-->
ಜೀವನ ಸಂಭ್ರಮ : ಸಂಚಿಕೆ - 245

ಜೀವನ ಸಂಭ್ರಮ : ಸಂಚಿಕೆ - 245

ಜೀವನ ಸಂಭ್ರಮ : ಸಂಚಿಕೆ - 245
ಲೇಖಕರು : ಎಂ.ಪಿ. ಜ್ಞಾನೇಶ್ 
ಶಿಕ್ಷಣಾಧಿಕಾರಿ 
ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ
(ಮಧ್ಯಾಹ್ನ ಉಪಹಾರ ಯೋಜನೆ) 
ಜಿಲ್ಲಾ ಪಂಚಾಯತ್ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ 
                                                                   

ಮಕ್ಕಳೇ , ಇಂದು ಅಭ್ಯುದಯ ಅಂದರೇನು? ತಿಳಿದುಕೊಳ್ಳೋಣ. ಮಕ್ಕಳೇ ನೋಡುವುದನ್ನು ಕಲಿಯಬೇಕು. ಜಗತ್ತಿಗೆ ಬಂದ ಬಳಿಕ ಬರೀ ತಿಪ್ಪೆ ನೋಡುವುದಲ್ಲ. ನಿಸರ್ಗ ದೇವರು ಕಣ್ಣು ಕೊಟ್ಟಿರುವುದು ಏತಕ್ಕೆ?. ಕೆಟ್ಟದ್ದನ್ನು ಕೆಟ್ಟದ್ದನ್ನು ನೋಡೋದಕ್ಕೆ ಕೊಟ್ಟಿದ್ದಾನೇನು?. ನೋಡು, ಸೂರ್ಯೋದಯ ಬಣ್ಣ ಬಣ್ಣ ಹರಡಿರುತ್ತದೆ. ಅದೇ ಸ್ವರ್ಗ. ಈ ಕಣ್ಣುಗಳೇ ನಮ್ಮ ಬದುಕನ್ನು ಶ್ರೀಮಂತ ಮಾಡುತ್ತವೆ. ಕಣ್ಣಿನ ಮಹತ್ವ ಗೊತ್ತಾಗಬೇಕಾದರೆ ಕಣ್ಣು ಮುಚ್ಚಿ ಒಂದು ದಿನ ಇರಿ. ಅವಾಗ ಗೊತ್ತಾಗುತ್ತೆ. ಬದುಕು ಶ್ರೀಮಂತ ಆದದ್ದೂ ಈ ಎರಡು ಕಣ್ಣುಗಳಿಂದ. ಜೇಬಿನಲ್ಲಿರುವ ಹಣದಿಂದಲ್ಲ. ನೂರು ವರ್ಷ ನೋಡಿದರೂ ಸಾಕು ಅನ್ನಿಸುವುದಿಲ್ಲ. ಅಷ್ಟು ವೈಭವ ಈ ಜಗತ್ತಿನೊಳಗೆ. ವರ್ಣ ವೈಭವ, ಆಕಾರ ವೈಭವ ಇವುಗಳನ್ನು ನೋಡುವ ಸಾಮರ್ಥ್ಯ ಕಣ್ಣುಗಳಿಗೆ. ನೋಡಿದಷ್ಟು ಹೃದಯ ಶ್ರೀಮಂತವಾಗುತ್ತದೆ. ನೋಡಿದಾಗ ಏನು ಆನಂದ ತುಂಬುತ್ತದೆ ? ಮನಸ್ಸಿನಲ್ಲಿ ಆ ಆನಂದಕ್ಕೆ ಬೆಲೆ ಎಷ್ಟು ಹೇಳಿ.? ನಿಸರ್ಗ ನೋಡಿದರೆ ಮನಸ್ಸಿನಲ್ಲಿ ಆನಂದ ತುಂಬಿ ನಲಿಯುತ್ತದೆ. ಕಣ್ಣಿನಿಂದ ನೋಡಬೇಕು ರೂಪ ಜಗತ್ತನ್ನು. ಕಿವಿಗಳಿಂದ ಕೇಳಬೇಕು ಶಬ್ದ ಜಗತ್ತನ್ನು. ಶಬ್ದ ಸಂಪತ್ತು, ನಾದ ಸಂಪತ್ತು, ವರ್ಣಸಂಪತ್ತು, ಆಕಾರ ಸಂಪತ್ತು, ವಾಸನೆ ಸಂಪತ್ತು, ಸ್ಪರ್ಶ ಸಂಪತ್ತು, ರುಚಿ ಸಂಪತ್ತು. ಇವೆ ನಮ್ಮ ಜೀವನ ಶ್ರೀಮಂತಗೊಳಿಸುತ್ತವೆ. ಇದಕ್ಕೆ ಸಾಧನ ನಮ್ಮ ಪಂಚೇಂದ್ರಿಯಗಳು. ಈ ಪಂಚೇಂದ್ರಿಯಗಳನ್ನು ಮತ್ತು ಮನಸ್ಸನ್ನು ಸರಿಯಾಗಿ ಬಳಸಿದರೆ ನಾವು ಶ್ರೀಮಂತರು. ಮತ್ತೆ ಹೇಗಾದರೂ ಬಳಸಿದರೆ ನಮ್ಮಂತಹ ಬಡವರೇ ಯಾರಿಲ್ಲ. ದುರ್ದೈವಿಗಳೇ ಯಾರಿಲ್ಲ. ಯಾವ ಯಾವುದಕ್ಕೊ ಬಳಸಬೇಡ. ಏನು ನೋಡಿದರೆ, ಕೇಳಿದರೆ, ರುಚಿಸಿದರೆ ಮನಸ್ಸು ಅರಳುತ್ತದೆ ಅದಕ್ಕೆ ಬಳಸು. ಇವುಗಳನ್ನು ಸರಿಯಾಗಿ ಬಳಸಿದರೆ ಬದುಕು2 ಸ್ವರ್ಗವಾಗುತ್ತದೆ. ಯಾವ ಊರಿನಲ್ಲಿ ಇದ್ದೇವೆ? ಯಾವ ಮಂದಿರದಲ್ಲಿದ್ದೀವಿ?, ಯಾವ ಮನೆಯಲ್ಲಿದ್ದೀವಿ? ಅದು ಮಹತ್ವದಲ್ಲ. ಇಂದ್ರಿಯಗಳನ್ನು ಎಷ್ಟು ಚೆನ್ನಾಗಿ ಬಳಸುತ್ತೇವೆ ಅನ್ನೋದು ಮಹತ್ವ. ಅರಮನೆಯಲ್ಲಿ ಇರಬಹುದು. ಕಿಟಕಿ, ಬಾಗಿಲು ಹಾಕಿ ಒಳಗೆ ಇದ್ದರೆ, ಅದೆಂತಹ ಬದುಕು. ನಮ್ಮ ಇಂದ್ರಿಯಗಳು ಹೇಳುತ್ತವೆ. ನಮ್ಮ ಬಳಸಿಕೊ ನಿನ್ನ ಬದುಕು ಅದ್ಭುತ ಮಾಡುತ್ತೀವಿ ಅನ್ನುತ್ತೇವೆ. ಇಂದ್ರಿಯ ಬಳಸು, ಒಳಗಿರುವ ಮನಸ್ಸು ಬಳಸು, ಸೌಂದರ್ಯ, ಮಾಧುರ್ಯ ಸವಿರುಚಿ, ಸುವಾಸನೆ ಮನಸ್ಸನ್ನು ತುಂಬುತ್ತವೆ. ಈ ಇಂದ್ರಿಯ ಮತ್ತು ಮನಸ್ಸು ಮರೆಯಾಗಿ ಹೋಗುವ ಮುನ್ನ ನಾವು ಅನುಭವಿಗಳಾಗಬೇಕು. ನಮ್ಮ ಬದುಕು ಅರಳಬೇಕಾದರೆ ಈ ಇಂದ್ರಿಯ ಮತ್ತು ಮನಸ್ಸನ್ನು ಬಳಸಬೇಕು. ಜಗತ್ತಿನಲ್ಲಿ ತಿಪ್ಪೇನೂ ಇರುತ್ತದೆ, ಅದೇ ತಿಪ್ಪೆಯಲ್ಲಿ ಹೂಗಂಟಿಯೂ ಇರುತ್ತದೆ. ನೋಡುವುದಕ್ಕೆ ಕಲಿ. ತಿಪ್ಪೆ ನೋಡುವಾಗ ಇದೇ ತಿಪ್ಪೆಯಿಂದ ಸುಗಂಧ ಹೂವಿನ ಮೂಲಕ ಹೊರ ಬರುತ್ತದೆ ಅಂತ ನೋಡು. 

