ಪಯಣ : ಸಂಚಿಕೆ - 92 (ಬನ್ನಿ ಪ್ರವಾಸ ಹೋಗೋಣ)
Friday, May 1, 2026
Edit
ಪಯಣ : ಸಂಚಿಕೆ - 92 (ಬನ್ನಿ ಪ್ರವಾಸ ಹೋಗೋಣ)
ಲೇಖನ : ರಮೇಶ ನಾಯ್ಕ, ಉಪ್ಪುಂದ
ಕನ್ನಡ ಭಾಷಾ ಶಿಕ್ಷಕರು
ನೇತಾಜಿ ಸುಭಾಶ್ಚಂದ್ರ ಬೋಸ್
ಸರಕಾರಿ ಪ್ರೌಢಶಾಲೆ, ಮರವಂತೆ
ಬೈಂದೂರು ತಾಲೂಕು, ಉಡುಪಿ ಜಿಲ್ಲೆ.
ಮೊಬೈಲ್ : +91 94488 87713
ಪ್ರವಾಸ ಹೋಗುವುದೆಂದರೆ ಯಾರಿಗೆ ತಾನೇ ಇಷ್ಟ ಇಲ್ಲ...? ಹೊಸ ಊರು ನೋಡಬೇಕು.. ಹೊಸ ಹೊಸ ವಿಚಾರ ತಿಳಿದು ಕೊಳ್ಳಬೇಕೆನ್ನುವುದು ಪ್ರತಿಯೊಬ್ಬರ ಬಯಕೆ. ಧಾರ್ಮಿಕ ಕ್ಷೇತ್ರಗಳು, ಐತಿಹಾಸಿಕ ಸ್ಥಳಗಳು, ಪ್ರಕೃತಿಯ ವೈಶಿಷ್ಟ್ಯ ಸಾರುವ ತಾಣಗಳು ಹೀಗೆ ನಾನಾ ಬಗೆಯ ಪ್ರವಾಸಿ ತಾಣಗಳು ಎಲ್ಲರನ್ನೂ ಆಕರ್ಷಿಸುತ್ತದೆ... ಹೀಗೆ ನಮ್ಮ ಊರಿನ, ನಮ್ಮ ರಾಜ್ಯದ, ನಮ್ಮ ದೇಶದ ಸುಂದರ ತಾಣಗಳನ್ನು ಪರಿಚಯಿಸುವ ಪ್ರಯತ್ನ ಇಲ್ಲಿದೆ... ಬನ್ನಿ ಪ್ರವಾಸ ಹೋಗೋಣ... ರಮೇಶ ನಾಯ್ಕ, ಉಪ್ಪುಂದ.
ಎಲ್ಲರಿಗೂ ನಮಸ್ಕಾರ.... ಇಂದಿನ ಪ್ರವಾಸದಲ್ಲಿ 'ಕೊಪ್ಪ ತಾಲೂಕಿನ ಕರ್ಕಿಕೊಡದ ಶಿಲುಬೆ ಬೆಟ್ಟಕ್ಕೆ' ಪಯಣ ಮಾಡೋಣ ಬನ್ನಿ....
ಕಣ್ಣು ಹಾಯಿಸಿದಷ್ಟು ದೂರ ಮಲೆನಾಡಿನ ಸುಂದರ ಹಚ್ಚ ಹಸಿರು ಪ್ರಕೃತಿ, ಕಾಫಿ, ಟೀ ತೋಟಗಳ ರಮಣೀಯ ಸೊಬಗು, ಅವುಗಳ ನಡುವೆ ಎತ್ತರದಲ್ಲಿ ಕಂಗೊಳಿಸುವ ಬೆಟ್ಟ. ಇದೇ 'ಶಿಲುಬೆ ಬೆಟ್ಟ'. ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲ್ಲೂಕಿನ ಜಯಪುರದಿಂದ 3 ಕಿ.ಮೀ. ದೂರದ ಕರ್ಕಿಕೊಡ ಚಹಾ ತೋಟದಲ್ಲಿದೆ.
