-->
ಜೀವನ ಸಂಭ್ರಮ : ಸಂಚಿಕೆ - 240

ಜೀವನ ಸಂಭ್ರಮ : ಸಂಚಿಕೆ - 240

ಜೀವನ ಸಂಭ್ರಮ : ಸಂಚಿಕೆ - 240
ಲೇಖಕರು : ಎಂ.ಪಿ. ಜ್ಞಾನೇಶ್ 
ಶಿಕ್ಷಣಾಧಿಕಾರಿ 
ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ
(ಮಧ್ಯಾಹ್ನ ಉಪಹಾರ ಯೋಜನೆ) 
ಜಿಲ್ಲಾ ಪಂಚಾಯತ್ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ 
                                                                    

ಪೂಜ್ಯ ಸಿದ್ದೇಶ್ವರ ಸ್ವಾಮೀಜಿ ಶಾಂತಿ ಯೋಗ ಪ್ರವಚನದಲ್ಲಿ ಹೇಳಿದ್ದು. ಬಹಳ ಚೆನ್ನಾಗಿದೆ ಓದಿ. ನಾವು ಹೇಗೆ ಬದುಕಬೇಕು...? ಎಂದರೆ ನಾವು ಬರುವ ಮೊದಲು ಜಗತ್ತು ಹೇಗಿತ್ತೋ ಅದಕ್ಕಿಂತ ಹೆಚ್ಚು ಸುಂದರವಾಗಿರಬೇಕು. ಒಮ್ಮೆ ಒಂದು ಹೂ ಸಂಜೆ ವೇಳೆ ಬಾಡುತ್ತಿತ್ತು. ಒಬ್ಬ ಸಂತ ಇದನ್ನು ಕಂಡು ಹೂವಿಗೆ ಹೇಳಿದ, "ಎಲೆ ಹೂವೆ ನೀನು ಸಾಯುವುದು ನನಗೆ ಖೇದ ಅನಿಸುತ್ತಿದೆ". ಅದಕ್ಕೆ ಹೂ ಹೇಳಿತು "ನಿನಗೆ ನನ್ನ ಸಾವು ಖೇದ ಅನಿಸುತ್ತಿರಬಹುದು, ಆದರೆ ನನಗೆ ಸಂತೋಷ ಅನಿಸುತ್ತಿದೆ". ಸಂತ ಹೇಳಿದ ಯಾಕೆ?. ಹೂ ಹೇಳಿತು, "ಯಾಕೆಂದರೆ ನಾನು ಬರುವ ಮೊದಲಿಗಿಂತ ಹೆಚ್ಚು ಸುಗಂಧ ಮಾಡಿದ್ದೀನಿ ಈ ಜಗತ್ತನ್ನು ಅದಕ್ಕೆ ಸಂತೋಷ. ನಾನು ಹೋಗುವಾಗ ಜಗತ್ತನ್ನು ಸುಗಂಧ ಮಾಡಿ ಹೋಗುತ್ತಾ ಇದ್ದೀನಿ". ಈ ಭೂಮಂಡಲ ಅದ್ಭುತ. ಸುಮಾರು 200 ಕೋಟಿ ವರ್ಷಗಳ ಹಿಂದೆ ಈ ಭೂಮಂಡಲ ಹಚ್ಚಹಸಿರಾಗಿತ್ತು. ಎತ್ತರವಾದ ಬೆಟ್ಟಗಳ ಮೇಲೆ ಹಿಮ ಸುರಿಯುತ್ತಾ ಇತ್ತು. ಹೊಳೆಗಳೆಲ್ಲಾ ತುಂಬಿ ತುಂಬಿ ಹರಿಯುತ್ತಿತ್ತು. ಸಾಗರ ತುಂಬಿ ನಿಂತಿತ್ತು. ಬಯಲೆಲ್ಲಾ ಹಸಿರಿನಿಂದ ಮುಚ್ಚಿ ಹೋಗಿತ್ತು. ಇಂತಹ ಪವಿತ್ರ ಸುಂದರ ಸ್ವರ್ಗ ತೋಟದಂತಿತ್ತು. ಇಂತಹ ಸಂದರ್ಭದಲ್ಲಿ ಭಗವಂತ ಮನುಷ್ಯನನ್ನು ಭೂಮಿಗೆ ಕಳುಹಿಸಿಕೊಟ್ಟ. ಸುಮಾರು 4, 5 ಲಕ್ಷ ವರ್ಷಗಳ ಹಿಂದೆ ಮನುಷ್ಯನನ್ನು ಕಳುಹಿಸಿದ. ಭೂಮಿ ಸಸ್ಯ ಶ್ಯಾಮಲೆಯಾಗಿತ್ತು. ಭಗವಂತನ ಇಚ್ಛೆ ಏನಿತ್ತು ಅಂದರೆ ಮಾನವ ಹೋಗುವ ಮೊದಲಿತ್ತಲ್ಲ ಅದಕ್ಕಿಂತ ಹೆಚ್ಚು ಹಸಿರು, ಸುಂದರ, ಮಧುರ ಮತ್ತು ಸುಗಂಧ ಮಾಡಲಿ ಅಂತ ಬಯಸಿದ್ದ. ಇಲ್ಲದಿದ್ದರೆ ನರಕಕ್ಕೆ ಕಳುಹಿಸುತ್ತೇನೆ ಅಂದ. ನರಕ ಎಂದರೆ ಹೊಲಸಾದ ಕೈ, ಸದೋಷವಾದ ಕಣ್ಣು, ಹದಗೆಟ್ಟ ಹೃದಯ. ಎಲ್ಲೋ ನರಕ ಇದೆ ಅಂತೆಲ್ಲ ನಮ್ಮಷ್ಟಕ್ಕೆ ನಾವೇ ನರಕದಲ್ಲಿ ಬಾಳುತ್ತೀವಿ. ಏನು ಕಂಡರೂ ಸಹಿತ ಕೆಟ್ಟದ್ದೆ ಕಾಣುತ್ತಾ ಇದ್ದರೆ ನರಕ ಆಗದೆ ಇನ್ನೇನು?. ಯಾವ ಜಗತ್ತಿನಲ್ಲಿ ಕಣ್ಣು ಆಡಿಸಿದರೆ ಸೌಂದರ್ಯ ಕಾಣುತ್ತಿದೆ ಇಂತಹ ಜಗತ್ತಿನಾಗೆ ಬರೀ ಕೆಟ್ಟದ್ದು ಕಾಣುತ್ತಾ ಇದ್ದರೆ ಇದಕ್ಕಿಂತ ದೊಡ್ಡನರಕ ಯಾವುದು?. 

