-->
ಜೀವನ ಸಂಭ್ರಮ : ಸಂಚಿಕೆ - 241

ಜೀವನ ಸಂಭ್ರಮ : ಸಂಚಿಕೆ - 241

ಜೀವನ ಸಂಭ್ರಮ : ಸಂಚಿಕೆ - 241
ಲೇಖಕರು : ಎಂ.ಪಿ. ಜ್ಞಾನೇಶ್ 
ಶಿಕ್ಷಣಾಧಿಕಾರಿ 
ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ
(ಮಧ್ಯಾಹ್ನ ಉಪಹಾರ ಯೋಜನೆ) 
ಜಿಲ್ಲಾ ಪಂಚಾಯತ್ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ 
                                                        

            
ಮಕ್ಕಳೇ, ನಾವು ಈ ದಿನ ಜೀವನ, ಸುಂದರ ಅನುಭವದ ಪ್ರವಾಹ ಎನ್ನುವುದರ ಬಗ್ಗೆ ತಿಳಿದುಕೊಳ್ಳೋಣ. 

ಬದುಕಿನ ಅಂಗಗಳು ಮೂರು. ಅವು ದೇಹ, ಮನಸ್ಸು ಮತ್ತು ಬುದ್ಧಿ. ಈ ಮೂರರಲ್ಲಿ ಒಂದು ಇಲ್ಲದಿದ್ದರೂ ಬದುಕು ಬಡವಾಗುತ್ತದೆ, ಶ್ರೀಮಂತವಾಗುವುದಿಲ್ಲ. ಬುದ್ದಿ ಬೆಳಕನ್ನು ಚೆಲ್ಲುತ್ತದೆ. ವಸ್ತುಗಳ ಜ್ಞಾನ ಮಾಡಿಕೊಡುತ್ತದೆ. ಮನಸ್ಸು ವಸ್ತುಗಳನ್ನು ಪ್ರೀತಿಸಿ ಅನುಭವಿಸುತ್ತದೆ. ದೇಹ ವಸ್ತುಗಳನ್ನು ಸ್ಪರ್ಶಿಸುತ್ತದೆ. 

ಇಲ್ಲೊಂದು ಹೂವಿದೆ. ಈ ಹೂವನ್ನು ನಾನು ಸ್ಪರ್ಶಿಸುತ್ತೇನೆ, ಅಂದರೆ ಕೈಯಿಂದ ಮುಟ್ಟುತ್ತೇನೆ. ಕಣ್ಣಿನಿಂದ ಮುಟ್ಟುತ್ತೇನೆ. ಇದಕ್ಕೆ ಮುಟ್ಟುವುದು ಸ್ಪರ್ಶಿಸುವುದು ಎನ್ನುತ್ತೇವೆ. ಹೀಗೆ ಪಂಚೇಂದ್ರಿಯಗಳಿಂದ ವಸ್ತುಗಳನ್ನು ಸ್ಪರ್ಶಿಸುತ್ತೇವೆ. ಇದಕ್ಕೆ ವಸ್ತು ಮುಟ್ಟುವುದು ಎನ್ನುವರು. ಬುದ್ಧಿ ಹೂವನ್ನು ತಿಳಿದುಕೊಳ್ಳುತ್ತದೆ. ಇದು ಹೂ ಸುಂದರವಾಗಿದೆ. ಇದು ಸುಗಂಧಿತವಾಗಿದೆ. ಕೆಂಪು ಬಣ್ಣವಿದೆ. ಹೀಗೆ ಬಣ್ಣ, ಗಾತ್ರ, ಆಕಾರ, ವಾಸನೆ, ರುಚಿ ಮತ್ತು ಉಪಯೋಗ ಇವುಗಳನ್ನು ಬುದ್ಧಿ ತಿಳಿದುಕೊಳ್ಳುತ್ತದೆ. ಆ ಬಳಿಕ ಈ ಹೂವನ್ನು ನಾವು ಪ್ರೀತಿಸುತ್ತೇವೆ. ಮುಟ್ಟಿ ಸಂತೋಷ ಪಡುತ್ತೇವೆ. ಸುವಾಸನೆ ತಗೊಂಡು ಸಂತೋಷ ಪಡುತ್ತೇವೆ. ಅದನ್ನು ಚಿಂತಿಸಿ, ನೆನಪಿಸಿ, ಕಲ್ಪಿಸಿ ಮತ್ತು ಭಾವಿಸಿ ಸಂತೋಷಪಡುತ್ತೇವೆ. ಹೀಗೆ ಸಂತೋಷಪಡಲು ಮನಸ್ಸು ಬೇಕು. ಈ ಮೂರು ಅಂದರೆ ದೇಹ, ಮನಸ್ಸು ಮತ್ತು ಬುದ್ಧಿ ಬಿನ್ನಬಿನ್ನ. ನಾವು ಏನೇ ಮಾಡಬೇಕಾದರೂ ಈ ಮೂರು ಬೇಕು. ಒಂದು ಹೆಜ್ಜೆ ಇಡಬೇಕಾದರೂ ಕೂಡ, ಎಲ್ಲಿ ಹೆಜ್ಜೆ ಇಡುತ್ತೇವೆ, ಅದರ ಜ್ಞಾನ ಬೇಕಾಗುತ್ತದೆ. ಹಾಗೆ ಇಡಬೇಕು ಅನ್ನುವ ಇಚ್ಛೆ ಬೇಕಾಗುತ್ತದೆ. ಹಾಗೆ ಇಡುವ ಪ್ರಯತ್ನ ಬೇಕಾಗುತ್ತದೆ. ಕಾಲು ಬೇಕು, ಮನಸ್ಸು ಬೇಕು ಮತ್ತು ಬುದ್ಧಿ ಬೇಕು. ಈ ಮೂರು ಕೂಡಿದಾಗ ಜಗತ್ತಿನಲ್ಲಿ ಒಂದು ಕಾರ್ಯ ನಡೆಯುತ್ತದೆ. ನಿಸರ್ಗ ದೇವತೆ ನಮಗೆ ಈ ಮೂರನ್ನು ಕೊಟ್ಟಿದೆ. ಈ ಮೂರು ಬಹಳ ವಿಶೇಷ. ಒಂದು ಕೊಟ್ಟು ಇನ್ನೊಂದು ಕೊಡದೆ ಇದ್ದರೆ ಬದುಕು ಎಲ್ಲಿ ಸುಂದರವಾಗುತ್ತಿತ್ತು?. ಬುದ್ಧಿ ಕೊಡದೆ, ದೇಹ ಮತ್ತು ಮನಸ್ಸು ಅಷ್ಟೆ ಕೊಟ್ಟಿದ್ದರೆ, ಏನು ಮುಟ್ಟಬೇಕು? ತಿಳಿಯುತ್ತಿರಲಿಲ್ಲ. ಏನ ನೋಡಬೇಕು?. ಏನ ಕೇಳಬೇಕು?. ಏನು ಮಾಡಬೇಕು? ಏನು ತಿನ್ನಬೇಕು? ಗೊತ್ತಾಗುತ್ತಿರಲಿಲ್ಲ. ಏನ ನೋಡಿ ಆನಂದ ಪಡಬೇಕು ಗೊತ್ತಾಗುತ್ತಿರಲಿಲ್ಲ. ಏನನ್ನು ಇಚ್ಚಿಸಬೇಕು?. ಏನನ್ನು ಭಾವಿಸಬೇಕು?. ಏನನ್ನು ಕಲ್ಪಿಸಬೇಕು?. ತಿಳಿಯುತ್ತಿರಲಿಲ್ಲ. ನಿಸರ್ಗ ಹಾಗೆ ಮಾಡಲಿಲ್ಲ ಬುದ್ಧಿಯನ್ನು ಕೊಟ್ಟಿತು, ಮನಸ್ಸನ್ನು ಕೊಟ್ಟಿತು, ಅನುಭವಿಸುವುದಕ್ಕೆ. ದೇಹವನ್ನು ಕೊಟ್ಟಿತು ಸ್ಪರ್ಶ ಮಾಡುವುದಕ್ಕೆ. ಸ್ಪರ್ಶ ಜ್ಞಾನ ಮತ್ತು ಅನುಭವ ಈ ಮೂರು ಕೂಡಿದರೆ ಜೀವನ. ಜೀವನ ಅಂದರೆ ವಸ್ತುಗಳನ್ನು ತಿಳಿದುಕೊಳ್ಳುವುದು, ವಸ್ತುಗಳನ್ನು ಇಚ್ಚಿಸುವುದು, ವಸ್ತುಗಳನ್ನು ಸ್ಪರ್ಶಿಸುವುದು, ಒಟ್ಟಾರೆ ಅನುಭವಿಸುವುದು. ಹೀಗೆ ಅನುಭವಿಸುವುದಕ್ಕೆ ಬದುಕು ಎನ್ನುವರು. 

