-->
ಸ್ಫೂರ್ತಿಯ ಮಾತುಗಳು : ಸಂಚಿಕೆ - 215

ಸ್ಫೂರ್ತಿಯ ಮಾತುಗಳು : ಸಂಚಿಕೆ - 215

ಸ್ಫೂರ್ತಿಯ ಮಾತುಗಳು : ಸಂಚಿಕೆ - 215
ಲೇಖಕರು : ರಮೇಶ ಎಂ. ಬಾಯಾರು 
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com 
                    

ವಿಶ್ವ ಅಮ್ಮಂದಿರ ದಿನವನ್ನು ಇತ್ತೀಚೆಗೆ ಆಚರಿಸಿದೆವು. ಪ್ರತೀ ವರ್ಷದ ಮೇ ಹತ್ತನೇ ದಿನಾಂಕ ವಿಶ್ವ ಅಮ್ಮಂದಿರ ದಿನ. ವಿಶ್ವದಿನವಾಗಿ ಅಮ್ಮಂದಿರಿಗೆ ಗೌರವದ ಉಪಚಾರವಾಗುತ್ತಿರುವುದು ಮಕ್ಕಳಾದವರು ಅಭಿಮಾನ ಪಡಲೇ ಬೇಕಾದ ಸಂಗತಿ. 

ಅಮ್ಮ ಮನೆ ಬೆಳಗುವ ದೀಪ. ಮಕ್ಕಳನ್ನು ಬೆಳಗಿಸುವ ಬೆಳಕು. ಅಮ್ಮನೇ ಅಮೃತ. ಪ್ರೀತಿಗೆ, ತ್ಯಾಗಕ್ಕೆ, ಸಹನೆಗೆ, ಧೈರ್ಯಕ್ಕೆ ಕ್ಷಮೆಗೆ, ಶುದ್ಧ ಅಂತಃಕರಣಕ್ಕೆ ಅಮ್ಮನಿಗೆ ಅಮ್ಮನೇ ಪರ್ಯಾಯ. ಅಮ್ಮನೆಂದರೆ ದೇವರು. ಪ್ರಾಣಿ, ಪಕ್ಷಿಗಳಿಗೂ ಅಮ್ಮನೇ ದಿಕ್ಕು. ಪ್ರಕೃತಿಯ ಪ್ರತಿಯೊಂದು ಅಂಶವೂ ಅಮ್ಮನ ಕಾರಣದಿಂದಲೇ ಹುಟ್ಟುತ್ತವೆ. ಬೆಳೆಯುತ್ತವೆ. ಹೆತ್ತ ಮತ್ತು ಹೊತ್ತ ಎಂಬ ಇಬ್ಬರು “ಅಮ್ಮ” ನಮಗೆ. 

