-->
ಸ್ಫೂರ್ತಿಯ ಮಾತುಗಳು : ಸಂಚಿಕೆ - 216

ಸ್ಫೂರ್ತಿಯ ಮಾತುಗಳು : ಸಂಚಿಕೆ - 216

ಸ್ಫೂರ್ತಿಯ ಮಾತುಗಳು : ಸಂಚಿಕೆ - 216
ಲೇಖಕರು : ರಮೇಶ ಎಂ. ಬಾಯಾರು 
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com 
                    
    

ಅತ್ಯಂತ ಸರಳ ಆದರೆ ಅತೀ ಸಾರಭೂತವಾದ ಪದ “ಸೇವೆ”. ಸೇವೆಯನ್ನು ಕರ್ಮ ಎಂದೂ ವ್ಯಾಖ್ಯಾನಿಸ ಬಹುದು. ಕರ್ಮ ಎಂದರೆ ಕೆಲಸ. ವೈದ್ಯರು ಮಾಡುವ ಕೆಲಸ ಸಮಾಜ ಸೇವೆ. ಸೇನೆಗಳು ಮಾಡುವ ಕೆಲಸ ದೇಶ ಸೇವೆ. ರಾಜಕಾರಣಿಯೂ ಸಮಾಜ ಸೇವಕ. ಸೇವೆ ಮಾಡುವ ಎಲ್ಲರೂ ಸೇವಕರು ಅಥವಾ ಸೇವಾ ಕರ್ಮಿಗಳು. ಸೇವೆಯು ಅಥವಾ ಕರ್ಮವು ಪ್ರತಿಫಲವನ್ನು ನೀಡುವುದು ಸಹಜ. ಆದರೆ ಪ್ರತಿಫಲದ ಸ್ವರೂಪವು ಭಿನ್ನವಾಗಿರುತ್ತದೆ.

ತೋಟದ ಮಾಲಿಯೂ ಕೃಷಿಯ ಮೂಲಕ ಸೇವೆ ಮಾಡುತ್ತಾನೆ. ಕೃಷಿಯು ಬೆಳೆಯನ್ನು ನೀಡುತ್ತದೆ. ಆ ಬೆಳೆಯೇ ಆತನಿಗೆ ಮತ್ತು ಸಮಾಜಕ್ಕೆ ಆಹಾರವೂ ಆಗಿದೆ. ಬೆಳೆಯಿಂದ ಅವನಿಗೆ ಆರ್ಥಿಕ ಲಾಭವೂ ಇರುತ್ತದೆ. ಜೊತೆಗೆ ಆಹಾರ ಹಂಚಿದ ಪುಣ್ಯವೂ ಇರುತ್ತದೆ. ಹಸಿದವರೊಬ್ಬರಿಗೆ ಅನ್ನ ನೀಡುವುದು ಕರ್ಮ ಅಥವಾ ಸೇವೆಯೇ ತಾನೆ? ಈ ಸೇವೆಯಿಂದ ಕರ್ಮಿಗೆ ಪ್ರತಿಫಲವೇನು? ಕರ್ಮಿಗೆ ಆರ್ಥಿಕ ಗಳಿಕೆಯಾಗದು. ಅವನ ಹಸಿವೂ ನೀಗದು. ಆದರೆ ಅನ್ನದಾನ ಮಾಡಿದ ಪುಣ್ಯವು ಒದಗುವುದರಲ್ಲಿ ಸಂದೇಹವಿಲ್ಲ. ಅಲ್ಲದೆ ಹಸಿದವನ ಪ್ರೀತಿ, ಶುಭಹಾರೈಕೆ ದಾನಿಗೆ ವರವಾಗಿರುತ್ತದೆ. ವರವಾಗಲೀ ಪ್ರೀತಿಯಾಗಲೀ, ಹಾರೈಕೆಯಾಗಲೀ ಪುಣ್ಯದ ಪೊಟ್ಟಣವಾಗಲೀ ಇವು ಪ್ರತಿಫಲಗಳೆಂಬುದನ್ನು ಮರೆಯಬಾರದು. ಸೇವಾ ಪ್ರತಿಫಲವು ಭಾವನೆಯ ಮೂಲಕ ದೊರೆತರೂ ಅದನ್ನು ಕೀಳಾಗಿಸುವಂತಿಲ್ಲ.

