ಪಯಣ : ಸಂಚಿಕೆ - 94 (ಬನ್ನಿ ಪ್ರವಾಸ ಹೋಗೋಣ)
Saturday, May 23, 2026
Edit
ಪಯಣ : ಸಂಚಿಕೆ - 94 (ಬನ್ನಿ ಪ್ರವಾಸ ಹೋಗೋಣ)
ಲೇಖನ : ರಮೇಶ ನಾಯ್ಕ, ಉಪ್ಪುಂದ
ಕನ್ನಡ ಭಾಷಾ ಶಿಕ್ಷಕರು
ನೇತಾಜಿ ಸುಭಾಶ್ಚಂದ್ರ ಬೋಸ್
ಸರಕಾರಿ ಪ್ರೌಢಶಾಲೆ, ಮರವಂತೆ
ಬೈಂದೂರು ತಾಲೂಕು, ಉಡುಪಿ ಜಿಲ್ಲೆ.
ಮೊಬೈಲ್ : +91 94488 87713
ಪ್ರವಾಸ ಹೋಗುವುದೆಂದರೆ ಯಾರಿಗೆ ತಾನೇ ಇಷ್ಟ ಇಲ್ಲ...? ಹೊಸ ಊರು ನೋಡಬೇಕು.. ಹೊಸ ಹೊಸ ವಿಚಾರ ತಿಳಿದು ಕೊಳ್ಳಬೇಕೆನ್ನುವುದು ಪ್ರತಿಯೊಬ್ಬರ ಬಯಕೆ. ಧಾರ್ಮಿಕ ಕ್ಷೇತ್ರಗಳು, ಐತಿಹಾಸಿಕ ಸ್ಥಳಗಳು, ಪ್ರಕೃತಿಯ ವೈಶಿಷ್ಟ್ಯ ಸಾರುವ ತಾಣಗಳು ಹೀಗೆ ನಾನಾ ಬಗೆಯ ಪ್ರವಾಸಿ ತಾಣಗಳು ಎಲ್ಲರನ್ನೂ ಆಕರ್ಷಿಸುತ್ತದೆ... ಹೀಗೆ ನಮ್ಮ ಊರಿನ, ನಮ್ಮ ರಾಜ್ಯದ, ನಮ್ಮ ದೇಶದ ಸುಂದರ ತಾಣಗಳನ್ನು ಪರಿಚಯಿಸುವ ಪ್ರಯತ್ನ ಇಲ್ಲಿದೆ... ಬನ್ನಿ ಪ್ರವಾಸ ಹೋಗೋಣ... ರಮೇಶ ನಾಯ್ಕ, ಉಪ್ಪುಂದ.
ಎಲ್ಲರಿಗೂ ನಮಸ್ಕಾರ.... ಇಂದಿನ ಪ್ರವಾಸದಲ್ಲಿ 'ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಸೋಮೇಶ್ವರ ಬೀಚ್' ಗೆ ಪಯಣ ಮಾಡೋಣ ಬನ್ನಿ....
ಬೈಂದೂರು ಕ್ಷೇತ್ರದ ಪಡುವರಿ ಗ್ರಾಮದ ಸೋಮೇಶ್ವರ ಬೀಚ್ ಇದೀಗ ಪ್ರವಾಸಿಗರನ್ನು ಬರಸೆಳೆಯುತ್ತಿದೆ. ವಿಶ್ವಖ್ಯಾತಿಯ ತ್ರಾಸಿ-ಮರವಂತೆ ಬೀಚ್ ಹೆದ್ದಾರಿ ಅಗಲೀಕರಣದ ದಿಸೆಯಿಂದ ಪ್ರವಾಸಿಗರಿಗೆ ಅನನುಕೂಲತೆ ಸೃಷ್ಟಿಸಿರುವುದರಿಂದ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಸೋಮೇಶ್ವರ ಬೀಚ್‌ನತ್ತ ಮುಖ ಮಾಡುತ್ತಿದ್ದಾರೆ. ಕಡಲು, ನದಿಯ ಸಂಗಮ ತಾಣ ಎನಿಸಿರುವ ಸೋಮೇಶ್ವರ ಸುರಕ್ಷಿತ ಬೀಚ್ ಎಂಬ ಹೆಗ್ಗಳಿಕೆ ಹೊತ್ತಿರುವುದರಿಂದ ಸಂಜೆಯ ಸೂರ್ಯಾಸ್ತಮಾನದ ಮೋಹಕತೆ ಸವಿಯಲು ಜನರು ಬರುತ್ತಿದ್ದಾರೆ. ರಜಾ ದಿನಗಳಲ್ಲಿ ಬೀಚ್ ಜನಜಂಗುಳಿಯಿಂದ ತುಂಬಿಕೊಂಡಿರುತ್ತದೆ. ಆದರೆ ಈ ಬೀಚ್‌ನಲ್ಲಿ ಮೂಲ ಸೌಕರ್ಯ ಒದಗಿಸುವ ಕಾರ್ಯ ಶೀಘ್ರ ಪೂರ್ಣಗೊಳ್ಳಬೇಕು ಎಂದು ಜನರು ಆಗ್ರಹಿಸುತ್ತಿದ್ದಾರೆ.