ನಾವು ಚೆನ್ನಾಗಿ ಬದುಕುತ್ತೀವಿ ಅಂದರೆ ನಾವು ಚೆನ್ನಾಗಿ ಅನುಭವಿಸುತ್ತೇವೆ ಎಂದು ಅರ್ಥ. ಈ ಟೇಬಲ್ ಮೇಲೆ ಒಂದು ಸಾವಿರ ಹೂಗಳಿವೆ ಎಂದು ಭಾವಿಸಿ. 1000 ಹೂ ಇದ್ದರೆ ಏನು ಮಾಡುವುದು?. ಅನುಭವಿಸಲು ಬರದೇ ಇದ್ದರೆ 1000 ಇದ್ದರೇನು?. ಕೋಟಿ ಇದ್ದರೇನು?. ಅನುಭವಿಸುವುದು ಗೊತ್ತಿದ್ದರೆ ಒಂದು ಹೂ ಸಾಕಲ್ಲ. ಒಂದು ಹೂವಿನಲ್ಲಿ ಎಷ್ಟು ಸಂತೋಷ ಪಡಬಹುದು?. 

ವರ್ಡ್ಸ್ ವರ್ತ್ ಎನ್ನುವ ವಿದೇಶಿ ಕವಿ ಸ್ಕಾಟ್ಲೆಂಡ್ ನವರು. ಬಹಳ ದೊಡ್ಡ ಕವಿ. ಆತ ನಿಸರ್ಗವನ್ನು ಬಹಳ ಪ್ರೀತಿಸುತ್ತಿದ್ದನು. ನಮ್ಮಲ್ಲಿ ಕಾಳಿದಾಸ ಇದ್ದಂತೆ. ಒಮ್ಮೆ ಒಂದು ದಾರಿಯಲ್ಲಿ ಹೋಗುವಾಗ ಸಣ್ಣ ಸಣ್ಣ ಹೂಗಳನ್ನು ನೋಡುತ್ತಾನೆ. ರಸ್ತೆಯ ಎರಡು ಬದಿ ಈ ಹೂ ಗಿಡಗಳು ಬೆಳೆದಿದ್ದವು. ಗಾಳಿ ಬೀಸುತ್ತಿತ್ತು. ಗಿಡದ ಹೂ ಬಾಗಿರುವುದನ್ನು ನೋಡಿ ಹುಚ್ಚನಾಗುತ್ತಾನೆ. ಆ ಹೂವಿನ ಹೆಸರು ಡ್ಯಾಪೋಡೀಲ್ಸ್ ಅಂತ. ಆ ಹೂವಿನ ವರ್ಣನೆ ಮಾಡುತ್ತಾನೆ. ಅನುಭವಿಸಲು ಒಂದು ಹೂ ಸಾಕು. ಒಬ್ಬ ಹೂ ವ್ಯಾಪಾರಿ ಇರುತ್ತಾನೆ. ಆತ ಹೂವಿನ ರಾಶಿರಾಶಿ ಹಾಕಿಕೊಂಡಿರುತ್ತಾನೆ. ಆತನಿಗೆ ಹೂವಿನ ಅನುಭವವಿಲ್ಲ. ಆತನಿಗೆ ಹೂವು ಎಷ್ಟು ಕಿಲೋ ಇದೆ ಅಂತ ಗೊತ್ತು ವಿನಹ ಅದರ ಅನುಭವವಿಲ್ಲ. ಕಿಲೋದಲ್ಲಿ ತೂಗುತ್ತಾನೆ. ಸಂತೋಷ ಪಡಲು ಹೂ ಅನುಭವಿಸಬೇಕು. ನಾನು ಅನುಭವ ಮಾಡಿಕೊಳ್ಳಬೇಕಾದರೆ ದೇಹ, ಮನ ಮತ್ತು ಬುದ್ದಿ ಚೆಂದಾಗಿರಬೇಕು. ಬುದ್ಧಿ ಸರಿಯಾಗಿ ತಿಳಿದುಕೊಳ್ಳಬೇಕು. ಮನಸ್ಸು ಪ್ರೀತಿಸಬೇಕು. ದೇಹದ ಇಂದ್ರಿಯ ಸ್ಪರ್ಶಿಸಬೇಕು. ಆಗ ಅನುಭವಿಸಬಹುದು. 

