-->
ಸ್ಫೂರ್ತಿಯ ಮಾತುಗಳು : ಸಂಚಿಕೆ - 214

ಸ್ಫೂರ್ತಿಯ ಮಾತುಗಳು : ಸಂಚಿಕೆ - 214

ಸ್ಫೂರ್ತಿಯ ಮಾತುಗಳು : ಸಂಚಿಕೆ - 214
ಲೇಖಕರು : ರಮೇಶ ಎಂ. ಬಾಯಾರು 
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com 
                   

ಬಾಯಾರಿಕೆ ಇಂಗಿಸುವ ಅತ್ಯಂತ ಶಕ್ತಿಶಾಲಿಯೂ ಆರೋಗ್ಯಕರವೂ ಔಷಧೀಯ ಗುಣವೂ ಉಳ್ಳ ಎಳನೀರು (ಬೊಂಡ) ರೋಗಿಗಳಿಗೂ ಸೇವನೀಯ. ಎಳನೀರಿನ ಮೂಲವೇ ತೆಂಗು. ಎಳನೀರು, ನೀರು ಕುಡಿದ ನಂತರ ಉಳಿಯುವ ಮಿದು ತಿರುಳು ಮನದಾನಂದವನ್ನುಂಟುಮಾಡುತ್ತದೆ. ಹಲ್ಲಿಲ್ಲದ ಬೊಚ್ಚುಬಾಯಿಗೂ ಈ ತಿರುಳು ಜಗಿಯಲು ಸಮಸ್ಯೆಯಾಗದು. ಸಿಹಿನೀರು ಮತ್ತು ಉಪ್ಪುನೀರುಗಳೆರಡೂ ತೆಂಗಿಗೆ ಅನುಕೂಲಕರ. ತೆಂಗಿನ ಮರದಲ್ಲಿ ತ್ಯಾಜ್ಯವೆಂಬುದೇ ಇಲ್ಲ. ಇದರೆಲ್ಲ ಬಾಗಗಳೂ ಉಪಯುಕ್ತ ಮತ್ತು ಮೌಲ್ಯಯುತವಾದುದು. ಭಾರತೀಯರಿಗೆ ತೆಂಗು ಕಲ್ಪವೃಕ್ಷ. ಕಲ್ಪಿಸಿದುದೆಲ್ಲವನ್ನೂ ತೆಂಗು ನೀಡಬಲ್ಲುದು. ಮನೆ, ಮಂಚ, ಕುಂಚ…. ಎಲ್ಲದರಲ್ಲೂ ತೆಂಗು ಬಳಕೆಯಾಗುತ್ತದೆ. ಮಂಡಾಸಿಗೂ ಆಗಬಹುದು, ಚಪ್ಪಲಿಗೂ ಒದಗುವ ಮರವೇ ತೆಂಗಿನ ಮರ.

ತೆಂಗಿನ ಕಾಯಿ ವಿಶೇಷ ಫಲ. ಅದು ಅಮೃತ ಫಲವೂ ಹೌದು. ತೆಂಗು ನಮ್ಮ ಬಾಯಾರಿಕೆ ನೀಗುತ್ತದೆ ಹಸಿವೆಯನ್ನು ತಣಿಸುತ್ತದೆ. ವಿವಿಧ ಔಷಧಗಳಲ್ಲಿ ತೆಂಗು ಬಳಸಲ್ಪಡುತ್ತದೆ. ವಿವಿಧ ತಿಂಡಿಗಳನ್ನು ತಿನ್ನುವಾಗ ಬಳಸುವ ಚಟ್ನಿ, ಸಾಂಬಾರು, ಹುಳಿ ಮುಂತಾದುವುಗಳ ತಯಾರಿಯಲ್ಲಿ ತೆಂಗಿನ ಕಾಯಿಯು ಪ್ರಧಾನ ಭಾಗ. ತೆಂಗಿನ ಗರಿಗಳು ಸಹ ಉಪಯೋಗಕರವಾಗಿವೆ. ಒಳಗಡೆ ಹೆಚ್ಚು ನೀರನ್ನು ಹೊಂದಿರುವ ಏಕೈಕ ಫಲ ತೆಂಗಿನ ಕಾಯಿ ಮತ್ತು ಎಳ ನೀರು. ಈ ನೀರು ಅತ್ಯಂತ ಶುಭ್ರ ವೆನ್ನುವುದು ಸೃಷ್ಟಿಯ ಅದ್ಭುತ. ದೇವರ ಅಭಿಷೇಕ ಮಾಡಲು ಎಳೆಯ ತೆಂಗಿನ ಕಾಯಿಯ ನೀರು ಬಳಕೆಯಾಗುತ್ತದೆ. ಈ ನೀರು ಗಂಗೆಗೆ ತುಲ್ಯವೆಂದು ಪೊಗಳುವರು.

