-->
ಆಟಿಸಂ ಇರುವವರೂ ನಮ್ಮಂತೆಯೇ ಸಾಮಾನ್ಯರು.

ಆಟಿಸಂ ಇರುವವರೂ ನಮ್ಮಂತೆಯೇ ಸಾಮಾನ್ಯರು.

ಮಕ್ಕಳ ಜಗಲಿಯಲ್ಲಿ ವಿಶೇಷ ಲೇಖನ : ಆಟಿಸಂ ಇರುವವರೂ ನಮ್ಮಂತೆಯೇ ಸಾಮಾನ್ಯರು
ಲೇಖಕರು : ಗಿರೀಶ್ ಎಂ ಎನ್ 
ಕೌನ್ಸೆಲಿಂಗ್ ಮನಶಾಸ್ತ್ರಜ್ಞರು 
ಮಡಿಲು ಕೌನ್ಸಿಲಿಂಗ್ ಪಾಯಿಂಟ್ ಅಚ್ಲಾಡಿ
ಉಡುಪಿ ಜಿಲ್ಲೆ
Mob : 8722715472


ಏಪ್ರಿಲ್ 2 - ವಿಶ್ವ ಆಟಿಸಂ ಜಾಗೃತಿ ದಿನ. ಪ್ರತಿವರ್ಷ ಏಪ್ರಿಲ್ 2 ರಂದು ವಿಶ್ವ ಆಟಿಸಂ ಜಾಗೃತಿ ದಿನವನ್ನು ವಿಶ್ವಾದ್ಯಂತ ಆಚರಿಸಲಾಗುತ್ತದೆ. "ಆಟಿಸಂ ಮತ್ತು ಮಾನವತೆ – ಪ್ರತಿಯೊಬ್ಬರ ಜೀವನ ಅಮೂಲ್ಯ” ಎಂಬದು ಈ ವರ್ಷದ ಧ್ಯೇಯ ವಾಕ್ಯವಾಗಿದೆ.

ಆಟಿಸಂ ಹೊಂದಿರುವವರು ಸಮಾಜದ ಅವಿಭಾಜ್ಯ ಅಂಗವಾಗಿದ್ದು, ಅವರು ಅರ್ಥಪೂರ್ಣ ಮತ್ತು ಗೌರವಯುತ ಜೀವನವನ್ನು ನಡೆಸಲು ಸಾಧ್ಯವಾಗುವಂತೆ ಅವರ ಜೀವನದ ಗುಣಮಟ್ಟವನ್ನು ಸುಧಾರಿಸುವ ಅಗತ್ಯವನ್ನು ಜನರಿಗೆ ತಿಳಿಸಲು ಈ ದಿನವನ್ನು ಆಚರಿಸಲಾಗುತ್ತದೆ. ಈ ಮೂಲಕ ಆಟಿಸಂ ಬಗ್ಗೆ ಜಾಗೃತಿ ಹೆಚ್ಚಿಸುವುದು, ಅವರ ಹಕ್ಕುಗಳನ್ನು ರಕ್ಷಿಸುವುದು ಹಾಗೂ ಸಮಾಜದಲ್ಲಿ ಸಮಾನ ಅವಕಾಶಗಳನ್ನು ಒದಗಿಸುವ ಮಹತ್ವವನ್ನು ಎತ್ತಿ ತೋರಿಸುವುದು ಈ ಆಚರಣೆಯ ಮುಖ್ಯ ಉದ್ದೇಶ.

ಆಟಿಸಂ ಎಂದರೇನು...?

“ಆಟಿಸಂ" ಎನ್ನುವುದು ಬೆಳವಣಿಗೆಯೊಂದಿಗಿನ ಒಂದು ಸ್ಥಿತಿಯಾಗಿದ್ದು, ಇದರಲ್ಲಿ ವ್ಯಕ್ತಿಗೆ ಸಾಮಾಜಿಕವಾಗಿ ಬೆರೆಯುವುದು, ಸಂವಹನ ಮಾಡುವುದು ಕಷ್ಟವಾಗಬಹುದು. ಇದರೊಂದಿಗೆ ಒಂದೇ ರೀತಿಯ ವರ್ತನೆಗಳನ್ನು ಪುನರಾವರ್ತಿಸುತ್ತಿರಬಹುದು.

