ಸ್ಫೂರ್ತಿಯ ಮಾತುಗಳು : ಸಂಚಿಕೆ - 209
Friday, April 3, 2026
Edit
ಸ್ಫೂರ್ತಿಯ ಮಾತುಗಳು : ಸಂಚಿಕೆ - 209
ಲೇಖಕರು : ರಮೇಶ ಎಂ. ಬಾಯಾರು
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com
ಕರವಸ್ತ್ರವು ಅತ್ಯಂತ ಸಣ್ಣ ವಸ್ತು. ಕರವಸ್ತ್ರ ತರಹೇವಾರಿಯಿದ್ದರೂ ಹತ್ತಿಯ ಕರವಸ್ತ್ರ ಬಳಕೆಯಲ್ಲಿ ಹೆಚ್ಚು ಪ್ರಚಲಿತ ಮತ್ತು ಜನಪ್ರಿಯ. ಕರದೊಳಗೆ ಹಿಡಿದಿಡಬಹುದಾದ ಕಾರಣ ಅದು ಕರವಸ್ತ್ರ. ಕರವಸ್ತ್ರದಿಂದ ಕರವನ್ನೂ ಉಜ್ಜುತ್ತೇವೆ. ಕಣ್ಣು ಬಾಯಿ ಮೀಸೆ ಹುಬ್ಬು ಕಿವಿ ಹೀಗೆ ಎಲ್ಲೆಂದರಲ್ಲಿ ಒರೆಸುತ್ತೇವೆ. ಅದರ ಬಳಕೆಯನ್ನು ಗಮನಿಸಿದರೆ ಪ್ಯಾಂಟು ಶರ್ಟು ಕೋಟುಗಳು ನಾಚಲೇ ಬೇಕು.
ಅದಕ್ಕೇ ಇರಬೇಕು ಅದು ಆಂಗ್ಲ ಭಾಷೆಯಲ್ಲಿ ‘Handkerchief’. ಕರವಸ್ತ್ರದ ಪ್ರಾಮುಖ್ಯತೆಯೇ ಅದನ್ನು chief ಮಾಡಿದೆ. ಕರವಸ್ತ್ರವನ್ನು cheap ಎನ್ನುವವರಿದ್ದರೆ ಅವರಿಗೆ ನನ್ನ ಮತವೇ ಇಲ್ಲ. ಕರವಸ್ತ್ರವನ್ನು Towel ಎಂದೂ ಕರೆಯುತ್ತೇವೆ. “l” ಕಿತ್ತು “r” ಸೇರಿಸಿ Toweʼr’ ಅಂತ ಸ್ವಲ್ಪ ರೂಪಾಂತರಿಸಿ ಮರ್ಯಾದೆ ಕೊಡುತ್ತಿದ್ದರೆ ಇನ್ನೂ ಎತ್ತರದ ಮನ್ನಣೆ ಕರವಸ್ತ್ರಕ್ಕೆ ಬರುತ್ತಿತ್ತೇನೋ. ಆದರೂ ಕರವಸ್ತ್ರಕ್ಕೆ ಗೌರವ ಕೊಡದ ಕೆಲವರನ್ನು ನಾನು ಗಮನಿಸಿದ್ದೇನೆ. ಕೆಸರು ತಾಗಿದ ʼಶೂʼ ವಿನ ಗಲೀಜು ಉಜ್ಜಲು ಕರವಸ್ತ್ರವನ್ನೇ ಬಳಸುತ್ತಾರೆ ಅವರು. ಛೀ ನಾಚಿಕೆಗೇಡು! ಮಳೆ ಬರುವಾಗ ತಲೆಗೆ ಟವೆಲು ಹರಡಿ ಕೆಲವರು ಓಡುವುದಿದೆ. ಈಗ ಕರವಸ್ತ್ರ ಕರಿಯ ಬಣ್ಣದ್ದಲ್ಲದ ಛತ್ರಿ. ಮಳೆಯಿಂದ ಒದ್ದೆಯಾದ ಮುಖ ತಲೆಯನ್ನು ಅದೇ ಕರವಸ್ತ್ರವನ್ನು ಹಿಂಡಿ ಹಿಂಡಿ ಬಳಸುತ್ತೇವೆ. ಎಷ್ಟು ಹಿಂಡಿದರೂ ಅದು ನೋಯದು, ಮತ್ತು ಬೇಸರಿಸದು. ಅದಕ್ಕಿರುವ ತಾಳ್ಮೆ ಛತ್ರಿಗಿಲ್ಲ. ಛತ್ರಿಯನ್ನು ಹಿಂಡಿದರೆ ಮತ್ತೆ ಬಿಡಿಸಲಾಗದು, ಬಳಸಲಾಗದು.
ಕೆಲವೊಮ್ಮೆ ಕರವಸ್ತ್ರ ಶಿರ ವಸ್ತ್ರವಾಗಿಯೂ ಬಳಕೆಯಾಗುತ್ತದೆ. ಶೀತಲ ಮಂಜು ಬೀಳುವಾಗ, ಝಳದ ಬಿಸಿಲು ಬೀಳುವಾಗ ತಲೆಯ ಮೇಲೆ ಟವೆಲು ಹಾಸುವುದಿದೆ. ಬಿಸಿಲಿನ ಝಳ. ಮಂಜಿನ ತಳಮಳಗಳಿಂದ ರಕ್ಷಣೆ ನೀಡಲು ಟವೆಲಿನಷ್ಟು ಸುಲಭದಲ್ಲಿ ಕೈಗೆಟುಕುವ ವಸ್ತು ಇನ್ನೊಂದಿಲ್ಲ.
