-->
ಜೀವನ ಸಂಭ್ರಮ : ಸಂಚಿಕೆ - 235

ಜೀವನ ಸಂಭ್ರಮ : ಸಂಚಿಕೆ - 235

ಜೀವನ ಸಂಭ್ರಮ : ಸಂಚಿಕೆ - 235
ಲೇಖಕರು : ಎಂ.ಪಿ. ಜ್ಞಾನೇಶ್ 
ಶಿಕ್ಷಣಾಧಿಕಾರಿ 
ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ
(ಮಧ್ಯಾಹ್ನ ಉಪಹಾರ ಯೋಜನೆ) 
ಜಿಲ್ಲಾ ಪಂಚಾಯತ್ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ 
                                                                 

ಮಕ್ಕಳೇ... ಸಿದ್ಧಿ ಎಂದರೆ ಶ್ರೇಷ್ಠವಾದ ಗುರಿ. ಗುರಿ ಸಾಧಿಸಲು ಸಾಧನೆ ಬಹಳ ಮಹತ್ವದ್ದು. ಸಾಧನೆ ಯಾವಾಗಲೂ ನಿರಂತರವಾಗಿ ದೀರ್ಘಕಾಲದವರೆಗೆ ಸಾಗಬೇಕಾಗುತ್ತದೆ. ಒಳ್ಳೆಯ ಫಲ ಕೊಡಬೇಕಾದರೆ ಸಾಧನೆ ಉತ್ಸಾಹದಿಂದ ಕೂಡಿರಬೇಕು. ಸಾಧನೆಯ ಪ್ರತಿ ಹಂತದಲ್ಲೂ ಕ್ಷಣ ಕ್ಷಣದಲ್ಲೂ ನಮಗೆ ಸಂತೋಷ ಕೊಡಬೇಕು. 

ಒಬ್ಬ ಹಿಮದ ಬೆಟ್ಟ ಏರುತ್ತಾನೆ ಎಂದು ಭಾವಿಸಿ. ಅದರ ತುತ್ತ ತುದಿಗೆ ಹೋಗಬೇಕು ಅಂತ ಆತನ ಇಚ್ಛೆ. ಅದು ಒಂದು ದಿನದ ಸಾಧನೆ ಅಲ್ಲ. ನಿಧಾನವಾಗಿ ನಿಧಾನವಾಗಿ ವರ್ಷ ವರ್ಷಗಳ ಕಾಲ ಆತ ಬೆಟ್ಟವನ್ನು ಏರಿ ಇಳಿಯಬೇಕಾಗುತ್ತದೆ. ಮೊದಲನೇ ದಿನ ಎಷ್ಟು ಉತ್ಸಾಹ ಇತ್ತೋ, ಕೊನೆ ಕ್ಷಣದವರೆಗೆ ಆ ಉತ್ಸಾಹ ಉಳಿಯಬೇಕು. ಅಷ್ಟೇ ಅಲ್ಲ ಬೆಳೆಯುತ್ತಿರಬೇಕು. ಆ ಉತ್ಸಾಹವೇ ಅಂತಿಮವಾಗಿ ಆನಂದವಾಗಿ ಮಾರ್ಪಡುತ್ತದೆ. ಹೀಗೆ ಮಾಡಿದರೆ ಜೀವನಕ್ಕೊಂದು ಹೊಸ ಮೆರುಗು ಬರುತ್ತದೆ. ಜೀವನದ ಆಯಾಮಗಳು ಅರಳುತ್ತವೆ. 

