ಮಕ್ಕಳಿಗೆ ರಜೆಯ ಓದು : ಸಂಚಿಕೆ - 21
Wednesday, May 20, 2026
Edit
ಮಕ್ಕಳಿಗೆ ರಜೆಯ ಓದು
ಸಂಚಿಕೆ - 21
ಓದು ಬರಹ : ಕೆ ಪಿ ಅಶ್ವಿನ್ ರಾವ್
ಪದವಿನಂಗಡಿ, ಬೊಂದೇಲ್
ಮಂಗಳೂರು, ದಕ್ಷಿಣಕನ್ನಡ ಜಿಲ್ಲೆ
ಮೊ : +91 94482 53815
ಶಾಲಾ ಮಕ್ಕಳಿಗೆ ರಜೆ ಪ್ರಾರಂಭವಾಗಿ ತಿಂಗಳೇ ಕಳೆದು ಹೋಯಿತು. ಹಲವಾರು ಸಮಯದಿಂದ ಮಕ್ಕಳ ರಜೆಯ ಓದು ಮಾಲಿಕೆಯನ್ನು ಮರು ಪ್ರಾರಂಭಿಸಲು ಯೋಚನೆ ಮಾಡುತ್ತಿದ್ದೆ. ಆದರೆ ಸಮಯವೇ ಕೂಡಿ ಬಂದಿರಲಿಲ್ಲ. ಆದರೆ ಇಂದು ಹಠಕ್ಕೆ ಬಿದ್ದಾದರೂ ರಜೆಯ ಮಜಾ ಅನುಭವಿಸುತ್ತಿರುವ ಮಕ್ಕಳಿಗೆ ಇನ್ನಷ್ಟು ಮಾಹಿತಿ ನೀಡುವ ಓದುವ ಆಸಕ್ತಿ ಹುಟ್ಟಿಸುವ ಕಥಾ ಸರಣಿಯ ವಿಷಯವನ್ನು ತಿಳಿಸಲು ಯೋಚನೆ ಮಾಡುತ್ತಿರುವೆ.
ಈ ವಾರ ಖ್ಯಾತ ಆಂಗ್ಲ ಕಥೆ ಪುಸ್ತಕ - ‘ವಿನ್ನಿ ದಿ ಪೂಹ್’ ಬಗ್ಗೆ ಮಾಹಿತಿ ನೀಡಲಿರುವೆ. ಈಗಿನ ತಲೆಮಾರಿನ ಬಹುತೇಕ ಮಕ್ಕಳಿಗೆ ‘ವಿನ್ನಿ ದಿ ಪೊಹ್’ (Winnie the Pooh) ಬಗ್ಗೆ ಗೊತ್ತೇ ಇರುತ್ತದೆ. ಏಕೆಂದರೆ ಈ ಕಥೆ ಪುಸ್ತಕವು ಟಿವಿಯಲ್ಲಿ ಕಾರ್ಟೂನ್ ರೂಪದಲ್ಲೋ, ಸಿನೆಮಾ ರೂಪದಲ್ಲೋ ಬಂದಿರುತ್ತದೆ. ಇದನ್ನು ಬಹುತೇಕ ಮಕ್ಕಳು ನೋಡಿಯೇ ಇರುತ್ತೀರಿ. ಆದರೆ ಈ ಕತೆಯನ್ನು ಬರೆದವರು ಯಾರು? ಇದರ ಹಿನ್ನಲೆ ಏನು ಗೊತ್ತೇ?
