-->
ನಿಷ್ಪಾಪಿ ಸಸ್ಯಗಳು : ಸಂಚಿಕೆ - 150

ನಿಷ್ಪಾಪಿ ಸಸ್ಯಗಳು : ಸಂಚಿಕೆ - 150

ನಿಷ್ಪಾಪಿ ಸಸ್ಯಗಳು : ಸಂಚಿಕೆ - 150
ಲೇಖಕರು: ವಿಜಯಾ ಬಿ ಶೆಟ್ಟಿ ಸಾಲೆತ್ತೂರು
ಸಹ ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ 
ಬಾಳೆಪುಣಿ (ಇರಾ), ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ


ಪ್ರೀತಿಯ ಮಕ್ಕಳೇ, ಹೇಗಿದ್ದೀರಿ? ಮಳೆ ಹನಿಗಳ ಚೆಲ್ಲಾಟದ ನಡುವೆ ಉರಿ ಬಿಸಿಲ ಝಳ! ಈ ನಡುವೆ ಜಾರುತಿರುವ ಸಮಯವಂತೂ ಶಾಲೆಯ ಕನಸು ಕಾಣುತಿದೆಯಲ್ಲವೇ? ಸಕ್ಕರೆ ಚೆಲ್ಲಿದಂತೆ ಬಿದ್ದ ಹೊಸ ಮಳೆ ಹನಿಗೆ ನಿಸರ್ಗವೇ ಬೀಗಿದೆ. ಎಲ್ಲೆಲ್ಲೂ ಚಿಗುರುಗಳ ಒರತೆ! ಇದನ್ನು ನೋಡಿ ಖುಷಿಪಡುತ್ತಾ ನಾನು ನಿನ್ನೆ ನಮ್ಮ ಶಾಲೆಯ ಸುತ್ತ ಓಡಾಡಿದೆ. ಆಗ ಬೇಲಿಯಲ್ಲಿದ್ದ ಹಸಿರು ಗಿಡದಲ್ಲಿ ಬಂಗಾರ ವರ್ಣದ ಗುಂಡು ಸರದಂತಹ ಕಾಯಿಗಳ ಗೊಂಚಲುಗಳನ್ನು ಕಂಡೆ. ಈ ಗಿಡದಲ್ಲಿ ಮೊನ್ನೆ ಮಾರ್ಚ್‌ ತಿಂಗಳಲ್ಲೂ ಹಣ್ಣುಗಳಿದ್ದವು, ಮಾತ್ರವಲ್ಲದೆ ನೇರಳೆ ಬಣ್ಣದ ಪುಟಾಣಿ ಹೂಗಳ‌ ಗೊಂಚಲುಗಳೂ ಇದ್ದವು. ಈಗಲೂ ಹೂಗಳ ಜೊತೆ ಹಣ್ಣುಗಳ ಗೊಂಚಲುಗಳು ಗಾಳಿಗೆ ಜೀಕುವುದನ್ನು ಕಂಡು ಆಶ್ಚರ್ಯಗೊಂಡೆ.

ಗಿಡಕ್ಕೂ ನೆಟ್ಟ ಕಣ್ಣು ನೆಟ್ಟಂತಿದ್ದ ನನ್ನ ನೋಟ ಕಂಡು ಗರ್ವ ಬಂತೇನೊ.. "ಆಕಾಶದಲ್ಲಿ ಜೀಕುವ ನನ್ನ ಹೂಗೊಂಚಲು, ಬಂಗಾರದ ಹಾರದಂತಿರುವ ಹಣ್ಣುಗಳ ಗೊಂಚಲುಗಳು ಹೇಗಿವೆ?" ಎಂದು ನಕ್ಕಿತು. "ಹೂ, ಹಣ್ಣಿನ ಅಂದ ಕಂಡು ನಿಜಕ್ಕೂ ನನಗೆ ಹೊಟ್ಟೆಕಿಚ್ಚಾಗಿತ್ತು. ಸ್ವರ್ಣ ವರ್ಣದ ಪುಟಾಣಿ ದುಂಡು ದುಂಡಾದ ಹಣ್ಣುಗಳು, ಕಡು ನೇರಳೆ ವರ್ಣದ ಹೂ ಗೊಂಚಲುಗಳು ಮುದ್ದಾದ ತಿಳಿ ಹಸಿರು ಎಲೆಗಳ ನಡುವೆ ಕಿರೀಟವಿಟ್ಟಂತೆ ಕಣ್ಣು ಕೋರೈಸುವಂತಿದ್ದವು.