ಇದಕ್ಕೆ ಈ ಹೆಸರು ಬರಲೂ ವಿಶಿಷ್ಟ ಕಾರಣವೂ ಇದೆ. ಸುಮಾರು 150 ವರ್ಷಗಳ ಹಿಂದೆ ಕೇರಳ ಮೂಲದ ಕ್ರಿಶ್ಚಿಯನ್ನರು ಇಲ್ಲಿ ಕೆಲಸಕ್ಕಾಗಿ ವಲಸೆ ಬಂದಿದ್ದರು. ಅವರು ಪ್ರತಿವರ್ಷ ಗುಡ್ ಪ್ರೈಡೆಯಂದು (ಯೇಸುಕ್ರಿಸ್ತ ಶಿಲುಬೆಯೇರಿದ ದಿನ) ಈ ತೋಟದಲ್ಲಿನ ಚಿಕ್ಕ ಚರ್ಚ್‌ನಲ್ಲಿ ಪ್ರಾರ್ಥನೆ ಸಲ್ಲಿಸಿ ಶಿಲುಬೆಯನ್ನು ಹಿಡಿದು ಮೆರವಣಿಗೆಯಲ್ಲಿ 3 ಕಿ.ಮೀ. ದೂರದ ಬೆಟ್ಟಕ್ಕೆ ಹೋಗುತ್ತಿದ್ದರು. ಶಿಲುಬೆಯನ್ನು ಬೆಟ್ಟದ ಬಂಡೆಗಳ ಮಧ್ಯೆ ಪ್ರತಿಷ್ಠಾಪಿಸಿ ಮಧ್ಯಾಹ್ನದವರೆಗೆ ಪ್ರಾರ್ಥನೆ ಮಾಡುತ್ತಾ ಶ್ರದ್ಧೆ ಸಂಭ್ರಮಗಳಿಂದ ಗುಡ್ ಪ್ರೈಡೆ ಆಚರಣೆ ಮಾಡುತ್ತಿದ್ದರು. ಅದಕ್ಕಾಗಿಯೇ ಈ ಹೆಸರು ಬಂತು ಎನ್ನುತ್ತಾರೆ.
ಅಲ್ಲಿ ಪ್ರಾರ್ಥನೆ ಮಾಡಿದ ಮಲೆಯಾಳಿ ಕುಟುಂಬಗಳಲ್ಲಿ ನೆಮ್ಮದಿ, ಸುಖ, ಸಂತಾನವಿಲ್ಲದ ದಂಪತಿಗಳು ಮಕ್ಕಳನ್ನು ಪಡೆದ ವಿಷಯಗಳು, ಗುಣವಾದ ವ್ಯಾಧಿಗಳು, ನಿರುದ್ಯೋಗಿಗಳು ಪರದೇಶದಲ್ಲಿ ಉದ್ಯೋಗ ಗಳಿಸಿಕೊಳ್ಳುವುದು ಇತ್ಯಾದಿ ಸಂಗತಿ ಸುತ್ತಲಿನ ಊರುಗಳಿಗೆ ಹಬ್ಬಿದವು. ದಿನಗಳು ಉರುಳಿದಂತೆ ಈ ಬೆಟ್ಟದ ಬಗ್ಗೆ ಜನರಲ್ಲಿ ಭಕ್ತಿ ಗೌರವ ಹೆಚ್ಚಿತು. ಮುಂದೆ ತುಳು ಭಾಷಿಕರು ಕೂಡ ಇದನ್ನು 'ಕುರ್ಸು ಗುಡ್ಡೆ' (ಶಿಲುಬೆ ಬೆಟ್ಟ) ಎಂದು ಕರೆಯಲು ಪ್ರಾರಂಭಿಸಿದರು.