ತೆಂಗಿನ ಕಾಯಿ ಬುದ್ಧಿ ಕುಶಲತೆಗೆ ತಾರಕ. ದೇಹದ ಮೇಧಸ್ಸಿನ ಅಭಿವೃದ್ಧಿಗೆ ಔಷಧವಾಗಿ ಕೆಲಸ ಮಾಡುವ ತೆಂಗಿನ ಕಾಯಿಗೆ ದಿವ್ಯಶಕ್ತಿಯಿದೆ. ದಿನಾ ಕೊಬ್ಬರಿಯನ್ನು ತಿನ್ನುತ್ತಿದ್ದರೆ ನೆನಪಿನ ಶಕ್ತಿ ವರ್ಧಿಸುತ್ತದೆ. ದೇಹಕ್ಕೆ ಮೆರುಗು ಮತ್ತು ವರ್ಣ ಬರುತ್ತದೆ. ತಲೆ ಕೂದಲು ಧೃಡವಾಗಿ ಬೆಳೆಯುತ್ತವೆ. ತಿಂದ ಆಹಾರವು ಬಹಳ ಬೇಗ ಪಚನವಾಗುತ್ತದೆ. ಶರೀರದ ತಾಪಮಾನದ ಸಂರಕ್ಷಕ ತೆಂಗಿನ ಕಾಯಿ. ಚರ್ಮವು ಸುಕ್ಕು ಹೊಂದದಂತೆ ರಕ್ಷಣೆ ಕೊಡುತ್ತದೆ. ರೋಮ ರಂಧ್ರಗಳು ಶುಭ್ರವಾಗಿರುತ್ತವೆ. ಅದಕ್ಕಾಗಿಯೇ ಕೂದಲಿಗೆ ತೆಂಗಿನ ಎಣ್ಣೆಯನ್ನು ಹಚ್ಚುವರು. ತೆಂಗಿನ ಮರ ಸರ್ವ ಋತುವಿನಲ್ಲೂ ಫಲ ಕೊಡುತ್ತಲಿರುತ್ತದೆ. ತೆಂಗಿನ ಕೊಬ್ಬರಿಯ ಎಣ್ಣೆ ತೆಗೆದ ನಂತರ ಉಳಿಯುವ ಹಿಂಡಿ ಜಾನುವಾರುಗಳಿಗೆ ಪೌಷ್ಟಿಕ ಆಹಾರವಾಗುತ್ತದೆ.

ಭಾರತದ ದೇವಸ್ಥಾನಗಳಲ್ಲಿ ಅತ್ಯಂತ ಪ್ರಮುಖ ಸಮರ್ಪಣಾ ವಸ್ತುವೆಂದರೆ ತೆಂಗಿನಕಾಯಿ. ವಿವಾಹ ಕಾರ್ಯಕ್ರಮ, ಹಬ್ಬ-ಹರಿದಿನ, ನೂತನ ವಾಹನದ ಪೂಜೆ, ಗೃಹಪ್ರವೇಶ, ರಥೋತ್ಸವ, ಉಪನಯನ, ಪಿತೃಕಾರ್ಯ, ವೈಕುಂಠ ಸಮಾರಾಧನೆ, ದೇವತಾ ಪೂಜೆ ಮೊದಲಾದುವುಗಳಲ್ಲಿ ತೆಂಗಿನಕಾಯಿಗೆ ಮೊದಲ ಮನ್ನಣೆ. ನೀರು ತುಂಬಿರುವ ಒಂದು ಕಲಶವನ್ನು ಸುಂದರವಾಗಿ ಅಲಂಕರಿಸಿ, ಅದರ ಬಾಯಿಯಲ್ಲಿ ಮಾವಿನ ಎಲೆಗಳನ್ನು ಜೋಡಿಸಿ, ಮಧ್ಯದಲ್ಲಿ ಒಂದು ತೆಂಗಿನಕಾಯಿಯನ್ನು ಇರಿಸಿ ಅದಕ್ಕೆ ಪರಮಾತ್ಮನನ್ನು ಆಹ್ವಾನಿಸಿ ಕಲಶ ಪೂಜೆ ಮಾಡುತ್ತಾರೆ. ಪೂರ್ಣ ಕುಂಭ ಸ್ವಾಗತವೆಂದಾಗ ತೆಂಗಿನಕಾಯಿಗೆ ಅಗ್ರ ಸ್ಥಾನವಿದೆ.