"ಜೋಕಾಲಿ ಆಡೋದು ಗೊತ್ತಾ ನಿನಗೆ? ನನ್ನ ಹೂ ಹಣ್ಣು ಜೋಕಾಲಿಯಾಡೋದ್ರಿಂದಲೆ ನನ್ನನ್ನು ಸ್ಕೈಫ್ಲವರ್ ಅಂತಾರೆ ಗೊತ್ತಾ? ಬಂಗಾರದ ಬಣ್ಣದ ಹಣ್ಣುಗಳನ್ನು ನೋಡಿಯೇ ಗೋಲ್ಡನ್ ಡ್ಯೂಡ್ರಾಫ್ ಅನ್ನುವರು. ನೀವು ಮಾತ್ರ ನನ್ನನ್ನು ಬೇಲಿಗಿಡ, ಪ್ರಾಣಿಗಳು ತಿನ್ನದ ಗಿಡ ಅಂತೀರಿ" ಎಂದು ಬೇಸರ ವ್ಯಕ್ತಪಡಿಸಿತು. 

"ಹೌದು, ನಮಗೆ ನಿನ್ನ ಹೆಸರುಗಳೆಲ್ಲ ಗೊತ್ತಿಲ್ಲ, ಆದರೆ ನೀನು ಬೇಲಿ, ಗಡಿ ರಚನೆಯ ಕಾರ್ಯಕ್ಕೆ ಜನಪ್ರಿಯವಾಗಿದ್ದೀಯ. ಉದ್ಯಾನಗಳಲ್ಲೂ ಜಾಗಪಡೆದಿದ್ದಿ ಗೊತ್ತು ನನಗೆ. ಕುಂಡದಲ್ಲಿ ಬೆಳೆಸಲೂ ಸೂಕ್ತಮಾರ್ಗದರ್ಶನ ನಿನಗಿದೆ. ನಿನ್ನ ಹೂವು ಹಣ್ಣುಗಳಿಗೆ ಕ್ರಿಮಿ ಕೀಟಗಳು, ಪಕ್ಷಿಗಳು ಸ್ನೇಹಿತರೆಂದು ಗೊತ್ತು. ಆದರೂ ನೀನೇನು ಬಹಳ ದೊಡ್ಡ ಸಾಚಾ ಏನಲ್ಲ" ಎಂದು ಗಿಡದ ಅಹಂಕಾರ ಮುರಿಯಲು ಯತ್ನಿಸಿದೆ.

"ಯಾಕೆ ಹಾಗಂತೀಯ? ನಾನು ಒಂದು ನಿಷ್ಪಾಪಿ ಸಸ್ಯ! ನನ್ನ ಅಲ್ಸಾ, ಔರಿಯಾ, ಅಸಿಗೋಲ್ಡ್ ನಂತಹ ಹಲವಾರು ತಳಿಗಳನ್ನು ಮಾನವ ಇಷ್ಟಪಟ್ಟು ಬೆಳೆಸುತ್ತಿದ್ದಾನೆ ಗೊತ್ತಾ? ಒಂದು ತಳಿಯಲ್ಲಂತೂ ಎಲೆಯ ಬಣ್ಣಗಳೂ ಹಳದಿ ಗೊತ್ತಾ! ಬರ ಸಹಿಷ್ಣು ಸಸ್ಯ ನಾನು. ನಿಮ್ಮಿಂದ ಹೆಚ್ಚು ನೀರು, ಗೊಬ್ಬರ ನಾ ಕೇಳಲ್ಲ" ಎಂದು ತಲೆ ತಗ್ಗಿಸಿತು.

