-->
ಜೀವನ ಸಂಭ್ರಮ : ಸಂಚಿಕೆ - 247

ಜೀವನ ಸಂಭ್ರಮ : ಸಂಚಿಕೆ - 247

ಜೀವನ ಸಂಭ್ರಮ : ಸಂಚಿಕೆ - 247
ಲೇಖಕರು : ಎಂ.ಪಿ. ಜ್ಞಾನೇಶ್ 
ಶಿಕ್ಷಣಾಧಿಕಾರಿ 
ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ
(ಮಧ್ಯಾಹ್ನ ಉಪಹಾರ ಯೋಜನೆ) 
ಜಿಲ್ಲಾ ಪಂಚಾಯತ್ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ 
                                                        
     
ಮಕ್ಕಳೇ, ಭಗವದ್ಗೀತೆಯ 14 ಮತ್ತು 15ನೇ ಸೂತ್ರ ಓದಿ 
"ಮಾತ್ರಾಸ್ಪರ್ಶಾಸ್ತು ಕೌಂತೇಯ ಶೀತೋಷ್ಣಸುಖದುಃಖದಾ:
ಆಗಮಾಪಾಯಿನೋ ಅನಿತ್ಯಾಂಸ್ತಾಂಸ್ತಿತಿಕ್ಷಸ್ವ ಭಾರತ"-(14)
"ಯಂ ಹಿ ನ ವ್ಯಥಯಂತ್ಯೇತೇ ಪುರುಷಂ ಪುರುಷರ್ಷಭ
ಸಮದುಃಖಸುಖಂ ದೀರಂ ಸೋ ಅಮೃತತ್ವಾಯ ಕಲ್ಪತೇ"-(15)

ಭಗವದ್ಗೀತೆಯಲ್ಲಿ 18 ಅಧ್ಯಾಯಗಳಿವೆ. ಪ್ರತಿಯೊಂದು ಅಧ್ಯಾಯ ಯೋಗ ಎಂದು ಕರೆಯುತ್ತೇವೆ. ಅರ್ಜುನನ ವಿಷಾದ ಯೋಗ, ಸಾಂಖ್ಯಯೋಗ, ಕರ್ಮ ಯೋಗ, ಸನ್ಯಾಸ ಯೋಗ. ಹೀಗೆ ಪ್ರತಿಯೊಂದು ಅಧ್ಯಾಯಕ್ಕೆ ಯೋಗ ಎನ್ನುವರು. ಇಡೀ ಗ್ರಂಥ ಯೋಗದ ಗ್ರಂಥ. ಯೋಗ ಅಂದರೆ ಏನು?. ಯೋಗ ಅಂದರೆ ಚಿತ್ತದ ಸ್ಥಿರತೆ, ಮನದ ನಿಶ್ಚಲತೆ. ಉದಾಹರಣೆಗೆ ಇಲ್ಲೊಂದು ಹೂವು ಮೊಗ್ಗು ಇದೆ. ಇದನ್ನು ಅಲುಗಾಡಿಸಿದರೆ ಅದು ಆಯೋಗ. ಅಲುಗಾಟ ನಿಂತು ನಿಶ್ಚಲವಾದರೆ ಯೋಗ. ಈ ಮೊಗ್ಗು ಮಲ್ಲಿಗೆಯದು. ಇದು ಮೊಗ್ಗು ಆದುದರಿಂದ ಸ್ಥಿರತೆ ಇಲ್ಲ. ಇದು ಅರಳುವ ಪ್ರಯತ್ನ ನಡೆಸಿದೆ. ಒಂದು ಗಂಟೆ, ಎರಡು ಗಂಟೆ, ಮೂರು ಗಂಟೆ ನಂತರ ಇದು ಹೀಗೆ ಇರುವುದಿಲ್ಲ. ಇದು ಅರಳುತ್ತದೆ. ಅರಳುವ ಕ್ರಿಯೆ ನಮಗೆ ಈ ಕ್ಷಣಕ್ಕೆ ಕಾಣಿಸದಿದ್ದರೂ ಅರಳುವ ಕ್ರಿಯೆ ಸಾಗಿದೆ. ಅದು ಚಲಿಸುತ್ತಿದೆ. ಹೀಗೆ ಚಲಿಸುವುದಕ್ಕೆ ಕಾಲದೊಂದಿಗೆ ಚಲನೆ ಮತ್ತು ದೇಶದೊಂದಿಗೆ ಚಲನೆ ಎನ್ನುವರು. ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಚಲಿಸಿದರೆ ದೇಶದೊಂದಿಗೆ ಚಲನೆ, ಸ್ಥಾನಾಂತರ ಚಲನೆ ಎನ್ನುವರು. ಕಾಲದೊಂದಿಗೆ ಆಗುವ ಬದಲಾವಣೆಗೆ ಕಾಲದೊಂದಿಗೆ ಚಲನೆ ಎನ್ನುವರು. ಸ್ಥಾನದಲ್ಲಿ ಬದಲಾಗದಿದ್ದರೆ ಸ್ಥಾನ ಯೋಗ. ಕಾಲದಲ್ಲಿ ಬದಲಾಗದಿದ್ದರೆ ಕಾಲ ಯೋಗ. ಮೊಗ್ಗು ಹೂವಾಗಬೇಕಾದರೆ ಪ್ರತಿಕ್ಷಣ ಬದಲಾಗಬೇಕು. ಒಂದು ಕ್ಷಣದಲ್ಲಿ ಮೊಗ್ಗು ಹೂವಾಗುವುದಿಲ್ಲ. ಪ್ರತಿಕ್ಷಣ ನಿಧಾನವಾಗಿ ನಿಧಾನವಾಗಿ ಬದಲಾಗುತ್ತದೆ. ಇದು ನಮ್ಮ ಕಣ್ಣಿಗೆ ಕಾಣುವುದಿಲ್ಲ. 

