ಮಕ್ಕಳಿಗೆ ರಜೆಯ ಓದು : ಸಂಚಿಕೆ - 22
Tuesday, May 26, 2026
Edit
ಸಂಚಿಕೆ - 22
ಓದು ಬರಹ : ಕೆ ಪಿ ಅಶ್ವಿನ್ ರಾವ್
ಪದವಿನಂಗಡಿ, ಬೊಂದೇಲ್
ಮಂಗಳೂರು, ದಕ್ಷಿಣಕನ್ನಡ ಜಿಲ್ಲೆ
ಮೊ : +91 94482 53815
ಈ ವಾರ ಭಾರತೀಯ ಲೇಖಕರೇ ಬರೆದ ಎರಡು ಕಾದಂಬರಿಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ. ಒಂದು ಆಂಗ್ಲ ಭಾಷೆಯ ಕಾದಂಬರಿ ಪುಟ್ಟ ಗೂಬೆಯ ರಾತ್ರಿ (ದಿವ್ಯಾ ಶ್ರೀನಿವಾಸನ್) ಮತ್ತೊಂದು ತೆಲುಗು ಭಾಷೆಯ ‘ದಿ ಯಂಗ್ ಸೈಂಟಿಸ್ಟ್’ ( ಮಲ್ಲಾರಿ ಮೇವುಂಡಿ)
ಪುಟ್ಟ ಗೂಬೆಯ ರಾತ್ರಿ ( Little Owl’s Night) ; ಗೂಬೆ ಒಂದು ಆಕರ್ಷಕ ಹಕ್ಕಿ. ಆದರೆ ಅದಕ್ಕೆ ಮನುಷ್ಯನಂತೆಯೇ ಮುಖದ ಎದುರು ಬದಿಯಲ್ಲೇ ಕಣ್ಣುಗಳಿರುತ್ತವೆ ಮತ್ತು ರಾತ್ರಿ ವೇಳೆ ಬೇಟೆಯಾಡುವುದರಿಂದ ಮಕ್ಕಳಿಗೆ ಹೆದರಿಕೆ ಹುಟ್ಟಿಸುತ್ತವೆ. ಆದರೆ ಅದು ನಿರುಪದ್ರವಿ ಪಕ್ಷಿ. ದಿವ್ಯಾ ಶ್ರೀನಿವಾಸ್ ಆಂಗ್ಲ ಭಾಷೆಯಲ್ಲಿ ಬರೆದ ‘ಲಿಟಲ್ ಔಲ್ಸ್ ನೈಟ್’ ಕಾದಂಬರಿ ಮಕ್ಕಳನ್ನು ಹೊಸದಾದ ಕಾಲ್ಪನಿಕ ಪ್ರಪಂಚಕ್ಕೆ ಕರೆದುಕೊಂಡು ಹೋಗುತ್ತದೆ.
ಪ್ರತೀ ಸಾಯಂಕಾಲ ಸೂರ್ಯ ಮುಳುಗುತ್ತಿದ್ದಂತೆ ಕಾಡು ಎಚ್ಚರಗೊಳ್ಳುತ್ತದೆ. ಪುಟ್ಟ ಗೂಬೆಯೊಂದರ ರಾತ್ರಿಯ ಸಾಹಸಗಳು ಪುಟಾಣಿ ಓದುಗರನ್ನು ಕತ್ತಲಿನ ಜಗತ್ತಿನ ಶಾಂತ ಮತ್ತು ಮಾಂತ್ರಿಕ ಪಯಣಕ್ಕೆ ಕರೆದೊಯ್ಯುತ್ತದೆ. ಕುತೂಹಲಕಾರಿ ಹಾಗೂ ಚೂಟಿಯಾದ ಪುಟ್ಟ ಗೂಬೆ ರಾತ್ರಿಯ ಕಾಡಿನ ಸೌಂದರ್ಯವನ್ನು ಅನ್ವೇಷಿಸುತ್ತಾ, ಹೊಳೆಯುವ ನಕ್ಷತ್ರಗಳು, ಕೊರಕೊರ ಅರಚುವ ಕಪ್ಪೆಗಳು, ಓಡಾಡುವ ನಿಶಾಚರಿ ಪ್ರಾಣಿಗಳು ಮತ್ತು ಇತರ ಆಕರ್ಷಣೀಯ ಜೀವಿಗಳ ಕಥೆಯನ್ನು ನಮ್ಮ ಎದುರು ತೆರೆದಿಡುತ್ತದೆ. ಬುದ್ಧಿವಂತ ಮುದಿ ಗೂಬೆಯ ಮಾರ್ಗದರ್ಶನದಲ್ಲಿ, ಪ್ರತಿಯೊಂದು ಪ್ರಾಣಿಯು ರಾತ್ರಿಯ ಮಾಂತ್ರಿಕತೆಗೆ ಹೇಗೆ ಕೊಡುಗೆ ನೀಡುತ್ತದೆ ಎಂಬುದನ್ನು ಪುಟ್ಟ ಗೂಬೆ ಮರಿ ಕಂಡುಕೊಳ್ಳುತ್ತದೆ. ಪ್ರತೀ ರಾತ್ರಿಯ ನೀರವತೆಯು ಆ ಕಾಡನ್ನು ಶಾಂತ ಮತ್ತು ಅದ್ಭುತ ಸ್ಥಳವಾಗಿ ಮಾರ್ಪಡುತ್ತದೆ.