ನಾವು ನೂರು ವರ್ಷ ಬದುಕುತ್ತೇವೆ. ಬದುಕು ಸಾಧನೆಯಾಗಬೇಕು. ಬದುಕು ಸಿದ್ದಿಯೂ ಆಗಬೇಕು. ಈ ಕ್ಷಣದ ಸಾಧನೆಯ ಸಿದ್ದಿ ಈ ಕ್ಷಣದ ಕೊನೆ ಅಲ್ಲೇ ಅನುಭವಿಸಬೇಕು. ಹಾಗೆ ಪ್ರತಿ ಕ್ಷಣ ಸಾಧನೆ ಸಿದ್ದಿ ಸಾಧನೆ ಸಿದ್ಧಿ. ಈ ಪ್ರವಾಹದಿಂದ ಜೀವನ ಸಾಗಬೇಕಾಗುತ್ತದೆ. ನಮ್ಮ ಸಿದ್ಧಿ ಯಾವುದೆಂದರೆ ಪ್ರತಿ ಕ್ಷಣವನ್ನು ಆನಂದದಿಂದ ತುಂಬುವುದು. ಪ್ರತಿ ಕ್ಷಣವನ್ನು ಪ್ರೇಮದಿಂದ ತುಂಬುವುದು. ಎಲ್ಲಾ ಸಿದ್ದಿಗಳಲ್ಲಿ ಅದು ಶ್ರೇಷ್ಠ. ಉದಾಹರಣೆಗೆ ಇಲ್ಲಿ ಒಂದು ಹೂವಿದೆ. ಅದು ಅರಳುವ ಕ್ಷಣ ಬೇರೆ, ಅದು ಸೌಂದರ್ಯ ಅಭಿವ್ಯಕ್ತಿ ಮಾಡುವ ಕ್ಷಣ ಬೇರೆಯಲ್ಲ. ಹೇಗೆ ಹೇಗೆ ಅರಳುತ್ತದೆ ಹಾಗೆ ಹಾಗೆ ಸೌಂದರ್ಯ ಅಭಿವ್ಯಕ್ತವಾಗುತ್ತದೆ. ಎಷ್ಟು ಹೂವಿನ ಕ್ಷಣಗಳೋ ಅಷ್ಟು ಮಧುರ ಕ್ಷಣಗಳು. ಮಧುರ ಕ್ಷಣಗಳನ್ನು ಅನುಭವಿಸುತ್ತಾ ಮನುಷ್ಯ ಬದುಕಬೇಕು. ಬದುಕು ಹೆಚ್ಚು ಅದ್ಭುತವಾಗಬೇಕು ಅಂದರೆ ಬಲ್ಲವರು ಹೇಳುತ್ತಾರೆ, ಇದೆ ಬದುಕು ಕೊನೆ ಇಲ್ಲದ ಅಮೃತವಾಗಬೇಕು. ಬದುಕು ನಿರಂತರ ಅದಕ್ಕೆ ಆದಿ ಅಂತ್ಯ ಇಲ್ಲ ಅನ್ನುವಷ್ಟು ಬದುಕು ಅರಳಬೇಕು. ಮನುಷ್ಯ ಬದುಕುವುದು ಒಂದು ಕ್ಷಣ. 

ಬುದ್ಧನ ಹತ್ತಿರ ಒಬ್ಬ ಶಿಷ್ಯ ಹೋಗಿ, ಕೇಳಿದ. ಜೀವನ ಅಂದರೆ ಏನು?. ಬುದ್ಧ ಹೇಳುತ್ತಾನೆ, "ಜೀವನ ಒಂದು ಕ್ಷಣ, ಎರಡು ಕ್ಷಣ ಕೂಡಿ ನಮ್ಮ ಹತ್ತಿರ ಬರುವುದಿಲ್ಲ. ಸಾವಿರ ಕ್ಷಣಗಳು ಒಂದೇ ಕ್ಷಣಕ್ಕೆ ಬರುವುದಿಲ್ಲ. ಪ್ರತಿ ಕ್ಷಣ ಕ್ಷಣ ಕ್ಷಣ ಬದುಕುವುದು. ಈ ಕ್ಷಣ ಹೋಯ್ತು ಅಂದರೆ ಹೋಯ್ತು ಅಷ್ಟೇ. ಬದುಕು ಅಂದರೆ ಈ ಕ್ಷಣದ ಬದುಕು. ನಾಳೆಯ ಬದುಕು ಎಂದು ಬರುವುದಿಲ್ಲ. ಇನ್ನೊಂದು ಕ್ಷಣದ ಬದುಕು ಈಗಿರುವುದಿಲ್ಲ. ಈ ಕ್ಷಣವನ್ನು ಸುಂದರ ಮಾಡಬೇಕು. ಈ ಕ್ಷಣವನ್ನು ಸಂತೋಷದಿಂದ ತುಂಬುವುದು. ಅದು ಜೀವನದ ಸಾಧನೆ. ಈ ಕ್ಷಣ ಎಷ್ಟು ಅದ್ಭುತ ಇರಬೇಕು ಅಂದರೆ ಆ ಕ್ಷಣ ಅಮೃತವಾಗಬೇಕು. ಆ ಕ್ಷಣ ಅಮೃತವಾಗಬೇಕು, ಅನಂತವಾಗಿರಬೇಕು. ಹಾಗೆ ಆ ಕ್ಷಣದಲ್ಲೇ ಬೆರೆತು ಹೋಗಬೇಕು. ಅಂತಹ ಜೀವನ ಸಾಗಬೇಕಾದರೆ ಮಧುರತೆ ಮನಸ್ಸನ್ನು ತುಂಬಬೇಕು. ಕಹಿ, ಹುಳಿ ಮನಸ್ಸಿನಲ್ಲಿ ತುಂಬಿದರೆ ಜೀವನ ಸಂತೋಷ ಹೇಗಾಗುತ್ತದೆ?. ಆನಂದ ಹೇಗೆ ಕೊಡುತ್ತದೆ?. ಎಷ್ಟೇ ಬುದ್ಧಿವಂತರು ಇರಬಹುದು?. ಎಷ್ಟೇ ಸಶಕ್ತರಿರಬಹುದು, ಬಲಾಢ್ಯರಿರಬಹುದು?. ಮಧುರತೆ ಹಾಗೆ ಬರುವುದಿಲ್ಲ. ಮಧುರತೆ ತುಂಬಬೇಕಾದರೆ ಮನಸ್ಸು ಹಸನಾಗಿರಬೇಕು. ಅಲ್ಲಿ ಪ್ರೇಮ ತುಂಬುತ್ತದೆ. ಅಂತಹ ಮಧುರ ಸಾಧನೆಯೇ ಭಕ್ತಿ ಸಾಧನೆ. ಮನಸ್ಸು ಮುಕ್ತ, ಹಗುರ ಮತ್ತು ಸರಳ ಸ್ವಚ್ಛವಾಗಿರಬೇಕು. ನೀರು ಇದೆ. ಸ್ವಚ್ಛ ಇದೆ. ನೀರನ್ನು ಯಾರು ನಿರ್ಮಾಣ ಮಾಡುವುದಿಲ್ಲ. ಆದರೆ ಹೊಲಸು ಕೂಡಿರುತ್ತದೆ. ಹೊಲಸು ಕೂಡಿದಾಗಲೂ ನೀರು ನೀರೆ. ಬೇಡದ್ದನ್ನು ತೆಗೆದಾಗ ನೀರು ಸ್ವಚ್ಚವೆ ಆಗುತ್ತದೆ. ಮೋಡದಿಂದ ಬೀಳುವ ನೀರು ಸ್ವಚ್ಛವೇ. ನಾವು ಹುಟ್ಟಿದಾಗ ಮನಸ್ಸು