ಯೋಗ ಅಂದರೆ ನಿಲ್ಲುವುದು. ಇನ್ನೊಂದು ಅರ್ಥ ಗಳಿಸಿದರೆ, ದೊರಕಿದರೆ ಯೋಗ ಎನ್ನುವರು. ವಿದ್ಯೆ ದೊರೆತರೆ ವಿದ್ಯಾ ಯೋಗ, ಕೆಲಸ ದೊರೆತರೆ ಕೆಲಸ ಯೋಗ, ಮುಂತಾದವುಗಳು. ಅದೇ ರೀತಿ ಮನಸ್ಸು ಚಲಿಸದೆ ಒಂದೇ ಕಡೆ ನಿಂತರೆ ಅದಕ್ಕೆ ಮನಯೋಗ ಎನ್ನುವರು. ಮನಸ್ಸು ಕೂಡ ಕಾಲದೊಂದಿಗೆ ದೇಶದೊಂದಿಗೆ ಚಲಿಸುತ್ತದೆ. ಅದು ಹಾಗೆ ಚಲಿಸದೆ ನಿಂತರೆ ಯೋಗ ಎನ್ನುವರು. ಯಾವಾಗ ಮನಸ್ಸು ಯೋಗಗೊಳ್ಳುತ್ತದೆಯೋ ಆಗ ವಸ್ತು ದರ್ಶನ ಮನಸ್ಸಿಗೆ ಆಗುತ್ತದೆ. ಸ್ಪಷ್ಟ ದರ್ಶನವಾಗಬೇಕಾದರೆ ಮನಸ್ಸು ಆ ಕಡೆ ಈ ಕಡೆ ಹರಿಯಬಾರದು. ಕೆಲವು ಕ್ಷಣ ಆ ವಸ್ತುವಿನಲ್ಲಿ ಮನಸ್ಸು ನಿಂತರೆ ಆ ಕ್ಷಣಕ್ಕೆ ಆ ವಸ್ತುವಿನ ಜ್ಞಾನ ದರ್ಶನ ಉಂಟಾಗುತ್ತದೆ. 

