-->
ಸ್ಫೂರ್ತಿಯ ಮಾತುಗಳು : ಸಂಚಿಕೆ - 218

ಸ್ಫೂರ್ತಿಯ ಮಾತುಗಳು : ಸಂಚಿಕೆ - 218

ಸ್ಫೂರ್ತಿಯ ಮಾತುಗಳು : ಸಂಚಿಕೆ - 218
ಲೇಖಕರು : ರಮೇಶ ಎಂ. ಬಾಯಾರು 
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com 
                    
        
ಅವಲಕ್ಕಿ –ಪವವಲ್ಕಿ
ಕಾಂಚನ-ಮಿಣ ಮಿಣ 
ಡಾಂ ಡೂಂ- ಠಸ್ ಪುಸ್
ಕೊಯ್ಂ ಕೊಟರ್ 
ಮಕ್ಕಳು ಚಕ್ಕಳ ಬಕ್ಖಳ ಕುಳಿತು ಕೈಗಳನ್ನು ಅಂಗಾತ ಮತ್ತು ಕವುಚಿ ಆಟವಾಡುತ್ತಾ ಹಾಡುವ ಜನಪದ ಹಾಡಿದು. ಬಹಳ ಸರಳ ಹಾಡು. ಈ ಹಾಡಿನಲ್ಲಿ ಮೇಲ್ನೋಟದಲ್ಲಿ ಯಾವುದೇ ಗಂಭೀರತೆ ಕಾಣದು. ಕೇವಲ ಪ್ರಾಸ ಮತ್ತು ಕರ್ಣರಮ್ಯತೆ ಮಾತ್ರ ಗೋಚರಿಸುತ್ತದೆ. ಆದರೆ ನಮ್ಮ ಜನಪದರು ಇಂತಹ ಹಾಡುಗಳೊಳಗೆ ಬದುಕನ್ನು ಹೆಣೆದಿರುವುದು ಅವರ ಭಾಷಾ ಬಲ, ಸಾಹಿತ್ಯ ಜ್ಞಾನದ ಹಿರಿಮೆಗೆ ಸಾಕ್ಷಿ.

ಅವಲಕ್ಕಿ ಬಹಳ ತೆಳ್ಳಗೆ ಹಗುರವಾದ ಪೌಷ್ಟಿಕ ಆಹಾರ. ಬಹಳ ಖುಷಿ ನೀಡುವ ಆಹಾರ. ದೋಸೆಗೂ ಆಗುತ್ತದೆ, ಪಂಚ ಕಜ್ಜಾಯಕ್ಕೂ ಸೈ. ಕೈಗೂ ಸೈ ಕಾಲಿಗೂ ಸೈ ಎಂಬಂತೆ ಇರುವವರು ಮಕ್ಕಳು. ಅವರನ್ನು ಯಾವ ರೀತಿಯಲ್ಲೂ ಬಾಗಿಸಬಹುದು(ರೂಪಿಸಬಹುದು). ಗಿಡವಾಗಿ ಬಗ್ಗುತ್ತದೆ ಆದರೆ ಮರವಾದದ್ದನ್ನು ಬಾಗಿಸಲಾಗದು. ಎಳೆಯ ಮಕ್ಕಳು ಬಾಗುವುದರ ಜೊತೆಗೆ ಹಿರಿಯರನ್ನೂ ಅವರತ್ತ ಸೆಳೆಯುತ್ತಾರೆ (ಬಾಗಿಸುತ್ತಾರೆ). ದೊಡ್ಡವರಾದ ಮೇಲೆ ಅವರು ಬಾಗುವುದಿಲ್ಲ. ಬಗ್ಗಿಸುವ ಪ್ರಯತ್ನ ಮಾಡುತ್ತಾರೆ. ಅದಕ್ಕೇ ಹೇಳುವುದು ಮಕ್ಕಳು ಅವಲಕ್ಕಿ ಹಾಗೆ. ಉಸುಲಿಗೂ ಅಗುತ್ತದೆ, ಉಪ್ಪುಕರಿಗೂ ಆದೀತು, ಮಿಕ್ಸರಿಗೂ ಬೇಕು. ಕುಚೇಲ ತಂದ ಅವಲಕ್ಕಿಯನ್ನು ಕೃಷ್ಣ ಬಾಚಿ ಬಾಚಿ ತಿಂದನಂತೆ. ಇದು ಅವಲಕ್ಕಿಯ ಮಹತ್ವ. 