ಒಂದು ಊರಿನಲ್ಲಿ ತಿಪ್ಪೆಗಳು ಇದ್ದವು. ರಸ್ತೆಯ ಎರಡು ಬದಿ ಇದ್ದವು. ಒಬ್ಬ ಯಾತ್ರಿಕ ಇದೇ ದಾರಿಯಲ್ಲಿ ಬಂದನು. ತಿಪ್ಪೆ ಹೊಲಸು ವಾಸನೆ ಬರುತ್ತಿತ್ತು. ಭಾರಿ ಮಳೆ ಬಿದ್ದಿತ್ತು. ಅಲ್ಲಲ್ಲಿ ನೀರು ನಿಂತಿತ್ತು. ತಿಪ್ಪೆಯಿಂದ ಹೊಲಸು ವಾಸನೆ ಮೇಲೆ ಎದ್ದಿತ್ತು. ಇದು ಸುಮಾರು ಅರ್ಧ ಪರ್ಲಾಂಗ್ ದೂರ ಹೀಗೆ ಇತ್ತು. ಯಾತ್ರಿಕ ತಿಪ್ಪೆ ಹತ್ತಿರ ಬರುತ್ತಿದ್ದಂತೆ ಮೂಗು ಮುಚ್ಚಿಕೊಂಡ. ಹಾಗೆ ಮುಂದೆ ಬಂದ. ಮುಂದೆ ಬಂದ ಅರ್ದ ಪರ್ಲಾಂಗ್ ನಾಗೆ ತಿಪ್ಪೆ ಮುಗೀತು. ಮುಂದೆ ಸ್ವಚ್ಛ ವಾತಾವರಣ ಬಂತು. ಆದರೆ ಬೈದುಕೊಳ್ಳುತ್ತ ಹೊರಟ. ಎಂತಹ ಜನ, ಬರೀ ಕೆಟ್ಟ ವಾಸನೆ ಅಂತ ಬೈದುಕೊಳ್ಳುತ್ತಾ, ಬೈದುಕೊಳ್ಳುತ್ತಾ ಹೋದ. ಬೈದುಕೊಳ್ಳುತ್ತ ಎಷ್ಟು ಕಿಲೋಮೀಟರ್ ಹೋಗಿದ್ದ ಅಂದರೆ ಹತ್ತರಿಂದ ಹದಿನೈದು ಕಿಲೋಮೀಟರ್ ಹೋಗಿದ್ದ. ಇನ್ನೂ ಮೂಗು ಮುಚ್ಚಿದ್ದ. ಆ ಬಳಿಕ ಮುಂದಿನ ಊರಿನ ತಿಪ್ಪೆ ಬಂದಿತು. ಆ ಊರಿನ ತಿಪ್ಪೆ, ಈ ಯಾತ್ರಿಕರಿಗೆ ಹೇಳಿತು "ತೆಗಿಯಪ್ಪ ಮೂಗು ಮುಚ್ಚಿರೋದು, ಯಾರನ್ನ ಬಯ್ಯುತ್ತಿರುವೆ ಅಂದಿತು". ಆಗ ಯಾತ್ರಿಕ ಹೇಳಿದ, ಹೊರಟ ಊರಿನ ಹೆಸರೇಳಿದೆ. ಆಗ ಆ ತಿಪ್ಪೆ ಹೇಳಿತು. ಆ ಊರು ಹೋಗಿ 15 ಕಿಲೋಮೀಟರ್ ಆಯ್ತು. ನಾವು ಆ ಊರಿನ ತಿಪ್ಪೆ ಅಲ್ಲ. ನಾವು ಬೇರೆ ಊರಿನ ತಿಪ್ಪೆಗಳು. ನಾವು ಅಲ್ಲಲ್ಲೇ ಮುಗಿಯುತ್ತೇವೆ. ನೀನು ನಿನ್ನ ತಲೆಯೊಳಗೆ ತಿಪ್ಪೆ ಹದಿನೈದು ಕಿಲೋಮೀಟರ್ ಬಂತಲ್ಲೋ. ಊರಿನಲ್ಲಿ ತಿಪ್ಪೆ ಇರುವುದಿಲ್ಲ. ಊರ ಮಗ್ಗಲು ಅಷ್ಟೇ ತಿಪ್ಪೆ ಇರುತ್ತದೆ. ಮತ್ತೆ ಊರು ಬಿಟ್ಟು ದೂರ ಇರುವುದಿಲ್ಲ. ಎಲ್ಲಿದೆ ಅಲ್ಲಿ ಬೇಡ ಅಂದ್ರೆ ಮೂಗು ಮುಚ್ಚಿಕೊಂಡು ಹೊರಗೆ ಬಂದು ತೆಗೆದು ಆನಂದ ಪಡೆದರೆ ಆಗೋದಿಲ್ಲವೇ. ತಲೆಗೆ ಅದನ್ನೇ ಹಾಕಿಕೊಂಡು ತಿರುಗಾಡೋದು ಹೇಗೆ?. ಯಾಕೆ ಹಾಕಿಕೊಳ್ಳೋದು ತಿಪ್ಪೆ!. ತಿಪ್ಪೆ ಅಲ್ಲೆ ಇರುತ್ತದೆ. ನಮ್ಮ ಬೆನ್ನು ಹತ್ತಿ ಬರುವುದಿಲ್ಲ. ಆದರೆ ತಿಪ್ಪೆ ಭಾನ ತಲೆಯಲ್ಲಿ ಶಾಶ್ವತವಾಗಿ ಮೂಡಿ ನಿಲ್ಲುತ್ತದೆ. 

