ನಿಷ್ಪಾಪಿ ಸಸ್ಯಗಳು : ಸಂಚಿಕೆ - 152
Saturday, June 6, 2026
Edit
ನಿಷ್ಪಾಪಿ ಸಸ್ಯಗಳು : ಸಂಚಿಕೆ - 152
ಲೇಖಕರು: ವಿಜಯಾ ಬಿ ಶೆಟ್ಟಿ ಸಾಲೆತ್ತೂರು
ಸಹ ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ
ಬಾಳೆಪುಣಿ (ಇರಾ), ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
ಪ್ರೀತಿಯ ಮಕ್ಕಳೇ ಹೇಗಿದ್ದೀರಿ..? ಶಾಲಾರಂಭದ ಜೊತೆಗೆ ವರ್ಷಧಾರೆಯ ಹರಿವೂ ಆರಂಭವಾಗಿದೆ. ಇವೆರಡೂ ನಮ್ಮ ಬದುಕಿನ ಅವಿಭಾಜ್ಯ ಭಾಗಗಳು ತಾನೇ? ಮಳೆ ಬಂದಾಗೆಲ್ಲ ನಮ್ಮ ಕಾಲಡಿಯಲ್ಲಿ ಹಲವಾರು ನಿಷ್ಪಾಪಿ ಸಸ್ಯಗಳು ಉತ್ಸಾಹದಿಂದ ಪುಟಿಯುತ್ತವೆ. ಎಂದೋ ನೆಟ್ಟು ಇದ್ದೂ ಇಲ್ಲದಂತೆ ಎಲ್ಲೋ ಮರೆಯಲ್ಲಿ ಕೂತಿದ್ದ ಸಣಕಲು ದಂಟೊಂದು ಇದ್ದಕ್ಕಿದ್ದಂತೆ ಚಿಗುರಿ ದರ್ಶನ ಕೊಡುವಾಗ ಲಭಿಸುವ ಸಂತೋಷ ಅಳತೆಗೆ ಸಿಗದು ಅಲ್ಲವೇ? ಮೊನ್ನೆ ಫೆಬ್ರವರಿಯಲ್ಲಿ ಶಾಲೆಯಲ್ಲಿ ತಂದು ನೆಟ್ಟಿದ್ದ ಸಂದುಬಳ್ಳಿ ಇಷ್ಟು ದಿನ ತಪಸ್ಸಲ್ಲಿ ಇದ್ದಂತೆ ಇದ್ದು ನಾಲ್ಕು ತಿಂಗಳ ಬಳಿಕ ಅಂದರೆ ಈ ವಾರ ಚಿಗುರಿದೆ ಗೊತ್ತಾ..?
ನಮ್ಮ ಬಾಲ್ಯದ ಹಾಸ್ಟೆಲ್ ಜೀವನದಲ್ಲಿ ಹೆಚ್ಚಾಗಿ ತಿನ್ನಲೇಬೇಕಾದ ಅನಿವಾರ್ಯತೆಗೀಡಾಗಿ ತಿನ್ನುತ್ತಿದ್ದ ಒಂದು ಪುಟಾಣಿ ಸಸ್ಯವಿತ್ತು. ಅದೂ ಮಳೆ ಬಂದಾಗ ಹಿಗ್ಗಿ ಹೀರೇಕಾಯಿಯಾಗುತ್ತಿತ್ತು. ಎಷ್ಟು ಕಿತ್ತರೂ ಒಂದಕ್ಕೆ ಹತ್ತಾಗಿ ಚಿಗುರಿ ಬರುತ್ತಿದ್ದ ಆ ಗಿಡಗಳನ್ನು ಕಂಡಾಗ ಅದರ ಶಕ್ತಿಯ ಬಗ್ಗೆ ವಿಸ್ಮಯವಾಗುತ್ತಿತ್ತು. ಯಾವ ಆರೈಕೆಯನ್ನೂ, ಯಾವುದೇ ಗೊಬ್ಬರವನ್ನೂ ಹಾಕುತ್ತಿರಲಿಲ್ಲ. ದೊಡ್ಡ ಆಶಯಗಳೇನೂ ಇರದೆ ಈ ಅಲ್ಪಸ್ವಲ್ಪ ನೀರಿನ ಜಾಡು ಹಿಡಿದು ಮಣ್ಣನ್ನು ಸಂರಕ್ಷಿಸುತ್ತಿದ್ದ ಈ ಮೃದುವಾದ ಸಸ್ಯವೇ ನೆಲಬಸಳೆ!.