ಜ್ಞಾನ ಉಂಟಾಗಬೇಕಾದರೆ ಮನಸ್ಸು ಯೋಗಗೊಳ್ಳಬೇಕು. ಎಲ್ಲಿ ಯೋಗಗೊಳ್ಳಬೇಕು?. ಯಾವ ವಸ್ತುವಿನ ಜ್ಞಾನ ಆಗಬೇಕೊ ಅದರಲ್ಲಿ ಯೋಗಗೊಳ್ಳಬೇಕು, ಅಂದರೆ ಮನಸ್ಸು ಅದರಲ್ಲಿ ನಿಲ್ಲಬೇಕು. ಯೋಗಗೊಳ್ಳಬೇಕಾದರೆ ಮನಸ್ಸು ನಿಲ್ಲಬೇಕು. ಮನಸ್ಸು ನಿಂತರೆ ಜ್ಞಾನ ಉಂಟಾಗುತ್ತದೆ. ಕನ್ನಡಿ ಚಲಿಸುತ್ತಾ ಇದ್ದರೆ ಮುಖ ಸ್ಪಷ್ಟವಾಗಿ ಕಾಣುವುದಿಲ್ಲ. ಮುಖದ ಸ್ಪಷ್ಟ ಚಿತ್ರಣ ಸಿಗಬೇಕಾದರೆ ಕನ್ನಡಿ ಚಲನೆ ನಿಲ್ಲಬೇಕು. ನೀರಿನಲ್ಲಿ ಅಲೆ ಏಳುತ್ತಿದ್ದರೆ ಮುಖ ಸರಿಯಾಗಿ ಕಾಣುವುದಿಲ್ಲ. ಹಾಗೆ ವಸ್ತು ಜ್ಞಾನ ಆಗಬೇಕಾದರೆ ಆ ವಸ್ತುವಿನಲ್ಲಿ ಮನ ನಿಲ್ಲಬೇಕು. ಮನ ನಿಲ್ಲಿಸುವ ಕ್ರಿಯೆಗೆ ಯೋಗ ಸಾಧನ ಎನ್ನುವರು. ಕೇಳುವ ಶಬ್ದದಲ್ಲಿ ಮನ ನಿಂತರೆ ಶಬ್ದಯೋಗ. ಆದ್ದರಿಂದ ಶಬ್ದದ ದರ್ಶನ ಉಂಟಾಗುತ್ತದೆ. ಕಿವಿ ಇದೆ ಅಂತ ಹೇಳಿದ್ದೆಲ್ಲ ಕೇಳಿಸುವುದಿಲ್ಲ. ಬುದ್ಧಿ ಇದೆ ಅಂತ ತಿಳಿದು ಹೇಳಿದರೆ, ಹೇಳಿದ್ದೆಲ್ಲ ತಿಳಿಯೋದಿಲ್ಲ. ಯಾವಾಗ ಕಿವಿಯನ್ನು ಪ್ರವೇಶಿಸಿದ ಶಬ್ದದ ಮೇಲೆ ಮನಸ್ಸು ನಿಲ್ಲುತ್ತದೊ ಆಗ ಶಬ್ದದ ಜ್ಞಾನವಾಗುತ್ತದೆ. ಇಲ್ಲದಿದ್ದರೆ ಶಬ್ದದ ಜ್ಞಾನವಾಗುವುದಿಲ್ಲ. ಮನಸ್ಸು ಹರಿದಾಡುತ್ತಿತ್ತು ಎಂದರೆ ಶಬ್ದದ ಜ್ಞಾನ ಆಗುವುದಿಲ್ಲ. ಈಗ ನಾನೇನೋ ಹೇಳುತ್ತಾ ಇದ್ದೀನಿ ಅಂತ ಭಾವಿಸಿ. ನಿಮ್ಮ ಮನಸ್ಸು ಈ ಕ್ಷಣದಲ್ಲಿ ಮನೆಗೊ, ಹೊಲಕ್ಕೊ, ಅಂಗಡಿಗೊ ಹೋಗಿತ್ತು ಅಂದರೆ ಅದು ಹೇಗೆ ಕೇಳಿಸುತ್ತದೆ. ಕೇಳಿಸಿದರೂ ಸಹಿತ ಅದು ಹೇಗೆ ತಿಳಿಯುತ್ತದೆ?. ತಿಳಿಯುವುದಿಲ್ಲ. ವಸ್ತುವಿನ ಬಗ್ಗೆ ತಿಳಿಯಬೇಕಾದರೆ, ವಸ್ತು ದರ್ಶನವಾಗಬೇಕಿತ್ತು ಅಂತ ಆದರೆ, ಮನಸ್ಸು ಆ ಶಬ್ದದ ಮೇಲೆ ನಿಲ್ಲಬೇಕು. ಹೀಗೆ ವಸ್ತುವಿನಲ್ಲಿ ಮನಸ್ಸು ಹೋಗಿ ನಿಲ್ಲುವುದಕ್ಕೆ ಯೋಗ ಎನ್ನುವರು. ವಿಷಯದ ಸಮೀಪ ಮನಸ್ಸು ಹೋಗಿ ನಿಂತರೆ ವಿಷಯ ಯೋಗ. ಆ ಬಳಿಕ ಆತ್ಮದ ಬಳಿ ಹೋಗಿ ಮನಸ್ಸು ನಿಂತರೆ ಆತ್ಮಯೋಗವಾಗುತ್ತದೆ. 

