-->
ಜೀವನ ಸಂಭ್ರಮ : ಸಂಚಿಕೆ - 242

ಜೀವನ ಸಂಭ್ರಮ : ಸಂಚಿಕೆ - 242

ಜೀವನ ಸಂಭ್ರಮ : ಸಂಚಿಕೆ - 242
ಲೇಖಕರು : ಎಂ.ಪಿ. ಜ್ಞಾನೇಶ್ 
ಶಿಕ್ಷಣಾಧಿಕಾರಿ 
ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ
(ಮಧ್ಯಾಹ್ನ ಉಪಹಾರ ಯೋಜನೆ) 
ಜಿಲ್ಲಾ ಪಂಚಾಯತ್ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ 
                                                        
            

ಮಕ್ಕಳೇ, ಪ್ರಜಾವಾಣಿ ಪತ್ರಿಕೆಯಲ್ಲಿ ಪ್ರಕಟವಾಗಿದ್ದ ಲೇಖನ ಓದುವಾಗ ನನಗೆ ಬಹಳ ಮೆಚ್ಚುಗೆಯಾದ ಲೇಖನ. ಪಾಯಲ್ ಇದು ಒಂದು ಹೆಣ್ಣು ಮಗುವಿನ ಹೆಸರು. ನಿಮಗೆಲ್ಲರಿಗೂ ಪ್ರೇರಣೆಯಾಗಲೆಂದು ಈ ಲೇಖನ ಬರೆಯುತ್ತಿದ್ದೇನೆ. 

ಒಡಿಸ್ಸಾದ ಬಲಂಗೀರ್ ನ ಬಿಜಯಕುಮಾರ್ ಮತ್ತು ಜನತಾದೇವಿಯ ಪುತ್ರಿ. ಆಕೆಯ ಹೆಸರು ಪಾಯಲ್ ನಾಗ್. ಆಕೆ ಮೂರನೇ ತರಗತಿಯಲ್ಲಿದ್ದಾಗ ಅಂದರೆ ಆಗ ಆಕೆಗೆ ವಯಸ್ಸು ಎಂಟು. ಆಗ ಒಂದು ದಿನ ತಾಯಿ ಕೊಟ್ಟ ತಿಂಡಿ ತಿಂದು ತಮ್ಮನ ಜೊತೆ ಆಟವಾಡಲು ನಾಲ್ಕು ಅಂತಸ್ತಿನ ಮಾಳಿಗೆಯ ಮನೆ ಮೇಲೆ ಹೋದಳು. ಅದು ನಿರ್ಮಾಣ ಹಂತದಲ್ಲಿತ್ತು. ಸ್ವಲ್ಪ ಸಮಯದಲ್ಲಿ ಚೀರಿದ ಶಬ್ದ ಬಂತು. ಸಮೀಪದಲ್ಲಿ ಇದ್ದವರು ಬಂದು ನೋಡಿದರು. ಪುಟ್ಟ ಹುಡುಗಿಗೆ ಪ್ರಜ್ಞೆ ತಪ್ಪಿದೆ. ತಾರಸಿಯಲ್ಲಿ ನೀರು ನಿಂತಿದ್ದು ಹೈ ವೋಲ್ಟೇಜ್ ವಿದ್ಯುತ್ ತಂತಿ ಸ್ಪರ್ಶದಿಂದ ಹೀಗಾಗಿತ್ತು. ಅಕ್ಕನನ್ನು ರಕ್ಷಿಸಲು ಹೋಗಿ ತಮ್ಮನಿಗೂ ಆಘಾತವಾಗಿತ್ತು. ಮಕ್ಕಳನ್ನು ತಕ್ಷಣ ಆಸ್ಪತ್ರೆಗೆ ಸೇರಿಸಿದರು. ಮಕ್ಕಳ ಜೀವ ಉಳಿಸಿದರು. ಆದರೆ ಪಾಯಲ್ ಳ ಎರಡು ಕೈಗಳನ್ನು ತೋಳುಗಳ ಸಹಿತ ಮತ್ತು ಕಾಲುಗಳನ್ನು ಮಂಡಿಯ ವರೆಗೆ ಕತ್ತರಿಸಲಾಯಿತು. ತಮ್ಮನಿಗೆ ಏನು ಆಗಲಿಲ್ಲ ಅಪಾಯದಿಂದ ಪಾರಾಗಿದ್ದನು. ಮೊದಲೇ ಬಡತನ ಕುಟುಂಬ ಬಹಳ ಕಷ್ಟ ನಷ್ಟ ಅನುಭವಿಸಿತ್ತು. ಕೈ ಕಾಲು ಇಲ್ಲದ ಹುಡುಗಿ ಭವಿಷ್ಯ ಹೇಗೆ. ಸತ್ತು ಹೋಗಿದ್ದರೆ ಚೆನ್ನಾಗಿತ್ತು ಅಂದವರು ಲೆಕ್ಕವಿಲ್ಲ. ಈ ಘಟನೆಯಾಗಿ ಹತ್ತು ವರ್ಷ ಕಳೆದಿದೆ. ಈಗ ಈಕೆ ವಿಶ್ವದ ಗಮನ ಸೆಳೆದಿದ್ದಾಳೆ. ಎರಡು ಕೈ ಕಾಲು ಇಲ್ಲದ ಯುವತಿಯ ಕೊರಳಲ್ಲಿ ಚಿನ್ನದ ಪದಕಗಳಿವೆ. 18 ವರ್ಷದ ಪಾಯಲ್ ಚಿತ್ರ ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಜನರ ಮನ ಗೆಲ್ಲುತ್ತಿವೆ.

