ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 125 science Article divakar Shetty
Thursday, June 4, 2026
Edit
ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 125
ಲೇಖಕರು : ದಿವಾಕರ ಶೆಟ್ಟಿ ಎಚ್
ನಿವೃತ್ತ ಪ್ರವಾಚಕರು
ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
Mob: 9448571203
ಅಮ್ಮ ಶತಾವಧಾನಿ ಅಲ್ಲ ಸಹಸ್ರಾವಧಾನಿ
----------------------------------------------
ಪ್ರೀತಿಯ ಮಕ್ಕಳೇ, ಇಲ್ಲಿಯವರೆಗೆ ನಿಮಗೆ ಬೇಸಿಗೆಯ ರಜೆ ಇತ್ತು. ನಾನೂ ಕೂಡಾ ರಜೆ ಮಾಡಿದೆ. ಅನೇಕ ಓದುಗರು ಲೇಖನಗಳು ಬರುತ್ತಿಲ್ಲ ಎಂದು ಆಕ್ಷೇಪಿಸಿದ್ದಾರೆ. ನಿಮ್ಮ ತಾರಾನಾಥ ಸರ್ ಲೇಖನವಿದ್ದರೆ ಕಳುಹಿಸಿ ಸರ್ ಎಂದು ವಿನಂತಿಸಿದರು. ಆದರೆ ನಾನು ಹೇಳಿದ್ದೆ ಜೂನ್ 3 ಕ್ಕೆ ಕಳಿಸ್ತೇನೆ ಎಂದಿದ್ದೆ. ಆದರೆ ಸಮಯಕ್ಕೆ ಹೊಂದಿಕೆಯಾಗುವ ಅನೇಕ ವಿಷಯಗಳಿದ್ದವು. ಆದರೆ ನನಗೆ ನಾನೇ ಹಾಕಿಕೊಂಡ ಕೋಟೆ ನನ್ನನ್ನು ಮೌನವಾಗಿಸಿತು. ಈಗ ಶಾಲೆಗಳು ಆರಂಭವಾದವಾಗಿವೆ. ಎಲ್ಲರಿಗೂ ಹೊಸ ಶೈಕ್ಷಣಿಕ ವರ್ಷದ ಶುಭಾಶಯಗಳು.
ರಜೆ ಹೇಗೆ ಕಳೆದಿರಿ? ಆಹ್ಲಾದಕರವಾಗಿತ್ತು ತಾನೇ. ಮಕ್ಕಳೇ ಡಾಲ್ಫಿನ್ ಗಳ ಬಗ್ಗೆ ಕೇಳಿದ್ದೀರಲ್ಲ. ಅವುಗಳು ನೀರಿನಲ್ಲಿ ನಿರಂತರವಾಗಿ ಈಜುತ್ತಲೇ ಇರುತ್ತವೆ. ಅಂದರೆ ಸಾಮಾನ್ಯ ಭಾಷೆಯಲ್ಲಿ ಅವು ನಿದ್ದೆ ಮಾಡುವುದೇ ಇಲ್ಲ. ಆದರೆ ಶರೀರ ಕ್ರಿಯಾ ಶಾಸ್ತ್ರದ (physiology) ಪ್ರಕಾರ ಅವು ನಿದ್ರಿಸುತ್ತವೆ. ಆದರೆ ನಿರಂತರವಾಗಿ ಈಜುತ್ತವಲ್ಲಾ ಹೇಗೆ ಎಂಬ ಪ್ರಶ್ನೆ ನಿಮ್ಮನ್ನು ಕಾಡಬಹುದು. ಹೌದು ನಮ್ಮ ಮೆದುಳಿನಲ್ಲಿ ಎರಡು ಗೋಳಾರ್ಧಗಳಿವೆಯಲ್ಲ ಅದರಲ್ಲಿ ಒಂದು ನಿದ್ರಿಸುವಾಗ ಇನ್ನೊಂದು ಎಚ್ಚರವಾಗಿರುತ್ತವೆ. ಹೀಗೆ ಅವುಗಳ ನಿದ್ದೆ ಪರ್ಯಾಯವಾಗಿ ಸಾಗುತ್ತದೆ. ಮನುಷ್ಯನಲ್ಲಿಯೂ ಇಂತಹ ಒಂದು ವ್ಯವಸ್ಥೆ ಇದ್ದಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು ಅಲ್ಲವೇ? ತರಗತಿಯಲ್ಲಿ ನಿದ್ದೆ ಮಾಡುತ್ತಾ ಪಾಠ ಕೇಳಬಹುದಿತ್ತು. ಸರ್ ಹತ್ತಿರ ಬೈಸಿಕೊಳ್ಳಬೇಕಾಗಿರಲಿಲ್ಲ.