ಆಟಿಸಂ ಎಂದು ಗುರುತಿಸಲು 3 ವರ್ಷ ವಯಸ್ಸಿನೊಳಗೆ ಮಗುವಿನಲ್ಲಿ ಕೆಳಗಿನ ವಿಭಾಗಗಳಲ್ಲಿ ಅಸಾಮಾನ್ಯ ಅಥವಾ ಅಸಮರ್ಪಕ ಬೆಳವಣಿಗೆ ಕಾಣಬೇಕು:

I. ಸಾಮಾಜಿಕ ಸಂಪರ್ಕ (Social interaction)

II. ಸಾಮಾಜಿಕ ಸಂವಹನಕ್ಕಾಗಿ ಭಾಷೆಯ ಬಳಕೆ 
(Communication) 

III. ಕಲ್ಪನಾತ್ಮಕ ಆಟ (Imaginative play)

1. ಸಾಮಾಜಿಕ ಸಂಪರ್ಕ (Social interaction)

ಕಣ್ಣುಗಳ ನಡುವಿನ ಸಂಪರ್ಕ ಕೊರತೆ, ಮುಖಭಾವ ವ್ಯಕ್ತಪಡಿಸುವಲ್ಲಿ ತೊಡಕು, ಅಂಗಸೂಚನೆಗಳು ಮತ್ತು ದೇಹಭಾಷೆಯನ್ನು ಸರಿಯಾಗಿ ಬಳಸದೆ ಇರುವುದು. ಸಮವಯಸ್ಕರೊಂದಿಗೆ ಸಂಬಂಧ ಬೆಳೆಸಲು ಕಷ್ಟವಾಗುವುದು. ಸಂತೋಷ, ಆಸಕ್ತಿ ಅಥವಾ ಸಾಧನೆಗಳನ್ನು ಇತರರೊಂದಿಗೆ ಹಂಚಿಕೊಳ್ಳದಿರುವುದು. ಸಾಮಾಜಿಕ ಅಥವಾ ಭಾವನಾತ್ಮಕ ಪ್ರತಿಕ್ರಿಯೆಯ ಕೊರತೆ.

2. ಸಾಮಾಜಿಕ ಸಂವಹನಕ್ಕಾಗಿ ಭಾಷೆಯ ಬಳಕೆ 
ಮಾತಿನ ಬೆಳವಣಿಗೆಯಲ್ಲಿ ವಿಳಂಬ ಅಥವಾ ಮಾತಿನ ಕೊರತೆ.
ಸಂಭಾಷಣೆಯನ್ನು ಆರಂಭಿಸಲು ಅಥವಾ ಮುಂದುವರಿಸಲು ಕಷ್ಟ. ಪುನರಾವರ್ತಿತ ಏಕ ರೀತಿಯ ಭಾಷೆ ಬಳಕೆ.


3. ಕಲ್ಪನಾತ್ಮಕ ಆಟ (Imaginative play)
ಕಲ್ಪನೆ ಮತ್ತು ಚಿಂತನೆ ಸಮಸ್ಯೆ
ಒಂದು ವಸ್ತುವನ್ನು ಮತ್ತೊಂದು ವಸ್ತುವಾಗಿ ಊಹಿಸುವುದು (ಉದಾ: ಕಡ್ಡಿಯನ್ನು ಕತ್ತಿಯಾಗಿ ಬಳಸುವುದು) ಅವರಿಗೆ ಕಷ್ಟವಾಗುತ್ತದೆ. ಕಲ್ಪನಾ ಆಟದಲ್ಲಿ “ಡಾಕ್ಟರ್–ರೋಗಿ”, “ಶಿಕ್ಷಕ–ವಿದ್ಯಾರ್ಥಿ” ಇತ್ಯಾದಿ ಪಾತ್ರಗಳನ್ನು ನಿರ್ವಹಿಸಲು ಇತರರ ಭಾವನೆಗಳನ್ನು ಅರ್ಥಮಾಡಿಕೊಳ್ಳಲು ಕಷ್ಟವಾಗುತ್ತದೆ.


