ಜೀವನ ಸಂಭ್ರಮ : ಸಂಚಿಕೆ - 243
Monday, May 25, 2026
Edit
ಜೀವನ ಸಂಭ್ರಮ : ಸಂಚಿಕೆ - 243
ಲೇಖಕರು : ಎಂ.ಪಿ. ಜ್ಞಾನೇಶ್
ಶಿಕ್ಷಣಾಧಿಕಾರಿ
ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ
(ಮಧ್ಯಾಹ್ನ ಉಪಹಾರ ಯೋಜನೆ)
ಜಿಲ್ಲಾ ಪಂಚಾಯತ್ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ
ಮಕ್ಕಳೇ, ದೃಷ್ಟಿಯಂತೆ ಸೃಷ್ಟಿ ಎನ್ನುತ್ತೇವೆ. ನೋಡುವ ದೃಷ್ಟಿ ಒಳ್ಳೆಯದಿದ್ದರೆ, ಜಗತ್ತು ಒಳ್ಳೆಯದಾಗಿ ಕಾಣುತ್ತದೆ. ಹಾಗಾಗಿ ನೋಡುವ ದೃಷ್ಟಿ ಮಹತ್ವದ್ದು. ಜಗತ್ತನ್ನು ಸ್ವರ್ಗವನ್ನಾಗಿಯೂ ನೋಡಬಹುದು. ನರಕವನ್ನಾಗಿಯೂ ನೋಡಬಹುದು. ಇದು ಅತ್ಯಂತ ಪವಿತ್ರ, ದಿವ್ಯ ಅಂತ ನೋಡಬಹುದು. ಇದು ಅತ್ಯಂತ ಜಡ ಅಂತ ನೋಡಬಹುದು. ದೃಷ್ಟಿ ಬಹಳ ಮಹತ್ವ. ಜೀವನದ ಸೊಬಗು, ಸಾರ್ಥಕತೆ ಈ ದೃಷ್ಟಿಯ ಮೇಲೆ ಅವಲಂಬಿಸಿದೆ. ದೃಷ್ಟಿ ಬದಲಾಯಿತು, ಜಗತ್ತು ಬದಲಾಗುತ್ತದೆ. ದೃಷ್ಟಿ ಸ್ಥಿರವಾಯಿತು, ಜಗತ್ತು ಸ್ಥಿರವಾಗುತ್ತದೆ. ದೃಷ್ಟಿ ದಿವ್ಯವಾಯಿತು ಅಂದರೆ ಜಗತ್ತೆಲ್ಲ ಭವ್ಯ, ದಿವ್ಯವಾಗುತ್ತದೆ.
ಉದಾಹರಣೆ: ನೀರು. ನೀರನ್ನು ಇದೇನು ಸಾಮಾನ್ಯ ನೀರು ಅಂತ ನೋಡಬಹುದು. ಇದು ಬಹಳ ಪವಿತ್ರ. ಇದೇ ಜೀವನ ಅಂತ ನೋಡಬಹುದು. ನೀರ ಬಿಟ್ಟರೆ ಜೀವನವಿಲ್ಲ. ದೇಹದಲ್ಲಿ ಶೇಕಡ 75 ಭಾಗ ನೀರೇ ಇದೆ. ಇಂತಹ ನೀರನ್ನು ಅದ್ಭುತ ಅಂತ ನೋಡಲು ಬರುವುದಿಲ್ಲವೇನು? ನೀವು. ಇದೇನು ನೀರು ಅಂತ ಗಟಾರದ ಕಡೆ ನೋಡಲಿಕ್ಕೂ ಬರುತ್ತದೆ. ನಮ್ಮ ದೃಷ್ಟಿಯನ್ನು ನಾವೇ ರೂಪಿಸಿಕೊಳ್ಳಬೇಕು. ಬದುಕು ಸಾರ್ಥಕವಾಗುವಂತೆ ದೃಷ್ಟಿಯನ್ನು ರೂಪಿಸಿಕೊಳ್ಳಬೇಕು. ನನ್ನನ್ನು ನಾನು ನೋಡುವಾಗ, ನಿಮ್ಮತ್ತ ನೀವು ನೋಡುವಾಗ ಯಾವ ದೃಷ್ಟಿಯಿಂದ ನೋಡುತ್ತೀವಿ. ನಾನು ಪಾಪಿ ಅಂತ ನೋಡೋದಿಕ್ಕೆ ಬರುತ್ತದೆ. ನಾನು ಶ್ರೇಷ್ಠ ಅಂತ ನೋಡೋದಕ್ಕೂ ಬರುತ್ತದೆ. ಎರಡೂ ಸಾಧ್ಯ ಅದು ನಮ್ಮ ಮೇಲೆ ಅವಲಂಬಿಸಿಕೊಂಡಿದೆ.