"ನಿನ್ನ ತಿಳಿ ಹಸಿರು ಅಂಡಾಕಾರದ ವಿರುದ್ಧ ದಿಕ್ಕಿನ ಬೆಳವಣಿಗೆಯ ಎಲೆಗಳೇ ಚಂದ. ಹೂ ಹಣ್ಣು ಇನ್ನೂ ಸೊಗಸು. ಆದರೆ ಕೆಲವೆಡೆ ನಿನ್ನನ್ನು ಆಕ್ರಮಣಕಾರಿ ಎಂದೂ ಜಾಗ್ರತೆ ವಹಿಸುತ್ತಾರೆ ಗೊತ್ತಾ? ನಿನ್ನ ಕಾಯಿಗಳು 'ಹಣ್ಣುಹಣ್ಣಾಗಲಿ' ಎಂದೇ ಪಕ್ಷಿಗಳು ಕಾಯುತ್ತಾ ಬಿಟ್ಟಿವೆ. ಇಲ್ಲವಾದರೆ ಯಾವಾಗಲೋ ಖಾಲಿಯಾಗ್ಬೇಕಿತ್ತು. ಅವುಗಳಿಗೂ ಗೊತ್ತು.. ಸರಿ ಹಣ್ಣಾಗದಿದ್ದರೆ ನೀನೊಂದು ವಿಷದ ಹಣ್ಣಿನ ಗಿಡ" ಎಂದು ಹೇಳುತ್ತಾ ನಾನು ನಕ್ಕುಬಿಟ್ಟೆ.

ನನ್ನ ಮಾತು ಕೇಳಿ ಕೆರಳಿದ ಗಿಡ "ನೋಡು, ನೀನೇನೆ ಹೇಳು ಅವೆಲ್ಲ ಸ್ವಲ್ಪಮಟ್ಟಿಗೆ ನಿಜವಿರಬಹುದು. ನಾನು ವರ್ಬೆನೇಸಿ ಎಂಬ ದೊಡ್ಡ ಕುಟುಂಬದ ಸದಸ್ಯತನ ಪಡೆದಿದ್ದೇನೆ ನೆನಪಿಟ್ಟುಕೋ" ಎಂದಿತು. "ಡುರಾಂಟಾ ಎರೆಕ್ಟಾ ಎಂಬ ವೈಜ್ಞಾನಿಕ ಹೆಸರೂ ನನಗಿದೆ. ಎರೆಕ್ಟಾ ಎಂದರೆ ಲ್ಯಾಟಿನ್ ಭಾಷೆಯಲ್ಲಿ 'ನೇರವಾಗಿ' ಅಂತರ್ಥ. ನಾನ್ಯವತ್ತೂ ನೇರವಾಗಿಯೇ ಬೆಳೀತೇನೆ. ಅದೂ ವರ್ಷಕ್ಕೆ ಅರ್ದ ಮೀಟರ್ ನಂತೆ ಸುಮಾರು ಆರು ಮೀಟರ್ ವರೆಗೂ ಬೆಳೆಯಬಲ್ಲೆ. ಸುಮ್ ಸುಮ್ನೆ ಹೆಸ್ರಿಟ್ಟಿಲ್ಲ ನಂಗೆ... 15 ನೇ ಶತಮಾನದ ಇಟಾಲಿಯನ್ ಸಸ್ಯಶಾಸ್ತ್ರಜ್ಞ ಕ್ಯಾಸ್ಟೋರ್ ಡುರಾಂಟೆಯವರ ಗೌರವಾರ್ಥ ನನಗೀ ಹೆಸರು ಬಂದಿದೆ ಗೊತ್ತಾ?"ಎಂದು ಕೇಳಿತು.

