-->
ನಿಷ್ಪಾಪಿ ಸಸ್ಯಗಳು : ಸಂಚಿಕೆ - 148

ನಿಷ್ಪಾಪಿ ಸಸ್ಯಗಳು : ಸಂಚಿಕೆ - 148

ನಿಷ್ಪಾಪಿ ಸಸ್ಯಗಳು : ಸಂಚಿಕೆ - 148
ಲೇಖಕರು: ವಿಜಯಾ ಬಿ ಶೆಟ್ಟಿ ಸಾಲೆತ್ತೂರು
ಸಹ ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ 
ಬಾಳೆಪುಣಿ (ಇರಾ), ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ



ಪ್ರೀತಿಯ ಮಕ್ಕಳೇ... ಹೇಗಿದ್ದೀರಿ? ರಜೆಯ ಮಜಾ ಅನುಭವಿಸಲು ಸೂರ್ಯನ ಬಿಸಿಲು ತೊಡಕಾಗುತ್ತಿದೆಯೆ..? ಹಗಲೆಲ್ಲ ಹೊರಗೇ ಆಟವಾಡಬೇಕಿಲ್ಲ ಅಲ್ಲವೇ? ಈ ಬಿರು ಬಿಸಿಲಿಗೆ ಮೈ ಒಡ್ಡದೆ ಮನೆಯ ಒಳಗೇ ಇದ್ದರೆ ಖಂಡಿತವಾಗಿಯೂ ಕ್ಷೇಮ. ಈ ಸಮಯದಲ್ಲೆಲ್ಲ ನೀವು ಗಿಡ ಮರ, ಪಶು ಪಕ್ಷಿಗಳನ್ನು ಗಮನಿಸಲು ಸುಲಭ. ಪ್ರಕೃತಿಯ ಬಗ್ಗೆ ನಿಮಗೇ ವಿಸ್ಮಯ ಮೂಡುವ ಸಂಗತಿಗಳನ್ನು ಕಾಣುವಿರಿ. ಉದಾಹರಣೆಗೆ ಹೇಳುವುದಾದರೆ 
ನಾನು ಇತ್ತೀಚೆಗೆ ಒಂದು ಆಯುರ್ವೇದ ಆಸ್ಪತ್ರೆಗೆ ಭೇಟಿ ನೀಡಿದ್ದೆ. ಅಲ್ಲಿ ಹೋಗುತ್ತಿದ್ದಂತೆ ಬಾಗಿಲಲ್ಲಿ ಇಟ್ಟಿದ್ದ ಚಟ್ಟಿಯೊಂದರ ಪುಟ್ಟ ಸಸ್ಯ ನನ್ನನ್ನಾಕರ್ಷಿಸಿ ನಿಂತಲ್ಲೇ ನಿಲ್ಲುವಂತಾಗಿತ್ತು. ಒಳಗೆ ಹೋಗದೆ ಮೊದಲು ಆ ಗಿಡದ ಬಳಿ ಬಂದೆ. ಗಿಡ ನಾನು ತಿರುಗಿ ಬಂದುದನ್ನು ಕಂಡು ಬಹಳ ಸಂತಸಪಟ್ಟಿತು. ಹುಲ್ಲಿನಂತೆ ಕಾಣಿಸುವ ಒಂದಡಿಗಿಂತ ಹೆಚ್ಚು ಎತ್ತರದ ಸಸ್ಯವದು. ಒಂದು ಒಂದೂವರೆ ಅಡಿಯಷ್ಟು ಉದ್ದಗಿನ ಹಸಿರು ಬಣ್ಣದ ಎಲೆಗಳ ಅಂಚು ಬಿಳಿ ಬಣ್ಣವಿತ್ತು. ಎಲೆಯ ತುದಿಗಳು ಚೂಪಾಗಿ ಕೆಳಗೆ ಬಾಗಿದ್ದವು.