ಆಕರ್ಷಕ, ಅವರ್ಣನೀಯ : ಸೋಮೇಶ್ವರ ಬೀಚ್ ಸರಿಸುಮಾರು 2 ಕಿ.ಮೀ ಅಂತರದಲ್ಲಿ ಅಗಾಧ ಸೌಂದರ್ಯ ಬಚ್ಚಿಟ್ಟುಕೊಂಡಿದೆ. ಬೀಚ್ ಸೌಂದರ್ಯ ಆಕರ್ಷಕ. ತೀರದಿಂದ 300 ಮೀಟರ್ ಅಂತರದವರೆಗೆ ಆಳವಿಲ್ಲ. ತೀರದ ಉದ್ದಕ್ಕೂ ಪ್ರಾಕೃತಿಕ ಕಲ್ಲು ಬಂಡೆಗಳು ಹರಡಿಕೊಂಡಿದೆ. ಮಂದಗತಿಯಲ್ಲಿ ಬಂದು ಬಂಡೆಗೆ ಅಪ್ಪಳಿಸಿ ಹಿಂದಿರುಗುವ ಅಲೆಗಳ ಮೋಹಕತೆ ಬೆರಗು ಮೂಡಿಸುತ್ತದೆ. ಇಲ್ಲಿ ಸುಮನಾವತಿ ನದಿ ಕಡಲು ಸೇರುವ ವಿಹಂಗಮ ಪ್ರಾಕೃತಿಕ ನೋಟ ಅವರ್ಣನೀಯ. ದಡದಲ್ಲಿನ ಪುರಾಣ ಪ್ರಸಿದ್ಧ ಸೋಮೇಶ್ವರ ದೇವಸ್ಥಾನ, ಪ್ರಕೃತಿ ವಿಸ್ಮಯದ ನಾಗತೀರ್ಥ, ಕ್ಷಿತಿಜ ನಿಸರ್ಗಧಾಮ ಪ್ರವಾಸಿಗರ ಆಕರ್ಷಣೆಗೆ ಪ್ರಾಮುಖ್ಯತೆ ಒದಗಿಸಿದೆ.
ಸೋಮೇಶ್ವರ ಇಲ್ಲಿ ಪಶ್ಚಿಮಾಭಿಮುಖಿ : ಇಲ್ಲಿನ ಸೋಮೇಶ್ವರ ದೇವರ ಕಾರಣಕ್ಕೆ ಬೀಚ್‌ಗೆ ಸೋಮೇಶ್ವರ ಬೀಚ್ ಎಂಬ ಹೆಸರು ಬಂದಿದೆ. ಗೋಕರ್ಣ ಹೊರತುಪಡಿಸಿದರೆ ಪಶ್ಚಿಮಾಭಿಮುಖವಾಗಿರುವ ಏಕೈಕ ಶಿವಾಲಯವಿದು. ಸೂರ್ಯಾಸ್ತಮಾನದ ವೇಳೆ ಸೂರ್ಯನ ಕಿರಣಗಳು ಮುಖ್ಯದ್ವಾರದ ಮೂಲಕ ನೇರವಾಗಿ ಗರ್ಭಗುಡಿಯಲ್ಲಿರುವ ಅತ್ಯಪೂರ್ವದ ಶಿವಲಿಂಗದ ಮೇಲೆ ಬೀಳುವ ನೋಟವಂತೂ ಅನನ್ಯ. ಲಂಕೆಗೆ ಹೊರಟ ಶ್ರೀರಾಮ ತನ್ನ ಸೇನೆಯೊಂದಿಗೆ ಇಲ್ಲಿ ಕಳೆದು ಶಿವದರ್ಶನ ಪಡೆದ ಸಂಕೇತವಾಗಿ ಸೋಮೇಶ್ವರ ದೇಗುಲ ಸ್ಥಾಪಿತವಾಯಿತು ಎನ್ನಲಾಗಿದೆ. ತೀರದಲ್ಲಿರುವ ಇನ್ನೊಂದು ಪ್ರಾಕೃತಿಕ ವೈಚಿತ್ರ್ಯ ನಾಗತೀರ್ಥ. ವರ್ಷದ ಎಲ್ಲಾ ಕಾಲದಲ್ಲಿಯೂ ಪುಟ್ಟ ಕುಂಡದಂತಿರುವ ತೀರ್ಥದಲ್ಲಿ ನೀರು ಇರುತ್ತದೆ. ಕುಂಡಕ್ಕೆ ಹೊಂದಿಕೊಂಡಿರುವ ಗುಹೆಯಿಂದ ನೀರು ಬರುತ್ತಿರುತ್ತದೆ. ಗುಹೆಯ ಮೇಲ್ಭಾಗದಲ್ಲಿ ಬೃಹತ್ ಶಿಲಾಪರ್ವತವಿದ್ದು ಸುತ್ತಮುತ್ತ ಅತ್ಯಪರೂಪದ ಕೇದಗೆ ಬನ ಪ್ರವಾಸಿಗರ ಮನಸೆಳೆಯುತ್ತದೆ.
ಪ್ರವಾಸಿಗರಿಗೆ ಕಿರು ಅನುಕೂಲ : ಬೀಚ್ ಹಾಗೂ ದೇವಳ ಸೌಂದರ್ಯ ವೀಕ್ಷಣೆಗೆ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿರುವುದರಿಂದ ತೀರ ಪ್ರದೇಶದಲ್ಲಿ ವಿಶ್ರಾಂತಿಗೆ ಕಲ್ಲಿನ ಬೆಂಚುಗಳ ಅಳವಡಿಕೆ ಮಾಡಲಾಗಿದೆ. ಪಡುವಣ ಫ್ರೆಂಡ್ಸ್ ಸಹಿತ ಸ್ಥಳೀಯ ಸಂಘ ಸಂಸ್ಥೆಗಳು ಈ ಕೈಂಕರ್ಯದಲ್ಲಿ ಕೈಜೋಡಿಸಿದೆ. ಪ್ರವಾಸೋದ್ಯಮ ಇಲಾಖೆಯಿಂದ ಇಂಟರ್‌ಲಾಕ್ ಅಳವಡಿಕೆ ನಡೆದಿದೆ.
'ಕರ್ನಾಟಕದ ಉಡುಪಿ ಜಿಲ್ಲೆಯ ಬೈಂದೂರು ಸಮೀಪದಲ್ಲಿರುವ ಸುಂದರ ಸಮುದ್ರ ತೀರವಾಗಿದೆ. ಅರಬ್ಬೀ ಸಮುದ್ರದ ಅಲೆಗಳು, ಶಾಂತ ವಾತಾವರಣ ಮತ್ತು ಪ್ರಕೃತಿ ಸೌಂದರ್ಯಕ್ಕಾಗಿ ಇದು ಪ್ರಸಿದ್ಧವಾಗಿದೆ." ಬನ್ನಿ ಒಮ್ಮೆ ಪ್ರವಾಸಕ್ಕೆ....
ಮತ್ತೆ ಮುಂದಿನ 'ಪಯಣ' ಸಂಚಿಕೆಯಲ್ಲಿ ಸಿಗೋಣವೇ, ನಮಸ್ಕಾರ.
(ಚಿತ್ರಗಳು : ಅಂತರ್ಜಾಲ ಕೃಪೆ)
ಕನ್ನಡ ಭಾಷಾ ಶಿಕ್ಷಕರು
ನೇತಾಜಿ ಸುಭಾಶ್ಚಂದ್ರ ಬೋಸ್
ಸರಕಾರಿ ಪ್ರೌಢಶಾಲೆ, ಮರವಂತೆ
ಬೈಂದೂರು ತಾಲೂಕು, ಉಡುಪಿ ಜಿಲ್ಲೆ.
ಮೊಬೈಲ್ : +91 94488 87713
****************************************