ಅಕ್ಕಮಹಾದೇವಿ ಕಣ್ಣು ಬಳಸಿದಳು. ಬಸವಣ್ಣ ಕಣ್ಣುಬಳಸಿದ. ಹೇಗೆ?. ಎತ್ತತ್ತ ನೋಡಿದಡೆ ಅತ್ತತ್ತ ನೀನೇ ದೇವ, ಸಕಲ ವಿಸ್ತಾರದ ರೂಹು ನೀನೇ ದೇವ ಅಂದರು. ಇದೇ ಕಣ್ಣ ಬಳಸಿ ಅದ್ಭುತ ಜಗತ್ತನ್ನು ನೋಡಿದರು. ಇದು ದಿವ್ಯ ಜಗತ್ತು. ಇದು ದೇವರಚನೆ ಅಂತ ನೋಡುವುದಕ್ಕೆ ಕಲಿ. ಸಂತರು ಶರಣರು ಇದೇ ಜಗತ್ತಿನಲ್ಲಿ ದೇವನನ್ನು ಕಂಡರು. ಹಾಗೆ ಕಲಿಸಿದರು. ಹೇಗೆ ಇಂದ್ರಿಯ ಬಳಸಬೇಕು ಅನ್ನುವುದನ್ನು ಕಲಿಸಿದರು. ಸಂತರು ಶರಣರು ಬದುಕನ್ನು ಶ್ರೀಮಂತ ಮಾಡಿಕೊಂಡರು. ಅವರ ಬಳಿ ಏನೇನು ಇರಲಿಲ್ಲ. ಆದರೆ ಬದುಕು ಶ್ರೀಮಂತವಾಗಿತ್ತು. ನೋಡೋದನ್ನು ಕಲಿಯಬೇಕು. ಕೇಳುವುದನ್ನು ಕಲಿಯಬೇಕು. ಮಾತನಾಡುವುದನ್ನು ಕಲಿಯಬೇಕು. ಏನಾರ ನೋಡಿ, ಕೇಳಿ, ಮಾತನಾಡಿ ಬದುಕು ಹೊಲಸು ಮಾಡಬಾರದು. ಬದುಕು ಕೆಡಿಸ ಬಾರದು. ಮತ್ತೆ ಮತ್ತೆ ಬದುಕು ಬರುತ್ತದೆ ಏನು?. ಇರೋದರಾಗ ಆನಂದ ಪಡಬೇಕು. ಮತ್ತೆ ಹೇಗಾದರೂ ಆನಂದ ಪಡುವುದಲ್ಲ. ಕುಡಿದು, ಸೇದಿ ಆನಂದ ಪಡುವುದಲ್ಲ. ಒಳ್ಳೆಯದು ಒಳ್ಳೆಯದು ತಿಂದು, ಕುಡಿಯಬೇಕು. ನಾವು ಶ್ರೀಮಂತ ಜಗತ್ತಿನಲ್ಲಿ ಬದುಕುತ್ತಾ ಇದ್ದೇವೆ. ನನ್ನ ಕಣ್ಣು ಶ್ರೀಮಂತವಾಗಲಿ, ನಮ್ಮ ಕಿವಿ ಶ್ರೀಮಂತವಾಗಲಿ, ನಮ್ಮ ಕೈಗಳು ಶ್ರೀಮಂತವಾಗಲಿ, ನಮ್ಮ ಕಾಲುಗಳು ಶ್ರೀಮಂತವಾಗಲಿ. ನಮ್ಮ ನಾಲಿಗೆ ಶ್ರೀಮಂತವಾಗಲಿ. ನಮ್ಮ ನಾಸಿಕ ಶ್ರೀಮಂತವಾಗಲಿ. ಇದು ನಿಜವಾದ ಶ್ರೀಮಂತಿಕೆ. ಇವೆಲ್ಲ ಶ್ರೀಮಂತ ವಾಗಬೇಕು. 