ಸರಿ ಸುಮಾರು ಬದುಕಿನ ಕಾಲು ಭಾಗ ಹೀಗೆಯೇ ಕಳೆಯುತ್ತದೆ. ಪಾವು ಎಂದರೆ ಕಾಲು. ಜೀವನದ ಕಾಲು ಭಾಗವೆಂದರೆ ಶಂಕರಾಚಾರ್ಯರದು ಎಂಟು ವರ್ಷ. ಶಿವಾಚಾರ್ಯ ಸ್ವಾಮೀಜಿಯವರದ್ದು ಇಪ್ಪತ್ತೈದು ವರ್ಷ. ಒಂದು ಮಧ್ಯಮ ಭಾಗವಾಗಿ ಪರಿಗಣಿಸಿದರೆ ಹದಿನೆಂಟು ಅಥವಾ ಅದರ ಆಸು ಪಾಸು. ಜೀವನದ ಕಾಲು ಭಾಗ ಯಾವುದೇ ಹೊಣೆಗಾರಿಕೆಯಿರದೆ ಎಲ್ಲರಿಗೂ ಸಂತಸ ನೀಡುತ್ತಾ ಸ್ವಯಂ ಆನಂದಾನುಭೂತಿಯಿಂದಿರುವ ಹದಿಹರೆಯದ ಕಾಲ. ಖರ್ಚಿಗೆ ಹೆತ್ತವರು ಇದ್ದಾರೆ ಎನ್ನುವ ಸುಲಭದ ಕಾಲ. ಕಾಲು ಬಾಗದ ಜೀವನದ ನಂತರ ಹೇಗಿದೆಯೆಂದರೆ ಕಾಂಚನ ಮಿಣ ಮಿಣ ಎನ್ನಲಾಗಿದೆ.

ಹದಿನೆಂಟು ದಾಟಿದ ನಂತರ ಹಂತ ಹಂತವಾಗಿ ಉದ್ಯೋಗದತ್ತ ಸರಿಯುತ್ತಾ ಬದುಕಿನ ಹೊಸ ಪಥದತ್ತ ಸಾಗುತ್ತೇವೆ. ಕೆಲಸ ಅಥವಾ ಉದ್ಯಮ ಹಣ ಕಾಸನ್ನು ತರುತ್ತದೆ. ಅದೇ ಮಿಣ ಮಿಣ. ಸಂಪಾದನೆಗೆ ಸರಿಯಾಗಿ ಬದುಕು ಏರು ಪೇರುಗಳನ್ನು ಕಾಣುತ್ತದೆ. ಕೆಲವರಿಗೆ ಕಾರು, ಇನ್ನೂ ಕೆಲವರಿಗೆ ಬೈಕು, ಇನ್ನೂ ಕೆಲವರಿಗೆ ಸ್ಕೂಟರ್, ಬಡವರಿಗೆ ಸೈಕಲು ಅಥವಾ ನಡಿಗೆ. ಹೀಗೆ ನಮ್ಮಲ್ಲಿ ಮಿಣ ಮಿಣವಾಗುವುದರ ಆಧಾರದಲ್ಲಿ ಬದುಕಿನ ನಡಿಗೆಯಿರುತ್ತದೆ. ಜನಾರ್ದನ ರೆಡ್ಡಿ ಹೆಲಿಕಾಪ್ಟರ್ ಇಟ್ಟುಕೊಂಡಿದ್ದಾರೆ. ಮನೆ ಇದೆ. ಕಾರು ಇದೆ. ಸಂಪಾದನೆಯಿದೆಯೆನ್ನುವಾಗ ಢಾಮ್ ಢೂಮ್ ಆರಂಭ.

ಢೂಂ ಢಾಂ ಎಂದರೆ ಮದುವೆ. ಎಷ್ಟೋ ಕನ್ಯಾಪಿತೃಗಳು ಬರುತ್ತಾರೆ. ಕನ್ಯಾ ದಾನವನ್ನು ನೀಡುವ ಮಾತು ಆಡುತ್ತಾರೆ. ವರೋಪಚಾರದ ದೊಡ್ಡ ಕೊಡುಗೆಯನ್ನೂ ನೀಡುತ್ತಾರೆ. ಢಾಂ ಢೂಮ್ ಮದುವೆಯೂ ಆಯಿತು. 

ಈಗ ಟೆನ್ಶನ್ ಆರಂಭವಾಗುತ್ತದೆ. ಪತ್ನಿ ಗರ್ಭೀಣಿ. ಆವಳ ಆರೈಕೆ, ಹುಟ್ಟಿದ ಮಗುವಿನ ಲಾಲನೆ ಪಾಲನೆ, ಆರೋಗ್ಯ, ಶಿಕ್ಷಣ, ಮೂಲ ಅಗತ್ಯಗಳ ಪೂರೈಕೆ, ಅಗತ್ಯ ಮಾರ್ಗದರ್ಶನ... ಹೀಗೆ ಒಂದರ ಮೇಲೊಂದು ಹೊರೆಗಳಿಂದ ಟೆನ್ಶನ್. ಈ ಎಲ್ಲಾ ಟೆನ್ಶನ್ ಗಳಿಂದ ಹೊರೆಗಳು ಬರುವಾಗ ಜೀವನ ಠುಸ್ ಪುಸ್ ಆಗುತ್ತದೆ.