ನಾನು ಗಿಡದ ಯೋಗಕ್ಷೇಮ ವಿಚಾರಿಸಿದೆ. ತನ್ನನ್ನು ಈ ಚಟ್ಟಿಯಲ್ಲಿ ಹಾಕಿ ಒಂದು ವರ್ಷ‌ ಕಳೆಯಿತೆಂದೂ ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಾರೆಂದೂ ತಿಳಿಸಿತು. ಈ ನಿಷ್ಪಾಪಿ ಸಸ್ಯವೇ ಹೇಳಿದಂತೆ ಅದರ ಹೆಸರು Spaider plant,Airplane plant, Ribban plant. ಮೂಲ ದಕ್ಷಿಣ ಆಫ್ರಿಕಾವಂತೆ. NASA ಕ್ಲೀನ್ ಏರ್ ಸ್ಟಡಿ ಪ್ರಕಾರ ಗಾಳಿ ಶುದ್ಧ ಮಾಡೋ ಮೊದಲ ಹತ್ತು ಸಸ್ಯಗಳಲ್ಲಿ ಸ್ಪೈಡರ್ ಪ್ಲಾಂಟ್ ಸೇರಿದೆಯಂತೆ!ವೈಜ್ಞಾನಿಕ ಹೆಸರು ಕ್ಲೋರೋಫೈಟಮ್ ಕೊಮೊಸಮ್( Chlorophytum comsum.) ಅಂದರೆ ಗುಂಗುರು ಕೂದಲಿನ ಹಸಿರು ಸಸ್ಯವೆಂದರ್ಥವಂತೆ. ಅಸ್ಫ್ಯಾರಗೇಸಿ ( Asparagaceae) ಕುಟುಂಬದ ಸದಸ್ಯತನವಿದೆ" ಎಂದಿತು.