ಹೇಗೆ ಊರಿನ ಪಕ್ಕ ತಿಪ್ಪೆ ಇರುತ್ತದೆ ಹಾಗೆ ಊರಿನಲ್ಲಿ ನಾಲ್ಕು ಮಂದಿ ಕೆಟ್ಟವರಿರುತ್ತಾರೆ. ನಮಗೆ ಆಗದವರು, ಬೇಡದವರು ಇರಬಹುದು. ಅದನ್ನೆ ಬಹಳ ದೊಡ್ಡದು ಮಾಡಬಾರದು. ಅದು ಇರದಿದ್ದರೆ ಊರು ಸ್ವಚ್ಛ ಆಗೋದಿಲ್ಲ. ಬೇಡ ಆದವರು ಬೇಡ ಅಂದರೆ ಅದು ಹೇಗಾಗುತ್ತದೆ?. ಮತ್ತೆ ಭೂಮಿ ಶಿಸ್ತಾಗಿ ಬೆಳೆಯಬೇಕೆಂದರೆ ಇದೆ ತಿಪ್ಪೆ ಕೇಳು ಅಂತ ನಾವನ್ನುತ್ತೇವೆ. ಭಗವಂತ ಅದರಲ್ಲಿ ಎಂಥ ಸತ್ವ ತುಂಬಿದ್ದಾನೆ. ಆ ತಿಪ್ಪೆ ಮೇಲೆ ಒಂದು ಗಿಡ ಇತ್ತು. ಆ ಗಿಡದಿಂದ ಒಂದು ಹೂ ಬಿತ್ತು. ಆ ಹೂವು ಸುಗಂಧ ಸೂಸುತಿತ್ತು. ಸುತ್ತ ಮುತ್ತ ಸುಗಂಧ ಹರಡಿತ್ತು. ಆಗ ತಿಪ್ಪೆ, ಯಾತ್ರಿಕನಿಗೆ ಹೇಳಿತು. "ನೋಡು ಒಂದಿಷ್ಟು. ನೀನು ಮನುಷ್ಯ ಬದುಕುತ್ತಿದ್ದೀಯಲ್ಲ, ಇಲ್ಲೊಂದು ಹೂ ಗಿಡ ಬದುಕಿದೆ, ನಮ್ಮಲ್ಲೇ ಇದ್ದರು ನಮ್ಮನ್ನು ಬಯ್ಯದೆ ನಮ್ಮಲ್ಲೇ ಸತ್ವ ಹೀರಿ ಸುಗಂಧ ಬೀರುತ್ತಿದೆ. ನೀನು ನಮ್ಮ ಹೊಲಸು ತಲೆಗೆ ಹಾಕಿಕೊಂಡು ನರಳುತ್ತಿದೆಯಲ್ಲ... ಈ ಹೂವು ಭಗವಂತನ ತಲೆಗೆ ಏರುತ್ತದೆ. ನೀನು ನಮ್ಮ ತಲೆಗೆ ಹಾಕೊಂಡು ನಮ್ಮ ಜಾಗಕ್ಕೆ ಬರ್ತೀಯಾ. ನಮ್ಮನ್ನು ಬೈಯಬೇಡ ತಿಪ್ಪೆಗಳು ಬಹಳ ಒಳ್ಳೆಯವೆ. ಒಳಗಿರುವ ಸತ್ವ ಇರುವ ಪ್ರಾಣ ಬಂತು ಅಂದರೆ ಹೂವಾಗುತ್ತದೆ ಹಣ್ಣಾಗುತ್ತದೆ". ಹಾಗೆ ಜಗತ್ತು ಕೆಟ್ಟ ಅಂತ ಭಾವಿಸಬಾರದು. ಊರಿನಲ್ಲಿ ಎಲ್ಲಾ ಮನೆ ಸಮ ಇರುತ್ತದೆ ಏನು?. ಎಲ್ಲರದು ಒಂದೇ ತರ ಮನೆ ಇರುತ್ತದೆ ಏನು?. ಇರೋದಿಲ್ಲ. ಒಬ್ಬರ ಮನೆ ದೊಡ್ಡದಿರುತ್ತದೆ. ಒಬ್ಬರ ಮನೆ ಸಣ್ಣದಿರುತ್ತದೆ. ಒಬ್ಬರದು ವಿಶಾಲವಾಗಿರುತ್ತದೆ. ಒಬ್ಬರದು ಕಿರುಗಾಗಿರುತ್ತದೆ. ಜಾಗನೇ ಇರುವುದಿಲ್ಲ. ಒಬ್ಬರ ಮನೆಯೊಳಗೆ ಸಾಮಾನು ಬಹಳ ಇರುತ್ತದೆ. ಇನ್ನೊಬ್ಬರ ಮನೇಲಿ ಸಾಮಾನು ಕಡಿಮೆ ಇರುತ್ತದೆ. ಒಬ್ಬರು ಸ್ವಚ್ಛ ಇಟ್ಟಿರುತ್ತಾರೆ. ಇನ್ನೊಬ್ಬರು ಹೊಲಸಾಗಿ ಇಟ್ಟಿರುತ್ತಾರೆ. ಇಷ್ಟೆಲ್ಲ ಇರೋದೇ. ಈ ಊರಿನ ನಾವು ಹಾಗೆ ಇಲ್ಲ. ಎಲ್ಲಾ ಮನೆಗಳು ಒಂದೇ ಎತ್ತರ. ಅಷ್ಟೆ ಕಿಟಕಿ, ಅಷ್ಟೇ ಬಾಗಿಲು. ಎಲ್ಲರೂ ಒಂದೇ ಬಾರಿಗೆ ಬಾಗಿಲು ತೆಗೆಯುತ್ತಾರೆ. ಒಂದೇ ಸಲಕ್ಕೆ ಕಿಟಕಿ ತೆಗೆಯೋದು ಅಂದರೆ ಜಗತ್ತಿನ ಸೌಂದರ್ಯ ನಷ್ಟವಾಗುತ್ತದೆ. ಅದರಿಂದ ಜಗತ್ತಿನಾಗೆ ಬದುಕಿರುವಾಗ ಹೇಗಿರಬೇಕು ಅಂದರೆ ಏನದೆ ಅದರಲ್ಲಿ ಸತ್ಯ ಹುಡುಕುವ ತ್ರಾಣ ಬಂತು ಅಂದರೆ ಆ ಮನುಷ್ಯ ಸುಜ್ಞಾನಿಯಾಗುತ್ತಾನೆ. 

