-->
ಪಯಣ : ಸಂಚಿಕೆ - 93 (ಬನ್ನಿ ಪ್ರವಾಸ ಹೋಗೋಣ)

ಪಯಣ : ಸಂಚಿಕೆ - 93 (ಬನ್ನಿ ಪ್ರವಾಸ ಹೋಗೋಣ)

ಪಯಣ : ಸಂಚಿಕೆ - 93 (ಬನ್ನಿ ಪ್ರವಾಸ ಹೋಗೋಣ) 
ಲೇಖನ : ರಮೇಶ ನಾಯ್ಕ, ಉಪ್ಪುಂದ 
ಕನ್ನಡ ಭಾಷಾ ಶಿಕ್ಷಕರು 
ನೇತಾಜಿ ಸುಭಾಶ್ಚಂದ್ರ ಬೋಸ್ 
ಸರಕಾರಿ ಪ್ರೌಢಶಾಲೆ, ಮರವಂತೆ 
ಬೈಂದೂರು ತಾಲೂಕು, ಉಡುಪಿ ಜಿಲ್ಲೆ.
ಮೊಬೈಲ್ : +91 94488 87713


ಪ್ರವಾಸ ಹೋಗುವುದೆಂದರೆ ಯಾರಿಗೆ ತಾನೇ ಇಷ್ಟ ಇಲ್ಲ...? ಹೊಸ ಊರು ನೋಡಬೇಕು.. ಹೊಸ ಹೊಸ ವಿಚಾರ ತಿಳಿದು ಕೊಳ್ಳಬೇಕೆನ್ನುವುದು ಪ್ರತಿಯೊಬ್ಬರ ಬಯಕೆ. ಧಾರ್ಮಿಕ ಕ್ಷೇತ್ರಗಳು, ಐತಿಹಾಸಿಕ ಸ್ಥಳಗಳು, ಪ್ರಕೃತಿಯ ವೈಶಿಷ್ಟ್ಯ ಸಾರುವ ತಾಣಗಳು ಹೀಗೆ ನಾನಾ ಬಗೆಯ ಪ್ರವಾಸಿ ತಾಣಗಳು ಎಲ್ಲರನ್ನೂ ಆಕರ್ಷಿಸುತ್ತದೆ... ಹೀಗೆ ನಮ್ಮ ಊರಿನ, ನಮ್ಮ ರಾಜ್ಯದ, ನಮ್ಮ ದೇಶದ ಸುಂದರ ತಾಣಗಳನ್ನು ಪರಿಚಯಿಸುವ ಪ್ರಯತ್ನ ಇಲ್ಲಿದೆ... ಬನ್ನಿ ಪ್ರವಾಸ ಹೋಗೋಣ... ರಮೇಶ ನಾಯ್ಕ, ಉಪ್ಪುಂದ.

ಎಲ್ಲರಿಗೂ ನಮಸ್ಕಾರ.... ಇಂದಿನ ಪ್ರವಾಸದಲ್ಲಿ 'ಹುಬ್ಬಳ್ಳಿ: ಧಾರವಾಡ ಸಮೀಪದ ನೀರಸಾಗರಕ್ಕೆ' ಪಯಣ ಮಾಡೋಣ ಬನ್ನಿ....

                     
ವಾಸ್ತವದಲ್ಲಿ ಇದು ಕೆರೆ. ಬೃಹತ್ ಕೆರೆ ಇಲ್ಲಿನ ಜನಕ್ಕೆ ಸಾಗರದಂತೆ ಗೋಚರಿಸಿದ್ದರಿಂದ ಕೆರೆಯನ್ನೇ ಸಾಗರ ಎಂದು ಕರೆದರು. ಈ ಕೆರೆಗೆ ಅಣತಿ ದೂರದಲ್ಲಿ 'ನೀರಸಾಗರ' ಎನ್ನುವ ಪುಟ್ಟ ಗ್ರಾಮವೂ ಇರುವುದು ಕಾಕತಾಳೀಯ.

ಸುತ್ತೆಲ್ಲ ಗುಡ್ಡಗಾಡು ಪ್ರದೇಶ. ಕೆರೆಯ ದಂಡೆಗೆ ಆಕಾಶವೇ ಬಾಗಿರುವಂತೆ ಅನಿಸುತ್ತದೆ. ಇಕ್ಕೆಲಗಳಲ್ಲಿ ದುಮ್ಮವಾಡ ಮತ್ತು ನೀರಸಾಗರ ಗ್ರಾಮ ಬಿಟ್ಟರೆ ಉಳಿದಂತೆ ತಂಪಾದ ಹಸಿರು ತೋಟಗಳ ಹಜಾರ ಮನಸ್ಸಿಗೆ ಮುದ ನೀಡುತ್ತದೆ.

ಹುಬ್ಬಳ್ಳಿಯಿಂದ 22 ಕಿ.ಮೀ ಅಂತರದಲ್ಲಿರುವ ಈ ಕೆರೆ ಕಲಘಟಗಿ ತಾಲ್ಲೂಕು ವ್ಯಾಪ್ತಿಗೆ ಬರುತ್ತದೆ. ಸರ್. ಎಂ. ವಿಶ್ವೇಶ್ವರಯ್ಯ ಅವರು ಗ್ರಾಮಗಳ ಕಿರು ನೀರಾವರಿಗಾಗಿ ದುಮ್ಮವಾಡ ಬಳಿ ಈ ಬೃಹತ್ ಕೆರೆ ನಿರ್ಮಿಸಿದರು. ಬಳಿಕ ಹುಬ್ಬಳ್ಳಿ ನಗರಕ್ಕೆ ಕುಡಿಯುವ ನೀರು ಪೂರೈಸಲು ಈ ಕೆರೆಯನ್ನು ಇನ್ನಷ್ಟು ಅಭಿವೃದ್ಧಿಪಡಿಸಿ 'ನೀರಸಾಗರ' ಎಂದು ಮರು ನಾಮಕರಣ ಮಾಡಲಾಯಿತು.