ಸ್ವಚ್ಛ ಮಧುರ. ಬದುಕು ಯಾವಾಗ ಆರಂಭ ಆಗುತ್ತದೊ ಆವಾಗ ಹೊಲಸು ಕೂಡುತ್ತದೆ. ಇದರರ್ಥ ನೀರು ಕೆಟ್ಟಿದೆ ಅಂತ ಅಲ್ಲ. ಮನಸ್ಸು ಕೆಟ್ಟತು ಅಂತ ಅಲ್ಲ. ಮನಸ್ಸಿನಲ್ಲಿ ಹೊಲಸು ಮಿಶ್ರಣ ಆಯಿತು. ಏನು ಮಿಶ್ರಣ ಆಯಿತೋ ಅದನ್ನು ತೆಗೆದು ಹಾಕಿದಾಗ ನೀರು ಸ್ವಚ್ಛ. ಬೇಕಾದ ನೀರು ತೆಗೆದುಕೊಳ್ಳಿ ಅದುH2O. ಅದರಲ್ಲಿ ಏನೂ ಸೇರುವುದಿಲ್ಲ. ಆದರೆ ಸೇರಿದಂತೆ ಆಗಿರುತ್ತದೆ. ಅದು ಒಳಗೆ ಭೇದಿಸುವುದಿಲ್ಲ. ನೀರಿನ ಕಣ ಕಣಗಳ ಮಧ್ಯೆ ಸೇರಿಕೊಂಡಿರುತ್ತದೆ. ನೀರಿನ ಅಂತರಂಗಕ್ಕೆ ತಿಳಿಯುವುದಿಲ್ಲ. ಎಷ್ಟೇ ಹೊಲಸು ನೀರಿರಲಿ, ಅದನ್ನು ಕಾಯಿಸಿದರೆ, ಸ್ವಚ್ಛ ನೀರು ಆವಿಯಾಗಿ ಹೊರಗೆ ಹೋಗೇಬಿಡುತ್ತದೆ. ಹೊಲಸು ಮಾತ್ರ ಕೆಳಗೆ ಉಳಿಯುತ್ತದೆ. ಹಾಗೆಯೇ ಮನಸ್ಸು. ಅದು ಯಾವಾಗಲೂ ಮಧುರ. ಹುಳಿಯಲ್ಲ. ಕಹಿಯಲ್ಲ. ಅಂತಹ ಅತ್ಯದ್ಭುತ ಮನಸ್ಸು ನಿಸರ್ಗದ ಕಾಣಿಕೆ. ಇದು ಅಪರೂಪದ ಅಮೂಲ್ಯ ಸಂಪತ್ತು. ಇದರಷ್ಟು ದೊಡ್ಡದು ಯಾವುದು ಇಲ್ಲ. ಮಧುರ ಭಾವ ಇದ್ದರೆ ಜಗತ್ತು ಮಧುರವಾಗುತ್ತದೆ. ನೋಡಿದ್ದೆಲ್ಲ ಮಧುರ ಅನಿಸುತ್ತದೆ. ಹೇಳಿದ್ದೆಲ್ಲ ಮಧುರವಾಗುತ್ತದೆ. ಹಾಗೆ ಅಷ್ಟು ಅದ್ಭುತ. ಭಾವ ಹೊಲಸಾದರೆ ಜಗತ್ತು ಹೊಲಸಾಗುತ್ತದೆ. ನೋಡಿದ್ದೆಲ್ಲ ಹೊಲಸು ಅನಿಸುತ್ತದೆ. ಕೇಳಿದ್ದೆಲ್ಲ ಹೊಲಸು ಅನಿಸುತ್ತದೆ. ಮಧುರ ಭಾವ ಅತ್ಯಂತ ಸ್ವಚ್ಛ ಇರುತ್ತದೆ. ಮತ್ತೆ ಪವಿತ್ರವಾಗಿರುತ್ತದೆ. ಸ್ವಚ್ಛವಾಗಿದ್ದರೆ ಸತ್ಯದರ್ಶನವಾಗುತ್ತದೆ. ನಾರದ ಮಹರ್ಷಿ ಹೇಳುತ್ತಾನೆ ಈ ಸ್ವಚ್ಛತೆ, ಪವಿತ್ರತೆ ಕಾಪಾಡಲು ಅವ್ಯಾವೃತ್ತ ಭಜನಾ, ವಸ್ತು ತ್ಯಾಗ, ಸಂಗತ್ಯಾಗ ನಿರಂತರ ಸಾಗಬೇಕು. ಅವ್ಯಾವೃತ್ತ ಭಜನಾ ಎಂದರೆ ಮನಸ್ಸು ಒಂದೇ ಕಡೆ ಹರಿಯಬೇಕು. ಅಲ್ಲಿ ಇಲ್ಲಿ ನಿಲ್ಲಬಾರದು. ನದಿ ಪ್ರಾರಂಭದಲ್ಲಿ ಸಣ್ಣದಾಗಿರುತ್ತದೆ. ಹರಿಯಲು ಪ್ರಾರಂಭಿಸುತ್ತದೆ. ಅದಕ್ಕೆ ಕೇಳಿ, ಎಲ್ಲಿ ಹೋಗುತ್ತೀಯ? ಅಂತ. ಅದು ಹೇಳುತ್ತದೆ "ಸಾಗರಕ್ಕೆ ಹೋಗುತ್ತೀನಿ ಅನ್ನುತ್ತದೆ. ಎಲ್ಲಿದೆ ಸಾಗರ ಅಂತ ಕೇಳಿದರೆ. ಅದು ಹೇಳುತ್ತದೆ ಅದರ ಬಗ್ಗೆ ಚಿಂತೆ ಇಲ್ಲ. ಎಲ್ಲಾದರೂ ಇರಲಿ ?.ಎಷ್ಟು ದೂರವಾದರೂ ಇರಲಿ ?.ಅದು ನನಗೆ ಮಹತ್ವದಲ್ಲ, ಹರಿಯೋದು ಮಹತ್ವದ್ದು ಅಷ್ಟೇ. ನನಗೆ ಗೊತ್ತಿದೆ ನಾನು ಹರಿಯುತ್ತಾ, ಹರಿಯುತ್ತಾ, ಹರಿಯುತ್ತಾ ಇದ್ದರೆ ಅದು ಎಲ್ಲೇ ಇರಲಿ ನಾನು ಹೋಗಿ ಅದು ತಲುಪುತ್ತೇನೆ. ಸಾಗರದೊಳಗೆ ಬೆರೆತು ಹೋಗುತ್ತೇನೆ. ನಾನು ಹರಿಯೋದಷ್ಟೇ ಕೆಲಸ. ಹಾಗೆ ಮಧುರ ಮನಸ್ಸು ಸದಾ ಹರಿಯುತ್ತಾ ಇದ್ದರೆ ಅದು ಮೇರೆ ಇಲ್ಲದ ಸತ್ಯ. ವಸ್ತುವಿನ ಸಾಗರದಲ್ಲಿ ಬೆರೆತು ಒಂದಾಗುತ್ತದೆ. ಪಕ್ಕ ಎಂದು ವಿಚಾರ ಮಾಡುವುದಿಲ್ಲ. ಎಲ್ಲಿ ಹೋಗಬೇಕು?. ಎಷ್ಟು ದೂರ ಹೋಗಬೇಕು?. ಎಷ್ಟು ದೂರ ಸಾಗಬೇಕು?. ಆತ ಈ ಕ್ಷಣವನ್ನು ಮಧುರ ಮಾಡಿಕೊಳ್ಳುತ್ತಾ ಹೋಗುತ್ತಾನೆ. ಅವ್ಯಾವೃತ್ತ ಅಂದರೆ ನಿರಂತರ ಭಜನಾತ್ ಅಂದರೆ ಹರಿಯುವುದು. 