ನನಗೆ ಹೆಸರು ಕೇಳಿ ಆಶ್ಚರ್ಯ ವಾಯಿತು. ನೀನು ಸ್ಪೈಡರ್ ಹೇಗಾಗ್ತೀಯ? ಅಂತ ಕೇಳಿದೆ. ಗಿಡವು ನಸುನಕ್ಕು ತನ್ನ ಮಗ್ಗುಲಲ್ಲಿರುವ ಗಟ್ಟಿಯಾದ ಮೂರ್ನಾಲ್ಕು ತೆಳ್ಳಗಿನ ಕಡ್ಡಿಗಳನ್ನು ತೋರಿಸುತ್ತಾ ಕಡ್ಡಿಗಳ ತುದಿಯತ್ತ ನೋಡೆಂದಿತು. ನೋಡಿದೆ. ಅಬ್ಬಾ! ಆ ಕಡ್ಡಿಗಳ ತುದಿಗಳಲ್ಲಿ ಅಮ್ಮನನ್ನೇ ಹೋಲುವ ಪುಟಾಣಿ ಮರಿಗಿಡಗಳಿದ್ದವು !! . ಒಂದೆರಡು ಕಡ್ಡಿಯಲ್ಲಿ ನಕ್ಷತ್ರದಂತಿರುವ ಶ್ವೇತವರ್ಣದ ಪುಟ್ಟ ಹೂಗಳಿದ್ದುವು. ನನಗೆ ಏನೂ ಅರ್ಥವಾಗದೆ ಸುಮ್ಮನೆ ನೋಡುತ್ತಾ ನಿಂತೆ. ಆಗ ಆ ಸಸ್ಯವು "ನೋಡಿದೆಯಾ? ಇದು ನನ್ನ ಸಂತಾನಾಭಿವೃದ್ಧಿ ಕ್ರಮ. ನನ್ನ ಸುತ್ತಲೂ ಜಾಗವಿಲ್ಲದಾಗ ನನ್ನ ಮರಿಗಳು ಸ್ವಲ್ಪ ದೂರದಲ್ಲಿ ಬೆಳೆಯಲು ಅನುಕೂಲವಾಗಲೆಂದು ದೇವರೇ ಈ ರೀತಿ ಸಹಾಯ ಮಾಡಿದ್ದಾನೆ. ತಾಯಿ ಗಿಡದ ಆರೋಗ್ಯ ಚೆನ್ನಾಗಿದ್ದರೆ ಒಂದು ವರ್ಷವಾಗುತ್ತಲೇ ಗಿಡದ ಒಳಗೆ Gibberellin & Flirigen ಅನ್ನೋ ಹಾರ್ಮೋನ್ ಬಿಡುಗಡೆಯಾಗ್ತದೆ. ಹಾರ್ಮೋನ್ ಸಿಗ್ನಲ್ ಸಿಕ್ಕ ಕೂಡಲೇ ಅಮ್ಮ ಗಿಡದ ಮಧ್ಯಭಾಗದಿಂದ ತೆಳ್ಳಗಿನ ಉದ್ದನೆಯ ಹಸಿರು ಕಡ್ಡಿ ಬೆಳೆಯಲಾರಂಭಿಸುತ್ತದೆ. 20-60 ಸೆಂ.ಮೀ. ಬೆಳೆವ ಈ ಕಡ್ಡಿಯನ್ನು Stolon ಅಥವಾ Runner ಎನ್ನುವರು. ಇವು ಅಮ್ಮನಿಂದ ಮರಿಗಳಿಗೆ ನೀರು, ಆಹಾರ ಸಪ್ಲೈ ಮಾಡೋ ಪೈಪ್ ಲೈನ್ ಗಳಾಗಿರುತ್ತವೆ. ಈ ಗಟ್ಡಿಯಾದ, ಉದ್ದನೆಯ ಗಾಳಿಯಲ್ಲಿ ನಿಲ್ಲುವಷ್ಟು ಸ್ಟ್ರಾಂಗ್ ಇರುವ ಕಡ್ಡಿಗಳ ತುದಿಯಲ್ಲಿ ಮರಿಗಿಡಗಳು ಭಾರವಿದ್ದರೂ ತೂಗಾಡುತ್ತವೆ. ಗಿಡಗಳಾಗುವ ಮೊದಲು ಕಡ್ಡಿಗಳು ಬೆಳೆಯೋದು ನಿಂತು ತುದಿಗಳಲ್ಲಿ ಗಂಟುಗಳು ಬೆಳೆದು ಆರು ದಳಗಳುಳ್ಳ ನಕ್ಷತ್ರದಂತಹ ನಾಲ್ಕಾರು ಪುಟ್ಟ ಬಿಳಿ ಹೂಗಳಾಗುತ್ತವೆ. ಯಾವುದೇ ಸುಗಂಧವಿರದ ಈ ಹೂಗಳು ಒಂದೇ ದಿನದಲ್ಲಿ ಉದುರುತ್ತವೆ. ಹೂ ಒಣಗಿ ಉದುರಿದರೂ ಕಡ್ಡಿಯ ತುದಿ ಒಣಗದು. ಅಲ್ಲೇ ಹೊಸ ಸಸ್ಯದ ಏಳೆಂಟು ಎಲೆಗಳು ಗುಂಪಾಗಿ ಚಿಗುರಿ ಮಿನಿ ಸ್ಪೈಡರ್ ಪ್ಲಾಂಟ್ ತರಹ ಕಾಣಿಸಿಕೊಳ್ಳುತ್ತವೆ. ಎರಡು ಮೂರು ವಾರ ಅಮ್ಮನಿಂದ ನೀರು, ಆಹಾರ ಹೀರಿ ಈ ಮರಿಗಿಡಗಳು ಬೆಳೆಯುತ್ತವೆ. ಹೀಗೆ ಕಡ್ಡಿಗಳ ತುದಿಗಳಲ್ಲಿ ನಾಲ್ಕಾರು ಗಿಡಗಳು ಬೆಳೆಯುತ್ತಾ ಗಾಳಿಯಲ್ಲಿ ಜೀಕುವುದನ್ನು ಮುಂದುವರಿಸುತ್ತವೆ. ಈ ಗಿಡಗಳ ತಳಭಾಗದಲ್ಲಿ ಬಿಳಿ ಬೇರಿನ ಮೊಗ್ಗುಗಳು ಕಾಣುವಂತಿದ್ದು ಮುಂದಿನ ಬೆಳವಣಿಗೆಗೆ ಕಾಯುತ್ತಿರುತ್ತವೆ. ಹೀಗೆ ಗಾಳಿಯಲ್ಲಿ ಜೀಕುತ್ತಾ ಜೀಕುತ್ತಾ ಮಣ್ಣಿನ ಸನಿಹ ಬಂದು ಅನುಕೂಲ ಕಂಡಾಗ ಅದೇ ಬೇರುಗಳು ತಳವೂರಿ ಹೊಸ ಸಸ್ಯಗಳನ್ನು ಬೆಳೆಸಿ ತನ್ನ ಸಂತಾನ ಮುಂದುವರಿಸುತ್ತದೆ. ಮಣ್ಣಲ್ಲಿ ಹೊಸ ಬದುಕನ್ನು ಕಂಡುಕೊಂಡ ಬಳಿಕ ಅಮ್ಮನಿಗೆ ಸಂಪರ್ಕ ನೀಡಿದ್ದ ಕಡ್ಡಿ ಒಣಗಿಹೋಗುತ್ತದೆ. ಈಗ ಮರಿಗಿಡಗಳು ಸ್ವತಂತ್ರ. ನೂರು ಶೇಕಡಾ ಅಮ್ಮನಂತೇ ಸೇಮ್ DNA. ಅದೇ ಕ್ವಾಲಿಟಿ! ಅದಕ್ಕೇ ನನ್ನನ್ನು ಸ್ಪೈಡರ್ ಪ್ಲಾಂಟ್ ಎನ್ನುವುದು! ಈಗರ್ಥಾಯ್ತಾ?" ಎಂದು ಗಿಡವು ಕಣ್ಣು ಮಿಟುಕಿಸಿತು. 

ನಾನು ಈ ಸಸ್ಯ ಜಗತ್ತಿನ ವಿಸ್ಮಯವನ್ನು ಕಂಡು ಮೂಕಳಾದೆ. ಹೂವು, ಪರಾಗಸ್ಪರ್ಶ, ಬೀಜ ಅಂತ ಮೂರ್ನಾಲ್ಕು ತಿಂಗಳು ಕಾಯೋ ಕೆಲಸವಿಲ್ಲ, ಕ್ರಿಮಿ ಕೀಟಗಳ ಭಯವಿಲ್ಲ. ಕಡ್ಡಿ ಮೂಲಕ ಎರಡು ವಾರದಲ್ಲಿ ಹೊಸ ಗಿಡ ರೆಡಿ ಮಾಡುವ ಟೆಕ್ನಿಕ್ ಎಷ್ಟು ಅಪೂರ್ವವಾಗಿದೆ! 100% ಯಶಸ್ವೀ ಓಟ. ಈ Vegetative Propagation ಕಂಡು ಏನು ಹೇಳಬೇಕೊ ಅರ್ಥವಾಗಲಿಲ್ಲ. ಒಂದೆರಡು ಫೋಟೋ ಕ್ಲಿಕ್ಕಿಸಿ ಸ್ಪೈಡರ್ ಪ್ಲಾಂಟ್ ಗೆ ಥ್ಯಾಂಕ್ಸ್ ಹೇಳಿ ಆಸ್ಪತ್ರೆಯ ಒಳನಡೆದೆ. ಸ್ಪೈಡರ್ ಪ್ಲಾಂಟ್ ನನ್ನ ಕೈಗೊಂದು ಮರಿಯನ್ನು ನೀಡಿತ್ತು, ಜೊತೆಗೆ "ನೇರವಾಗಿ ಬಿಸಿಲಿನಡಿ ನೆಡದಿರು" ಎಂಬ ಸೂಚನೆಯನ್ನೂ ನೀಡಿತ್ತು.

ಮಕ್ಕಳೇ, ನಿಮಗೂ ಇಂತಹ ಅನುಭವಗಳಾಗಬಹುದು, ಹೊಸ ಗಿಡಗಳ ಸಖ್ಯ ದೊರೆಯಬಹುದು ಅಲ್ಲವೇ..?

ನಿಷ್ಪಾಪಿ ಸಸ್ಯಗಳ ಪ್ರೀತಿಗೆ ಸೋತು ನೀವು ಯಾವುದಾದರೂ ಹೊಸ ಸಸ್ಯಗಳನ್ನು ಸಾಕುತ್ತಿರುವಿರಾದರೆ ಅಥವಾ ಗುರುತಿಸಿ ರಕ್ಷಿಸುತ್ತಿದ್ದರೆ ದಯವಿಟ್ಟು ನನ್ನ 7892587191 ನಂಬರ್ ಗೆ ತಿಳಿಸುವಿರಾ?

ಸರಿ ಮಕ್ಕಳೇ... ಮುಂದಿನ ವಾರ ಇನ್ನೊಂದು ನಿಷ್ಪಾಪಿ ಸಸ್ಯದ ಬಗ್ಗೆ ತಿಳಿಯೋಣ, ನಮಸ್ತೆ.
..................... ವಿಜಯಾ ಬಿ ಶೆಟ್ಟಿ ಸಾಲೆತ್ತೂರು
ಸಹ ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ 
ಶಾಲೆ , ಬಾಳೆಪುಣಿ (ಇರಾ)
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
Mob : +91 78925 87191
*****************************************


Ads on article

Advertise in articles 1

advertising articles 2

Advertise under the article