ಆಟಿಸಂ ಸ್ಪೆಕ್ಟ್ರಮ್ ಡಿಸಾರ್ಡರ್‌ಗೆ ಕಾರಣಗಳು?

ಆಟಿಸಂ ಸ್ಪೆಕ್ಟ್ರಮ್ ಡಿಸಾರ್ಡರ್‌ಗೆ ಒಂದೇ ಕಾರಣವಿಲ್ಲ; ಇದು ಹಲವು ಅಂಶಗಳ ಸಂಯೋಜನೆಯ ಫಲಿತಾಂಶ. ಮುಖ್ಯವಾಗಿ ವಂಶವಾಹಿ (Genetic) ಕಾರಣಗಳು ಪ್ರಮುಖವಾಗಿದ್ದು, ಕುಟುಂಬ ಕೆಲವು ಜೀನ್ಸ್‌ಗಳು ಮೆದುಳಿನ ಬೆಳವಣಿಗೆಯನ್ನು ಪ್ರಭಾವಿಸುತ್ತವೆ, ಪರಿಸರ ಅಂಶಗಳು (ಗರ್ಭಾವಸ್ಥೆಯ ಸಮಸ್ಯೆಗಳು), ತಾಯಿ-ತಂದೆಯ ಹೆಚ್ಚಿನ ವಯಸ್ಸು, ಹಾಗೂ ಅವಧಿಗೂ ಮುಂಚೆ ಜನನ ಮತ್ತು ಕಡಿಮೆ ಜನನ ತೂಕ ಇವುಗಳೂ ಆಟಿಸಂ ಅಪಾಯವನ್ನು ಹೆಚ್ಚಿಸುತ್ತವೆ.

ಆಟಿಸಂ ಇರುವ ಮಕ್ಕಳಿಗೆ ಸಹಪಾಠಿಗಳೊಂದಿಗೆ ಎದುರಾಗುವ ಸವಾಲುಗಳು..

▪️ಸ್ನೇಹಿತರನ್ನು ಮಾಡಿಕೊಳ್ಳಲು ಕಷ್ಟ ಪಡುವುದು. 

▪️ಸಹಪಾಠಿಗಳೊಂದಿಗೆ ಸಂಭಾಷಣೆ ಆರಂಭಿಸಲು ತೊಡಕುಂಟಾಗುವುದು.

▪️ಸಾಮಾಜಿಕ ಸೂಚನೆಗಳು (facial expressions, gestures) ಅರ್ಥಮಾಡಿಕೊಳ್ಳಲು ಕಷ್ಟಪಡುವುದು

▪️ಗುಂಪು ಆಟಗಳಲ್ಲಿ ಭಾಗವಹಿಸಲು ತೊಡಕುಂಟಾಗುವುದು
 
▪️ತಮ್ಮ ಭಾವನೆಗಳನ್ನು ಸರಿಯಾಗಿ ವ್ಯಕ್ತಪಡಿಸಲು ಹಾಗೂ ಇತರರ ಭಾವನೆಗಳನ್ನು ಅರ್ಥಮಾಡಿಕೊಳ್ಳಲು ಕಷ್ಟಪಡುವುದು.

▪️ಸಹಪಾಠಿಗಳಿಂದ ಟೀಕೆ ಅಥವಾ ಹೀಯಾಳಿಕೆ (bullying). ಒಂಟಿತನ ಅಥವಾ ಗುಂಪಿನಿಂದ ದೂರವಾಗುವ ಪರಿಸ್ಥಿತಿ

▪️ಆಟದ ನಿಯಮಗಳನ್ನು ಅರ್ಥಮಾಡಿಕೊಳ್ಳಲು ವಿಫಲರಾಗುವುದು.