ಜಗತ್ತಿನಲ್ಲಿ ಆಕರ್ಷಣೆಗಳು ಒಮ್ಮೊಮ್ಮೆ ನಿಲ್ಲಿಸುತ್ತದೆ. ಆವಾಗ ನಿಲ್ಲುವ ಸಾಧ್ಯತೆ ಇದೆ. ಮಧುರ ಭಾವ ಜಗತ್ತಿನಲ್ಲಿ ನಿರಂತರವಾಗಿ ಹರಿಯುತ್ತಿರಬೇಕು. ವಾಲ್ಮೀಕಿ ರಾಮಾಯಣದಲ್ಲಿ ಒಂದು ಅದ್ಭುತ ಘಟನೆ ಬರೆಯುತ್ತಾನೆ. ಶಬರಿಗೆ ಗುರುಗಳು ಹೇಳುತ್ತಾರೆ. ರಾಮ ಬರುತ್ತಾನೆ ನೀನು ದಾರಿ ಕಾಯಿ ಅಂತ. ಆಕೆಗೆ ರಾಮ ಯಾರು? ಅಂತ ಗೊತ್ತಿಲ್ಲ. ಯಾವಾಗ ಬರುತ್ತಾನೆ?. ಎಲ್ಲಿ ಬರುತ್ತಾನೆ?. ಅಂತ ಗೊತ್ತಿಲ್ಲ. ಎಲ್ಲಿ ಕಾಯಬೇಕು?. ಅಂತನು ಗೊತ್ತಿಲ್ಲ. ನಾನು ಎಲ್ಲಿ ದಾರಿ ಕಾಯುತ್ತೇನೆ?. ಅಲ್ಲಿಗೆ ಬರಬೇಕು. ಆತ ಬರೋತನಕ, ನಾನು ದಾರಿ ಕಾಯಬೇಕು. ಆದರೆ ನಾವು, ಎಷ್ಟೊತ್ತಿಗೆ? ಯಾವ ಕಡೆಯಿಂದ ಬರುತ್ತಾನೆ?. ಅವ ಹೇಗಿದ್ದಾನೆ?. ಎಲ್ಲಾ ಮಾಹಿತಿ ಕೊಟ್ಟರೆ ನಾವು ದಾರಿ ಕಾಯೋದು. ಶಬರಿಗೆ ಮೊಬೈಲ್ ಇರಲಿಲ್ಲ. ಯಾವ ಮಾಧ್ಯಮ ಇರಲಿಲ್ಲ. ಬರ್ತಾನೆ, ನಾನು ದಾರಿ ಕಾಯಬೇಕು ಅಷ್ಟೇ ಅಂದಳು ಶಬರಿ. ನಾವು ಸಣ್ಣ ಸಣ್ಣ ಸಾಧನೆಗೂ ಬೇಜಾರ್ ಮಾಡಿಕೊಳ್ಳುತ್ತೀವಿ. ಇನ್ನೂ ಆಗಲಿಲ್ಲ ಅನ್ನುತ್ತೇವೆ. ಹಿಂದೆ ಒಂದು ಮಾವಿನ ಗಿಡ ನೆಟ್ಟರೆ ಹಣ್ಣು ಬರಲು 10 ವರ್ಷ ಕಾಯುತ್ತಿದ್ದರು. ನಾವು ಅಷ್ಟು ದಿನ ಯಾಕೆ ದಾರಿ ಕಾಯಬೇಕು. ಐದು ವರ್ಷದಲ್ಲಿ ಬರಬೇಕು ಅನ್ನುತ್ತೇವೆ. ಎಷ್ಟು ನಿಧಾನ ಆಗುತ್ತದೆಯೋ? ಅಷ್ಟು ಮಧುರ. ಅಷ್ಟು ಆರೋಗ್ಯಕರ. ಜೀವನ ಎಂದರೆ ಸಾಧನೆಯ ಅನುಭವ. ಸಿದ್ದಿ ಮಹತ್ವದಲ್ಲ, ಮಾಡುವುದು ಮಹತ್ವದ್ದು. ಬದುಕು ಬಹಳ ಮಹತ್ವದ್ದು. ಬದುಕಿನ ಅಂತ್ಯವಲ್ಲ. ಪ್ರತಿಯೊಂದು ಕ್ಷಣವನ್ನು ಸಂತೋಷದಿಂದ ಅನುಭವಿಸುವುದು. ಶಬರಿಯ ದೈನಂದಿನ ಜೀವನ ಹೇಗಿತ್ತು ...? ಅಂದರೆ ಒಂದು ಸಾದಾ ಸಣ್ಣ ಗುಡಿಸಲು ಹಾಕಿಕೊಂಡು, ವಾಸ ಮಾಡಿದ್ದಳು. ಆಕೆಗೆ ಯಾರಿಲ್ಲ. ಪ್ರತಿದಿನ ಇಂದು ರಾಮ ಬಂದೇ ಬರುತ್ತಾನೆ ಅಂತ ಏಳುವುದು. ರಾಮ ಬರುತ್ತಾನೆ ಅಂತ ಕಸ ಹೊಡೆಯುತ್ತಿದ್ದಳು. ನೀರು ಹಾಕುತ್ತಿದ್ದಳು ಹೂವ ತಂದು ಸಿಂಗರಿಸುತ್ತಿದ್ದಳು. ಪ್ರತಿದಿನ ಹೀಗೆ ಮಾಡುತ್ತಿದ್ದಳು. ಬರುವವರೆಗೆ... ರಾಮ ಬಂದರೆ ಎಷ್ಟು ಸಂತೋಷವೂ ಅಷ್ಟೇ ಸಂತೋಷ ಕೆಲಸ ಮಾಡುವುದರಾಗ. ಇದು ಅವ್ಯಾವೃತ್ತ ಭಜನಾ. ಅಡುಗೆಯನ್ನು ಎರಡು ತಾಸು ಮಾಡುತ್ತೇವೆ. ಬರ್ರಾ ಬರ್ರಾ ಅಂತ ಹತ್ತು ನಿಮಿಷದಲ್ಲಿ ಊಟ ಮಾಡಿ ಮುಗಿಸುತ್ತೀವಿ. ಊಟ ಮಾಡಿದ್ದರಲ್ಲಿ ಸಂತೋಷವಲ್ಲ ಅಡಿಗೆ ಮಾಡುವುದರಲ್ಲಿ ಆನಂದ. ಮಾಡುವ ಪ್ರತಿಯೊಂದು ಕೆಲಸದಲ್ಲಿ ಶಬರಿ ರಾಮನನ್ನು ನೆನೆಸುತ್ತಿದ್ದಳು. ಹಾಗೆ ನಾವು ಯಾವುದೇ ಕೆಲಸ ಮಾಡಿದರೂ ಮನಸ್ಸು ಸತ್ಯದತ್ತ ಹರಿಯುತ್ತಿರಬೇಕು. 

ರವೀಂದ್ರನಾಥ್ ಟಾಗೋರ್ ಗೀತಾಂಜಲಿಯಲ್ಲಿ ಹೇಳುತ್ತಾರೆ ಜಗತ್ತು ಎಂದರೆ ದೇವನ ಉತ್ಸವ. ಭಗವಂತನೇ ಇದು ನಿನ್ನ ಉತ್ಸವದ ವಿಸ್ತಾರ. ದೇವನೇ ನನಗೂ ನೀನು ಆಮಂತ್ರಣ ನೀಡಿದ್ದಿ, ಉತ್ಸವದಲ್ಲಿ ಭಾಗವಹಿಸಲು. ನಾನು ನಿನ್ನ ಉತ್ಸವ ನೋಡಬೇಕು. ನಾನು ನಿನ್ನ ಉತ್ಸವದಲ್ಲಿ ಕಾರ್ಯ ಮಾಡಬೇಕು. ನಾನು ನನ್ನ ತಂಬೂರಿ ಬಾರಿಸಿದ್ದೀನಿ. ನಿನ್ನ ಉತ್ಸವಕ್ಕೆ ಮೆರಗು ಬರಬೇಕಲ್ಲ. ನನ್ನದು ಒಂದು ಚೂರು ಕಾಣಿಕೆ ಇರಲಿ ಅಂತ ನನ್ನ ಜೀವನದ ಮಧುರ ಭಾವ ತಂತಿ ಮೀಟಿದ್ದೀನಿ. ನಿನಗೆ ಸಮ್ಮತವಾಗಿರಬೇಕು ಅಂತ ಭಾವಿಸಿದ್ದೇನೆ. ನಾವೆಲ್ಲ ಜೀವನ ಅಂದರೆ ಹೋರಾಟ ಅಂತ ಭಾವಿಸಿದ್ದೇವೆ. ಕಾರಣ ನಮ್ಮ ಮನಸ್ಸು ಹಾಗಿದೆ. ರವೀಂದ್ರನಾಥ ಟಾಗೋರ್ ಹೇಳುತ್ತಾರೆ ಜೀವನ ಅಂದರೆ ಉತ್ಸವ. ಹೋರಾಟದ ದೃಷ್ಟಿಕೋನ ಇಟ್ಟುಕೊಂಡರೆ ಜಗತ್ತು ರಕ್ತ ರಕ್ತಮಯವಾಗುತ್ತದೆ. ಉತ್ಸವದ ದೃಷ್ಟಿ ಇಟ್ಟುಕೊಂಡರೆ ಜಗತ್ತು ಹೂಮಯವಾಗುತ್ತದೆ. ಮನುಷ್ಯರೇ ಹೋರಾಟ ಮಾಡುವುದು. ಯಾವ ಗಿಡ, ಪಕ್ಷಿ, ಪ್ರಾಣಿ ಹೋರಾಟ ಮಾಡಿಲ್ಲ. ಹೋರಾಟದಿಂದ ಪುಷ್ಪ ಅರಳುವುದಿಲ್ಲ. ಬದುಕಿನ ಅಂಗಳ ಜಗತ್ತಿನಲ್ಲಿ ರಕ್ತಮಯವಾಗುತ್ತದೆ. ದುಃಖ ದ ಅಲೆಗಳು ಏಳುತ್ತವೆ. 

ಬದುಕು ಹಾಡಿನ ಪ್ರವಾಹ ಆಗಿರಬೇಕು. ಅದು ಸತ್ಯಮುಖವಾಗಿರಬೇಕು. ಜನರಿಂದಲೂ ವಿಶ್ವದಿಂದಲೂ ಕೇಳಬೇಕು. ನಾವು ಹಾಡುತ್ತ ಇರಬೇಕು. ಹಾಗೆ ಜೀವನ ರೂಪಿಸುವುದೇ ಭಕ್ತಿ ಸಾಧನ. ರವೀಂದ್ರನಾಥ ಟ್ಯಾಗೋರ್ ಹೇಳುತ್ತಾರೆ ತಂತಿ ಬಾರಿಸುವಾಗ ದೇವನೇ ನಿನ್ನನ್ನು ಮರೆತೆ, ನನ್ನನ್ನು ಮರೆತೆ, ವೀಣೆಯ ನಾದದಲ್ಲಿ ನಾನು ಮರೆತೆ. ನನ್ನ ಕೊನೆ ಕ್ಷಣ ಬರ್ತಾ ಇದೆ. ದಾರಿ ಕಾಯ್ತಾ ಇದ್ದೇನೆ ಭಗವಂತನೇ. ಈ ವೀಣೆ ನಿನಗೆ ಒಪ್ಪಿಸಲು ಕಾಯುತ್ತಿದ್ದೇನೆ. ಎರಡು ಕೆಲಸ ಮಾಡುವುದು. ಅದು ಮಧುರವಾಗಿರಬೇಕು. ಎಲ್ಲಿ ಉತ್ಸಾಹ ಇರುತ್ತದೆಯೋ ಅದು ಉತ್ಸವ ವಾಗುತ್ತದೆ. ನಮ್ಮ ದೇಹ, ಮನ ವೀಣೆ, ಭಾವಗಳು ಕಾಣದಂತಹ ತಂತಿಗಳು, ಸುಮ್ಮನೆ ಬಾರಿಸುತ್ತಿರಬೇಕು. ಏನೇ ಮಾಡಿದರು ಮಧುರತೆ ಹೋಗಬಾರದು. ಆಗ ಬದುಕು ಸುಂದರ. ಅಲ್ಲವೇ ಮಕ್ಕಳೆ.
......................................... ಎಂ.ಪಿ. ಜ್ಞಾನೇಶ್ 
ಶಿಕ್ಷಣಾಧಿಕಾರಿ 
ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ
(ಮಧ್ಯಾಹ್ನ ಉಪಹಾರ ಯೋಜನೆ) 
ಜಿಲ್ಲಾ ಪಂಚಾಯತ್ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ 
******************************************



Ads on article

Advertise in articles 1

advertising articles 2

Advertise under the article