ಮಕ್ಕಳಿಗೆ ಮುದ ನೀಡುವ ಈ ಕಾದಂಬರಿಯನ್ನು ದಿವ್ಯಾ ಶ್ರೀನಿವಾಸನ್ ಬರೆದಿದ್ದು, ಇದರಲ್ಲಿನ ಕಥೆಯ ಸುಂದರ ವರ್ಣನೆಗಳನ್ನು ಮಕ್ಕಳು ರಾತ್ರಿ ಮಲಗುವ ಸಮಯದಲ್ಲಿ ಓದಿದರೆ ಅದ್ಭುತ ಕನಸಿನ ಲೋಕಕ್ಕೆ ಜಾರಬಹುದಾಗಿದೆ. ಈ ಕಾದಂಬರಿಯ ಆಕರ್ಷಣೆಯೆಂದರೆ ಪ್ರಕೃತಿ ಜಗತ್ತಿನ ಶಾಂತತೆ. ಪುಟ್ಟ ಗೂಬೆಯ ಅನ್ವೇಷಣೆ, ಅಚ್ಚರಿಯ ಪಯಣ ಮತ್ತು ಪ್ರಕೃತಿಯ ಮೇಲಿನ ಮೆಚ್ಚುಗೆಯ ಕಥೆಗಳು ಮಕ್ಕಳಿಗೆ ಆಕರ್ಷಣೀಯ ಮತ್ತು ಸಾಂತ್ವನದಾಯಕ ಓದಿನ ಆನಂದ ನೀಡುತ್ತದೆ. ಅಮೆಜಾನ್ ಹಾಗೂ ಫ್ಲಿಪ್ ಕಾರ್ಟ್ ನಂತಹ ಜಾಲತಾಣಗಳಲ್ಲಿ ಈ ಕಾದಂಬರಿ ಲಭ್ಯವಿದೆ. ಮಕ್ಕಳಿಗೆ ಓದಲು ಬಹಳ ಆನಂದ ನೀಡುವ ಕೃತಿ ಇದು.
ಮೇವುಂಡಿ ಮಲ್ಲಾರಿ ಅವರ ತೆಲುಗು ಭಾಷೆಯಲ್ಲಿ ಪ್ರಕಟವಾದ ’ದಿ ಯಂಗ್ ಸೈಂಟಿಸ್ಟ್’ ಮಕ್ಕಳ ಕಾದಂಬರಿಯನ್ನು ಅದೇ ಹೆಸರಿನಲ್ಲಿ ಕನ್ನಡಕ್ಕೆ ತಂದವರು ಕೆ.ಶಿವಲಿಂಗಪ್ಪ. ಈ ಕಾದಂಬರಿಯಲ್ಲಿನ ರಾಂಬಾಬು ಎನ್ನುವ ಹುಡುಗನೊಬ್ಬ ನೆಗಡಿಗೆ ವ್ಯಾಕ್ಸಿನ್ ಕಂಡುಹಿಡಿದು ಔಷಧಿ ಕಂಪೆನಿಗಳಿಗೆ ಭಾರೀ ನಷ್ಟವನ್ನುಂಟು ಮಾಡುತ್ತಾನೆ. ಅದನ್ನು ಸಹಿಸದ ಔಷಧಿ ಕಂಪೆನಿಗಳು ರಾಂಬಾಬುವಿಗೆ ನೀಡಿದ ತೊಂದರೆ, ಬಾಲಕ ಅದನ್ನು ಎದುರಿಸಿದ ಸಾಹಸಗಾಥೆಯನ್ನು ’ದಿ ಯಂಗ್ ಸೈಂಟಿಸ್ಟ್’ ಕಾದಂಬರಿಯಲ್ಲಿ ಚಿತ್ರಿಸಲಾಗಿದೆ. ಮಕ್ಕಳಿಗೆ ವೈಚಾರಿಕ ಸಂಗತಿಗಳನ್ನು ಫ್ಯಾಂಟಿಸಿ ರೂಪದಲ್ಲಿ, ಹಾಸ್ಯವನ್ನು ಸೇರಿಸಿ ಈ ಕೃತಿಯನ್ನು ಮಕ್ಕಳಿಗೆ ನೀಡಲಾಗಿದೆ.
ಈ ಕಾದಂಬರಿ ಭಾರತೀಯ ಭಾಷೆ ತೆಲುಗಿನಲ್ಲಿ ಪ್ರಕಟವಾಗಿ ಕನ್ನಡಕ್ಕೆ ಅನುವಾದಗೊಂಡಿದೆ. ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ, ಧೈರ್ಯ ಮೊದಲಾದುವುಗಳನ್ನು ತುಂಬಲು ಈ ಕಾದಂಬರಿಯ ಓದು ಸಹಕಾರಿಯಾಗಬಲ್ಲದು.
(ಇನ್ನಷ್ಟು ಪುಸ್ತಕಗಳ ಪರಿಚಯ ಮುಂದಿನ ವಾರ)
ಚಿತ್ರ ಕೃಪೆ: ಅಂತರ್ಜಾಲ ತಾಣ
ಪದವಿನಂಗಡಿ, ಬೊಂದೇಲ್
ಮಂಗಳೂರು, ದಕ್ಷಿಣಕನ್ನಡ ಜಿಲ್ಲೆ
ಮೊ : +91 94482 53815
******************************************