ಹುಬ್ಬಳ್ಳಿ ಸೇರಿದಂತೆ ಸುತ್ತಲಿನ ನಗರ ವಾಸಿಗಳು ವಾರದ ಕೊನೆ (ವೀಕೆಂಡ್) ಕಳೆಯಲು ಬರುವುದು ಇದೇ ನೀರಸಾಗರಕ್ಕೆ. ಬೇಸಿಗೆಯಲ್ಲಂತು ಕುಟುಂಬ ಸಮೇತ ಬಂದು ನಾಲ್ಕಾರು ಗಂಟೆ ಕಳೆಯಲು ಮತ್ತು ನಗರದ ಜಂಜಡ ಮರೆಯಲು ಇದು ಹೇಳಿ ಮಾಡಿಸಿದ ತಾಣ.

ಇದು ಹುಬ್ಬಳ್ಳಿಯಿಂದ 22 ಹಾಗೂ ಧಾರವಾಡದಿಂದ 20 ಕಿ.ಮೀ ಅಂತರದಲ್ಲಿದೆ. ಹುಬ್ಬಳ್ಳಿ ಗೋಕುಲ ರಸ್ತೆ - ತಾರಿಹಳ - ಕಣವಿ ಹೊನ್ನಾಪುರ ಮಾರ್ಗ, ಧಾರವಾಡ - ದುಮ್ಮವಾಡ - ನೀರಸಾಗರ, ಹುಬ್ಬಳ್ಳಿ ಹಾಗೂ ಧಾರವಾಡಗಳಿಂದ ನೇರ ಬಸ್ ಸೌಲಭ್ಯ ಇದೆ. ಸ್ವಂತ ವಾಹನದಲ್ಲಿ ಹೋಗುವವರಿಗೆ ಉತ್ತಮ ರಸ್ತೆಯೂ ಇದೆ.

ಇಲ್ಲಿ ಹೊಟೇಲ್, ವಸತಿ ಸೌಲಭ್ಯ ಇಲ್ಲ. ಅವಶ್ಯಕ ಸಾಮಗ್ರಿಗಳನ್ನು ನಗರದಿಂದಲೇ ಕೊಂಡೊಯ್ಯಬೇಕು. ಹುಬ್ಬಳ್ಳಿಗೆ ಬರುವ ಪ್ರವಾಸಿಗರು ವರೂರಿನ ನವಗ್ರಹತೀರ್ಥ, ಗಾಯತ್ರಿ ತಪೋವನ, ಸಿದ್ದಾರೂಢಸ್ವಾಮಿ ಮಠ, ಮೂರು ಸಾವಿರ ಮಠ, ನೃಪತುಂಗಬೆಟ್ಟ, ಸಂಜೀವಿನ ಪಾರ್ಕ್, ಮುರುಘಾ ಮಠ, ಥ್ಯಾಕರೆ ಗೋರಿ, ಬೇಂದ್ರೆ ಅಜ್ಜನ ಸಾಧನಕೇರಿ, ರಾಷ್ಟ್ರೀಯ ಹಿಂದುಸ್ತಾನಿ ಸಂಗೀತ ವಸ್ತು ಸಂಗ್ರಹಾಲಯ, ಉಣಕಲ್ ಕೆರೆಗಳನ್ನು ನೋಡಬಹುದು.

"ನೀರಿನ ಆಗರ, ಎಷ್ಟೋ ಜನರಿಗೆ, ಸಸ್ಯ ರಾಶಿಗಳಿಗೆ, ಜೀವರಾಶಿಗಳಿಗೆ ನೀರನ್ನು ಉಣಿಸುವ ಈ ಕೆರೆಯನ್ನೇ ಸಾಗರವನ್ನಾಗಿಸಿಕೊಂಡ ಈ ನೀರಸಾಗರ" ಬನ್ನಿ ಒಮ್ಮೆ ಪ್ರವಾಸಕ್ಕೆ... 

ಮತ್ತೆ ಮುಂದಿನ 'ಪಯಣ' ಸಂಚಿಕೆಯಲ್ಲಿ ಸಿಗೋಣವೇ, ನಮಸ್ಕಾರ.
 (ಚಿತ್ರಗಳು : ಅಂತರ್ಜಾಲ ಕೃಪೆ)
......................... ರಮೇಶ ನಾಯ್ಕ, ಉಪ್ಪುಂದ
ಕನ್ನಡ ಭಾಷಾ ಶಿಕ್ಷಕರು 
ನೇತಾಜಿ ಸುಭಾಶ್ಚಂದ್ರ ಬೋಸ್ 
ಸರಕಾರಿ ಪ್ರೌಢಶಾಲೆ, ಮರವಂತೆ
ಬೈಂದೂರು ತಾಲೂಕು, ಉಡುಪಿ ಜಿಲ್ಲೆ.
ಮೊಬೈಲ್ : +91 94488 87713
****************************************


Ads on article

Advertise in articles 1

advertising articles 2

Advertise under the article