-->
ನಿಷ್ಪಾಪಿ ಸಸ್ಯಗಳು : ಸಂಚಿಕೆ - 151

ನಿಷ್ಪಾಪಿ ಸಸ್ಯಗಳು : ಸಂಚಿಕೆ - 151

ನಿಷ್ಪಾಪಿ ಸಸ್ಯಗಳು : ಸಂಚಿಕೆ - 151
ಲೇಖಕರು: ವಿಜಯಾ ಬಿ ಶೆಟ್ಟಿ ಸಾಲೆತ್ತೂರು
ಸಹ ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ 
ಬಾಳೆಪುಣಿ (ಇರಾ), ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ

      

ಪ್ರೀತಿಯ ಮಕ್ಕಳೇ... ಹೇಗಿದ್ದೀರಿ? ಇನ್ನೇನು... ಶಾಲಾ ದಿನಗಳೂ ತೆರೆದುಕೊಂಡವು. ತುಂಬಾನೆ ಖುಷಿಯನ್ಸತ್ತೆ ಅಲ್ವಾ? ರಜೆಯಲ್ಲಿ ಎಲ್ಲೆಲ್ಲಿ ಹೋದ್ರಿ? ಏನೇನ್ ಹೊಸತು ನೋಡಿದ್ರಿ? ಗಿಡ.. ಮರ? ಬಳ್ಳಿ.. ಹೂ? ಎಲೆಗಳ ಬಗ್ಗೆ, ಬೀಜ ಪ್ರಸಾರದ ಬಗ್ಗೆ ಏನಾದ್ರೂ ತಿಳ್ಕೊಂಡಿರಾ?