14ನೇ ಮಂತ್ರಕ್ಕೆ ಬರೋಣ "ಮಾತ್ರಾ" ಅಂದರೆ ಮನಸ್ಸು. ಮನಸ್ಸು ಸ್ವತಂತ್ರವಾಗಿಯೂ ಕೆಲಸ ಮಾಡುತ್ತದೆ ಹಾಗೂ ಇಂದ್ರಿಯಗಳ ಕೂಡ ಕೆಲಸ ಮಾಡುತ್ತದೆ. ಕಿವಿಯ ಕೂಡ ಕೆಲಸ ಮಾಡಿ ಶಬ್ದ ತಿಳಿಯುತ್ತದೆ. ಚರ್ಮದ ಕೂಡ ಕೆಲಸ ಮಾಡಿ ಸ್ಪರ್ಶ ತಿಳಿಯುತ್ತದೆ. ಕಣ್ಣಿನ ಕೂಡ ಕೆಲಸ ಮಾಡಿ ರೂಪ ತಿಳಿಯುತ್ತದೆ. ನಾಲಿಗೆಯ ಕೂಡ ಕೆಲಸ ಮಾಡಿ ರಸ ತಿಳಿಯುತ್ತದೆ. ಮೂಗಿನೊಂದಿಗೆ ಕೆಲಸ ಮಾಡಿ ಗಂಧ ತಿಳಿಯುತ್ತದೆ. ಮನಸ್ಸು ಕಿವಿಯೊಂದಿಗೆ ಯೋಗಗೊಂಡಾಗ ಶಬ್ದ ದರ್ಶನ, ಮನಸ್ಸು ಚರ್ಮದೊಂದಿಗೆ ಯೋಗಗೊಂಡಾಗ ಸ್ಪರ್ಶ ದರ್ಶನ, ಮನಸ್ಸು ಕಣ್ಣಿನೊಂದಿಗೆ ಯೋಗಗೊಂಡಾಗ ರೂಪದರ್ಶನ, ಮನಸ್ಸು ರಸದೊಂದಿಗೆ ಯೋಗೊಂಡಾಗ ರಸದರ್ಶನ, ಮನಸ್ಸು ಮೂಗಿನೊಂದಿಗೆ ಯೋಗಗೊಂಡಾಗ ಗಂಧದರ್ಶನ ಉಂಟಾಗುತ್ತದೆ. ಇವುಗಳಿಗೆ ವಿಷಯಗಳು ಎನ್ನುವರು. ಶಬ್ದ, ಸ್ಪರ್ಶ, ರೂಪ, ರಸ ಮತ್ತು ಗಂಧ ಇವು ಐದು ವಿಷಯಗಳು. ಇವಕ್ಕೆ ಪಂಚ ವಿಷಯ ಎನ್ನುವರು. ಪಂಚ ವಿಷಯಗಳ ಒಳಗೆ ಮನಸ್ಸು ತಲ್ಲೀನವಾಯಿತು ಅಂದರೆ ಪ್ರಾಪಂಚಿಕ ಎನ್ನುವರು. ಪ್ರಪಂಚ ಮಾಡುತ್ತೀರಿ ಅಂದರೆ ಮದುವೆಯಾಗಿ ಹೆಂಡತಿ ಮಕ್ಕಳೊಂದಿಗೆ ಇರುವುದಲ್ಲ. ಈ 5 ವಿಷಯದಲ್ಲಿ ಮಗ್ನವಾಗುವುದು. ಪ್ರಾಪಂಚಿಕ ಹೆಂಡತಿ ಮಕ್ಕಳು ಇರಬಹುದು ಇರದೇ ಇರಬಹುದು. ಐದು ವಿಷಯಗಳಲ್ಲಿ ಮನಸ್ಸು ತನ್ಮಯ ಇದ್ದರೆ ಪ್ರಾಪಂಚಿಕರು. ಇಲ್ಲದಿದ್ದರೆ ಸನ್ಯಾಸಿಗಳು. ಯಾವಾಗ ಮನಸ್ಸಿನಲ್ಲಿ ಎಲ್ಲಾ ತ್ಯಾಗ ಮಾಡಿ ಮನ ನಿಲ್ಲುತ್ತೋ ಆಗ ಸನ್ಯಾಸಿ. ಮನಸ್ಸು, ಇಂದ್ರಿಯ ಕೂಡಿದ್ದನ್ನು "ಮಾತ್ರ" ಎನ್ನುವರು. ಈ ಮನಸ್ಸು, ಇಂದ್ರಿಯಗಳ ಮೂಲಕ ವಸ್ತುಗಳ ಸ್ಪರ್ಶ ಮಾಡುತ್ತದೆ. ಆಗ ಅದು ಸುಖ ಅನ್ನಿಸಬಹುದು. ಏಕೆಂದರೆ ಅದು ಹಿತವಾಗಿದೆ. ಹೂವು ಸೌಂದರ್ಯವಾಗಿತ್ತು ಅಂದರೆ ಸ್ಪರ್ಶ ಹಿತವಾಗಿತ್ತು ಅಂದರೆ ಸುಖ ಅನಿಸುತ್ತದೆ. ಆಗ ಸುಖದ ಬೆನ್ನತ್ತಿ ಮನಸ್ಸು ಹರಿಯುತ್ತದೆ.