ವಿಶ್ವ ಪ್ಯಾರಾ ಅರ್ಚರಿ ಸೀರೀಸ್ ನ ಮಹಿಳೆಯರ ವೈಯಕ್ತಿಕ ವಿಭಾಗದಲ್ಲಿ ಹಿಂದಿಕ್ಕಿದ್ದು ಶೀತಲ್ ದೇವಿಯವರನ್ನು. ಪಾಯಲ್ ಪಾಲಿಗೆ ಶೀತಲ್ ದೇವಿಯೆ ಸ್ಪೂರ್ತಿಯ ಸಂಕೇತ. ತಮ್ಮ ಬದುಕಿನ ಸಾಧನೆಯ ಸ್ಪೂರ್ತಿಯಾಗಿದ್ದ ಶೀತಲ್ ದೇವಿ ಸಾಧಕಿಯನ್ನೇ ಮೀರಿಸಿದ ಸಾಧನೆ ಇವಳದಾಗಿತ್ತು. ಮತ್ತೆ ಶೀತಲ್ ಜೊತೆ ತಂಡದ ಪ್ರಶಸ್ತಿಯನ್ನು ಪಡೆದಿದ್ದಾಳೆ. 

ಜಮ್ಮು ಕಾಶ್ಮೀರದ ಶೀತಲ್ ದೇವಿ ಕಳೆದ ಮೂರು ವರ್ಷದಿಂದ ಏಶಿಯನ್ ಗೇಮ್, ಪ್ಯಾರಾ ಲಿಂಪಿಕ್ ಕೂಟದಲ್ಲಿ ಸಾಧನೆ ಮಾಡಿರುವ 19 ವರ್ಷದ ಶೀತಲ್ ಗೆ ಎರಡು ಕೈಗಳಿಲ್ಲ. ಕಾಲನ್ನೇ ಕೈಗಳಂತೆ ಬಳಸಿಕೊಂಡು ಬಿಲ್ಲುಗಾರಿಕೆ ಮಾಡಿ ಪ್ರಶಸ್ತಿ ಪಡೆದವಳು. ಪಾಯಲ್ ಇವಳಿಗಿಂತ ಭಿನ್ನ. ಪಾಯಲ್ ಗೆ ಕಾಲು ಮತ್ತು ಕೈ ಎರಡು ಇಲ್ಲ. ಪಾಯಲ್, ಶೀತಲ್ ದೇವಿಯನ್ನು ಸೋಲಿಸಿದಾಗ ಶೀತಲ್ ಹೇಳಿದ್ದು "ನನಗೆ ಒಬ್ಬಳು ಜೊತೆಗಾತಿ ಸಿಕ್ಕಿದ್ದಾಳೆ. ಇಬ್ಬರೂ ಸೇರಿ ಭಾರತದ ಕೀರ್ತಿ ಹೆಚ್ಚಿಸುತ್ತೇವೆ". ಇದಲ್ಲವೆ ಕ್ರೀಡಾ ಸ್ಪೂರ್ತಿ. ಶೀತಲ್ ದೀದಿಯನ್ನು ನೋಡಿ ನಾನು ಕಲಿತೆ. ಅವರೇ ನನಗೆ ಸ್ಪೂರ್ತಿ ಎನ್ನುವಾಗ ಭಾವುಕರಾಗುತ್ತಾಳೆ ಪಾಯಲ್.