"ನೈವೇದ್ಯ' ದ ಸಂದರ್ಭದಲ್ಲಿ ತೆಂಗಿನಕಾಯಿಯನ್ನು ಎರಡು ಹೋಳಾಗುವಂತೆ ಒಡೆದು, ಪರಮಾತ್ಮನಿಗೆ ಸಮರ್ಪಿಸುವುದು ವಾಡಿಕೆ. ನಂತರ ಅದನ್ನು "ಪ್ರಸಾದ' ರೂಪದಲ್ಲಿ ಹಂಚಲಾಗುವುದು. ಇದುವೇ ಹಣ್ಣುಕಾಯಿ ಪ್ರಸಾದ. ಪರಮೇಶ್ವರನ ಪ್ರೀತ್ಯರ್ಥವಾಗಿ ಅಥವಾ ನಮ್ಮಿಚ್ಛೆಗಳನ್ನು ಪೂರೈಸಿಕೊಳ್ಳುವ ಸಲುವಾಗಿ ತೆಂಗಿನಕಾಯಿಯನ್ನು ಸಮರ್ಪಿಸುತ್ತೇವೆ. ಹೋಮ, ಹವನಾದಿಗಳಲ್ಲಿ 'ಪೂರ್ಣಾಹುತಿ' ಯ ಸಮಯದಲ್ಲಿ ತೆಂಗಿನಕಾಯಿ ಅಥವಾ ಕೊಬ್ಬರಿಯನ್ನು ಉಪಯೋಗಿಸುವರು. ಭೂಮಿಯಿಂದ ಸಿಹಿನೀರು ಮತ್ತು ಉಪ್ಪಿನ ನೀರನ್ನು ಹೀರಿ ತೆಂಗಿನ ಮರವು ರುಚಿಕರವಾದ ಎಳನೀರನ್ನಾಗಿ ಪರಿವರ್ತಿಸುತ್ತದೆ. ಎಳನೀರು ಎಲ್ಲರಿಗೂ, ಅದರಲ್ಲೂ ರೋಗಿಗಳಿಗೆ ಅತ್ಯಂತ ಉತ್ತಮ ಶಕ್ತಿಯುತ ಪಾನೀಯ. ಆಯುರ್ವೇದೀಯ ಔಷಧಿಗಳ ತಯಾರಿಕೆ ಹಾಗೂ ಇತರ ಔಷಧೋಪಚಾರಗಳಲ್ಲೂ ತೆಂಗಿನಕಾಯಿ ಬಳಕೆಯಾಗುತ್ತದೆ. ದೇವರ ಅಭಿಷೇಕಕ್ಕೆ ಎಳನೀರು ಬೇಕೇ ಬೇಕು.

ತೆಂಗಿನಕಾಯಿಯ ಮೇಲ್ಬಾಗದಲ್ಲಿರುವ ಮುಕ್ಕಣ್ಣುಗಳು ಕೈಲಾಸವಾಸಿ ಶಿವನ ಮೂರು ಕಣ್ಣುಗಳನ್ನು ಸೂಚಿಸುತ್ತವೆ. ಶಿವನು ಬಯಕೆಗಳನ್ನು ಪೂರೈಸುವ ದೇವ. ತೆಂಗಿನಕಾಯಿ ಇಷ್ಟಾರ್ಥಗಳನ್ನು ಪೂರೈಸುವ ಪರಿಶುದ್ಧ ಫಲ. ಕೆಲವು ಸಂಪ್ರದಾಯಗಳಲ್ಲಿ, ತೆಂಗಿನಕಾಯಿಯನ್ನು ಕಲಶದ ಮೇಲಿಟ್ಟು ವಿವಿಧ ರೀತಿಯಲ್ಲಿ ಅಲಂಕರಿಸಿ, ಶಿವನ ಸಂಕೇತವಾಗಿ ಇರಿಸಿ ಪೂಜಿಸುವರು. ತೆಂಗು ಬದುಕಿನ ಹಂಗುಗಳನ್ನು ಕಳೆಯುವ ಸಂಪನ್ಮೂಲ. ನುಸಿ ರೋಗದಂತಹ ದೀರ್ಘಕಾಲೀನ ರೋಗಗಳು ತೆಂಗಿನ ಕೃಷಿಕರನ್ನು ಗೋಳು ಹೊಡೆಯುವಂತೆ ಮಾಡಿರುವುದು ನಿಜಕ್ಕೂ ದುರಂತ. ಭೂಮಿಯ ಎಲ್ಲಾ ಭಾಗಗಳಲ್ಲೂ ತೆಂಗಿಗೆ ಬೇಡಿಕೆಯಿದೆ. ತೆಂಗು ಕೃಷಿಕರು ನಿಜವಾದ ಪುಣ್ಯವಂತರು. ಅವರಿಗೆ ನೀವು -ನಾವು ಬೆಂಬಲವಾಗೋಣ.
........ರಮೇಶ ಎಂ. ಬಾಯಾರು ಎಂ.ಎ, ಬಿಎಡ್
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
“ಸ್ಕಂದ” ಕುಳ ಗ್ರಾಮ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com 
*****************************************

Ads on article

Advertise in articles 1

advertising articles 2

Advertise under the article