ಚಳಿಗಾಲದಲ್ಲಿ ಶೀತ ಇತ್ತು ದುಃಖ ಅನಿಸುತ್ತದೆ. ಉಷ್ಣ ಇತ್ತು ಸ್ವಲ್ಪ ಸುಖ ಅನಿಸುತ್ತದೆ. ಹೀಗೆ ಒಂದೊಂದು ವಸ್ತು ಹಿತವಾಗಿತ್ತು ಅನಿಸಿದರೆ ಸುಖ ಅನಿಸುತ್ತೆ. ಒಂದು ವಸ್ತು ಅಹಿತವಾಗಿದ್ದರೆ ದುಃಖ ಭಾವ ತಯಾರಾಗುತ್ತದೆ. ಮನಸ್ಸು ಇಂದ್ರಿಯಗಳ ಮೂಲಕ ಸ್ಪರ್ಶ ಮಾಡಿದಾಗ ಸುಖ ಪಡುಯುತ್ತೆ ಇಲ್ಲ ದುಃಖ ಪಡೆಯುತ್ತದೆ. ಸುಖ ದುಃಖ ವಸ್ತುವಿನಿಂದ ಬರುವುದಿಲ್ಲ. ವಸ್ತುವಿನ ಮನಸ್ಸಿನ ಸಂಪರ್ಕದಿಂದ ಬರುತ್ತದೆ. ಮನಸ್ಸು ಸುಖ ನಿರ್ಮಾಣ ಮಾಡುತ್ತದೆ ಹಾಗೆ ಮನಸ್ಸು ದುಃಖವನ್ನು ನಿರ್ಮಾಣ ಮಾಡುತ್ತದೆ. ವಸ್ತುಗಳಲ್ಲಿ ಸುಖವಿಲ್ಲ ಆದರೆ ಸುಖಗೊಳಿಸುವುದು ಮನಸ್ಸು. ಉದಾಹರಣೆಗೆ ಚಳಿಗಾಲದಲ್ಲಿ ಚಳಿ ತಂಪು ನೀಡುತ್ತದೆ. ಈ ಚಳಿ ದುಃಖ ಮಾಡುತ್ತದೆ. ಅದೇ ಬೇಸಿಗೆ ಕಾಲದಲ್ಲಿ ಆ ತಂಪು ಹಿತ ನೀಡುತ್ತದೆ. ಅದು ಸುಖ ನೀಡುತ್ತದೆ. ಸೀತಾದೇವಿಯನ್ನು ರಾಮ ಮಿಥಿಲಾ ನಗರದಲ್ಲಿ ಜನಕ ರಾಜನ ಆಸ್ಥಾನದಲ್ಲಿ ಕಂಡಾಗ ಎಂತಹ ಆನಂದ ರಾಮನಿಗೆ. ಕಣ್ಣು ಮನಸ್ಸು ಸ್ಪರ್ಶ ಮಾಡಿತ್ತು. ರಾಮ ಹುಚ್ಚಾಗಿದ್ದನು. ಸೀತೆಯ ಸೌಂದರ್ಯ ನೋಡಿ ಹುಚ್ಚಾಗಿದ್ದನು. ಅಷ್ಟು ಒಳಗೆ ಸಂತೋಷದ ತೆರೆಯಾಡಿತ್ತು. ಅದೇ ರಾಮಾಯಣದ ಯುದ್ಧದ ನಂತರ ಸೀತೆಯನ್ನು ನೋಡಿದಾಗ ಸಂತೋಷ ಅಲ್ಲ ಸಂಶಯ ಬಂದಿತ್ತು ರಾಮನಿಗೆ. ರಾಮನಿಗಾಗಿ ಹಗಲು ರಾತ್ರಿ ಕಾಯುತ್ತಾ ಯಾವುದೇ ತಪ್ಪು ಮಾಡದೆ ರಾಮನಿಗಾಗಿ ಮಗ್ನಳಾಗಿದ್ದ ಸೀತೆ ಕಂಡಾಗ ಸಂತೋಷ ಅಲ್ಲ ಸಂಶಯ ಬಂದಿತ್ತು. ಸುಖ ಆಗಲಿಲ್ಲ. ಒಂದು ವೇಳೆ ಸೀತಾದೇವಿಯ ದರ್ಶನವೇ ಸುಖ ಆಗಿತ್ತು ಅಂದರೆ ಸುಖ ಆಗಬೇಕಿತ್ತು ಆಗಲಿಲ್ಲ. ನೀನು ಶುದ್ಧ ಅಂತ ನಾನು ಹೇಗೆ ತಿಳಿದುಕೊಳ್ಳಬೇಕು ಅಂದನು ರಾಮ. ಆತನಿಗೆ ಸಂಶಯ ಬಂದಿತ್ತು. ಅದೇ ಸೀತಾದೇವಿ ಅದೇ ಮುಗ್ಧ ಭಾವ ಅಷ್ಟೇ ಸೌಂದರ್ಯ ಒಳಗೆ ರಾಮ ಪ್ರೇಮ ತುಂಬಿತು ಇಂಥ ಸೀತಾದೇವಿ ಹೇಗಿದ್ದಾಳೆ ಹಾಗೆ ಇದ್ದಾಳೆ ಆದರೆ ರಾಮನ ದೃಷ್ಟಿ ಬದಲಾಗಿತ್ತು. 