ಈಗ ನಾನೂ ನಯವಾಗಿ "ಕ್ಷಮಿಸು ಡುರಾಂಟಾ ಎರೆಕ್ಟಾ... ಸಸ್ಯಗಳನ್ನು ಪ್ರೀತಿಸುವ ನಾನು ನಿನ್ನನ್ನು ಕೋಪಗೊಳಿಸಿದ್ದು ತಪ್ಪಾಯ್ತು. ನಿನ್ನ ಮೇಲಿನ ಮೋಹದಿಂದ, ನಿನ್ನ ಬಗ್ಗೆ ಅರಿಯುವುದಕ್ಕೋಸ್ಕರ ಮಾತನಾಡಿದೆ. ಪ್ರಪಂಚದಾದ್ಯಂತ ನೈಸರ್ಗಿಕಗೊಳಿಸಲಾದ ನಿನ್ನ ಬಗ್ಗೆ ನನ್ನದೇನೂ ಆಕ್ಷೇಪಗಳಿಲ್ಲ. ಮಾನವನಿಗೆ ಚರ್ಮದ ಸಮಸ್ಯೆ, ಉರಿಯೂತ, ಗಾಯ ಹಾಗೂ ಇನ್ನಿತರ ಕೆಲ ಸಮಸ್ಯೆಗಳಿಗೆ ನೀನೇ ಪರಿಹಾರವಾಗಿದ್ದಿ. ಮಧ್ಯ ಹಾಗೂ ಉತ್ತರ ದಕ್ಷಿಣ ಅಮೇರಿಕಾದ ಮೂಲ ಹೊಂದಿರುವ ನೀನು ನಮ್ಮ ಶಾಲೆಯ ಬೇಲಿಯವರೆಗೂ ಹಾರಿ ಬಂದಿರುವೆ ಎಂದರೆ ನೀನೇನು ಸಾಮಾನ್ಯವೆ? ಸಾಮರ್ಥ್ಯವಿದ್ದೇ ಬಂದಿರುವೆ, ನೀನು ಜಾಣ ಮರಿ" ಎಂದೆ. 

ಡುರಾಂಟಾ ಎರೆಕ್ಟಾ ಗೆ ಬಹಳ ಸಂತಸವಾಯ್ತು. ನನಗೂ ಖುಷಿ ಎನಿಸಿತು. ಒಂದು ಗಿಡವೇ ಬಹುಕಾಂಡ ಸಸ್ಯವಾಗಿ ಇಷ್ಟು ಸುಂದರವಾಗಿ ಕಾಣಿಸುತ್ತಿರುವಾಗ ಬೇಲಿಯುದ್ದಕೂ ಇದ್ದರೆ ಎಷ್ಟು ಚೆನ್ನಾಗಿ ಕಾಣಬಹುದಿತ್ತಲ್ಲಾ... ಎಂದೆನಿಸಿತು. "ಈ ಮಳೆಗಾಲದಲ್ಲಿ ನೆಟ್ಟು ಬಿಡು.. ನನ್ನ ಒಂದು ತುಂಡು ಗೆಲ್ಲನ್ನು ನೆಟ್ಟರೂ ಸಾಕು... ಆಮೇಲೆ ನೋಡು" ಎಂದು ಗಿಡ ನಕ್ಕಿತು, ನಾನೂ ನಕ್ಕು ಹೆಬ್ಬೆಟ್ಟು ತೋರುತ್ತಾ "ಖಂಡಿತ" ಎಂದೆ. ನೀವೂ ಈ ಸುಂದರವಾದ ಡುರಾಂಟಾ ಎರೆಕ್ಟಾ ಸಸ್ಯ ಕಾಣ ಸಿಕ್ಕರೆ ಗುರತು ಹಿಡಯುವಿರಲ್ಲವೇ? ಎಲ್ಲಾ ಕಡೆ ನೀವಿದನ್ನು ಕಾಣಬಲ್ಲಿರಿ. 

ನಿಷ್ಪಾಪಿ ಸಸ್ಯಗಳ ಪ್ರೀತಿಗೆ ಸೋತು ನೀವು ಯಾವುದಾದರೂ ಹೊಸ ಸಸ್ಯಗಳನ್ನು ಸಾಕುತ್ತಿರುವಿರಾದರೆ ಅಥವಾ ಗುರುತಿಸಿ ರಕ್ಷಿಸುತ್ತಿದ್ದರೆ ದಯವಿಟ್ಟು ನನ್ನ 7892587191 ನಂಬರ್ ಗೆ ತಿಳಿಸುವಿರಾ?

ಸರಿ ಮಕ್ಕಳೇ... ಮುಂದಿನ ವಾರ ಇನ್ನೊಂದು ನಿಷ್ಪಾಪಿ ಸಸ್ಯದ ಬಗ್ಗೆ ತಿಳಿಯೋಣ, ನಮಸ್ತೆ.
..................... ವಿಜಯಾ ಬಿ ಶೆಟ್ಟಿ ಸಾಲೆತ್ತೂರು
ಸಹ ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ 
ಶಾಲೆ , ಬಾಳೆಪುಣಿ (ಇರಾ)
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
Mob : +91 78925 87191
*****************************************

Ads on article

Advertise in articles 1

advertising articles 2

Advertise under the article