ಆಕೆ ಪಿ.ಯೂ ವಿದ್ಯಾರ್ಥಿನಿ. ಹೆಸರು ಯಕ್ಷಿತಾ. ನಮ್ಮೊಡನೆ ಗೀತಾ ಸ್ನೇಹಸಮ್ಮೇಳನಕ್ಕೆ ಮೈಸೂರಿಗೆ ಬಂದಿದ್ದಳು. ನಾನು ಆಕೆಗೆ ಹೆಚ್ಚು ಪರಿಚಿತನಾದುದರಿಂದ ನನ್ನೊಡನೆಯೇ ಜೊತೆಯಾಗಿದ್ದಳು. ನನ್ನ ಬಗ್ಗೆ ಅವಳಿಗದೇನೋ ಅಭಿಮಾನ. 2026 ಜನವರಿ ನಾಲ್ಕರಂದು ಗೀತಾ ಸಮಾವೇಶ. ಜನವರಿ ಮೂರರಂದು ಎರಡು ಬಸ್ ಜನ ನಾವು ಮೈಸೂರು ಪ್ರವಾಸವನ್ನೂ ಸಮಾವೇಶದೊಂದಿಗೆ ಜೋಡಿಸಿದ್ದೆವು. ಪ್ರವಾಸದ ಕೊನೆಯ ತಾಣ “ಕೃಷ್ಣರಾಜಸಾಗರ ಅಣೆಕಟ್ಟು ಪ್ರದೇಶದ ನೃತ್ಯಕಾರಂಜಿ” ಮತ್ತು “ಉದ್ಯಾನವನ”. ಸಂಜೆ ಮಬ್ಬುಗತ್ತಲು. ಬೆಳಕಿನ ವ್ಯವಸ್ಥೆ ಚೆನ್ನಾಗಿರದೇ ಇರುವುದರಿಂದ ವೃಂದಾವನ ನೋಡಲು ಅನುಕೂಲತೆ ಕಡಿಮೆಯಾಯಿತು. ನಮ್ಮ ಗುಂಪಿನಲ್ಲಿ ಇಬ್ಬರು ಕೈ ತಪ್ಪಿದರು. ಅವರನ್ನು ಹುಡುಕುವುದರಲ್ಲಿಯೇ ಸ್ವಲ್ಪ ಸಮಯ ತಗುಲಿದುದರಿಂದ ಗುಂಪು ಒಟ್ಟಾಗಲಿಯೆಂದು ನಾವು ಕಾಯಬೇಕಾಯಿತು. ಜನವರಿ ಮೊದಲ ವಾರದಲ್ಲಿ ಶಾಲಾಕಾಲೇಜುಗಳ ಪ್ರವಾಸದ ಭರವಾದುದರಿಂದ ವಿಪರೀತ ಜನಸಂದಣಿಯೂ ಇತ್ತು. ನನ್ನ ಜೊತೆಗಿದ್ದ ವಿದ್ಯಾರ್ಥಿನಿ ಯಕ್ಷಿತಾಳಿಗೆ ಕೈ ಹಿಡಿದು ಜೊತೆಯಾಗಿರಲು ತಿಳಿಸಿದೆ. ಅವಳಲ್ಲಿ ಮೊಬೈಲೂ ಇರಲಿಲ್ಲ. ಅವಳು ನನಗೆ ಅವಲಂಬಿತಳಾಗಿಯೇ ಇದ್ದುದರಿಂದ ಅವಳ ಜವಾಬ್ದಾರಿಯು ನನಗೇ ಬಂದು ಬಿಟ್ಟಿತ್ತು. ಎಲ್ಲರೂ ಜೊತೆಯಾದಾಗ ನೃತ್ಯ ಕಾರಂಜಿ ನೋಡಲು ಮುಂದುವರಿದೆವು. ಉಳಿದಿರುವ ಸಮಯ ಮೂವತ್ತು ನಿಮಿಷ. ಅದರಲ್ಲಿ ನಡೆದು ಗಮ್ಯ ಸ್ಥಳ ತಲುಪಲು ಕನಿಷ್ಠ ಹದಿನೈದು ನಿಮಿಷ ಬೇಕಿತ್ತು. ಜನರ ಒತ್ತಡದಿಂದಾಗಿ ನಡೆಯುವುದೂ ನಿಧಾನವಾಯಿತು. ಕೊನೆಯ ಹಂತದ ಮೆಟ್ಟಲು ಏರುವಾಗ ನನಗೆ ಎಡವಿದಂತಾಗಿ ಬೀಳುವಂತಾದೆ. ಆಗ ನನ್ನ ಎಡಗೈ ಹಿಡಿದಿದ್ದ ರಕ್ಷಿತಾ ತನ್ನ ಹಿಡಿಯುವಿಕೆಯನ್ನು ಬಿಗಿಗೊಳಿಸಿದಳು. ಬೀಳುವ ಸಂದರ್ಭದಲ್ಲಿ ದೇಹದ ತೂಕ ಸಹಜವಾಗಿ ಅಧಿಕವಾಗುತ್ತದೆ. ಇನ್ನೇನು ಬಿದ್ದರೆ ಮೂರಡಿ ತಳ್ಳಲ್ಪಟ್ಟು ನಾನು ಬೀಳಬೇಕು. ಜನರ ನುಗ್ಗುವಿಕೆ ಆ ಪ್ರಮಾಣದಲ್ಲಿತ್ತು. ಬೀಳುತ್ತಿದ್ದರೆ ಕಾಲ ತುಳಿತವಾಗುವ ಅಪಾಯವು ಕಟ್ಟಿಟ್ಟ ಬುತ್ತಿ. ಆದರೆ ಹಾಗಾಗಲಿಲ್ಲ. ಹಿಡಿತ ಬಿಗಿಗೊಳಿಸುತ್ತಾ ಯಕ್ಷಿತಾ ನನ್ನ ಎಡಗೈಯನ್ನು ಮೇಲಕ್ಕೆತ್ತುತ್ತಾ ಆಧಾರವಾಗುತ್ತಾ ಬಂದಳು. ಬೀಳುವಿಕೆ ತಪ್ಪಿ ಅಪಘಾತದಿಂದ ನಾನು ಪಾರು. ಬೀಳುವ ವೇಗ ನಿಯಂತ್ರಿಸಲಾಗದೇ ಕೈಬಿಡುತ್ತಿದ್ದರೆ ಅಪಘಾತ ನಿಶ್ಚಿತ. ಸೇವಾ ಭಾವನೆ ಪ್ರಾಣವನ್ನೂ ಉಳಿಸ ಬಲ್ಲುದು ಎಂಬುದಕ್ಕೆ ಈ ಘಟನೆ ಸಾಕ್ಷಿ. ಆ ಸೇವೆಯನ್ನು ಬಹಳ ಲಘುವಾಗಿ ಪರಿಗಣಿಸಿದ ಆ ಮಗಳ ತ್ಯಾಗ ಆಕೆಯ ದೈವಿಕ ಗುಣ. ನನ್ನ ಕಾರ್ಯಗಳಲ್ಲಿ ಅಸಂಖ್ಯ ಸೇವೆಗಳು ಜೊತೆಯಾಗಿವೆ. ಆ ತ್ಯಾಗಿಗಳ ನಿತ್ಯ ಸ್ಮರಣೆಯ ಮಾನಸಿಕ ಪಟ್ಟಿ ನನ್ನೊಡನಿದೆ. ಆ ಪಟ್ಟಿಗೆ ಈ ಕಿರಿಯ ಮಗಳ ಹೆಸರನ್ನು ಸೇರಿಸುವ ಬದ್ಧತೆಯೇ ನನ್ನ ಕರ್ತವ್ಯ. 

ಪ್ರಾಣ ರಕ್ಷಣೆಯ ಕಾಯಕ ಅತ್ಯಂತ ಶ್ರೇಷ್ಠವಾದ ಕರ್ಮ. ಇದರಿಂದ ಪ್ರತಿಫಲವಾಗಿ ಒದಗುವುದು ಭಗವದನುಗ್ರಹದ ಮಹಾ ಮೂಟೆ. ಭಗವದನುಗ್ರಹದ ಮೂಟೆಯು ನಮ್ಮ ಬದುಕನ್ನು ನಾಜೂಕುಗೊಳಿಸುತ್ತದೆ, ನೈಜಗೊಳಿಸುತ್ತದೆ ಮತ್ತು ಸಾರ್ಥಕಗೊಳಿಸುತ್ತದೆ. 
........ರಮೇಶ ಎಂ. ಬಾಯಾರು ಎಂ.ಎ, ಬಿಎಡ್
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
“ಸ್ಕಂದ” ಕುಳ ಗ್ರಾಮ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com 
*****************************************

Ads on article

Advertise in articles 1

advertising articles 2

Advertise under the article