ಮುಂದೆ ಕೃಷ್ಣ ಹೇಳುತ್ತಾನೆ.. ಅರ್ಜುನ, ಸುಖಗಳು ಬರುತ್ತವೆ. ಸುಖಗಳು ಹೋಗುತ್ತವೆ. ಯಾರ ಜೀವನವೇ ಆಗಲಿ ಕಾಯಂ ಸುಖ ಇದೆಯೇನು?. ಅದೇ ರೀತಿ ದುಃಖ ಬಂದು ಕಾಯಂ ಇದೆಯೇನು?. ಇಲ್ಲ. ಕೆಲವು ಕಾಲ ಸುಖವಾಸ ಮಾಡುತ್ತದೆ. ಕೆಲವು ಕಾಲ ದುಃಖ ವಾಸಮಾಡುತ್ತದೆ. ತುಂಬಿದ ಕೆರೆ ಬಾವಿ ತುಂಬಿದಂತಿರುವುದೇ?. ಬಂದ ಸಂಬಳ ಹಾಗೆ ಇರುತ್ತದೆಯೇನು?. ಇಲ್ಲ ದಿನಾದಿನಾ ಸ್ವಲ್ಪ ಸ್ವಲ್ಪ ಖಾಲಿಯಾಗಿ ಕೊನೆಗೆ ಇರುವುದಿಲ್ಲ. ಕೃಷ್ಣ ಅರ್ಜುನನಿಗೆ ಹೇಳಿದ, ಈ ಸುಖ ದುಃಖದ ಮೇಲೆ ಭರವಸೆ ಇಡಬೇಡ. ಇದು ಬರ್ತದೆ, ಹೋಗುತ್ತದೆ. ಕಾಯಂ ಇರುವುದಿಲ್ಲ. ತುಂಬಿದಂಗೆ ಆಗುತ್ತದೆ ಖಾಲಿ ಆಗುತ್ತದೆ. ಸುಖ ಮನಸ್ಸಿನಲ್ಲಿ ತುಂಬಿದಂಗೆ ಆಗುತ್ತದೆ ಖಾಯಂ ಇರುವುದಿಲ್ಲ. ದುಃಖ ಮನಸ್ಸಿನಲ್ಲಿ ತುಂಬಿ ಇದ್ದಂಗೆ ಆಗುತ್ತದೆ ಅದು ಖಾಯಂ ಇರುವುದಿಲ್ಲ. ಎಲ್ಲಾ ಬರ್ತದೆ ಹೋಗುತ್ತದೆ (ಆಗಮ ಅಪಾಯಿನಾ ಹ). ಇವು ಯಾರ ಅನುಮತಿ ಕೇಳುವುದಿಲ್ಲ. ಸುಮ್ಮನೆ ಬರ್ತದೆ. ಸುಮ್ಮನೆ ಹೋಗುತ್ತದೆ. ಯಾರು ಯಾರಿಗೆ ಮನಸ್ಸಿದೆ ಅವರಿಗೆಲ್ಲ ಸುಖ ಇದೆ, ದುಃಖ ಇದೆ. ಇಂತಹವರಿಗೆ ಮಾತ್ರ ಅಂತ ಇಲ್ಲ. ಹೋಳಿಗೆ ಊಟ ಮಾಡಲು ಕುಳಿತಿದ್ದಾನೆ. ಹೋಳಿಗೆ ತಿನ್ನುತ್ತಿದ್ದಾನೆ. ಸುಖ ಅನ್ನಿಸುತ್ತಿದೆ. ಆ ಸಂದರ್ಭದಲ್ಲಿ ಪತ್ನಿ ಹೇಳಿದಳು. ಸಾಲಗಾರ ಹಣ ಕೇಳುವುದಕ್ಕೆ ಬಂದಿದ್ದ. ಒಂದು ಗಂಟೆ ಬಿಟ್ಟು ಬರುವುದಾಗಿ ಹೇಳಿ ಹೋಗಿದ್ದಾನೆ ಅಂದಳು. ತಕ್ಷಣ ಹೋಳಿಗೆ ರುಚಿ ಕಡಿಮೆ ಆಯಿತು. ಹೋಳಿಗೆ ರುಚಿ ಆಗಬೇಕಾದರೆ ಮನಸ್ಸು ಯೋಗಗೊಳ್ಳಬೇಕು. ಶ್ರೀಮಂತರಿರಲಿ ಬಡವರಿರಲಿ ಬರುವ ಸುಖ ಖಾಯಂ ಅಲ್ಲ ಹಾಗೆ ದುಃಖವು