ಆದರೆ ನಮ್ಮ ಮೆದುಳು ಏಕ ಕಾಲದಲ್ಲಿ ಅನೇಕ ಕೆಲಸಗಳನ್ನು ಮಾಡಬಲ್ಲುದು. ಇದನ್ನು ಅವಧಾನತೆ (multi tasking) ಎನ್ನುವುದು. ಏಕ ಕಾಲದಲ್ಲಿ ಹತ್ತು ಕೆಲಸಗಳನ್ನು ಮಾಡುವವರನ್ನು ದಶಾವಧಾನಿಗಳು ಎಂದರೆ ನೂರು ಕೆಲಸಗಳನ್ನು ಮಾಡಬಲ್ಲ ಶತಾವಧಾನಿಗಳು ಇದ್ದಾರಂತೆ. ಶತಾವಧಾನಿ ಆರ್ ಗಣೇಶ್ ಕೇಳಿದ್ದೀರಲ್ಲ ಅವರಿಗೆ ಹೆಸರು ಬಂದದ್ದು ಹೀಗೆಯೇ. ನೀವು ಇಂತಹ ಅವಧಾನಿಗಳನ್ನು ನೋಡಿದ್ದೀರಾ? ಇಲ್ಲ ಎಂಬ ಉತ್ತರ ಸಹಜ.
ಬೆಳಗಿನ ನಿಮ್ಮ ಮನೆಯ ಪರಿಸ್ಥಿತಿಯನ್ನು ಊಹಿಸಿಕೊಳ್ಳಿ. ಅಪ್ಪ ಅಮ್ಮ ಇಬ್ಬರೂ ಕೆಸಕ್ಕೆ ಹೋಗಬೇಕು ನೀವು ಮತ್ತು ತಂಗಿ ಶಾಲೆಗೆ ಹೋಗಬೇಕು. ಅಮ್ಮ ತಿಂಡಿ ಮಾಡಿ ತಿನ್ನಲು ಕೊಟ್ಟು ಬುತ್ತಿ ಕಟ್ಟಿ ಕೈಯಲ್ಲಿಟ್ಟು ತಾನೂ ಕೆಲಸಕ್ಕೆ ಹೋಗುತ್ತಾರೆ. ವಿವರಣೆ ತುಂಬಾ ಸರಳವೆನ್ನಿಸುತ್ತದೆ. ಆದರೆ ಪರಿಸ್ಥಿತಿ ಬೇರೆಯೇ ಇದೆ. ಇವತ್ತು ಅಮ್ಮ ಉಪ್ಪಿಟ್ಟು ಮಾಡುತ್ತಾರೆ ಎಂದಿಟ್ಟುಕೊಳ್ಳೋಣ. ತಾಯಿ ಈರುಳ್ಳಿ ಹಚ್ಚುತ್ತಿರುತ್ತಾರೆ. ಕಣ್ಣಲ್ಲಿ ನೀರು. ಆಗ ನೀವು ಕೂಗುತ್ತೀರಿ ಅಮ್ಮಾ ನನ್ನ ಬ್ರಷ್ ಎಲ್ಲಿ? ಅಮ್ಮ ನೀವು ಎಲ್ಲಿಟ್ಟಿದ್ದೀರಿ ಎಂದು ಹೇಳಬೇಕು. ಅಮ್ಮ ಎಣ್ಣೆ ಕಾಯಲು ಇಟ್ಟು ಬಿಸಿ ಎಣ್ಣೆಗೆ ಸಾಸಿವೆ ಹಾಕಿದ್ದಾರೆ. ಸಾಸಿವೆ ಚಟಪಟ ಸಿಡಿದು ಮೈಗೆ ತಾಗದಂತೆ ಜಾಗ್ರತೆ ಮಾಡಬೇಕು, ನಂತರ ಹಾಕಬೇಕಾದ ಬೇವಿನ ಸೊಪ್ಪು, ಹಸಿ ಮೆಣಸು, ಕಡ್ಲೆ ಬೇಳೆ, ಟೊಮ್ಯಾಟೊ, ಈರುಳ್ಳಿ ಹೀಗೆ ಕ್ರಮಬದ್ದವಾಗಿ ಜೋಡಿಸಿ ಹಾಕುತ್ತಾ ಹೋಗಬೇಕು. ಆಗ ಅಪ್ಪ ರಮೇಶ ನನ್ನ ಕನ್ನಡಕ ನೋಡಿದ್ಯೇನೋ ಎಂದು ನಿಮ್ಮ ನಿರುತ್ತರಕ್ಕೆ ಅವರು ಕೇಳುವುದು ಅಮ್ಮನನ್ನೇ. ಆಗ ಅಮ್ಮ ಅಲ್ಲಿ ಡೈನಿಂಗ್ ಟೇಬಲ್ ಮೇಲಿದೆ ನೋಡಿ ಎನ್ನಬೇಕು. ಆದರೆ ಗಂಡ ಕೇಳಿದರೆಂದು ಕಡಲೆ ಬೇಳೆಯ ಬದಲು ಈರುಳ್ಳಿ ಹಾಕುವುದಿಲ್ಲ. ಇಷ್ಟೊತ್ತಿಗೆ ಅಮ್ಮ ರವೆ ಹಾಕಿರುತ್ತಾರೆ. ಆಗ ನಿಮ್ಮ ತಂಗಿ ಅಮ್ಮ ನನ್ನ ಯೂನಿಫಾರ್ಮ್ ಇಸ್ತ್ರಿಯಾಗಿಲ್ಲ ಎನ್ನುತ್ತಾಳೆ. ಸ್ವಲ್ಪ ತಡಿ ಮಾಡಿಕೊಡುತ್ತೇನೆ ಎನ್ನುತ್ತಲೇ ಸರಿಯಾದ ಪ್ರಮಾಣದ ನೀರು, ಉಪ್ಪು ಹಾಕಿ ಎರಡು ಸಾರಿ ತಿರುಗಿಸಿ ನಿಧಾನ ಗಟ್ಟಿಯಾಗುವಾಗ ಉರಿ ಕಡಿಮೆ ಇಟ್ಟು ಇಸ್ತ್ರಿ ಹಾಕಲು ಓಡಿ ಬರುತ್ತಾರೆ. ಮಧ್ಯೆ ಮಧ್ಯೆ ಹೋಗಿ ಉಪ್ಪಿಟ್ಟು ತಿರುವ ಬೇಕು. ನಿಮ್ಮ ಬುತ್ತಿಗಳನ್ನು ಗುರುತಿಸಿ ಅಷ್ಟಷ್ಟು ಪ್ರಮಾಣದ ಉಪ್ಪಿಟ್ಟು ಹಾಕಬೇಕು. ಅಪ್ಪನ ಉಪ್ಪಿಟ್ಟು ಮಗನಿಗೆ ಅಣ್ಣನ ಉಪ್ಪಿಟ್ಟು ತಂಗಿಗೆ ಆಗುವುದೇ ಇಲ್ಲ. ಇದೆಲ್ಲದರ ಮಧ್ಯೆ ತಾನೂ ರೆಡಿಯಾಗುತ್ತಾಳೆ. ನೂರು ಸೀರೆಗಳ ನಡುವೆ ನಿನ್ನೆ ಉಟ್ಟ ಸೀರೆ ಇವತ್ತು ಉಡುವಂತಿಲ್ಲ. ಆ ಸೀರೆಗೆ ಮ್ಯಾಚಿಂಗ್ ಬ್ಲೌಸ್. ಅಬ್ಬ ಏಕ ಕಾಲದಲ್ಲಿ ಎಷ್ಟೊಂದು ಕೆಲಸಗಳು. ನಿಮ್ಮ ಸ್ಕೂಲ್ ಬಸ್ಸಿನ ಸಮಯ ಅಪ್ಪನ ಹೊರಡುವ ಸಮಯ ಎಲ್ಲ ನೆನಪಿಡಬೇಕು. ಅಂದರೆ ಅಮ್ಮ ಶತಾವಧಾನಿ ಅಲ್ಲ ಸಹಸ್ರಾವಧಾನಿ.
ನೀವು ಅಮ್ಮನಿಗೆ ಸ್ವಲ್ಪ ಸಹಕರಿಸಿದರೆ ಅಮ್ಮನ ಮೇಲಿನ ಒತ್ತಡ ಕಡಿಮೆಯಾಗುತ್ತದೆಯಲ್ಲವೇ? ಸಹಾಯ ಮಾಡುತ್ತೀರಿ ತಾನೆ?
.................................... ದಿವಾಕರ ಶೆಟ್ಟಿ ಎಚ್
ನಿವೃತ್ತ ಪ್ರವಾಚಕರು
ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
Mob: 9448571203
*****************************************