ಶೀತವಾದರಂತೂ ಮೂಗಿನಿಂದ ಇಳಿಯುವ ರಸದ ಸಂಗ್ರಾಹಕನಾಗಿ ಕರವಸ್ತ್ರವೇ ಬೇಕು. ಸಂಬಳರಹಿತವಾಗಿ ಸಿಂಬಳ ಒರೆಸಿದ ಕರವಸ್ತ್ರ ಕೆಲವೊಮ್ಮೆ ವರ್ಣಮಯವಾಗಿ ಕಂಗೊಳಿಸುತ್ತದೆ. ನಶ್ಯಸೇದುವ ಪುರುಷರಿರಲಿ ಮಹಿಳೆಯರಿರಲಿ ಅವರ ಕರವಸ್ತ್ರ ನೋಡದಿರುವುದೇ ಒಳ್ಳೆಯದು. ವೀಳ್ಯದೆಲೆ ತಿಂದು ಉಗುಳುವವರು ಉಗುಳಿದ ಮೇಲೆ ಕರವಸ್ತ್ರ ಬಳಸುವುದಿದೆ. ರಕ್ತದ ಕಲೆಯಾದಂತೆ ಕಾಣುವ ಅವರ ಕರವಸ್ತ್ರ ಅಪಾಯದ ಸಂಕೇತವನ್ನು ತಿಳಿಸುವ ಪತಾಕೆಯಾಗಿ ಬಳಸಲು ಅತ್ಯಂತ ಯೋಗ್ಯವಾಗಿರುತ್ತದೆ.
ಕೇವಲ ದೇಹದ ಭಾಗವನ್ನು ಒರೆಸಿ ಸ್ವಚ್ಚಗೊಳಿಸುವ ಉದ್ದೇಶವೊಂದಕ್ಕೆ ಮಾತ್ರ ಕರವಸ್ತ್ರ ಮೀಸಲಾಗಿಲ್ಲ. ವಾಚು ಒರೆಸಲು, ಮೊಬೈಲಿನ ಧೂಳು ತೆಗೆಯಲು, ಮೊಬೈಲಿಗೆ ನೀರು ತಾಗದಂತೆ ರಕ್ಷಿಸಲು, ಕನ್ನಡಕ ಸ್ವಚ್ಛಗೊಳಿಸಲು ಹೀಗೆ ಟವೆಲಿನ ಕಾರ್ಯಕ್ಷೇತ್ರ ವಿಶಾಲ ಮತ್ತು ಅನನ್ಯ. ಬಸ್ ನಿಲ್ದಾಣಗಳಿಂದ ಹೊರಡುವ ಬಸ್‌ಗಳನ್ನು ಗಮನಿಸಿದರೆ ಅದು ಪ್ರಯಾಣಿಕನ ಪಾತ್ರನಿರ್ವಹಿಸುವುದೂ ಇದೆ. ಮೊನ್ನೆ ಒಂದು ಬಸ್ ಹತ್ತಿದೆ. ಆರು ಜನ ಕುಳಿತಿದ್ದರು. ಉಳಿದ ಸೀಟುಗಳಲ್ಲಿ ಕರವಸ್ತ್ರಗಳು ಕುಳಿತಿದ್ದುವು. ಒಬ್ಬ ಪ್ರಯಾಣಿಕನಲ್ಲಿ ಅವರ ಪಕ್ಕದ ಆಸನದಲ್ಲಿ ಕುಳಿತ ಟವೆಲನ್ನು ತೋರಿಸುತ್ತಾ ಕೈ ಸನ್ನೆ ಮಾಡಿ ಕೇಳಿದೆ, “ಇವರು???? …..!" ಎಂದೊಡನೆ ಹೇಳಿದರು. “ಅವರು ಪುರುಷರ ಶೌಚಾಲಯಕ್ಕೆ ಹೋಗಿದ್ದಾರೆ. ಈಗ ಬರುತ್ತಾರೆ”. ನನಗನಿಸಿತು ಪಾಪ. ಶೌಚ ಮುಗಿಸಿ ಇವರು ಒರೆಸಬೇಕಾದುದನ್ನು ಹೇಗೆ ಒರೆಸುವರೋ ಏನೋ..!
ಕಿವಿ ತುರಿಸಿದಾಗ ಕಿವಿಗೆ ಟವೆಲು ತೂರುವವರೂ ಇದ್ದಾರೆ. ಟವೆಲನ್ನು ಒಂದು ಮೂಲೆಯಿಂದ ತಿರುಗಿಸುತ್ತಾ ಕೊಳವೆಯಾಕಾರಕ್ಕೆ ತಂದು ಕಿವಿಯೊಳಗೆ ತಳ್ಳುತ್ತಾ ಅದರೊಳಗೆ ಟವೆಲನ್ನು ಗಿರಕಿ ಹೊಡೆಸಿ ಪರಮಾನಂದ ಅನುಭವಿಸುವ ಪರಿಯನ್ನು ನಾನೆಂತು ವರ್ಣಿಸಲಿ! ಆನಂದದ ಅಮಲು ಆ ಮಹಾಪುರುಷನ ಮುಖದಿಂದ ಬಹಳ ಭರ್ಜರಿಯಾಗಿಯೇ ಇಣುಕುತ್ತಿತ್ತು, ನೋಡುಗರನ್ನು ಅಣಕಿಸುತ್ತಿತ್ತು ಆ ಕರವಸ್ತ್ರದ ಕರಾಮತ್ತು..!
ಮುಂದುವರಿಯುತ್ತದೆ…
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
“ಸ್ಕಂದ” ಕುಳ ಗ್ರಾಮ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com
*****************************************