ಒಬ್ಬ ಸಂತ ಜಗತ್ತನ್ನು ದೇವನೆಂದು ನೋಡಿದ. ಮತ್ತೆ ದೇವನಿಲ್ಲ, ಈ ಜಗತ್ತೇ ದೇವರು ಎಂದು ನೋಡಿದ. ಕಾಣುವ ಪ್ರತಿಯೊಂದು ವಸ್ತು ದೇವನ ಒಂದೊಂದು ರೂಪ ಎಂದು ನೋಡಿದ. ಹೀನವಾಗಿ, ಕೆಟ್ಟದಾಗಿ ನೋಡಿದರೆ ಬದುಕೆಲ್ಲ ಹೊಲಸಾಗುತ್ತದೆ. ದಿವ್ಯವಾಗಿ ನೋಡಿದರೆ ಬದುಕು ಪವಿತ್ರವಾಗುತ್ತದೆ. ಬದುಕು ಪವಿತ್ರ ಮಾಡುವ ವಿಧಾನ ನೋಡುವ ದೃಷ್ಟಿ.
ಮೈಕೆಲ್ ಎಂಜೆಲೋ ಜಗತ್ಪ್ರಸಿದ್ಧ ಶಿಲ್ಪಿ. ಇಟಲಿ ದೇಶವನ್ನು ಶ್ರೀಮಂತ, ಸುಂದರ ಮಾಡಿದವನು ಈತನೇ. ಆತನ ಕಲಾಕೃತಿಯಿಂದ ಇಟಲಿ ದೇಶ ಇಂದೂ ಬದುಕುತಿದೆ. ಮೈಕೆಲ್ ಎಂಜೆಲೋ ಮೂರ್ತಿ ನೋಡಲು ಜಗತ್ತಿನ ಜನ ಬರುತ್ತಿತ್ತು. ಅಷ್ಟು ಆಕರ್ಷಕ. ಕಲ್ಲು ಕಲ್ಲಿನಲ್ಲಿ ಜೀವ ತುಂಬಿದನು. ಜಗತ್ತೆಲ್ಲ ನನ್ನ ಮೂರ್ತಿ ನೋಡುತ್ತದೆ. ಆದರೆ ನಾನು ನೋಡುವುದು ಬೇರೆ. ಜಗತ್ತೇ ದೇವನ ಮೂರ್ತಿ ಅಂತ ಭಾವಿಸಿದ್ದೇನೆ. ಇವೆಲ್ಲ ನನಗೆ ಮಾದರಿಗಳು. ನಾನು ಅದನ್ನು ಅನುಕರಿಸುತ್ತಿದ್ದೇನೆ. ನಾನೇನು ಹೊಸದೇನು ಮಾಡಿಲ್ಲ. ನಿಸರ್ಗ ನಕಲು ಮಾಡಿದ್ದೇನೆ. ನಿಸರ್ಗದಂತೆ ಮಾಡೋದಕ್ಕೆ ನನಗೆ ಬರುವುದಿಲ್ಲ. ಒಂದು ಹೂ ಅರಳುತ್ತದೆ, ಬಾಡುತ್ತಿದೆ. ಮನುಷ್ಯ ಬರೆದ ಚಿತ್ರ ಅರಳಿದೆಯೇನು?. ಬಾಡಿದೆ ಏನು?. ಅದು ಬರೀ ಚಿತ್ರ. ನಿಸರ್ಗದ್ದು ಸಜೀವ ಚಿತ್ರ. ಮನುಷ್ಯ ಬರೀ ಚಿತ್ರ ಬಿಡಿಸಬಲ್ಲ. ದೇವ ಸಜೀವ ಚಿತ್ರ ನಿರ್ಮಿಸುತ್ತಾನೆ. ಯಾರು ಜಗತ್ತನ್ನು ರೂಪಿಸುತ್ತಾನೋ ಆ ಶಿಲ್ಪಿಯೇ ದೇವರೆಂದು ಹೇಳಿದವ ಮೈಕೆಲ್ ಎಂಜೆಲೋ. ನಮ್ಮ ನಮ್ಮ ದೇಹದ ಕಡೆ ನೋಡಿ. ಎಂತಹ ಬಣ್ಣ ಕೊಟ್ಟಿದ್ದಾನೆ?. ಎಂತೆಂತಹ ಕ್ರಿಯೆ ನಡೆಯುತ್ತಿದೆ ? ಅದ್ಭುತ. ದೇವನ ಕಲಾಕೃತಿ ನೋಡಲು ಖರ್ಚು ಮಾಡೋದಲ್ಲ. ಕಣ್ಣು ತೆರೆದರೆ ಸಾಕು. ನೀನು ವ್ಯಾಪಾರಿ ಅಂತ ನೋಡಬೇಡ. ರೈತ ಅಂತ ನೋಡಬೇಡ. ನೀನೊಬ್ಬ ಅಧ್ಯಾಪಕ ಅಂತ ನೋಡಬೇಡ. ನೀನು ದೇವನ ಕಲಾಕೃತಿ ಅಂತ ನೋಡು. ಇದೊಂದು ಕಲೆ. ದೇವ ನಿರ್ಮಿಸಿದ ರೂಪ ನಾನು. ಬಡವ ಅಂತ ನೋಡಿದರೆ ಬಡವ. ನಾನು ಶ್ರೀಮಂತ ಅಂತ ನೋಡಿದರೆ ಶ್ರೀಮಂತ. ನಾನು ಯಾವುದಕ್ಕೂ ಬಾರದವ ಅಂತ ನೋಡಿದರೆ ನಾನು ಯಾವುದಕ್ಕೂ ಬಾರದವ. ನನಗೆ ಯಾವುದೇ ಬಣ್ಣವಿರಲಿ, ಎಷ್ಟೇ ಎತ್ತರವಿರಲಿ, ನಾನು ದೇವನ ಕಲೆ ಅಲ್ಲವೇನು?. ದೇವ ಮಾಡಿದ್ದು ಬಹಳ ಪವಿತ್ರ. ಈ ದೃಷ್ಟಿ ಬಂದರೆ ಜಗತ್ತೆಲ್ಲಾ ಬದಲಾಗುತ್ತದೆ. ಜೀವನ ಬದಲಾಗಿ ಹೋಗುತ್ತದೆ. ಆದ್ದರಿಂದ ನಮ್ಮನ್ನು ನಾವು ನೋಡುವುದು ಕಲಿಯಬೇಕು.
ಜನ ನನ್ನನ್ನು ಯಾವ ದೃಷ್ಟಿ ನೋಡುತ್ತಾರೆ ಅನ್ನೋದು ಮಹತ್ವದಲ್ಲ. ನಾನು ನನ್ನನ್ನು ಹೇಗೆ ನೋಡುತ್ತೇನೆ ಅನ್ನೋದು ಮಾತ್ರ ಮಹತ್ವದ್ದು. ನಾನು ನಿಮ್ಮನ್ನು ವೈರಿಯಂತೆ ನೋಡಬಹುದು. ಒಂದು ಮರದಲ್ಲಿ ಒಂದು ಕೋಗಿಲೆ ಇತ್ತು. ಅಲ್ಲಿಗೆ ಗಿಳಿ ಬಂದಿತ್ತು. ಕೋಗಿಲೆ ಬಳಿ ಕುಳಿತು, ಗಿಳಿ ಕೋಗಿಲೆಗೆ ಕೇಳಿತು. "ನನ್ನ ಬಗ್ಗೆ ಜಗತ್ತು ಏನನ್ನುತ್ತದೆ ಗೊತ್ತಾ". ಕೋಗಿಲೆ "ಇಲ್ಲ" ಅಂದಿತು. ಗಿಳಿ ಹೇಳಿತು "ನಿನಗೆ ಗೊತ್ತಿಲ್ಲ, ಜನ ನನ್ನ ಎಷ್ಟು ಕೊಂಡಾಡುತ್ತಾರೆ?. ಏನು ನನ್ನ ಮೈಬಣ್ಣ?. ಹಸಿರು. ಕೆಂಪು ಕೊಕ್ಕು. ಮಾತು ಮಧುರ. ನನ್ನನ್ನು ಎಷ್ಟು ಪ್ರೀತಿಸುತ್ತಾರೆ ಎಂದರೆ, ಬಂಗಾರದ ಪಂಜರ ಮಾಡಿಸಿ ಇಡುತ್ತಾರೆ. ಬೆಳ್ಳಿ ಬಟ್ಟಲಿನಲ್ಲಿ ನೀರು ಕೊಡುತ್ತಾರೆ. ಅಪರೂಪದ ಹಣ್ಣುಗಳನ್ನು ಕೊಡುತ್ತಾರೆ. ನಿನಗೆ ನನ್ನ ವೈಭವ ಗೊತ್ತಿಲ್ಲ" ಎಂದಿತು ಗಿಳಿ. ಆಗ ಕೋಗಿಲೆ ಸುಮ್ಮನೆ ಕುಳಿತಿತ್ತು. ಮತ್ತೆ ಗಿಳಿ ಕೇಳಿತು. "ನಿಮಗೇನು ಅಂತಾರೆ ಗೊತ್ತೇನು." ಆಗ ಕೋಗಿಲೆ ಹೇಳಿತು "ಗೊತ್ತು ಮಾಡಿಕೊಳ್ಳುವುದಕ್ಕೆ ನನಗೆಲ್ಲಿ ವೇಳೆ ಇದೆ". ಯಾಕೆ ಅಂದಿತು ಗಿಳಿ. ಕೋಗಿಲೆ ಹೇಳಿತು "ಭಗವಂತ ನನ್ನನ್ನು ಕಳುಹಿಸಿದ್ದು ನನ್ನನ್ನು ಹಾಡಲು, ಪಂಜರದಲ್ಲಿ ಸಿಕ್ಕಲು ಅಲ್ಲ. ನಿನ್ನ ಒಳಗೆ ಇಟ್ಟಿದ್ದಾರೆ. ನೀನು ದೇವರ ಕಲಾಕೃತಿ ಅಂತ ಭಾವಿಸಿದ್ದರೆ ಸ್ವತಂತ್ರವಾಗಿ ಇರುತ್ತಿದ್ದೆ. ನನಗೆ ದೇವನೇ ಬಣ್ಣ ಹಚ್ಚಿದ್ದಾನೆ. ಆದ್ದರಿಂದ ದೇವನೇ ಹಚ್ಚಿರುವುದರಿಂದ ಕೆಟ್ಟದ್ದು ಅನ್ನಲಿಕ್ಕೆ ಆಗುವುದಿಲ್ಲ. ಎಲ್ಲರಿಗೂ ಒಂದೇ ತರ ಬಣ್ಣ ಹಚ್ಚಿದ್ದರೆ ಚಂದ ಕಾಣುವುದಿಲ್ಲ ಅಂತ ದೇವರು ಬೇರೆ ಬೇರೆ ಬಣ್ಣ ಬಳಿದಿದ್ದಾನೆ. ಬಾಲ್ಯದಲ್ಲಿ ಒಂದು ಬಣ್ಣ. ಯುವಕರಲ್ಲಿ ಒಂದು ಬಣ್ಣ. ಮುಪ್ಪಿನಲ್ಲಿ ಒಂದು ಬಣ್ಣ ನೀಡಿದ್ದಾನೆ. ಕ್ರಿಯೆಯ ಹಿಂದಿರುವ ಶಕ್ತಿ ದೇವರೆಂದು ನೋಡು. ಯಾವ ಶಕ್ತಿಯಿಂದ ಜಗತ್ತಲ್ಲಿ ಕೆಲಸ ಮಾಡುತ್ತಿದೆ ಅದೇ ದೇವರೆಂದು ನೋಡು. ಅಂತ ಪೂಜ್ಯ ಸಿದ್ದೇಶ್ವರ ಸ್ವಾಮೀಜಿಯವರು ಪ್ರವಚನದಲ್ಲಿ ಹೇಳಿದ್ದು. ಮಕ್ಕಳೇ, ನೋಡುವ ದೃಷ್ಟಿ ಬದಲಾಗಲಿ ಅಲ್ಲವೇ.
ಶಿಕ್ಷಣಾಧಿಕಾರಿ
ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ
(ಮಧ್ಯಾಹ್ನ ಉಪಹಾರ ಯೋಜನೆ)
ಜಿಲ್ಲಾ ಪಂಚಾಯತ್ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ
*****************************************