‘ವಿನ್ನಿ ದಿ ಪೊಹ್’ (ಪೂ) ಎಂಬ ಮಕ್ಕಳ ಕಥೆಯನ್ನು ಬರೆದವರು ಖ್ಯಾತ ಆಂಗ್ಲ ಬರಹಗಾರರಾದ ಎ ಎ ಮಿಲ್ನೆ (A.A.Milne). ಇವರು ೧೯೨೬ರಲ್ಲಿ ಬರೆದ ಈ ಕಥಾ ಸರಣಿ ಮಕ್ಕಳ ಲೋಕದಲ್ಲಿ ಜನಪ್ರಿಯತೆಯನ್ನು ಪಡೆಯಲು ಮುಖ್ಯ ಕಾರಣವೆಂದರೆ ಈ ಪುಸ್ತಕದಲ್ಲಿರುವ ಸೊಗಸಾದ ಚಿತ್ರಗಳು. ಏರ್ನೆಸ್ಟ್ ಎಚ್ ಶಿಪಾರ್ಡ್ ಎಂಬ ಚಿತ್ರಕಾರ ಬಿಡಿಸಿದ ಚಿತ್ರಗಳು ಜೀವಂತವಾಗಿ ಎದ್ದು ಬಂದಂತೆ ಮಕ್ಕಳಿಗೆ ಭಾಸವಾಗುತ್ತಿದ್ದವು. ಈ ಕಾರಣದಿಂದ ವಿನ್ನಿ ದಿ ಪೊಹ್ ಪುಸ್ತಕ ಬಹಳ ಪ್ರಸಿದ್ಧಿಯನ್ನು ಪಡೆಯಿತು.
ಈ ಪುಸ್ತಕದ ಕಥೆ ಬಹಳ ಸರಳ. ವಿನ್ನಿ ದಿ ಪೊಹ್ ಎನ್ನುವ ಪುಟ್ಟ ಸಾಧು ಸ್ವಭಾವದ ಕರಡಿ ಹಾಗೂ ಅದರ ಮಿತ್ರರ ಸಾಹಸದ ಕಥೆಯನ್ನು ಲೇಖಕರು ಬಹಳ ಸೊಗಸಾಗಿ ವಿವರಿಸುತ್ತಾ ಹೋಗುತ್ತಾರೆ. ಇಲ್ಲಿ ಎಲ್ಲಾ ಪ್ರಾಣಿಗಳು ಮಾನವರಂತೆ ಮಾತನಾಡುವುದರಿಂದ ಅವುಗಳು ಇನ್ನಷ್ಟು ಆಪ್ತರಾಗುತ್ತವೆ. ಈ ಕತೆಯ ಮುಖ್ಯ ಪಾತ್ರ ವಿನ್ನಿ ದಿ ಪೊಹ್ ಎನ್ನುವ ಕರಡಿಯು ತನ್ನ ಗೆಳೆಯರಾದ ಹಂದಿ ಮರಿ (Piglet), ಮೊಲ, ಕತ್ತೆ (Eeyore), ಟಿಗ್ಗೆರ್ (Tigger) ಎನ್ನುವ ಕಾಲ್ಪನಿಕ ಮಾನವರೂಪಿ ಆಟಿಕೆ ಹುಲಿಯಂತಹ ಪಾತ್ರ, ಗೂಬೆ, ಕಂಗ ಮತ್ತು ರೂ ಎನ್ನುವ ಪ್ರಾಣಿ ಪಕ್ಷಿಗಳ ಒಡನಾಟದಲ್ಲಿತ್ತು. ಈ ಎಲ್ಲಾ ಪ್ರಾಣಿಗಳ ಸಾಹಸಗಾಥೆ ನಡೆಯುವುದು ‘ಹಂಡ್ರೆಡ್ ಎಕರ್ ವುಡ್’ ಎನ್ನುವ ಕಾಲ್ಪನಿಕ ಅರಣ್ಯದಲ್ಲಿ ಎಂದು ಬಹಳ ಸೊಗಸಾಗಿ ಕಥೆ ಹೆಣೆದಿದ್ದಾರೆ ಮಿಲ್ನೆ. ಕ್ರಿಸ್ಟೋಫರ್ ರಾಬಿನ್ ಎನ್ನುವ ಪುಟ್ಟ ಹುಡುಗನೂ ಈ ಪ್ರಾಣಿಗಳ ಸಂಗಾತಿ. ಈ ಪುಸ್ತಕದಲ್ಲಿ ಹತ್ತು ಸಣ್ಣ ಕಥೆಗಳ ಸಂಗ್ರಹವಿದೆ. ಈ ಕಥೆಗಳಲ್ಲಿ ಪೊಹ್ ಎಂಬ ಕರಡಿಯು ಜೇನುತುಪ್ಪಕ್ಕಾಗಿ ಮರ ಹತ್ತುವುದು, ರಂಧ್ರದಲ್ಲಿ ಸಿಕ್ಕಿಹಾಕಿಕೊಳ್ಳುವುದು ಮತ್ತು ಪ್ರವಾಹದಿಂದ ಪಿಗ್ಲೆಟ್‌ನನ್ನು ರಕ್ಷಿಸುವಂತಹ ರೋಚಕ ಹಾಗೂ ಸುಂದರ ಕಥೆಗಳಿವೆ.
ಈ ಪುಟ್ಟ ಪ್ರಾಣಿಗಳ ಕಥೆಯಿಂದ ನಾವು ಕಲಿಯಬೇಕಾದದ್ದು ಬಹಳಷ್ಟಿದೆ. ಈ ಪ್ರಾಣಿಗಳ ಗೆಳೆತನ, ಒಗ್ಗಟ್ಟು ಹಾಗೂ ಆಕಾಂಕ್ಷೆಗಳು ಖುಷಿಕೊಡುತ್ತವೆ. ನಾವೂ ಆ ಪ್ರಾಣಿಗಳಂತೆ ಪ್ರೀತಿಯಿಂದ ಇರಬೇಕು ಎನ್ನುವ ಮಹದಾಸೆ ಮಕ್ಕಳಲ್ಲಿ ಮೂಡುತ್ತದೆ. ಈ ಕಥೆಯು ಕೇವಲ ಮಕ್ಕಳಿಗೆ ಮಾತ್ರವಲ್ಲ ಓದಿದ ಹಿರಿಯರಿಗೂ ಮೆಚ್ಚುಗೆಯಾಗುತ್ತದೆ. ಈ ಪೊಹ್ ಕತೆಯ ಹಲವಾರು ಸರಣಿಗಳು ಮಾರುಕಟ್ಟೆಯಲ್ಲಿವೆ. ಪೊಹ್ ಎನ್ನುವ ಈ ಕರಡಿಯು ಜಗತ್ತಿನಾದ್ಯಂತ ಗೆಳೆತನ ಹಾಗೂ ಕರುಣೆಯ ಸಂಕೇತವಾಗಿದೆ.
ಪೋಷಕರು ಈ ರಜೆಯಲ್ಲಾದರೂ ಇಂತಹ ಕಥೆ ಪುಸ್ತಕಗಳನ್ನು ಮಕ್ಕಳಿಗೆ ನೀಡಿ ಓದಲು ಪ್ರೇರೇಪಿಸಬೇಕು. ಓದುವ ಹವ್ಯಾಸ ಬೆಳೆಯುವಂತೆ ನೋಡಿದರೆ ಮಕ್ಕಳು ಟಿ ವಿ ಹಾಗೂ ಮೊಬೈಲ್ ನಿಂದ ತಕ್ಕಮಟ್ಟಿಗೆ ದೂರ ಉಳಿಯುತ್ತಾರೆ. ಕಥೆಗಳನ್ನು ಓದುತ್ತಾ ಅದರ ಪಾತ್ರಗಳನ್ನು, ಘಟನೆಗಳನ್ನು ಕಲ್ಪಿಸಿಕೊಳ್ಳುವ ಮಜಾ ಯಾವುದೇ ದೃಶ್ಯ ಮಾಧ್ಯಮಗಳಲ್ಲಿ ಸಿಗುವುದಿಲ್ಲ. ಹಾಗಾದರೆ ಇನ್ನೇಕೆ ತಡ ಮಕ್ಕಳೇ, ಒಂದು ಪುಸ್ತಕವನ್ನು ಕೈಗೆತ್ತಿ ಓದಲು ಪ್ರಾರಂಭಿಸಿ…
(ಇನ್ನಷ್ಟು ಪುಸ್ತಕಗಳ ಪರಿಚಯ ಮುಂದಿನ ವಾರ)
ಚಿತ್ರ ಕೃಪೆ: ದಿ ನ್ಯೂಯಾರ್ಕ್ ಟೈಮ್ಸ್ ಜಾಲತಾಣದಿಂದ
ಪದವಿನಂಗಡಿ, ಬೊಂದೇಲ್
ಮಂಗಳೂರು, ದಕ್ಷಿಣಕನ್ನಡ ಜಿಲ್ಲೆ
ಮೊ : +91 94482 53815
******************************************