ಮಕ್ಕಳಿಗಾಗಿ ತನ್ನನ್ನೇ ಮರೆಯುವ ಅಮ್ಮ ಮಿದು ಹೃದಯಿ. ಮುಗ್ಧ ಮಗುವಿನ ನಗು, ಅಳು, ಒಡನಾಟ, ಓಡಾಟ, ಕಿರುಚಾಟ, ಏಳುವ ಬೀಳುವ ಸಂದರ್ಭಗಳನ್ನು ಗಮನಿಸುತ್ತಾ ಆನಂದಿಸುವ ಅಮ್ಮ ಮಕ್ಕಳ ಪಾಲಿಗೆ ದೇವತೆ. ಮಗುವಿಗಾಗಿ ಎಂತಹ ನೋವನ್ನೂ ಸಹಿಸಬಲ್ಲ ಪ್ರೇಮಮಯಿ ಆಕೆ. ಕಷ್ಟಗಳು ಏನೇ ಇರಲಿ, ಮನದೊಳಗೆ ಎಂತಹ ದುಃಖವೇ ಇರಲಿ, ಮಗುವಿನ ಮುಂದೆ ಅಮ್ಮ ಹಸನ್ಮುಖಿ. ಏನು ರಂಪ ಮಾಡಿದರೂ, ಹಠ ಮಾಡಿದರೂ ನೋಯದೆ ನಗುತ್ತಾ ಎಲ್ಲವನ್ನೂ ಸ್ವೀಕರಿಸುವ ಅಮ್ಮ ನಮ್ಮ ಅಸ್ಮಿತೆಯ ಮೂಲ. ಮಗು ಗಂಡಿರಲಿ ಹೆಣ್ಣಿರಲಿ ಇಬ್ಬರಿಗೂ ಆಕೆ ಒಬ್ಬಳೇ. ಅಮ್ಮ- ಬೇಧ ಭಾವವಿರದ ಸಮತ್ವ ದೃಷ್ಟಿ ಅಮ್ಮನದು. ಕೈತುತ್ತು ನೀಡುವಾಗ ಹೇಳುವ ಜೋಗುಳ, ಚಂದಿರನ ಕಥೆ, ಪುಣ್ಯ ಕೋಟಿಯ ಹಾಡು, ದೇವರ ನಾಮ, ಮಗುವನ್ನು ಸಂತೈಸುವ ವಿವಿಧ ಚರ್ಯೆಗಳು ಅಮ್ಮನಿಗೆ ಮಾತ್ರ ಮೀಸಲು. ಮಗು ಎಡವಿಯೋ ಜಾರಿಯೋ ಬಿದ್ದಾಗ, ಶರೀರಕ್ಕೆ ತರಚು ಗಾಯವಾದಾಗ, ಸುಟ್ಟ ಗಾಯವಾದಾಗ, ಅನಾರೋಗ್ಯ ಉಂಟಾದಾಗ ಹೆಚ್ಚು ದುಃಖ ಪಡುವಾಕೆ ಅಮ್ಮ. ಮನಸ್ಸಿಗೆ ದುಃಖವಾಗಿ ಅಳುವ ಮಗುವನ್ನು ಅತ್ಯಂತ ಅಕ್ಕರೆಯಿಂದ ಸಂತೈಸಿ ಮುದ್ದಿಸುವ ಸಾಂತ್ವಾನ ಹೇಳುವ ಅಮ್ಮನಿಗೆ ಎಣೆಯಾದ ಅನ್ಯ ಶಕ್ತಿಯೇ ಇಲ್ಲ. ಮಗು ಖುಷಿಯಿಂದ ತಿಂದು ದಷ್ಟಪುಷ್ಟವಾಗಬೆಕು ಎಂದು ತನ್ನ ಪ್ರೀತಿಯನ್ನು ಜೋಡಿಸಿ ಸಮಯಕ್ಕೆ ಸರಿಯಾಗಿ ಉಣಿಸುವ, ಆಯಾಸವಾದಾಗ ನಿದ್ದೆಮಾಡಿಸುವ ಏಕೈಕ ದೇವತೆಯೇ ಅಮ್ಮ.

ತನ್ನ ಮಗು ಭಗವಂತನ ಅನುಗ್ರಹ. ಅದನ್ನು ಹೂವಿನಂತೆ ಜೋಪಾನವಾಗಿ ಕಾಪಿಡುವುದೇ ತನ್ನ ಮೊದಲ ಕರ್ತವ್ಯ ಎಂದರಿತು ಅನುಸರಿಸುವ ತಾಯಿಗಿಂತ ಮಿಗಿಲಾದ ಇತರೆ ಬಂಧು ಯಾರೂ ಇರರು. ನಮ್ಮ ಸೇವೆ ಅಥವಾ ಪೂಜೆ ಅಮ್ಮನಿಗೆ ಮೊದಲೋ ದೇವರಿಗೆ ಮೊದಲೋ ಎಂಬ ದ್ವಂದ್ವ ಮಕ್ಕಳಿಗುಂಟಾದರೆ ಅಮ್ಮನೇ ಮೊದಲಿಗಳು. ಮಕ್ಕಳಿಗೆ ದೃಷ್ಟಿಯಾಗದಿರಲೆಂದು ನಿತ್ಯವೂ ದೃಷ್ಟಿ ಕಳಚುವ ಅಮ್ಮನ ಕಣ್ಣ ನೋಟ ಪ್ರೀತಿಯ ಬಲೆ ಮತ್ತು ನೆಲೆ.