ಚಪ್ಪರದಲ್ಲಿ ಹರಡುವ ಬಳ್ಳಿಯಂತಹ ಬಸಳೆ ಎಲ್ಲರಿಗೂ ಗೊತ್ತು. ಆದರೆ ಈ ನೆಲಬಸಳೆ ಒಂದೆರಡು ಅಡಿಯಷ್ಟೇ ಎತ್ತರ ಬೆಳೆಯುತ್ತದೆ. ಮೃದುವಾದ ದಂಟು ಲೋಳೆ ಇರದಿದ್ದರೂ ತಿರುಳು ತುಂಬಿರುತ್ತದೆ. ಹಲವಾರು ಶಾಖೆಗಳು ಜಾಗ ಇದ್ದಲ್ಲೆಲ್ಲ ಹರಡಿಕೊಂಡು ದಂಟಿನುದ್ದಕ್ಕೂ ಗುಂಪಾದ ಸೊಪ್ಪಿನಿಂದ ಕೂಡಿ ಹಸಿರಾಗಿ ಹಸನಾಗಿ ಕಣ್ಣಿಗೆ ತಂಪಾಗಿ ಕಾಣಿಸುತ್ತದೆ.
ಉಷ್ಣವಲಯದಲ್ಲಿ ಇದೊಂದು ಸೊಪ್ಪಿನ ತರಕಾರಿ. ನೈಜೀರಿಯ ಆಮದು ಮಾಡಿಕೊಳ್ಳುವ ಮುಖ್ಯ ತರಕಾರಿ ಇದುವೆ. ಪಲ್ಯ, ಗೊಜ್ಜು, ಸಾಂಬಾರ್ ಗಳೇ ಅಲ್ಲದೆ ಬೇಳೆ, ಹಲಸಿನ ಬೀಜದ ಜೊತೆಗೂ ಸ್ವಾದಿಷ್ಟ ವಾಗಿರುತ್ತದೆ. ಕ್ಯಾಲ್ಸಿಯಂ, ಪೊಟಾಷಿಯಂ, ಕಬ್ಬಿಣ ಸತ್ವಗಳೇ ಅಲ್ಲದೆ ವಿಟಮಿನ್ ಎ, ಸಿ ತುಂಬಿದೆ. ದೇಹಕ್ಕೆ ತಂಪು ಮಾತ್ರವಲ್ಲದೆ ಕಡಿಮೆ ಕ್ಯಾಲೊರಿ ಇರುವುದರಿಂದ ತೂಕ ಕಡಿಮೆ ಮಾಡಿಕೊಳ್ಳುವ ಆಸಕ್ತರಿಗೂ ಅನುಕೂಲಕರ. ಆದರೆ ಇದರಲ್ಲಿ ಆಕ್ಪಲಿಕ್ ಆಮ್ಲ ಇರುವುದರಿಂದ ಗೌಟ್, ಮೂತ್ರಪಿಂಡ, ರುಮಟಾಯ್ಡ್ ಸಮಸ್ಯೆಗಳಿದ್ದಲ್ಲಿ ಬಳಕೆಯ ಬಗ್ಗೆ ನಿಗಾ ಇರಲಿ ಎಂದೂ ಅನುಭವಿಗಳು ಎಚ್ಚರಿಸುತ್ತಾರೆ.
ಕಾಡುಹುಲ್ಲಿನಂತೆ ಕಾಲೂರಿದಲ್ಲಿ ತಳವೂರುವ ಕಾಡುಬಸಳೆ ಒಂದು ದೀರ್ಘಕಾಲಿಕ ಸಸ್ಯ. ಮೆಕ್ಸಿಕೊ, ಕೆರಿಬಿಯನ್, ಪಶ್ಚಿಮ ಆಫ್ರಿಕಾ, ಮಧ್ಯ - ದಕ್ಷಿಣ ಅಮೆರಿಕ ಹಾಗೂ ಭಾರತದಲ್ಲಿ ಪಾಂಚಾಲಿಹರಿವೆ, ಸಾಂಬಾರ್ ಹರಿವೆ, ಬೇಳೆ ಹರಿವೆ, ಕೊಲಂಬೊ ಹರಿವೆ, ವಾಟರ್ ಲೀಫ್, ಸಿಲೋನ್ ಪಾಲಕ್ ಎಂಬೆಲ್ಲ ಹೆಸರುಗಳಿಂದ ನೆಲಬಸಳೆ ಹರಡಿದೆ. ಬಡವರ ಪಾಲಕ್ ಎಂಬ ಅಡ್ಡ ಹೆಸರಿನ ನೆಲಬಸಳೆ ಪೋರ್ಟುಕುಲಾಕೇಸಿ ಕುಟುಂಬಕ್ಕೆ ಸೇರಿದೆ. ಸಸ್ಯ ಶಾಸ್ತ್ರೀಯ ಹೆಸರು ತಾಲಿನಮ್ ಫ್ರೂಟಿಕೊಸಮ್ ( Talinum fruticosum). ಕಾಡು ಬಸಳೆ ಕಿಚನ್ ಗಾರ್ಡನ್ ನಲ್ಲಿ ಸ್ಥಾನ ಪಡೆದಿರುವುದೇ ಅಲ್ಲದೆ ಅಲಂಕಾರಕ್ಕಾಗಿಯೂ ಬೆಳೆಸುತ್ತಾರೆ. ಇದರಲ್ಲಿ ಬರುವ ಪುಟ್ಟ ಗುಲಾಬಿ, ನೇರಳೆ ಬಣ್ಣದ ಲಾಲಿತ್ಯಪೂರ್ಣ ಹೂಗಳು ಬೆಳಗ್ಗೆ ಅರಳಿ ಮಧ್ಯಾಹ್ನಕ್ಕೆ ಮುದುಡಿಕೊಳ್ಳುತ್ತವೆ. ಇದರಲ್ಲಾಗುವ ಬೀಜಗಳ ಮೂಲಕವಾಗಲೀ, ದಂಟು ನೆಡುವ ಮೂಲಕವಾಗಲೀ ಸಮೃದ್ಧವಾಗಿ ನೆಲಬಸಳೆ ಬೆಳೆಸಬಹುದು. ನೆಟ್ಟ ಒಂದೂವರೆ ತಿಂಗಳಲ್ಲೇ ಕೊಯ್ಲಿಗೆ ಬರುವ ಅತೀ ಕಡಿಮೆ ಖರ್ಚಿನ ರಾಸಾಯನಿಕ ಮುಕ್ತ ತರಕಾರಿ ಈ ಕಾಡುಬಸಳೆ ಎಂದರೆ ತಪ್ಪಾಗದು.
ಸರಿ ಮಕ್ಕಳೇ, ನೀವೂ ಈ ಗಿಡವನ್ನು ಸುಲಭವಾಗಿ ಬೆಳೆಸಬಹುದು. ಬಳಕೆ ಮಾಡುವಲ್ಲಿ ಯಾವುದೇ ಹಿಂಜರಿಕೆ ಬೇಡ. ಮುಂದಿನ ವಾರ ಇನ್ನೊಂದು ನಿಷ್ಪಾಪಿ ಸಸ್ಯದ ಬಗ್ಗೆ ತಿಳಿಯೋಣ. ತಮಗೆಲ್ಲರಿಗೂ ವಿಶ್ವ ಪರಿಸರ ದಿನಾಚರಣೆಯ ಶುಭಾಶಯಗಳು.. ನಮಸ್ತೆ.
ಸಹ ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ
ಶಾಲೆ , ಬಾಳೆಪುಣಿ (ಇರಾ)
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
Mob : +91 78925 87191
*****************************************