ಯಾವಾಗ ಸಾಯುತ್ತೀವಿ ಅಂತ ಗೊತ್ತಿಲ್ಲ?. ಸದಾ ತಿಪ್ಪೆ ತಲೆಗೆ ಏಕೆ ಹಾಕಿಕೊಳ್ಳುವುದು?. ಆನಂದವಾಗಿರುವುದು. ಜಗತ್ತಿನಲ್ಲಿ ಚಲೋ ಚಲೋ ವಸ್ತುಗಳನ್ನು ಅನುಭವಿಸುತ್ತಾ, ಹಣ್ಣು ಹಂಪಲ ಹಾಲನ್ನು ಕುಡಿದು, ತಿಂದು, ಆನಂದ ಪಡಬೇಕು. ಆದರೆ ಏನು ತಿನ್ನಬಾರದು ಅದನ್ನು ತಿನ್ನಬಾರದು. ಭಗವಂತ ಎಂಥಾ ದ್ರಾಕ್ಷಿ ಕೊಟ್ಟಿದ್ದಾನೆ! ಎಂತಹ ಸುಂದರ ಪ್ಯಾಕಿಂಗ್ ಮಾಡಿದ್ದಾನೆ! ಯಾವ ವಿಜ್ಞಾನಿ ಅಂತಹ ಪ್ಯಾಕ್ ಮಾಡಲು ಸಾಧ್ಯ? ಏನು ಒಳಗಿನ ರಸ ?. ಏನು ಹೊರಗೆ ಪ್ಯಾಕ್?. ಎಷ್ಟು ಅದರಲ್ಲಿ ಸಕ್ಕರೆ ಹಾಕಬೇಕು?. ಎಷ್ಟು ಸಾರಜನಕ ಹಾಕಬೇಕು!. ಎಷ್ಟು ಗಂಧಕ ಹಾಕಬೇಕು?. ಎಷ್ಟು ಕಬ್ಬಿಣ ಇರಬೇಕು ಅಷ್ಟೇ ಪ್ರಮಾಣದ ಹಾಗೆ ತೂಗಿತೂಗಿ ಮಾಡಿದ್ದಾನೆ. ಇಂತಹ ಹಣ್ಣು ತಿನ್ನುವಾಗ ಸ್ವರ್ಗದ ಸುಖ ಪಡಬೇಕು. ಎಂತಹ ಪ್ರಾಮಾಣಿಕ ದೇವರು. ಅನ್ನಂ ಬ್ರಹ್ಮ. ಅನ್ನ ದೇವರ ಮುಂದೆ ಇನ್ನು ದೇವರೇ ಇಲ್ಲ. ಅನ್ನಕ್ಕೆ ಮೇಲೆ ಇನ್ನಿಲ್ಲ. ಲೋಕಕ್ಕೆ ಅನ್ನವೇ ದೈವ ಸರ್ವಜ್ಞ. ಅನ್ನದಲ್ಲಿ ದೇವರ ಕಂಡರೆ ಮನುಷ್ಯ ಸ್ವರ್ಗ ಅನುಭವಿಸುತ್ತಾನೆ. ಇದೇ ದ್ರಾಕ್ಷಿ ಹುಳಿ ಮಾಡಿ ಹಲವಾರು ತಿಂಗಳು ಹುಗಿದು ಅನಂತರ ತೆಗೆದು ಕುಡಿದು ದಾರಿ ತಪ್ಪುವಂತೆ ಪ್ರಜ್ಞೆ ತಪ್ಪುವಂತೆ ಮಾಡಿದರೆ ಇದು ನರಕ ಅಲ್ಲವೇ. 