ಜೀವನದಲ್ಲಿ ಅನುಭವಿಸುವುದು ಮಹತ್ವ. ಅನುಭವಕ್ಕೆ ಅಷ್ಟು ಮಹತ್ವ. ಜೀವನ ಅಂದರೆ ಸುಂದರ ಅನುಭವಗಳ ಪ್ರವಾಹ. ಕ್ಷಣ ಕ್ಷಣ ಅನುಭವಿಸಬೇಕು. ಎಷ್ಟು ಹಣವಿದೆ ಮಹತ್ವದಲ್ಲ. ಎಷ್ಟು ಚೆನ್ನಾಗಿ ಅನುಭವಿಸುತ್ತೇವೆ ಅದು ಮಹತ್ವದ್ದು. ಉದಾಹರಣೆಗೆ, ಹಿಂದೆ ನಾವು ಚಿಕ್ಕ ಬಾಲಕರಾಗಿದ್ದಾಗ ತಾಯಿ ಒಂದು ಗಣಿಕೆಗೆ ಒಂದಿಷ್ಟು ಹುಣಸೆಹಣ್ಣು, ಉಪ್ಪು ಮತ್ತು ಬೆಲ್ಲ ಹಾಕಿ ಸುಂದರ ಮಾಡಿ ಹಚ್ಚುತ್ತಿದ್ದಳು. ಬಹಳ ಬೆಲೆ ಇಲ್ಲ ಅದಕ್ಕೆ. ಊರು ತುಂಬಾ ತಿರುಗಾಡುತ್ತಾ ಅದನ್ನು ಚೀಪುತ್ತಾ ಸಂತೋಷ ಪಡುತ್ತಿದ್ದೆವು. ಆಗ ನಮಗೆ ಹಣ ಮಹತ್ವದ್ದಾಗಿರಲಿಲ್ಲ. ಅದರ ಬೆಲೆ ಮಹತ್ವದ್ದಾಗಿರಲಿಲ್ಲ. ಅನುಭವಿಸುವ ರೀತಿ ಅಷ್ಟು ಅದ್ಭುತವಿತ್ತು. ಅದು ಜೀವನ. ಆ ಜೀವನವೇ ಶ್ರೀಮಂತ ಜೀವನ. ಆನಂದ ಪಡಲು ಬಹಳ ಬೇಕಾಗಿಲ್ಲ. ಒಂದು ಗಣಿಕೆ ಸಾಕು. ತಂದೆ ಕೋಟಿ ಗಳಿಸಬಹುದು. ಅಷ್ಟು ಸಂತೋಷ ಇಲ್ಲ. ಸಂತೋಷ, ಬದುಕುವ ರೀತಿಯಲ್ಲಿ ಇರುತ್ತದೆ. ಚೆಂದಾಗಿ ಬದುಕಲು ಬಂದರೆ ಗುಡಿಸಲು ಸ್ವರ್ಗವಾಗುತ್ತದೆ. ಬದುಕಕ್ಕೆ ಬರದಿದ್ದರೆ ಅರಮನೆ ಸ್ಮಶಾನವಾಗುತ್ತದೆ. ಆದ್ದರಿಂದ ಬದುಕುವ ರೀತಿ ಬಹಳ ಮುಖ್ಯ. ಗೊತ್ತಿಲ್ಲದ್ದಕ್ಕೆ ಜೀವನ ಗದ್ದಲ ಮಾಡಿಕೊಂಡಿದ್ದೇವೆ.

