-->
ನಿಷ್ಪಾಪಿ ಸಸ್ಯಗಳು : ಸಂಚಿಕೆ - 149

ನಿಷ್ಪಾಪಿ ಸಸ್ಯಗಳು : ಸಂಚಿಕೆ - 149

ನಿಷ್ಪಾಪಿ ಸಸ್ಯಗಳು : ಸಂಚಿಕೆ - 149
ಲೇಖಕರು: ವಿಜಯಾ ಬಿ ಶೆಟ್ಟಿ ಸಾಲೆತ್ತೂರು
ಸಹ ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ 
ಬಾಳೆಪುಣಿ (ಇರಾ), ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ

     
ಪ್ರೀತಿಯ ಮಕ್ಕಳೇ.. ಹೇಗಿದ್ದೀರಿ? ಅಲ್ಲಲ್ಲಿ ಅತಿಥಿಯಂತೆ ಮಳೆ ಬರ್ತಾ ಇದೆ. ನಿಮ್ಮಲ್ಲೂ ಬಂದಿರಬಹುದಲ್ಲಾ? ನಾಲ್ಕು ಹನಿ ಹೊಸ ಮಳೆ ಬಂದರೆ ಸಾಕು.. ನಿಸರ್ಗದಲ್ಲಿ ಹೊಸ ಚೈತನ್ಯ ತುಂಬಿಕೊಳ್ಳುವುದನ್ನು ಗಮನಿಸಬಹುದು. ಅರಶಿನ, ಅರಾರೂಟ್, ಕೆಸು, ಸುವರ್ಣಗಡ್ಡೆಯಂತಹ ಗಡ್ಡೆಗಳು ಲವಲವಿಕೆಯಿಂದ ಮೊಳಕೆಯೊಡೆಯ ತೊಡಗುತ್ತವೆ. ಸಸ್ಯಗಳಿಂದ ಸಿಡಿದು ದೂರವಾದ ಬೀಜಗಳು ಸಂಭ್ರಮದಿಂದ ಮೊಳಕೆಯೊಡೆಯಲು ಕ್ಷಣಗಣನೆಯನ್ನಾರಂಭಿಸುತ್ತವೆ. ಆದರೆ ಕೆಲ ಸಸ್ಯಗಳಿಗೆ ನೀರು, ಮಳೆ... ಎಂದರೆ ಅಪಥ್ಯ!

ಗುಲಾಬಿಗಿಂತಲೂ ಸುಂದರವಾದ ಹೂಗಳನ್ನು ನೀಡಿ ಜನಮನ ಗೆದ್ದಿರುವ ಅಡೆನಿಯಮ್ ಒಬೆಸಮ್ ಎಂಬ ಬೋನ್ಸಾಯ್ ಗುಲಾಬಿ ಅಥವಾ ಡೆಸರ್ಟ್ ರೋಸ್ ಮಳೆಯನ್ನು ಕಂಡರೆ ಮೌನವಾಗುತ್ತದೆ ಗೊತ್ತಾ? ಎರಡು ವಾರಕ್ಕೆ ಒಮ್ಮೆ ಹನಿ ನೀರು ಕಂಡರೆ ಅಷ್ಟೇ ಸಾಕು ಅನ್ನಿಸುವ ಇದು ಮೂಲತ: ಮರುಭೂಮಿಯ ಡಾಗ್ಬೇನ್ ಕುಟುಂಬದ ಅಪೊಸಿನೇಸಿ ಉಪಕುಟುಂಬದ ಹೂ ಬಿಡುವ ವಿಷಕಾರಿ ಸಸ್ಯವಾಗಿದೆ. ಆಫ್ರಿಕಾ ಮತ್ತು ಅರೇಬಿಯನ್ ಪರ್ಯಾಯ ದ್ವೀಪಗಳಿಗೆ ಇದು ಸ್ಥಳೀಯ ಸಸ್ಯವಾಗಿದೆ. ತನ್ನ ಹೂವಿನ ಸೌಂದರ್ಯದ ಮೂಲಕ ಉಷ್ಣವಲಯದ ಉದ್ದಗಲಕ್ಕೂ ಕಾಲಿಟ್ಟ ಈ ರೆಸಾರ್ಟ್ ರೋಸ್ ಒಂದು ಗಟ್ಟಿ ಮುಟ್ಟಾದ ಸಸ್ಯ. ಒಳಾಂಗಣ ಮತ್ತು ಹೊರಾಂಗಣ ಉದ್ಯಾನ ಗಳಿಗೆ ಸೂಕ್ತ ಆಯ್ಕೆಯಾಗಿದ್ದು ಇದರ ವಿಶಿಷ್ಟ ಊದಿಕೊಂಡ ಕಾಂಡ ಹಾಗೂ ಹೊಳಪುಳ್ಳ ಎಲೆಗಳು, ಕುಬ್ಜತೆ ಹಾಗೂ ಆಕರ್ಷಕ ಪುಷ್ಪಗಳು ಇತರ ಸಸ್ಯಗಳಿಂದ ಇದನ್ನು ಪ್ರತ್ಯೇಕಿಸುತ್ತವೆ. ಅಡೆನಿಯನ್ ಒರಟಾದ ಮರುಭೂಮಿಯ ನಿವಾಸಿಯೇ ಆಗಿದ್ದರೂ ಯಾವುದೇ ಪರಿಸ್ಥಿತಿಗೆ ಹೊಂದಿಕೊಳುವ ಸ್ಥಿತಿಸ್ಥಾಪಕ ಗುಣ ಹೊಂದಿದೆ. ಇವು ಕನಿಷ್ಠ 70'F ತಾಪಮಾನದೊಂದಿಗೆ ನೇರ ಸೂರ್ಯನ ಬಿಸಿಲಿನಲ್ಲಿರಲು ಇಷ್ಟಪಡುತ್ತವೆ.100'F ತಾಪಮಾನದಲ್ಲೂ ಚೆನ್ನಾಗಿರಬಲ್ಲವು. ಅಂದರೆ ಇದರ ಸಾಮರ್ಥ್ಯ ನಿಮಗೀಗ ಅರ್ಥವಾಗಿರಬಹುದು... 