▪️ತಮ್ಮ ಆಸಕ್ತಿಗಳ ಬಗ್ಗೆ ಮಾತ್ರ ಮಾತನಾಡುವ ಪ್ರವೃತ್ತಿ. ತಪ್ಪು ಅರ್ಥಮಾಡಿಕೊಳ್ಳುವಿಕೆಗಳಿಂದ ಜಗಳಗಳು ಸ್ನೇಹವನ್ನು ದೀರ್ಘಕಾಲ ಉಳಿಸಿಕೊಳ್ಳಲು ಸವಾಲನ್ನು ಎದುರಿಸುವುದು.

◼️ಆಟಿಸಂ ಸ್ಪೆಕ್ಟ್ರಮ್ ಡಿಸಾರ್ಡರ್( Autism Spectrum Disorder) ಇರುವ ಮಕ್ಕಳಿಗೆ ಸಹಪಾಠಿಗಳು ಹೇಗೆ ಸಹಾಯ ಮಾಡಬಹುದು....?

▪️ ಸ್ನೇಹಪೂರ್ಣವಾಗಿ ವರ್ತಿಸಬೇಕು ಅವರನ್ನು ಬೇರೆ ಮಾಡದೇ, ಎಲ್ಲರಂತೆ ಮಾತನಾಡಿ ಮತ್ತು ಆಟಕ್ಕೆ ಸೇರಿಸಿಕೊಳ್ಳಬೇಕು.

▪️ಸರಳ ಮತ್ತು ಸ್ಪಷ್ಟವಾಗಿ ಮಾತನಾಡಬೇಕು
ಸಣ್ಣ ವಾಕ್ಯಗಳಲ್ಲಿ ನಿಧಾನವಾಗಿ ಹೇಳಿದರೆ ಅವರಿಗೆ ಅರ್ಥ ಮಾಡಿಕ್ಕೊಳ್ಳಲು ಸುಲಭವಾಗುತ್ತದೆ.

▪️ಕಲ್ಪನಾ ಆಟ ಅಥವಾ ಗುಂಪು ಚಟುವಟಿಕೆಗಳಲ್ಲಿ ಅವರಿಗೆ ಪಾತ್ರ ಕೊಟ್ಟು ಸೇರಿಸಬೇಕು.ಸಹನೆ ತೋರಬೇಕು
ಅವರು ತಕ್ಷಣ ಪ್ರತಿಕ್ರಿಯಿಸದಿದ್ದರೂ ಕಾದು ನೋಡಬೇಕು.

▪️ಸರಿಯಾದ ವರ್ತನೆ, ಮಾತು, ಆಟವನ್ನು ತೋರಿಸಿ ಕಲಿಯಲು ಸಹಾಯ ಮಾಡಬಹುದು.
ನಿಯಮಗಳನ್ನು ಅರ್ಥವಾಗುವಂತೆ ತಿಳಿಸಬೇಕು
ಆಟದ ನಿಯಮಗಳನ್ನು ಹಂತ ಹಂತವಾಗಿ ತಿಳಿಸಿದರೆ ಅವರು ಸುಲಭವಾಗಿ ಪಾಲಿಸಬಹುದು. ಇದರ ಜೊತೆಗೆ ಪ್ರೋತ್ಸಾಹ ನೀಡವ ಮೂಲಕ ಚಿಕ್ಕ ಸಾಧನೆಯನ್ನೂ ಮೆಚ್ಚಿ, “ಚೆನ್ನಾಗಿ ಮಾಡಿದ್ದೀಯ” ಎಂದು ಉತ್ತೇಜಿಸಬೇಕು.

▪️ಸಹಾನುಭೂತಿ (empathy) ಇರಲಿ
ಅವರ ಭಾವನೆಗಳನ್ನು ಅವರ ಸ್ಥಾನದಲ್ಲಿ ನಿಂತು ಅರ್ಥಮಾಡಿಕೊಳ್ಳಲು ಪ್ರಯತ್ನಿಸಬೇಕು.
ಒತ್ತಡ ಹೇರಬಾರದು ಅವರಿಗೆ ತೊಡಕುಂಟು ಮಾಡುವ ಚಟುವಟಿಕೆಗಳಿಗೆ ಬಲವಂತ ಮಾಡಬಾರದು. ಅರ್ಥಮಾಡಿಕೊಳ್ಳಲು ಶಿಕ್ಷಕರಿಂದ ಮಾರ್ಗದರ್ಶನ ಪಡೆಯಬಹುದು.

◼️ಆಟಿಸಂ ಮಕ್ಕಳ ಪೋಷಕರ ಸವಾಲುಗಳು..

▪️ಮಗುವಿನ ಸ್ಥಿತಿಯನ್ನು ಒಪ್ಪಿಕೊಳ್ಳುವುದು
▪️ಸಂವಹನದ ಸಮಸ್ಯೆ
▪️ವರ್ತನೆ ನಿರ್ವಹಣೆಯ ಕಷ್ಟ
▪️ಸಾಮಾಜಿಕ ತಪ್ಪುಅರ್ಥಗಳು
▪️ಆರ್ಥಿಕ ಒತ್ತಡ
▪️ಸಮಯದ ಒತ್ತಡ
▪️ಕುಟುಂಬದ ಸಮತೋಲನ ಕಾಯ್ದುಕೊಳ್ಳುವ ಸವಾಲು.
▪️ಸರಿಯಾದ ಶಿಕ್ಷಣ ಆಯ್ಕೆ ಮಾಡುವ ಕಷ್ಟ
▪️ಪೋಷಕರ ಮಾನಸಿಕ ಒತ್ತಡ
▪️ಮಗುವಿನ ಭವಿಷ್ಯದ ಬಗ್ಗೆ ಚಿಂತೆ
▪️ಸಮಾಜದ ಬೆಂಬಲದ ಕೊರತೆ
▪️ಮಗುವಿನ ಭದ್ರತೆ ಬಗ್ಗೆ ಚಿಂತೆ

◼️ಪೋಷಕರಿಗೆ ತಜ್ಞರು ಸೂಚಿಸುವ ಪ್ರಮುಖ ಪರಿಹಾರಗಳು..
1. ಆರಂಭಿಕ ಲಕ್ಷಣಗಳನ್ನು ಬೇಗ ಪತ್ತೆ ಹಚ್ಚುವುದು (Early Identification and Intervention). ಮಗುವಿನಲ್ಲಿ ಆಟಿಸಂ ಲಕ್ಷಣಗಳನ್ನು ಬೇಗ ಗುರುತಿಸುವುದು ಬಹಳ ಮುಖ್ಯ. ಬಾಲ್ಯದಲ್ಲಿಯೇ ಸ್ಪೀಚ್ ಥೆರಪಿ, ಆಕ್ಯುಪೇಷನಲ್ ಥೆರಪಿ ಮತ್ತು ಬಿಹೇವಿಯರ್ ಥೆರಪಿ ಪ್ರಾರಂಭಿಸಿದರೆ ಮಗುವಿನ ಸಂವಹನ, ಸಾಮಾಜಿಕ ಕೌಶಲ್ಯ ಮತ್ತು ಕಲಿಕೆಯ ಸಾಮರ್ಥ್ಯವು ಉತ್ತಮವಾಗಿ ಅಭಿವೃದ್ಧಿಯಾಗಲು ಸಾಧ್ಯವಿದೆ.

2. ನಿಯಮಿತ ದಿನಚರಿ ರೂಪಿಸುವುದು (Structured Routine). ಆಟಿಸಂ ಇರುವ ಮಕ್ಕಳಿಗೆ ನಿಯಮಿತ ಮತ್ತು ಪೂರ್ವನಿರ್ಧರಿತ ದಿನಚರಿ ಇದ್ದರೆ ಭದ್ರತೆ ಮತ್ತು ಸ್ಥಿರತೆಯ ಭಾವನೆ ಉಂಟಾಗುತ್ತದೆ. ಊಟ, ಆಟ, ಅಧ್ಯಯನ ಮತ್ತು ನಿದ್ರೆಗೆ ನಿರ್ದಿಷ್ಟ ಸಮಯ ಇರಿಸುವುದು ಅವರ ಆತಂಕವನ್ನು ಕಡಿಮೆ ಮಾಡುತ್ತದೆ.

3. ಸಂವಹನ ಕೌಶಲ್ಯಗಳನ್ನು ಉತ್ತೇಜಿಸುವುದು (Develop Communication Skills). ಮಗುವಿಗೆ ಮಾತನಾಡಲು ಕಷ್ಟ ಇದ್ದರೆ ಚಿತ್ರಗಳು, ಸಂಜ್ಞೆಗಳು ಅಥವಾ ಇತರ ಪರ್ಯಾಯ ಸಂವಹನ ವಿಧಾನಗಳನ್ನು ಬಳಸಬಹುದು. ಸ್ಪೀಚ್ ಥೆರಪಿ ಮೂಲಕ ನಿಧಾನವಾಗಿ ಮಾತಿನ ಕೌಶಲ್ಯಗಳನ್ನು ಬೆಳೆಸಬಹುದು.

4. ಧನಾತ್ಮಕ ವರ್ತನೆಯನ್ನು ಉತ್ತೇಜಿಸುವುದು (Positive Reinforcement). ಮಗು ಉತ್ತಮ ವರ್ತನೆ ತೋರಿಸಿದಾಗ ಪ್ರಶಂಸೆ, ಸಣ್ಣ ಬಹುಮಾನ ಅಥವಾ ಉತ್ತೇಜನ ನೀಡುವುದರಿಂದ ಆ ವರ್ತನೆ ಮರುಕಳಿಸುವ ಸಾಧ್ಯತೆ ಹೆಚ್ಚಾಗುತ್ತದೆ. ಇದು ವರ್ತನೆ ಸುಧಾರಣೆಗೆ ಪರಿಣಾಮಕಾರಿ ವಿಧಾನವಾಗಿದೆ.

5. ಇಂದ್ರಿಯ ಸಂವೇದನೆಗೆ ಹೊಂದಾಣಿಕೆ ಮಾಡುವುದು (Sensory Support). ಕೆಲವು ಮಕ್ಕಳಿಗೆ ಶಬ್ದ, ಬೆಳಕು ಅಥವಾ ಸ್ಪರ್ಶಗಳಿಗೆ ಹೆಚ್ಚು ಸಂವೇದನಶೀಲರಾಗಿರಬಹುದು . ಆದ್ದರಿಂದ ಶಾಂತ ಮತ್ತು ನಿಯಂತ್ರಿತ ಪರಿಸರವನ್ನು ಸೃಷ್ಟಿಸುವುದು, ಅಗತ್ಯ.

6. ಪೋಷಕರಿಗೆ ತರಬೇತಿ (Parent Training). ಪೋಷಕರು ತಜ್ಞರಿಂದ ಮಾರ್ಗದರ್ಶನ ಮತ್ತು ತರಬೇತಿ ಪಡೆದರೆ ಮಗುವಿನ ವರ್ತನೆ ಮತ್ತು ಅಭಿವೃದ್ಧಿಯನ್ನು ಹೇಗೆ ನಿರ್ವಹಿಸಬೇಕು ಎಂಬುದನ್ನು ಉತ್ತಮವಾಗಿ ಅರ್ಥಮಾಡಿಕೊಳ್ಳಬಹುದು ಹಾಗೂ ಮಗುವಿಗೆ ಮನೆಯಲ್ಲಿಯೇ ಪರಿಣಾಮಕಾರಿ ತರಬೇತಿ ನೀಡಲು ಸಾಧ್ಯವಾಗುತ್ತದೆ.