ನಾನೂ ನಿಮ್ಮಂತೆ ಈ ನಿಷ್ಪಾಪಿ ಗಿಡಗಳ ಬಗ್ಗೆಯೆ ಹೆಚ್ಚು ಗಮನಿಸುತ್ತೇನೆ ಗೊತ್ತಾ? ಮನೆಯಂಗಳದ ಮೂಲೆಯಲ್ಲಿ ತೆಳ್ಳಗಿನ ಗಿಡವೊಂದಿತ್ತು. ಅದು ನರ್ಸರಿಯಿಂದ ತಂದ ಗಿಡವಾಗಿತ್ತು. "ಹೂವಿಲ್ಲ ಏನಿಲ್ಲ ಸುಮ್ನೆ ದುಬಾರಿ ಕ್ರಯ ಯಾಕ್ ಹೇಳ್ತಿದ್ದಿ ಮಾರಾಯ?" ಅಂತ ಮಾರಾಟಗಾರನಲ್ಲಿ ಕೇಳಿದ್ದೆ. ಬೇಸಗೆಯ ಕೊನೆ ದಿನಗಳು.. ನೀರೇ ಇಲ್ಲದೆ ಆತನ ನರ್ಸರಿ ಒಣಗಿತ್ತು. ಮಳೆ ಸುರಿಯಲು ಹಿಂದೆ ಮುಂದೆ ಯೋಚನೆಯಲ್ಲೇ ಇತ್ತು. 
ಇಂತಹ ಕಾಲದಲ್ಲೂ ಈ ಗಿಡ ಪುಟ್ಟ ಪುಟ್ಟ ಅಂಡಾಕಾರದ ಕೆಂಪು, ನೇರಳೆ, ಹಸಿರು ಮಿಶ್ರಿತ ಎಲೆಗಳನ್ನು ಜೋಡಿಸಿಕೊಂಡಿತ್ತು. ಈ ಗಿಡದ ನೋಟ "ಮಳೆ ಬರಲಿ... ಕಾಯೋಣ" ಅಂತ ಅನ್ನುವಂತಿತ್ತು. ಗಿಡದ ಹೆಸರಿನ ಬಗ್ಗೆ ವಿಚಾರಿಸಿದಾಗ ಅದು ಚೈನೀಸ್ ಫ್ರಿಂಜ್ ಫ್ಲವರ್ (Chinese fringe flower) ಎಂದೂ ಹಿಮಾಲಯ, ಚೀನಾ, ಜಪಾನ್ ಗಳಿಗೆ ಸ್ಥಳೀಯವೆಂದೂ ತಿಳಿಸಿದ್ದೇ ಅಲ್ಲದೆ Loropetalam chinense ಇದರ Botanical name ಅಂತಂದ. Hazel ಕುಟುಂಬದ ವಿಶೇಷ ಸಸ್ಯವೆಂದು ಹೊಗಳುತ್ತಾ "ಇದರ ಎಲೆಗಳನ್ನು ನೋಡಿ ಮೇಡಂ.. ಎಷ್ಟು ಚಂದ ಇದೆಯಲ್ವಾ.. ಶ್ರೀಮಂತ ಬಣ್ಣ ನೋಡಿ... ಕಡು ನೇರಳೆ, ತಾಮ್ರವರ್ಣ, ಹಸಿರು ಎಲ್ಲಾ ಮಿಕ್ಸಾಗಿ ಹೇಗೆ ಕಾಣ್ತಿದೆ!!" ಅಂತಂದ. ಹೂವಿನ ಬಗ್ಗೆ ವಿವರಿಸುತ್ತಾ "ಇದ್ರ ಹೂವೂ ಒಂದು ವಿಶೇಷವೇ ಮೇಡಂ.. ನೀವೆಲ್ಲೂ ನೋಡಿರ್ಲಿಕಿಲ್ಲ... ರಿಬ್ಬನ್ ಅಥವಾ ದಾರದ ತರಹ ಸೂಕ್ಷ್ಮವಾಗಿರುತ್ತದೆ... ವಸಂತಕಾಲದಲ್ಲಿ ಈ ಬಣ್ಣದ ಎಲೆಗಳ ಮೇಲೆ ಗಾಢ ಗುಲಾಬಿ ಬಣ್ಣದ ಹೂವುಗಳು ಗೊಂಚಲು ಗೊಂಚಲಾಗಿ ಬರ್ತದೆ ಗೊತ್ತಾ? ಬಿಳಿ, ಗುಲಾಬಿ, ಕೆಂಪು ಬಣ್ಣದ ಹೂವುಗಳಾಗುವ ಗಿಡಗಳೂ ಇವೆ ಮೇಡಮ್... ಬರ್ಗುಂಡಿ, ದರುಮ, ಜಾಝ್ ಹ್ಯಾಂಡ್ಸ್, ಎಮರಾಲ್ಡ್ ಸ್ನೋ, ಕೆಂಪು ವಜ್ರ ಮೊದಲಾದ ಪ್ರಭೇದಗಳಿದ್ರೂ ಕೆಲವನ್ನ ಮಾತ್ರ ಮಾರಾಟ ಮಾಡಬಹುದಾಗಿದೆ. ಕೆಲವೆಲ್ಲ ಪೇಟೆಂಟ್ ಆಗಿರುತ್ತೆ" ಅಂತ ಆ ನಿಷ್ಪಾಪಿ ಸಸ್ಯದ ಜಾತಕವನ್ನೇ ಜಾಲಾಡಿದ ಆತನ ಸಸ್ಯಪ್ರೇಮಕ್ಕೆ ಮನದಲ್ಲೇ ನಮಿಸಿದೆ. ಅವುಗಳಲ್ಲಿ ಒಂದು ಅಡಿಯಷ್ಟೇ ಎತ್ತರ ಬೆಳೆವ ಹಾಗೂ ಏಳೆಂಟು ಅಡಿ ಎತ್ತರ ಬೆಳೆವ ಪ್ರಭೇದಗಳಿವೆ ಎಂದ.