ಪಾಯಲ್ ಬೆಂಕಿಯಲ್ಲಿ ಅರಳಿದ ಹೂ. ತಾಯಿ ಮಗಳನ್ನು ಶಾಲೆಗೆ ಕರೆದುಕೊಂಡು ಹೋಗಿ ಕರೆದುಕೊಂಡು ಬರುತ್ತಿದ್ದಳು. ಹಲ್ಲಿನಲ್ಲಿ ಪೆನ್ಸಿಲ್ ಕಚ್ಚಿ ಚಿತ್ರ ಬಿಡಿಸುವುದನ್ನು ಅಮ್ಮ ಮಗಳಿಗೆ ಹೇಳಿಕೊಟ್ಟಳು. ಮೊದಮೊದಲು ಕಷ್ಟವೆನಿಸಿತ್ತು. ನಿಧಾನವಾಗಿ ಚಿತ್ರಕಲೆ ಸಿದ್ಧಿಸಿತ್ತು. ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಆಕೆಯ ಚಿತ್ರ ಎಲ್ಲರ ಗಮನ ಸೆಳೆಯಿತು. ಆಗಿನ ಮುಖ್ಯಮಂತ್ರಿ, ನವೀನ್ ಪಾಟ್ನಾಯಕ್ ಗಮನಕ್ಕೆ ಬಂದಿತು. ಇದು ಆಕೆ ಆಶ್ರಮಕ್ಕೆ ಸೇರಲು ನಾಂದಿಯಾಯಿತು. ಆಶ್ರಮದಲ್ಲಿ ಪಾಯಲ್ ಓದು ಚಿತ್ರಕಲೆ ಮುಂದುವರಿಯಿತು. 2023ರಲ್ಲಿ ಆಕೆಯ ಸಾಧನೆ ಗಮನಿಸಿದ ಶೀತಲ್ ದೇವಿಯವರ ಅರ್ಚರಿ ಕೋಚ್ ಕುಲದೀಪ್ ವೇದ್ವಾನ್ ಅಲ್ಲಿಯ ಜಿಲ್ಲಾಧಿಕಾರಿ ಸಂಪರ್ಕಿಸಿ ಪಾಯಲ್ ಗೆ ಅರ್ಚರಿ ಕಲಿಸುವುದಾಗಿ ಹೇಳಿದರು. ಕಾಶ್ಮೀರದಲ್ಲಿರುವ ತಮ್ಮ ಮಾತಾ ವೈಷ್ಣೋದೇವಿ ಅರ್ಚರಿ ತರಬೇತಿ ಅಕಾಡೆಮಿಗೆ ಕಳುಹಿಸಿಕೊಡುವಂತೆ ಮನವಿ ಮಾಡಿದರು. ಅಧಿಕಾರಿ ಮತ್ತು ಪೋಷಕರ ಮನವೊಲಿಸಿ ಕರೆದುಕೊಂಡು ಹೋದರು ಕುಲದೀಪ್. ಪಾಯಲ್ ಗೆ ಸವಾಲು ಶುರುವಾಗಿದ್ದೆ ಆಗ. ಮೊಟಕಾದ ಮೊಣಕಾಲಿನಿಂದ ಬಿಲ್ಲನ್ನು ಎದೆಗೇರಿಸಿ ಬಾಣವನ್ನು ಭುಜ ಮತ್ತು ಗಲ್ಲದ ನಡುವೆ ಸಿಕ್ಕಿಸಿ ಗುರಿಯತ್ತ ಬಿಡುವುದು ಮೊದಲಿಗೆ ಕಷ್ಟವಾಯಿತು. ಕೃತಕ ಕಾಲು ಜೋಡಿಸಿ ಬಿಲ್ಲು ಹಿಡಿಯುವ ಪ್ರಯತ್ನ ಮಾಡಿದರು. ಸಂಕಟವಾಗಿ ನನ್ನಿಂದ ಸಾಧ್ಯವಿಲ್ಲ ಎಂದಳು. ಕುಲದೀಪ್ ಪಟ್ಟು ಬಿಡದೆ "ನಾನು ಹೇಳಿದ್ದು ನೀನು ಮಾಡು, ಬೇರೆ ಚಿಂತೆ ಬೇಡ, ಎಲ್ಲವೂ ಆಗುತ್ತದೆ" ಎಂದು ಧೈರ್ಯ ತುಂಬಿದರು. ಮೊಣಕಾಲಿಗೆ ಅಳವಡಿಸುವ ಸಾಧನವನ್ನು ಕುಲದೀಪ್ ಅವರೇ ಸಿದ್ಧಗೊಳಿಸಿದರು. ಇದರಿಂದ ಬಿಲ್ಲಿನ ಹಗ್ಗ ಎಳೆದು ಗ್ರಿಪ್ ಮಾಡಲು ಪಾಯಲ್ ಗೆ ಅನುಕೂಲವಾಯಿತು. ಹಿಂದೆ ಗುರು ಮುಂದೆ ಗುರಿ ಎರಡು ಲಭಿಸಿತು. ಪಾಯಲ್ ಸಾಧನೆಯಿಂದ ಆರ್ಥಿಕತೆ ಕುಟುಂಬಕ್ಕೆ ಹರಿದು ಬರುತ್ತಿದೆ. ಬಡತನ ಕಡಿಮೆಯಾಗಿದೆ. ಮನೆಗೆ ಹೊರೆಯಾಗಿಲ್ಲ ಆಸರೆಯಾಗಿದ್ದಾರೆ. 