ಎಮರ್ಸನ್ ಹೇಳುತ್ತಾನೆ if you are wise this world become heaven for you, if you are unwise it become hell for you the world neither hell nor heaven you are making it Heavan or hell. 

ಬದುಕಲು ಬಾರದಿದ್ರೆ ನರಕ. ಬದುಕೋಕೆ ಬಂದರೆ ಇದು ಸುಂದರ ಸ್ವರ್ಗ. ಈ ಜಗತ್ತೆಲ್ಲ ಭಗವಂತನ ಸಂಪತ್ತು. ನಾವು ಇಲ್ಲಿಗೆ ಬಂದದ್ದು ಭಗವಂತನ ಸಂಪತ್ತನ್ನು ಅನುಭವಿಸಲು. ಹೀಗಿರುವಾಗ ಒಬ್ಬ ಶ್ರೇಷ್ಠ ಅಂತ ಏಕೆ ನೋಡುವುದು?. ಒಬ್ಬ ಕನಿಷ್ಠ ಅಂತ ಏಕೆ ನೋಡುವುದು?. ಒಬ್ಬರು ದೂರದವರೆಂದು ಮತ್ತೊಬ್ಬರು ಸಮೀಪದವರೆಂದು ಏಕೆ ನೋಡೋದು?. ಎಲ್ಲರೂ ಒಂದೇ. ಭಾರತ, ಜಪಾನ್, ಅಮೆರಿಕ ಎಲ್ಲ ಒಂದೇ. 