ಹುಸಿ ಮುನಿಸು ತೋರಿದರೂ ದೈಹಿಕ ಶ್ರಮ ತೋರೆಗೊಡದ ಮಧುರ ಸ್ವರದಿಂದ ನಗು ನಗುತ್ತಾ ಮಕ್ಕಳಿಗೆ ಆಸರೆಯಾಗಿರುವ ಅಮ್ಮನ ಮುಂದೆ ಮಕ್ಕಳು ಕುಬ್ಜರು. ಅಮ್ಮನ ಒಡಲು ಮಮತೆಯ ಕಡಲು. ಅಕೆಯ ಮಡಿಲು ಮಗುವಿನಾಟದ ಬಯಲು. ಮನೆಯಿಂದಾಚೆ ಆಡಲು ಹೋದ ಮಗು ಮನೆಗೆ ಬರುವವರೆಗೂ ಹಸಿವಿದ್ದರೂ ಬರಿ ಹೊಟ್ಟೆಯಲ್ಲಿ ಕಾದು ನಿಲ್ಲುವ ತಾಯಿ - ಮಗುವಿಗೆ ತಿನ್ನಿಸಿ ನಂತರ ಉಳಿದಿರುವುದರಲ್ಲೇ ತನ್ನುದರ ತುಂಬಿಸಿಕೊಳ್ಳುತ್ತಾಳೆ. ಇಂತಹ ಮಮತಾಮಯಿ ಅಮ್ಮನ ದಿನದ ಸಂಭ್ರಮ ಒಂದು ದಿನಕ್ಕೆ ಸೀಮಿತವಾಗಬಾರದು. ತನ್ನೆತ್ತರ ಬೆಳೆದು ನಿಂತ ಮಗನಿಗೆ ಮದುವೆ ಮಾಡುವಾಗ – “ಬರುವ ಸೊಸೆ ಎಂತಹವಳೋ” ಎಂಬ ಅಳುಕಿಲ್ಲದೆ ಮದುವೆಗೆ ಸಿದ್ಧತೆ ಮಾಡುತ್ತಾಳೆ. ಕನ್ಯಾ ಸ್ವೀಕಾರ ಸಮಯದಲ್ಲಿ ತನ್ನೆಲ್ಲಾ ನೋವು ಮರೆತು ಸೊಸೆಯನ್ನು ಮನೆದುಂಬಿಸಿಕೊಳ್ಳುತ್ತಾಳೆ. ಅತ್ತೆ ಸೊಸೆಯರ ಬೆಸುಗೆಯ ತಾಳ ತಪ್ಪಿದಾಗ - ಪತ್ನಿಯ ಮಾತು ಮೀರಲಾಗದೆ ಅನಾಥಾಶ್ರಮದಲ್ಲಿ ಬಿಟ್ಟರೂ ಒಡಲಲ್ಲಿ ನೋವಿನ ಬೆಂಕಿ ತುಂಬಿಕೊಂಡಿದ್ದರೂ, “ಮಗನೇ ಸುಖವಾಗಿರು” ಎಂದು ಹಾರೈಸುವ ಅಮ್ಮನ ಮನಸ್ಸು ಬಂಗಾರ.

ಅಮ್ಮ ಕೈ ಎತ್ತಿ ಹೊಡೆದವಳಲ್ಲ - ಕೈ ಬೀಸಿ ಕರೆದು ತುತ್ತು ಮುತ್ತು ಕೊಟ್ಟು ಜೊತೆಯಾಗಿ ನಲಿದವಳು. ತನಗೇನನ್ನೂ ಬಯಸದೆ ಮಕ್ಕಳ ಸಂತೋಷದಲ್ಲೇ ಸುಖ ಕಂಡು ತನ್ನವರಿಗಾಗಿ ಜೀವ ಸವೆದ ಅಮ್ಮನೇ ಪ್ರತ್ಯಕ್ಷ ದೇವರು. ಕೇವಲ ವರ್ಷದಲ್ಲಿ ಒಂದು ದಿನ ಮಾತ್ರ “ವಿಶ್ವ ಅಮ್ಮಂದಿರ ದಿನಾಚರಣೆ" ಯ ನೆಪದಲ್ಲಿ "ಅಮ್ಮನಿಗೆ ಜೈ" ಎನ್ನುವುದಕ್ಕಿಂತ ಆಕೆಗೆ ನಿತ್ಯ ಗೌರವ ನೀಡೋಣ ಇದು ನನ್ನ ಆಗ್ರಹ

ಅಮ್ಮನಾ ನುಡಿ ಚಂದ
ಮಾತಿನಲಿ ಮಕರಂದ
ನಮ್ಮನ್ನು ಸಲಹುವಳು
ಶುದ್ಧ ಮನದಿಂದ
ವಿಶ್ವದ ಎಲ್ಲ ತಾಯಂದಿರಿಗೂ ನಮನಗಳು.
........ರಮೇಶ ಎಂ. ಬಾಯಾರು ಎಂ.ಎ, ಬಿಎಡ್
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
“ಸ್ಕಂದ” ಕುಳ ಗ್ರಾಮ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com 
*****************************************




Ads on article

Advertise in articles 1

advertising articles 2

Advertise under the article