7. ಸಾಮಾಜಿಕ ಕೌಶಲ್ಯಗಳನ್ನು ಅಭ್ಯಾಸ ಮಾಡಿಸುವುದು (Social Skills Practice). ಆಟಗಳು, ಗುಂಪು ಚಟುವಟಿಕೆಗಳು ಮತ್ತು ಸಹಪಾಠಿಗಳೊಂದಿಗೆ ಸಂವಹನದ ಮೂಲಕ ಮಕ್ಕಳಿಗೆ ಸಾಮಾಜಿಕ ಕೌಶಲ್ಯಗಳನ್ನು ಕಲಿಸಬಹುದು. ಇದು ಸ್ನೇಹ ಸಂಬಂಧಗಳನ್ನು ನಿರ್ವಹಿಸಲು ಸಹಾಯ ಮಾಡುತ್ತದೆ.

8. ಬೆಂಬಲ ಗುಂಪುಗಳೊಂದಿಗೆ ಸಂಪರ್ಕ (Support Groups). ಇತರ ಪೋಷಕರೊಂದಿಗೆ ಅನುಭವ ಹಂಚಿಕೊಳ್ಳುವುದು, ಸಲಹೆ ಪಡೆಯುವುದು ಮತ್ತು ಪರಸ್ಪರ ಬೆಂಬಲ ವಿನಿಮಯ ಮಾಡಿಕೊಳ್ಳುವುದು ಪೋಷಕರಿಗೆ ಭಾವನಾತ್ಮಕವಾಗಿ ಸಹಾಯಕವಾಗುತ್ತದೆ.

9. ಪೋಷಕರ ಸ್ವಯಂ ಆರೈಕೆ (Self-care for Parents). ಪೋಷಕರು ತಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಅತ್ಯಂತ ಮುಖ್ಯ. ವಿಶ್ರಾಂತಿ, ವ್ಯಾಯಾಮ ಮತ್ತು ಮನೋವೈದ್ಯಕೀಯ ಬೆಂಬಲವು ಒತ್ತಡವನ್ನು ಕಡಿಮೆ ಮಾಡುತ್ತದೆ.

10. ದೀರ್ಘಕಾಲದ ಯೋಜನೆ (Long-term Planning). ಮಗುವಿನ ಶಿಕ್ಷಣ, ವೃತ್ತಿ ಕೌಶಲ್ಯಗಳು ಮತ್ತು ಸ್ವಾವಲಂಬನೆಯ ಬಗ್ಗೆ ಯೋಜನೆ ರೂಪಿಸುವುದು ಅಗತ್ಯ. ಇದರಿಂದ ಭವಿಷ್ಯದಲ್ಲಿ ಮಗುವಿಗೆ ಸ್ವತಂತ್ರ ಮತ್ತು ಅರ್ಥಪೂರ್ಣ ಜೀವನ ನಡೆಸಲು ಸಹಾಯವಾಗುತ್ತದೆ.

◼️ಮನೋವೈದ್ಯರ ನೆರವು ಬೇಕಾಗುವ ಸಂದರ್ಭಗಳು...

▪️ಸ್ವಯಂಹಾನಿ ಅಥವಾ ಇತರರಿಗೆ ಹಾನಿ ಮಾಡುವ ವರ್ತನೆ.

▪️ತೀವ್ರ ಆತಂಕ ಅಥವಾ ಖಿನ್ನತೆ ಲಕ್ಷಣಗಳು.

▪️ಹಠಾತ್ ಕೌಶಲ್ಯ ಹಿನ್ನಡೆ (ಮಾತು, ಸಾಮಾಜಿಕ ಕೌಶಲ್ಯಗಳಲ್ಲಿ ಗಣನೀಯ ಕುಸಿತ).

▪️ತೀವ್ರ ನಿದ್ರೆ ಅಥವಾ ಆಹಾರ ವ್ಯತ್ಯಾಸಗಳು (ಆರೋಗ್ಯಕ್ಕೆ ಪರಿಣಾಮ ಬೀಳುವ ಮಟ್ಟದಲ್ಲಿ)

◼️ಸಹ-ಅನಾರೋಗ್ಯ ಸ್ಥಿತಿ (comorbid conditions) – ಉದಾ: ಅತಿ ಚಟುವಟಿಕೆಯ ತೊಂದರೆ ಮತ್ತು ಅಪಸ್ಮಾರ.