ಡಯೋಜಿನ್ ಒಮ್ಮೆ ಅಥೆನ್ಸ್ ಪಟ್ಟಣದಲ್ಲಿ ಮರದ ಕೆಳಗೆ, ಕಟ್ಟೆ ಮೇಲೆ ಎರಡು ತಲೆ ಬುರುಡೆ ಇಟ್ಟುಕೊಂಡು ಕುಳಿತಿದ್ದನು. ಬರೀ ಮೈ, ಸೊಂಟಕ್ಕೆ ಒಂದಿಷ್ಟು ಬಟ್ಟೆ. ಪಕ್ಕದಲ್ಲಿ ಒಂದು ನಾಯಿ ಇತ್ತು, ಒಂದು ಬಡಿಗೆ ಇತ್ತು. ಜನ ಕುತೂಹಲದಿಂದ ನೋಡಲಿಕ್ಕೆ ಬಂದರು. ಇಂತಹ ಶ್ರೇಷ್ಠ ಸಂತ ಇಟ್ಟುಕೊಂಡು ಕುಳಿತಿದ್ದಾನೆ ಏಕೆ? ಅಂತ ಕುತೂಹಲದಿಂದ ನಿಂತಿದ್ದರು. ಆ ಬಳಿಕ ಡೈಯೋಜಿನ್ ಎರಡು ತಲೆ ಬುರುಡೆ ಎತ್ತಿ ಹೇಳಿದ. ಈ ಒಂದು ಬುರುಡೆ ಬಡವನದು ಭಿಕ್ಷುಕನದು. ಈ ಬುರುಡೆ ರಾಜನದು. ಈ ಎರಡು ತಲೆ ಬುರುಡೆಯಲ್ಲಿ ಏನು ವ್ಯತ್ಯಾಸ? ಅಂದನು. ಈಗ ಇವು ಒಂದನ್ನೊಂದು ದ್ವೇಷಿಸುವುದಿಲ್ಲ. ಆದರೆ ತಲೆ ಬುರುಡೆ ಒಳಗಡೆ ಮನುಷ್ಯ ಇದ್ದರೆ ಒಬ್ಬರಿಗೊಬ್ಬರು ಸೇರುತ್ತಿರಲಿಲ್ಲ. ಜಡ ವಸ್ತುಗಳು ಪರಸ್ಪರ ಒಂದಾಗುತ್ತವೆ. ಮನುಷ್ಯ ಒಂದಾಗುವುದಿಲ್ಲ ಅಂದರೆ ಹೇಗೆ. ಮುಂದೆ ಪೃಥ್ವಿ ಒಂದು ಅನ್ನುವ ಕಾಲ ಬರುತ್ತದೆ ಅಂದನು. ಮನಸ್ಸು ವಿಶಾಲ ಆಗುವಂತೆ ಮಕ್ಕಳನ್ನು ತಯಾರು ಮಾಡಬೇಕು. ಯಾರನ್ನೂ ದೂರ ಇಡುವುದಾಗಲಿ ತಿರಸ್ಕರಿಸುವುದಾಗಲಿ ಬೇಡ. ನಾವು ಯಾರನ್ನು ತಿರಸ್ಕರಿಸುವುದು ಬೇಡ. ನಾವು ಕಲ್ಲು ಸಕ್ಕರೆ ಮಾರುವವನ ಹಾಗೆ ಇರಬೇಕು. ಕಲ್ಲು ಸಕ್ಕರೆ ಮಾರುವವನನ್ನು ಯಾರು ಬೈತಾರೆ...? ಸವಿ ಸವಿ ಮಾತನಾಡಬೇಕು. ಸಿಟ್ಟು ಮಾಡಿಕೊಳ್ಳುವುದು ತಪ್ಪಲ್ಲ. ದ್ವೇಷಿಸುವುದು ತಪ್ಪು. ದ್ವೇಷ ವಿಷವಿದ್ದಂತೆ. ಸಿಟ್ಟು ಕ್ಷಣಿಕ ಇರುತ್ತದೆ. ತಕ್ಷಣ ಪ್ರೀತಿಸಬೇಕು. ಇದರಿಂದ ಶಾಂತಿ ಮೂಡುತ್ತದೆ ಅಲ್ಲದ ಮಕ್ಕಳೇ.
......................................... ಎಂ.ಪಿ. ಜ್ಞಾನೇಶ್ 
ಶಿಕ್ಷಣಾಧಿಕಾರಿ 
ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ
(ಮಧ್ಯಾಹ್ನ ಉಪಹಾರ ಯೋಜನೆ) 
ಜಿಲ್ಲಾ ಪಂಚಾಯತ್ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ 
*****************************************


Ads on article

Advertise in articles 1

advertising articles 2

Advertise under the article