ದಿನ ಕಳೆದಂತೆ ಕೇರಳದ ಕ್ರಿಶ್ಚಿಯನ್ನರು ಮರೆಯಾದರು. ಆದರೆ ಅವರು ಆರಂಭಿಸಿದ ಆಚರಣೆಯನ್ನು ಇಲ್ಲಿನ ರೋಮನ್ ಕೆಥೋಲಿಕರು ಮುಂದುವರಿಸಿಕೊಂಡು ಬರುತ್ತಿದ್ದಾರೆ. ಮೆರವಣಿಗೆಯಲ್ಲಿ ಶಿಲುಬೆ ಹಿಡಿದು ಪ್ರಾರ್ಥನೆ ಮಾಡುತ್ತ ಬೆಟ್ಟದತ್ತ ಹೋಗುತ್ತಾರೆ. ಮಾನವನ ಪಾಪ ಪರಿಹಾರಕ್ಕಾಗಿ ಯೇಸುಕ್ರಿಸ್ತರು ಶಿಲುಬೆಯನ್ನು ಹೊತ್ತು 14 ಸ್ಥಳಗಳಲ್ಲಿ ಅನುಭವಿಸಿದ ಯಾತನೆಯ ವೃತ್ತಾಂತವನ್ನು ಪಠಿಸುತ್ತಾರೆ. 14 ಕಡೆ ಶಿಲುಬೆ ಮುಂದೆ ಮೊಣಕಾಲೂರಿ ಪ್ರಾರ್ಥನೆ ಸಲ್ಲಿಸುತ್ತಾರೆ.
ಇನ್ನೊಂದು ವಿಶೇಷ ಎಂದರೆ ಇಲ್ಲಿಗೆ ಹೋಗುವ ಭಕ್ತರಲ್ಲಿ ಜಾತಿ-ಧರ್ಮದ ಭೇದಗಳಿಲ್ಲ. ಕ್ರಿಸ್ತನ ಉಪಕಾರಕ್ಕೆ ಪ್ರತಿಯಾಗಿ ಮೇಣದ ಬತ್ತಿ ಉರಿಸುವುದು, ಹರಕೆ ಈಡೇರಿದ್ದಕ್ಕಾಗಿ ಅಕ್ಕಿ ಮತ್ತು ಹೆಸರುಬೇಳೆ ಅರ್ಪಿಸುವ ವಾಡಿಕೆಯಿದೆ. ಸಾಮಾನ್ಯವಾಗಿ ಕ್ರೈಸ್ತ ದೇವಾಲಯಗಳಲ್ಲಿ ಭೋಜನ ಉಣಬಡಿಸುವ ಸಂಪ್ರದಾಯವಿಲ್ಲ. ಆದರೆ ಶಿಲುಬೆ ಬೆಟ್ಟದಲ್ಲಿ ಮಾತ್ರ ಗುಡ್ ಪ್ರೈಡೆ ಸಂದರ್ಭದಲ್ಲಿ ಭಕ್ತರು ತಂದ ಅಕ್ಕಿಯಿಂದ ಗಂಜಿ ಮತ್ತು ಹೆಸರುಕಾಳಿನ ಪಲ್ಯ ತಯಾರಿಸಿ ಭಕ್ತಾದಿಗಳಿಗೆ ಉಣಬಡಿಸುತ್ತಾರೆ.
"ಹಸಿರು ಬಣ್ಣದ ಮಡಿಲಲ್ಲಿ, ಕಾಫಿ ತೋಟದ ಘಮಿಸುವ ಈ ಸ್ಥಳ ನೋಡಲು ಅತಿ ಸುಂದರ. ಬನ್ನಿ ಪ್ರವಾಸಕ್ಕೆ...."
ಮತ್ತೆ ಮುಂದಿನ 'ಪಯಣ' ಸಂಚಿಕೆಯಲ್ಲಿ ಸಿಗೋಣವೇ, ನಮಸ್ಕಾರ.
(ಚಿತ್ರಗಳು : ಅಂತರ್ಜಾಲ ಕೃಪೆ)
ಕನ್ನಡ ಭಾಷಾ ಶಿಕ್ಷಕರು
ನೇತಾಜಿ ಸುಭಾಶ್ಚಂದ್ರ ಬೋಸ್
ಸರಕಾರಿ ಪ್ರೌಢಶಾಲೆ, ಮರವಂತೆ
ಬೈಂದೂರು ತಾಲೂಕು, ಉಡುಪಿ ಜಿಲ್ಲೆ.
ಮೊಬೈಲ್ : +91 94488 87713
****************************************