▪️ಶಾಲೆ ಅಥವಾ ದಿನನಿತ್ಯ ಕಾರ್ಯಗಳಲ್ಲಿ ನಿರಂತರ ಸವಾಲುಗಳು ಎದುರಾದಾಗ 

▪️ಔಷಧಿ ಬೇಕೆನಿಸುವ ಮಟ್ಟದ ವರ್ತನೆ/ಭಾವನಾತ್ಮಕ ಸಮಸ್ಯೆಗಳು.

▪️ಹಠಾತ್ ಮತ್ತು ಸ್ಪಷ್ಟ ಕಾರಣವಿಲ್ಲದ ವರ್ತನೆ ಬದಲಾವಣೆ.

ಆಟಿಸಂ ಇರುವವರು ನಮ್ಮ ಸಮಾಜದ ಅವಿಭಾಜ್ಯ ಅಂಗವಾಗಿದ್ದು, ಅವರನ್ನು “ಬೇರೆ” ಎಂದು ನೋಡುವುದಕ್ಕಿಂತ “ವೈವಿಧ್ಯತೆಯ ಭಾಗ” ಎಂದು ಸ್ವೀಕರಿಸುವುದು ಅತ್ಯಗತ್ಯ. ಪ್ರತಿಯೊಬ್ಬ ಆಟಿಸಂ ಹೊಂದಿರುವ ವ್ಯಕ್ತಿಯೂ ತಮ್ಮದೇ ಆದ ವಿಶಿಷ್ಟ ಶಕ್ತಿಗಳು, ಆಸಕ್ತಿಗಳು ಮತ್ತು ಸಾಮರ್ಥ್ಯಗಳನ್ನು ಹೊಂದಿದ್ದು, ಸರಿಯಾದ ಮಾರ್ಗದರ್ಶನ ಮತ್ತು ಬೆಂಬಲ ದೊರೆತರೆ ಅವರು ಜೀವನದಲ್ಲಿ ಮಹತ್ತರ ಸಾಧನೆಗಳನ್ನು ಮಾಡಬಲ್ಲರು. ಅವರಿಗೆ ಅಗತ್ಯವಿರುವುದು ಕೇವಲ ಚಿಕಿತ್ಸೆ ಮಾತ್ರವಲ್ಲ, ಅರ್ಥಮಾಡಿಕೊಳ್ಳುವಿಕೆ, ಸಹಾನುಭೂತಿ, ಮತ್ತು ಸಮಾನ ಅವಕಾಶಗಳ ವಾತಾವರಣ.

ಕುಟುಂಬ, ಶಾಲೆ ಮತ್ತು ಸಮಾಜ — ಎಲ್ಲಾ ಒಟ್ಟು ಸೇರಿ ಸಹಕಾರದ ಮನೋಭಾವದಿಂದ ಮುಂದೆ ಬಂದಾಗ, ಆಟಿಸಂ ಇರುವವರು ತಮ್ಮ ಆತ್ಮವಿಶ್ವಾಸವನ್ನು ಬೆಳೆಸಿಕೊಂಡು, ಸ್ವಾವಲಂಬಿಯಾಗಿ, ಗೌರವಯುತವಾಗಿ ಬದುಕಲು ಸಾಧ್ಯವಾಗುತ್ತದೆ.
................................... ಗಿರೀಶ್ ಎಂ ಎನ್ 
ಕೌನ್ಸೆಲಿಂಗ್ ಮನಶಾಸ್ತ್ರಜ್ಞರು 
ಮಡಿಲು ಕೌನ್ಸಿಲಿಂಗ್ ಪಾಯಿಂಟ್ ಅಚ್ಲಾಡಿ
ಉಡುಪಿ ಜಿಲ್ಲೆ
Mob : 8722715472
******************************************



Ads on article

Advertise in articles 1

advertising articles 2

Advertise under the article