ಕೈಗಳು ಇರುವುದು ಉಂಗುರ ಹಾಕಲು ಅಲ್ಲ ದುಡಿಯಲು. ಪ್ರತಿ ಕ್ಷಣ ಕೆಲಸ ಮಾಡುತ್ತಾ ಇರಬೇಕು. ಕಾಲಿನಿಂದ ನಡೆಯುತ್ತಲೆ ಇರಬೇಕು. ಇದಕ್ಕೆ ಅಭ್ಯುದಯ ಎನ್ನುತ್ತಾರೆ. ಅಭ್ಯುದಯ ಎಂದರೆ ಶ್ರೀಮಂತ ಜೀವನ. ಬಡ ಜೀವನವಲ್ಲ. ಕೊರತೆ ತಲೆಗೆ ಹಾಕಿಕೊಳ್ಳಬಾರದು. ವಸ್ತು ಎಷ್ಟಿದೆ ಮಹತ್ವ ಅಲ್ಲ. ಅದನ್ನು ಎಷ್ಟು ಸವಿ ಮಾಡಿ, ರುಚಿ ನೋಡಿ ಊಟ ಮಾಡುತ್ತೀವಿ ಅನ್ನೋದು ಮಹತ್ವ. ವಸ್ತುವನ್ನು ಎಷ್ಟು ಸುಂದರವಾಗಿ ಬಳಸುತ್ತೀವಿ ಅನ್ನೋದು ಮಹತ್ವ. ಅಲ್ಲವೇ ಮಕ್ಕಳೇ.
......................................... ಎಂ.ಪಿ. ಜ್ಞಾನೇಶ್ 
ಶಿಕ್ಷಣಾಧಿಕಾರಿ 
ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ
(ಮಧ್ಯಾಹ್ನ ಉಪಹಾರ ಯೋಜನೆ) 
ಜಿಲ್ಲಾ ಪಂಚಾಯತ್ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ 
*****************************************

Ads on article

Advertise in articles 1

advertising articles 2

Advertise under the article