ಖಾಯಂ ಅಲ್ಲ. ಸುಖ ದುಃಖ ವಸ್ತುವಿನಲ್ಲಿ ಇಲ್ಲ. ಅದು ಮನಸ್ಸಿನಲ್ಲಿದೆ. ಮನಸ್ಸು ಯಾವ ದೃಷ್ಟಿಯಲ್ಲಿ ಯಾವ ಸ್ಥಿತಿಯಲ್ಲಿ ಸ್ಪರ್ಶಿಸುತ್ತದೆ ಆದರೆ ಮೇಲೆ ಸುಖ ದುಃಖ ಅವಲಂಬಿಸಿದೆ. ಪ್ರೇಮದ ಮನಸ್ಸು ವಸ್ತು ಸ್ಪರ್ಧಿಸಿದರೆ ಸುಖ. ದ್ವೇಷದ ಮನಸ್ಸು ವಸ್ತು ಸ್ಪರ್ಧಿಸಿದರೆ ದುಃಖ. ಸಂಶಯದ ಮನಸ್ಸು ವಸ್ತು ಸ್ಪರ್ಧಿಸಿದರೆ ಕೂಡ ದುಃಖದ ಅನುಭವವಾಗುತ್ತದೆ. ಅದು ದೃಷ್ಟಿ ಮತ್ತು ಸ್ಪರ್ಶ ಮಾಡುವಾಗಿರುವ ಭಾವ ಅವಲಂಬಿಸಿದೆ. ಆದ್ದರಿಂದ ಸುಖ ಬಂದಾಗ ಸುಖ ಮೆಚ್ಚಿ, ದುಃಖ ಬಂದಾಗ ದುಃಖ ಟೀಕಿಸಿ ಇರಬೇಕಾಗಿಲ್ಲ. ಸುಖ ಬಂದಾಗ ಸುಖ ಅನುಭವ, ದುಃಖ ಬಂದಾಗ ದುಃಖ ಅನುಭವ ಅನುಭವಿಸುವುದು. ಯಾವುದೇ ಮಾಟದಿಂದ ದುಃಖ ಹೋಗಲ್ಲ. ಅದಕ್ಕಾಗಿ ಕೃಷ್ಣ , ಅರ್ಜುನನಿಗೆ ಹೇಳಿದ ತಾನ್ ತಿತಿಕ್ಷತ್ವ ಭಾರತ. ಭಾರತ ಅಂದರೆ ಅರ್ಜುನ. ತಿತಿಕ್ಷತ್ವ ಎಂದರೆ ತಡೆದುಕೋ. ಕೃಷ್ಣ, ಅರ್ಜುನನಿಗೆ ಹೇಳಿದ್ದು ಸುಖಾನೇ ಬರಲಿ ದುಃಖನೇ ಬರಲಿ ತಡೆದುಕೊ. ಏಕೆಂದರೆ ಅದು ಖಾಯಂ ಇರುವುದಿಲ್ಲ. ಮನೆಯಲ್ಲಿ ಅತ್ತೆ ಬಹಳ ತೊಂದರೆ ಹೇಳಿದಳು ಕೊಡುತ್ತಾಳೆ ಅಂತ ತಾಯಿ ಬಳಿ ಮಗಳು. ಅನುಭವಿ ತಾಯಿ ಹೇಳಿದಳು ತಡೆದುಕೊ ಅತ್ತೆ ಕಾಯಂ ಇರುವುದಿಲ್ಲ. ತಡೆದುಕೊಳ್ಳುತ್ತಾ ಮುಂದೆ ಅತ್ತೆಯಾಗುವುದು ಅದೆ ಅಂತ ಹೇಳಿದಳು. ನಾಳೆ ಸುಖ ಬಂದರೂ ತಡೆದುಕೋ ಅದು ಖಾಯಂ ಅಲ್ಲ, ಹುಚ್ಚೆದ್ದು ಕುಣಿಯಬೇಡ. ದುಃಖ ಬಂದಾಗ ತಾಪಮಾಡಿ ಕೊಳ್ಳಬೇಡ. ತಡೆದುಕೋ ಹೀಗೆ ತೆಗೆದುಕೊಳ್ಳುವುದರಿಂದ ಸುಖದ ಅನುಭವ ದುಃಖದ ಅನುಭವ ಮನಸ್ಸನ್ನು ರೂಪಿಸಿ ಮುಂದೆ ದೊಡ್ಡ ಶರಣ ಮಹಾತ್ಮನಾಗುತ್ತೀಯಾ ಅಂದನು ಕೃಷ್ಣ. 