ಮಹಾಭಾರತ ಕಥೆಯಲ್ಲಿ ದ್ರೋಣಾಚಾರ್ಯರು ಶಿಷ್ಯನ ಬೆರಳನ್ನು ದಕ್ಷಿಣೆ ಪಡೆದು ಒಬ್ಬ ಪ್ರತಿಭಾವಂತನ ಜೀವನ ಹಾಳು ಮಾಡಿದ್ದನ್ನು ನಾವು ಓದಿದ್ದೇವೆ. ಆದರೆ ಈ ಕಾಲದ ಗುರು ಕುಲದೀಪ್ ವೇದ್ವಾನ್ ಕೈ ಕಾಲು ಇಲ್ಲದವರಿಗೆ ಬಿಲ್ಲು ವಿದ್ಯೆ ನೀಡಿ ಸಾಧನೆ ಮಾಡಿದ್ದಾರೆ. ಇಂತಹ ಗುರು ಹಾಗು ಪಾಯಲ್ ಗೆ ಒಂದು ನಮನ ಸಲ್ಲಿಸಿ. ನಮಗೆ ಎಲ್ಲಾ ಚಂದಾಗಿ ದೇವರು ಕೊಟ್ಟಿದ್ದಾನೆ ಅದನ್ನು ಬಳಸಿ ನಾವ್ಯಾಕೆ ಸಾಧನೆ ಮಾಡಬಾರದು ಮಕ್ಕಳೇ.
......................................... ಎಂ.ಪಿ. ಜ್ಞಾನೇಶ್ 
ಶಿಕ್ಷಣಾಧಿಕಾರಿ 
ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ
(ಮಧ್ಯಾಹ್ನ ಉಪಹಾರ ಯೋಜನೆ) 
ಜಿಲ್ಲಾ ಪಂಚಾಯತ್ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ 
*****************************************


Ads on article

Advertise in articles 1

advertising articles 2

Advertise under the article