ಜೀವನ ಅಂದರೆ ಏನೇನು ಅಲ್ಲ. ಜೀವನ ಅಂದರೆ ಹೊಲವಲ್ಲ, ಸಂಪತ್ತಲ್ಲ, ಅಧಿಕಾರವಲ್ಲ, ಕುರ್ಚಿಯಲ್ಲ, ಟೇಬಲ್ ಅಲ್ಲ, ಹಣವಲ್ಲ. ಜೀವನ ಅಂದರೆ ಸುಂದರ ಅನುಭವಗಳ ಪ್ರವಾಹ. ಇಂತಹ ಬದುಕಿಗೆ ದೇಹ, ಮನ ಮತ್ತು ಬುದ್ದಿ ಬೇಕು. ಬುದ್ಧಿ ಇಲ್ಲದಿದ್ದರೆ ದೇಹ ಏನು ಮುಟ್ಟುತ್ತದೆ? ಹೇಳಲಿಕ್ಕೆ ಆಗುವುದಿಲ್ಲ. ಬುದ್ಧಿ ಇಲ್ಲದಿದ್ದರೆ ಮನಸ್ಸು ಏನು ಬಯಸುತ್ತದೆ, ಇಚ್ಚಿಸುತ್ತದೆ? ಹೇಳಲಿಕ್ಕಾಗೋದಿಲ್ಲ. ಬೆಳಕೆ ಇಲ್ಲದಿದ್ದರೆ, ಏನು ತಿನ್ನುತ್ತಾನೆ ತಿಳಿಯುವುದಿಲ್ಲ. ಕತ್ತಲಲ್ಲಿ ತಿನ್ನುತ್ತಿದ್ದಾನೆ, ಏನು ಅಂತ ಗೊತ್ತಿಲ್ಲ. ಚೆನ್ನಾಗಿ ಬದುಕಬೇಕಾದರೆ ಮೊದಲು ತಿಳಿದುಕೊಳ್ಳಬೇಕು. ತಿಳಿದುಕೊಳ್ಳುವುದೇ ಜ್ಞಾನ ಬುದ್ಧಿ. ಜ್ಞಾನ ಅನ್ನುವುದು ದೀಪ ಇದ್ದಂತೆ. ಅದು ಎಲ್ಲವನ್ನೂ ಸ್ಪಷ್ಟವಾಗಿ ತೋರಿಸುತ್ತದೆ. ಅರಿವೇ ಗುರು ಎನ್ನುವರು. ಜ್ಞಾನಕ್ಕೆ ಗುರು ಅಗತ್ಯ. ಕತ್ತಲಿನಲ್ಲಿ ಬೀಳುತ್ತೇವೆ, ಬೆಳಕಿನಲ್ಲಿ ಅಲ್ಲ. ಹಾಗಾಗಿ ಅನುಭವಕ್ಕೆ ಬುದ್ಧಿ ಬಹಳ ಮುಖ್ಯ. 