ಹೆಂಡತಿ, ಮಕ್ಕಳು, ಮುಂದೆ ಮೊಮ್ಮಕ್ಕಳೂ ಆಗುತ್ತಾರೆ. ಹಿಂದೆ ಬಾಗುತ್ತಿದ್ದ ಮಕ್ಕಳು ಈಗ ಬಾಗುವುದಿಲ್ಲ. ಹೆತ್ತವರನ್ನೂ ಅವರು ಬಗ್ಗಿಸುವ ಪ್ರಯತ್ನ ಮಾಡುತ್ತಾರೆ. ಅಷ್ಟರಲ್ಲಿ ಸೊಸೆಯದೋ ಅಳಿಯನದೋ “ಗೃಹ ಪ್ರವೇಶ” ನಡೆಯುತ್ತದೆ. ಬಂದವರು ಮತ್ತು ಮಕ್ಕಳು ಹೆತ್ತವರನ್ನು ಬಾಯಿ ಮುಚ್ಚಿ “ಮನೆಯ ಮೂಲೆಯಲ್ಲಿ ಕುಳಿತುಕೋ” ಎನ್ನಬಹುದು, ಮನೆಯಿಂದ ಹೊರಗೆ ಕಳುಹಿಸುವ ಏರ್ಪಾಟುಗಳಿಗೆ ವೇದಿಕೆ ಸಿದ್ಧಮಾಡಬಹುದು. ಅವರು ಕೊಟ್ಟರೆ ತಿಂಡಿ, ಇಲ್ದೇ ಇದ್ದರೆ ಉಪವಾಸ. ದೇಹದಲ್ಲಿ ಶಕ್ತಿ ಕಡಿಮೆಯಾಗುತ್ತದೆ. ಅನಾರೋಗ್ಯದ ಸಮಸ್ಯೆ ಎದುರಾಗುತ್ತದೆ. ಔಷಧಿಗೆ ಹಣವಿಲ್ಲ. ಸಂಪಾದಿಸಲು ಶಕ್ತಿಯಿಲ್ಲ. ಕಾಯಿಲೆಯಿಂದ ಸಂಕಟ ಪಡುತ್ತಾ ಮನೆಯ ಮೂಲೆಯಲ್ಲಿ ಬಿದ್ದಿರಬೇಕು. ಮಾತನಾಡಲು ಮಕ್ಕಳೂ ಬರುವುದಿಲ್ಲ. ಮಕ್ಕಳೇ ಮೊಮ್ಮಕ್ಕಳನ್ನಂತೂ ದೂರವಿರಿಸುವ ಎಲ್ಲಾ ಏರ್ಪಾಟುಗಳನ್ನು ಮಾಡುತ್ತಾರೆ. ಮದುಕ ಮುದುಕಿಯರು ಮನೆಯ ಮೂಲೆಯಲ್ಲಿ ಕೊಂಯ್ ಎಂದು ಏದುಸಿರು ಬಿಡುತ್ತಾ ದಿನ ದೂಡಬೇಕು. ಹೀಗೆ ಕಷ್ಟ ಪಡುವುದನ್ನು ನೋಡಲಾಗದ ಭಗವಂತ ತನ್ನ ಬಳಿಗೆ ಕರೆಸುತ್ತಾನೆ. ದೇಹ ಬಿಟ್ಟ ಆತ್ಮ ದೇವೈಕ್ಯವಾಗುತ್ತದೆ. ಇಷ್ಟರವರೆಗಿದ್ದವನು ಈಗ ಕೊಟರ್ (ಗೊಟರ್) ಅಥವಾ ಗೊಟಕ್. 

ಅಬ್ಬ! ನಾಲ್ಕು ಸಾಲಿನ ಹಾಡು. ಒಳಾರ್ಥ ನಲುವತ್ತು ಸಾಲು! ನಮ್ಮ ಹಿರಿಯ ಜನಪದರ ಮೇಧಾ ಶಕ್ತಿ , ಸಾಹಿತ್ಯ ಬಲ ವಿಚಿತ್ರ ಮತ್ತು ಅಪರೂಪ.
........ರಮೇಶ ಎಂ. ಬಾಯಾರು ಎಂ.ಎ, ಬಿಎಡ್
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
“ಸ್ಕಂದ” ಕುಳ ಗ್ರಾಮ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com 
*****************************************


Ads on article

Advertise in articles 1

advertising articles 2

Advertise under the article