಸನ್ನು ಸೆರೆಹಿಡಿದಿದೆಯೆಂಬ ಸಮಾಧಾನ ಸಂಘಟಕರಿಗಿದೆ. ಎಲ್ಲಾ ಶಿಕ್ಷಣ ಸಂಸ್ಥೆಗಳೂ ಇಂತಹ ಜೀವಂತಿಕೆಯ ಕಾರ್ಯಕ್ರಮಗಳನ್ನು ನವ ನವೀನವಾಗಿ ಯಾಕೆ ಯೋಜಿಸಬಾರದು? ಸಂಘಟನೆಗೆ ಶ್ರಮವೂ ಇದೆ, ವೆಚ್ಚವೂ ಇದೆ ಖಂಡಿತ. ನಮ್ಮೊಂದಿಗೆ ಸಮಾಜದ ನೂರಾರು ಕೈಗಳಿವೆ, ಅವರ ಸಹಯೋಗವಿದೆ ಎಂಬ ವಿಶ್ವಾಸದಿಂದ ಹೆಜ್ಜೆ ಮುಂದಿಟ್ಟರೆ ಅಸಾಧ್ಯವಾದುದು ಯಾವುದೂ ಇಲ್ಲ. ನಮ್ಮೊಂದಿಗೆ ಜೊತೆಯಾಗುವ ಅಸಂಖ್ಯ ಮನಸ್ಸುಗಳು ಈ ಸಮಾಜದಲ್ಲಿವೆ. ಅವರನ್ನು ಸಮರ್ಪಕವಾಗಿ ಬಳಸೋಣ. ಮಕ್ಕಳ ಏಳ್ಗೆಯೇ ನಾಡಿನ ಏಳ್ಗೆ.
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
“ಸ್ಕಂದ” ಕುಳ ಗ್ರಾಮ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com
*****************************************