ಒಂದು ವೇಳೆ ನಿಸರ್ಗ ಮನಸ್ಸು ಅಳವಡಿಸಿದಿದ್ದರೆ ಇಚ್ಚಿಸಲು, ಪ್ರೀತಿಸಲು, ಅನುಭವಿಸಲು ಆಗುತ್ತಿರಲಿಲ್ಲ. ಮನಸ್ಸು ಇಲ್ಲದಿದ್ದರೆ ಸಂತೋಷವೇ ಇರುತ್ತಿರಲಿಲ್ಲ. ದೇಹ ಮತ್ತು ಇಂದ್ರಿಯ ಇಲ್ಲದಿದ್ದರೆ ವಸ್ತು ಸ್ಪರ್ಶ ಆಗುತ್ತಿರಲಿಲ್ಲ. ಆಗ ಅನುಭವವೇ ಆಗಲಿ ಜ್ಞಾನವೇ ಆಗಲಿ ಆಗುತ್ತಿರಲಿಲ್ಲ. ಕಣ್ಣಿಲ್ಲದಿದ್ದರೆ ವ್ಯಕ್ತಿ ರೂಪದ ಬಡತನ. ಕಿವಿ ಇಲ್ಲದಿದ್ದರೆ ಶಬ್ದದ ಬಡತನ, ಮೂಗಿಲ್ಲದಿದ್ದರೆ ವಾಸನೆ ಬಡತನ, ಚರ್ಮವಿಲ್ಲದಿದ್ದರೆ ಸ್ಪರ್ಶದ ಬಡತನ, ನಾಲಿಗೆ ಇಲ್ಲದಿದ್ದರೆ ರುಚಿ ಬಡತನ ಮಾತಿನ ಬಡತನ ಉಂಟಾಗುತ್ತಿತ್ತು. ಕೈ ಇಲ್ಲದಿದ್ದರೆ ಕರ್ಮದ ಬಡತನ ಇರುತ್ತದೆ. ಇದರಿಂದ ಸಂಬಂಧಿಸಿದ ಅನುಭವ ಬಡತನವಾಗುತ್ತಿತ್ತು. ನಮಗೆ ಐದು ರೀತಿಯ ಅನುಭವವಾಗಲು ಪಂಚೇಂದ್ರಿಯ ಮುಖ್ಯ. ಕರ್ಮದ ಅನುಭವಕ್ಕೆ ದೇಹ, ಕೈಕಾಲು, ಮಾತು ಮುಖ್ಯ. ನಿಸರ್ಗ ನಮಗೆಲ್ಲ ಇವುಗಳನ್ನು ಅಳವಡಿಸಿದೆ ಅಂದಾಗ ನಮಗೆ ನಿಸರ್ಗ ಅನ್ಯಾಯ ಮಾಡಿಲ್ಲ. ಅನುಭವಿಸುವ ಕಲೆ ಇಲ್ಲದ್ದಕ್ಕೆ ಬಡತನ. ವಸ್ತು ಕೊರತೆಯ ಬಡತನ ಎನ್ನುವರು. ಜಗತ್ತಿನಲ್ಲಿ ವಸ್ತುಗಳ ಕೊರತೆ ಇಲ್ಲ. ಅನುಭವಿಸಲು ಕೊರತೆ ಇಲ್ಲ ಆದರೆ ಮಾಲೀಕನಾಗಲು ಕಷ್ಟ. ಅಲ್ಲವೇ ಮಕ್ಕಳೇ.
......................................... ಎಂ.ಪಿ. ಜ್ಞಾನೇಶ್ 
ಶಿಕ್ಷಣಾಧಿಕಾರಿ 
ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ
(ಮಧ್ಯಾಹ್ನ ಉಪಹಾರ ಯೋಜನೆ) 
ಜಿಲ್ಲಾ ಪಂಚಾಯತ್ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ 
*****************************************


Ads on article

Advertise in articles 1

advertising articles 2

Advertise under the article