ನೀರಿಲ್ಲದಿದ್ದರೂ ಬಣ್ಣದ ಅಂಗಿ ಹಾಕಿದ್ದ ಗಿಡವನ್ನು ಆತ ಹೇಳಿದ ದುಡ್ಡು ಕೊಟ್ಟು ತಂದು ಮೂಲೆಯಲ್ಲಿ ನೆಟ್ಟಿದ್ದೆ. ಏಕೆಂದರೆ‌ ಮಾರಾಟಗಾರ "ಅದು ದೊಡ್ಡ ಮರವಾಗ್ತದೆ" ಎಂಬ ಸೂಚನೆ ಬೇರೆ ಕೊಟ್ಟಿದ್ದ. ನೀರಿನ ಅಭಾವ ಕಾಡುವ ನನಗೋ ನೀರಿಲ್ಲದೆಯೂ ಬರ ಸಹಿಷ್ಣುವಾಗಿರುವ ಈ ಗಿಡವನ್ನು ಅಕ್ಕರೆಯಿಂದ ಸಾಕುವ ಹಂಬಲವಿತ್ತು.

ನೆಟ್ಟ ಒಂದೆರಡು ವರ್ಷ ತೀರ್ಥದಂತೆ ನೀರು ಹನಿಸಿದ್ದಾಯಿತು. ಗಿಡವು ಕೋಪಗೊಳ್ಳದೆ ಹೇಗೋ ಸುಧಾರಿಸಿಕೊಂಡಿತು. ಮೂರನೇ ಮಳೆಗಾಲ ಕಾಲಿಡುವ ಕೆಲ ದಿನಗಳ ಮೊದಲೇ ಪದೇ ಪದೇ ತುಂತುರಿನ ಸಿಂಚನವಾಯ್ತು. ಎಷ್ಟು ನೀರು ಹಾಕಿದರೂ ಮುಖ ಉಬ್ಬಿಸಿಯೇ ಕುಳಿತಿದ್ದ ಗಿಡಗಳೆಲ್ಲ ಒಮ್ಮೆಲೇ ಏನೋ ಪವಾಡ ನಡೆದಂತೆ ಚಿಗುರತೊಡಗುವುದು, ಮಣ್ಣೊಳಗಿನ ಗೆಣಸು, ಕೆದುವಿನಂತಹ ಸಸ್ಯಗಳು ಬರಿಯ ತುಂತುರು ಮಳೆಗೇ ಮೊಳಕೆಯೊಡೆಯೋದೆಲ್ಲ ಈ ಹೊತ್ತಲ್ಲಿ ಮಾಮೂಲಿ. ಎಷ್ಟು ಕಷ್ಟದಿಂದ ನೀರು ಹಾಕಿದ್ರೂ ಚಿಗುರದ, ಹೂ ಬಿಡದ ಗಿಡಗಳೆಲ್ಲ ನಾಲ್ಕು ಹನಿ ಮಳೆಗೆ ಈ ಪರಿ ಬದಲಾಗೋದನ್ನು ಕಂಡಾಗಲೆಲ್ಲ ಮಳೆಯ ಬಗ್ಗೆ ನನಗೆ ಅಸಹನೆ ಅಸೂಯೆ ಉಂಟಾಗುವುದುಂಟು. ಮಲ್ಲಿಗೆಯೂ ತಕಧಿಮಿಯೆನುತ ಚಿಗುರಿ ಹೂಬಿಡುತ್ತದೆ. ನಾನಾಗ ಗಿಡಗಳಲ್ಲಿ ಮಾತನಾಡದೆ ಮೌನವಾಗುತ್ತೇನೆ. ಈ ನಿಸರ್ಗದ ಮೋಡಿಗೆ ಬೆರಗಾಗುತ್ತೇನೆ. ಚಂದ್ರ ಲೋಕ, ಮಂಗಳನ ಅಂಗಳ ಎಂದೆಲ್ಲಾ ಹೊರಡುವ ಮಾನವನಿಗೆ ನಿಸರ್ಗದ ಮೇಲೇಕೆ ಹಿಡಿತ ಬರಲಿಲ್ಲವೆಂದು... ಚಿಂತಿಸುತ್ತೇನೆ. ಈ ಬಾರಿ ನನ್ನ ಮೌನಕ್ಕೆ ಬ್ರೇಕ್ ಹಾಕಿದ್ದು ಈ ಮಾಟಗಾತಿ ಚೈನೀಸ್ ಫ್ರಿಂಜ್!! ಮೈಯೆಲ್ಲ ಪಟ್ಟಿ ತರಹದ ಕಡು ಗುಲಾಬಿ ರಂಗಿನ ದಳಗಳ ಗೊಂಚಲುಗಳು! ಎಲೆಗಳೇ ಗುಲಾಬಿ, ಕೆಂಪು ವರ್ಣದವಿದ್ದವು. ದೀರ್ಘಕಾಲಿಕ ಪೊದೆಸಸ್ಯವಾದುದರಿಂದ ಸಣ್ಣ ದೊಡ್ಡಶಾಖೆಗಳು ಬಹಳವಿದ್ದವು. ಎಲೆಗಳೆ ಕಾಣದಂತೆ ಹೂಗಳು ರಂಗಕ್ಕಿಳಿದಿದ್ದವು. ಒಂದೇ ಗಿಡವಿದ್ದು ಅದರ ಶಾಖೆಗಳನ್ನು ಕತ್ತರಿಸಲು ಮನ ಒಪ್ಪಿರಲಿಲ್ಲ. ಈಗ ವಸಂತನಾಗಮನಕ್ಕೆ ಮೈದುಂಬಿನಿಂತ ಚೈನೀಸ್ ಫ್ರಿಂಜ್ ಫ್ಲವರ್ ಕಂಡು ಧನ್ಯತೆ ಮೂಡಿತು. ಇದರಲ್ಲಿ ಬೀಜಗಳಾಗುವುದನ್ನು ನಾನು ಕಾಣಲಿಲ್ಲ. ಶಾಖೆಗಳನ್ನು ನೆಟ್ಟು ಬೆಳೆಸುವುದು ಬಹು ಸುಲಭ. ಉದ್ಯಾನವನ, ಬೇಲಿ, ಪರದೆಯಾಗಿ, ಭೂದೃಶ್ಯದ ಸೌಂದರ್ಯಕ್ಕೂ ಈ ಸಸ್ಯವನ್ನು ಧಾರಾಳವಾಗಿ ಬಳಸಬಹುದು. ಅಲಂಕಾರಿಕ ಸಸ್ಯವಾಗಿ ಅನಗತ್ಯ ರಂಬೆಕೊಂಬೆ ಕತ್ತರಿಸಿ ಅಲ್ಪಸ್ವಲ್ಪ ಜಾಗದಲ್ಲೂ ಬೆಳೆಸಬಹುದು. ಮಕ್ಕಳೇ, ತಾವೂ ಈ ಬಗ್ಗೆ ಪ್ರಯತ್ನಿಸುವಿರಲ್ಲವೇ?