ನಾವು ಈ ಸಸ್ಯಗಳನ್ನು ಸಾಕುವುದಿದ್ದರೂ ಬಿಸಿಲಲ್ಲೇ ಬೆಳೆಸಬೇಕು. ಬಿಸಿಲು ಚೆನ್ನಾಗಿ ಬಿದ್ದರೆ ಮಾತ್ರ ಹೂಗಳನ್ನು ಪಡೆಯಬಹುದು. ಇದರ ದಪ್ಪನೆಯ ಕಾಂಡದಲ್ಲಿ ನೀರನ್ನು ಹಿಡಿದಿಟ್ಟುಕೊಳ್ಳುವ ಕಾರಣ ನೀರು ಬಸಿದು ಹೋಗುವ ಮರಳು ಮಣ್ಣಲ್ಲೇ ನೆಡಬೇಕಾಗುತ್ತದೆ. ಎಲೆಗಳು ಹಳದಿಯಾಗಿವೆ, ಕೊಳೆಯುತ್ತಿವೆ ಎಂದರೆ‌ ನೀರು ಹೆಚ್ಚಾಗಿದೆಯೆಂದೇ ಅರ್ಥ. ಇದರ ಕಾಂಡದ ವಿಶಿಷ್ಟ ರೂಪಾಂತರವು ಅದರ ಉಳಿವಿಗೆ ಕೊಡುಗೆ ನೀಡುವುದಲ್ಲದೆ ಸೌಂದರ್ಯದ ಗುಟ್ಟಾಗಿದೆ. ಈ ಸಸ್ಯಗಳು ತಮ್ಮ ರಸ ಭರಿತ ಕಾಂಡಗಳಲ್ಲಿ ನೀರನ್ನು ಸಂಗ್ರಹಿಸುವುದರಿಂದ ಅವು 'ಬರ' ವನ್ನು ತಡೆದುಕೊಳ್ಳಬಲ್ಲವು. ಬುಡವು ದಪ್ಪಗಿದ್ದರೆ ಗಿಡವು ಹಳೆಯದಾಗಿದೆ, ಆರೋಗ್ಯವಂತ ಗಿಡವೆಂದು ತಿಳಿಯಬಹುದು. ಗಿಡಗಳ ತುದಿಗಳಲ್ಲಿ ಹೊಳೆಯುವ ಹಸಿರು ಎಲೆಗಳು ಗಿಡವು ಚೆನ್ನಾಗಿದೆ ಎನ್ನುತ್ತದೆ. ಬರದ ಒತ್ತಡಕ್ಕೊಳಗಾಗಿ ಎಲೆಗಳನ್ನು ಉದುರಿಸಿಕೊಂಡು ಮತ್ತೆ ಆರ್ದ್ರತೆ ಲಭ್ಯವಾದಾಗ ಚಿಗುರಬಲ್ಲವು! ಡೆಸರ್ಟ್ ರೋಸ್ ನ ಕಾಂಡವು ಕಾಲಾಂತರದಲ್ಲಿ ಶಿಲ್ಪಕಲೆಯ ರೂಪವನ್ನೂ ಬೆಳೆಸಿಕೊಳ್ಳಬಹುದು. ಇದು 50 ವರ್ಷಗಳಿಗೂ ಹೆಚ್ಚು ಕಾಲ ಕಾಂಡವನ್ನಷ್ಟೇ ಉಬ್ಬಿಸುತ್ತಾ ಅಂಗಳದಲ್ಲಿಟ್ಟ ಸಣ್ಣ ಚಟ್ಟಿಯಲ್ಲೇ ನಲಿಯಬಹುದು. ಕೆಲವು ಸಂಸ್ಕೃತಿಗಳಲ್ಲಿ ಈ ಮರುಭೂಮಿ ಗುಲಾಬಿ ಅದೃಷ್ಟ ಮತ್ತು ಸಮೃದ್ಧಿಯನ್ನು ತರುವುದೆಂಬ ನಂಬಿಕೆಯಿದೆ.