15ನೇ ಸೂತ್ರದಲ್ಲಿ ದೀರ ಅನ್ನುವ ಶಬ್ದ ಬಂದಿದೆ. ಅರ್ಜುನ ನೀನು ಪುರುಷರಲ್ಲಿ ಶೂರ. ತಡೆದುಕೊಳ್ಳುವವರು ಶೂರರೇ ವಿನಹ ಹೇಡಿಗಳಲ್ಲ. ಹೇಡಿಗಳಿಗೆ ತಡೆಯಲು ಆಗುವುದಿಲ್ಲ. ನಮಗೆ ಸಿಟ್ಟು ಬರ್ತದೆ, ಮೈಯಲ್ಲಿ ತ್ರಾಣವಿಲ್ಲ ಮನಸ್ಸಿನಾಗೆ ಶಕ್ತಿ ಇಲ್ಲ. ನಾವು ಅಶಕ್ತರಾಗಿರುವುದರಿಂದ ತಡೆದುಕೊಳ್ಳಲು ಆಗುವುದಿಲ್ಲ. ಬಲಿಷ್ಠ ಮಾತ್ರ ತಡೆದುಕೊಳ್ಳಲು ಸಾಧ್ಯ. ಅರ್ಜುನ ನೀನು ವೀರ, ಸಬಲ ಆದುದರಿಂದ ತಡೆದುಕೊಳ್ಳುತ್ತೀಯಾ. ಶಕ್ತಿ ತಡೆದುಕೊಳ್ಳುವಲ್ಲಿ ಪ್ರದರ್ಶನವಾಗಬೇಕು ವಿನಃ ಹೊಡೆಯೋದಕ್ಕಲ್ಲ. ಈಗ ನಾನು ಸಣ್ಣ ಹುಡುಗನಿಗೆ ಹೊಡೆಯೋದು ಆಗುವುದಿಲ್ಲವೇನು?. ಆಗುತ್ತದೆ ಆ ಹುಡುಗ ಹೇಳುತ್ತಾನೆ ನೀನು ದೊಡ್ಡವ ಇದ್ದೀಯ, ಶಕ್ತಿ ಇದೆ, ಅದಕ್ಕೆ ಹೊಡೆಯುತ್ತಿ. ಅದರರ್ಥ ನನಗೆ ಶಕ್ತಿ ಬಂದಿದ್ದರೆ ನೋಡಿಕೊಳ್ಳುತ್ತಿದ್ದೆ ಅಂತ ಅರ್ಥ. ತಡೆದುಕೊಳ್ಳುವುದರಲ್ಲಿ ಪುರುಷತ್ವ ಇದೆ. ಈ ಸುಖ ದುಃಖ ಯಾರ ಮನಸ್ಸನ್ನು ಅಸ್ತವ್ಯಸ್ತಗೊಳಿಸುವುದಿಲ್ಲವೊ ಅವರೇ ಧೀರರು. ದೀರರು ಅಂದರೆ ಜಾಣರು (ದೀ-ಬುದ್ದಿ, ರ-ರಮಿಸು) ಹೊಡೆಯುವವರಲ್ಲ. ಸುಖ ದುಃಖ ಕಂಗೆಡಿಸದವರೇ ಧೀರರು. ಅವರು ಸಮ ದುಃಖ ಸಮ ಸುಖವಿರುತ್ತಾರೆ. ಅವರೇ ಮುಕ್ತರಾಗುತ್ತಾರೆ. ಅಲ್ಲವೆ ಮಕ್ಕಳೇ.
......................................... ಎಂ.ಪಿ. ಜ್ಞಾನೇಶ್ 
ಶಿಕ್ಷಣಾಧಿಕಾರಿ 
ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ
(ಮಧ್ಯಾಹ್ನ ಉಪಹಾರ ಯೋಜನೆ) 
ಜಿಲ್ಲಾ ಪಂಚಾಯತ್ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ 
*****************************************


Ads on article

Advertise in articles 1

advertising articles 2

Advertise under the article