ನಿಷ್ಪಾಪಿ ಸಸ್ಯಗಳ ಪ್ರೀತಿಗೆ ಸೋತು ನೀವು ಯಾವುದಾದರೂ ಹೊಸ ಸಸ್ಯಗಳನ್ನು ಸಾಕುತ್ತಿರುವಿರಾದರೆ ಅಥವಾ ಗುರುತಿಸಿ ರಕ್ಷಿಸುತ್ತಿದ್ದರೆ ದಯವಿಟ್ಟು ನನ್ನ 7892587191 ನಂಬರ್ ಗೆ ತಿಳಿಸುವಿರಾ?

ಸರಿ ಮಕ್ಕಳೇ... ಮುಂದಿನ ವಾರ ಇನ್ನೊಂದು ನಿಷ್ಪಾಪಿ ಸಸ್ಯದ ಬಗ್ಗೆ ತಿಳಿಯೋಣ, ನಮಸ್ತೆ.
..................... ವಿಜಯಾ ಬಿ ಶೆಟ್ಟಿ ಸಾಲೆತ್ತೂರು
ಸಹ ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ 
ಶಾಲೆ , ಬಾಳೆಪುಣಿ (ಇರಾ)
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
Mob : +91 78925 87191
*****************************************


Ads on article

Advertise in articles 1

advertising articles 2

Advertise under the article