ಸಸ್ಯಗಳು ಕೆಲವೊಮ್ಮೆ ತಮ್ಮ ರಕ್ಷಣೆಗಾಗಿ ವಿಷವನ್ನೂ ಉತ್ಪಾದನೆ ಮಾಡುತ್ತವೆ. ಇದಕ್ಕೆ ರೆಸಾರ್ಟ್ ರೋಸ್ ಒಂದು ಉದಾಹರಣೆಯಾಗಿದೆ. ಇದರ ಕಾಂಡ ಹಾಗೂ ಎಲೆಯ ರಸವು ಪ್ರಾಣಿ, ಪಕ್ಷಿಗಳಿಗೆ ವಿಷವಾಗಿದ್ದು ಆಫ್ರಿಕಾದ ಹೆಚ್ಚಿನ ಭಾಗಗಳಲ್ಲಿ ದೊಡ್ಡ ಪ್ರಾಣಿಗಳನ್ನು ಬೇಟೆಯಾಡಲು ಬಾಣದ ವಿಷವಾಗಿ ಬಳಸುತ್ತಾರೆ. ಮೀನು ಹಿಡಿಯಲು ಕೂಡ ಇದರ ಕಾಂಡದ ರಸವನ್ನು ವಿಷವಾಗಿ ಬಳಸಲಾಗುತ್ತದೆ. ಈ ನಿಷ್ಪಾಪಿ ಸಸ್ಯವು ಹೀಗೆ ಮೈತುಂಬಾ ವಿಷ ತುಂಬಿಕೊಂಡಿದ್ದರೂ ತನ್ನ ಹೂವಿನ ಮಧುವನ್ನು ಇರುವೆ, ಚಿಟ್ಟೆ, ಪಕ್ಷಿ ಇತ್ಯಾದಿಗಳಿಗೆ ಹಂಚಬಲ್ಲದು. ಆದರೆ ಈ ಸಸ್ಯವನ್ನು ಮಕ್ಕಳಿಂದ ಹಾಗೂ ಸಾಕು ಪ್ರಾಣಿಗಳಿಂದ ದೂರವೇ ಬೆಳೆಸುವುದು ಅನಿವಾರ್ಯವಾಗಿದೆ.

ಅಡೆನಿಯಮ್ ನ ಹೂಗಳು ಕೆಂಪು, ಗುಲಾಬಿ, ನೇರಳೆ ಅಥವಾ ಒಂದೆರಡು ಬಣ್ಣಗಳ ಮಿಶ್ರಣವೂ ಆಗಿರಬಹುದು. ಕೆಲವು ತಳಿಯಲ್ಲಿ ಒಂದು ಸುತ್ತಿನ ದಳಗಳಿರುವ ಕೊಳವೆಯಾಕಾರಾದ ಹೂಗಳಿದ್ದರೆ ಕೆಲವು ಬಹು ಪಕಳೆಗಳ ಆಕರ್ಷಕ ಕಡು ಬಣ್ಣದ ಹೂಗಳನ್ನು ಬಿಡುತ್ತವೆ. ಹೂಗಳ ಹೊರಭಾಗ ಸಾಮಾನ್ಯವಾಗಿ ಮಂದಬಿಳಿ. ಇದರಲ್ಲಿ ಪ್ರಮುಖವಾಗಿ ನಾಲ್ಕು ತಳಿಗಳಿದ್ದು 
ಅಡೆನಿಯಮ್ ಸೋಮಾಲೆನ್ಸ್ ಎಂಬ ತಳಿ ಆಫ್ರಿಕಾದ ಸ್ಥಳೀಯ ಸಸ್ಯವಾಗಿದ್ದು 16 ಅಡಿಗಳೆತ್ತರ ಬೆಳೆದರೆ ಅಡೆನಿಯಮ್ ಒಲಿಪೋಲಿಯಮ್ ಅಳಿವಿನಂಚಿನಲ್ಲಿದ್ದು 1ಅಡಿ 4 ಇಂಚಷ್ಟೆ ಬೆಳೆಯುತ್ತದೆ. ಅಡನಿಯಮ್ ಸೊಕೊಟ್ರಾನಮ್ ತಳಿ ತಳದಲ್ಲಿ 8 ಅಡಿ ವ್ಯಾಸದ ವರೆಗೆ ಊದಿಕೊಳ್ಳುತ್ತದೆ.
ಬೀಜ ಮತ್ತು ಕಾಂಡದ ಕತ್ತರಿಸಿದ ಭಾಗದಿಂದ ಬೆಳೆಯಲ್ಪಡುವ ಅಡೆನಿಯಮ್ ಬೀಜಗಳು ಹತ್ತಿಯಂತಹ ಮೀಸೆಯ ಸಹಾಯದಿಂದ ದೂರಕ್ಕೆ ಹಾರುತ್ತದೆ. ವಿವಿಧ ದೇಶಗಳು ಹೊರಡಿಸಿದ ಅಂಚೆಚೀಟಿಗಳಲ್ಲಿ ಈ ಸಸ್ಯದ ಚಿತ್ರವನ್ನು ಗೌರವಾರ್ಥ ಬಳಸಲಾಗಿದೆ. ಹಲವಾರು ತೋಟಗಾರಿಕಾ ಪ್ರಶಸ್ತಿಗಳನ್ನು ಪಡೆದಿರುವ ರೆಸಾರ್ಟ್ ರೋಸ್ ರಾಯಲ್ ಹಾರ್ಟಿಕಲ್ಚರಲ್ ಸೊಸೈಟಿಯ ಗಾರ್ಡನ್ ಮೆರಿಟ್ ಪ್ರಶಸ್ತಿ ಪಡೆದಿದೆ. ಇದು ಒಳಾಂಗಣದ ಗಾಳಿ ಶುದ್ಧೀಕರಣದಲ್ಲೂ ಭಾಗವಹಿಸುತ್ತದೆ.

ಭೂವೈವಿಧ್ಯತೆಗಳಲ್ಲಿ ಮರುಭೂಮಿ ಬಹಳ ಕಷ್ಟಕರವಾದ ಭೂಮಿಯಲ್ಲೂ ಹೂವಿನ ಮೂಲಕ ಜನಮನ ರಂಜಿಸುವ ರೆಸಾರ್ಟ್ ರೋಸನ್ನು ಕಂಡರೆ ನಿಮಗೂ ಬೆಳೆಸಲೇ ಬೇಕೆಂಬ ಭಾವ ಮೂಡಬಹುದು. ತಾವು ಅದಕ್ಕಾಗಿ‌ ಖಂಡಿತವಾಗಿಯೂ ಪ್ರಯತ್ನಿಸುವಿರಲ್ಲವೇ?

ನಿಷ್ಪಾಪಿ ಸಸ್ಯಗಳ ಪ್ರೀತಿಗೆ ಸೋತು ನೀವು ಯಾವುದಾದರೂ ಹೊಸ ಸಸ್ಯಗಳನ್ನು ಸಾಕುತ್ತಿರುವಿರಾದರೆ ಅಥವಾ ಗುರುತಿಸಿ ರಕ್ಷಿಸುತ್ತಿದ್ದರೆ ದಯವಿಟ್ಟು ನನ್ನ 7892587191 ನಂಬರ್ ಗೆ ತಿಳಿಸುವಿರಾ?

ಸರಿ ಮಕ್ಕಳೇ... ಮುಂದಿನ ವಾರ ಇನ್ನೊಂದು ನಿಷ್ಪಾಪಿ ಸಸ್ಯದ ಬಗ್ಗೆ ತಿಳಿಯೋಣ, ನಮಸ್ತೆ.
..................... ವಿಜಯಾ ಬಿ ಶೆಟ್ಟಿ ಸಾಲೆತ್ತೂರು
ಸಹ ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ 
ಶಾಲೆ , ಬಾಳೆಪುಣಿ (ಇರಾ)
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
Mob : +91 78925 87191
*****************************************

Ads on article

Advertise in articles 1

advertising articles 2

Advertise under the article