-->
ಪಯಣ : ಸಂಚಿಕೆ - 91 (ಬನ್ನಿ ಪ್ರವಾಸ ಹೋಗೋಣ)

ಪಯಣ : ಸಂಚಿಕೆ - 91 (ಬನ್ನಿ ಪ್ರವಾಸ ಹೋಗೋಣ)

ಪಯಣ : ಸಂಚಿಕೆ - 91 (ಬನ್ನಿ ಪ್ರವಾಸ ಹೋಗೋಣ) 
ಲೇಖನ : ರಮೇಶ ನಾಯ್ಕ, ಉಪ್ಪುಂದ 
ಕನ್ನಡ ಭಾಷಾ ಶಿಕ್ಷಕರು 
ನೇತಾಜಿ ಸುಭಾಶ್ಚಂದ್ರ ಬೋಸ್ 
ಸರಕಾರಿ ಪ್ರೌಢಶಾಲೆ, ಮರವಂತೆ 
ಬೈಂದೂರು ತಾಲೂಕು, ಉಡುಪಿ ಜಿಲ್ಲೆ.
ಮೊಬೈಲ್ : +91 94488 87713

ಪ್ರವಾಸ ಹೋಗುವುದೆಂದರೆ ಯಾರಿಗೆ ತಾನೇ ಇಷ್ಟ ಇಲ್ಲ...? ಹೊಸ ಊರು ನೋಡಬೇಕು.. ಹೊಸ ಹೊಸ ವಿಚಾರ ತಿಳಿದು ಕೊಳ್ಳಬೇಕೆನ್ನುವುದು ಪ್ರತಿಯೊಬ್ಬರ ಬಯಕೆ. ಧಾರ್ಮಿಕ ಕ್ಷೇತ್ರಗಳು, ಐತಿಹಾಸಿಕ ಸ್ಥಳಗಳು, ಪ್ರಕೃತಿಯ ವೈಶಿಷ್ಟ್ಯ ಸಾರುವ ತಾಣಗಳು ಹೀಗೆ ನಾನಾ ಬಗೆಯ ಪ್ರವಾಸಿ ತಾಣಗಳು ಎಲ್ಲರನ್ನೂ ಆಕರ್ಷಿಸುತ್ತದೆ... ಹೀಗೆ ನಮ್ಮ ಊರಿನ, ನಮ್ಮ ರಾಜ್ಯದ, ನಮ್ಮ ದೇಶದ ಸುಂದರ ತಾಣಗಳನ್ನು ಪರಿಚಯಿಸುವ ಪ್ರಯತ್ನ ಇಲ್ಲಿದೆ... ಬನ್ನಿ ಪ್ರವಾಸ ಹೋಗೋಣ... ರಮೇಶ ನಾಯ್ಕ, ಉಪ್ಪುಂದ.

ಎಲ್ಲರಿಗೂ ನಮಸ್ಕಾರ.... ಇಂದಿನ ಪ್ರವಾಸದಲ್ಲಿ 'ಉಡುಪಿ ಜಿಲ್ಲೆಯ ಕಾಜ್ರಳ್ಳಿಯ ವನದೇವತೆಯ ಧಾರ್ಮಿಕ ಸ್ಥಳಕ್ಕೆ' ಪಯಣ ಮಾಡೋಣ ಬನ್ನಿ....

                
ಉಡುಪಿಯಿಂದ ಬಾರಕೂರು ಮಾರ್ಗವಾಗಿ ಸ್ಯಾಬ್ರಕಟ್ಟೆಯಿಂದ ಬಲಕ್ಕೆ 2 ಕಿ.ಮೀ. ಸಾಗಿದರೆ ಕಾರ್ಣಿಕದ ಇಷ್ಟಾರ್ಥಗಳನ್ನು ಪೂರೈಸುವ ವನದುರ್ಗದೇವಿ ದೇವಸ್ಥಾನ ಸಿಗುತ್ತದೆ.

ಆರು ದಶಕಗಳಿಂದ ಅಲ್ಲಿಯೇ ವಾಸಿಸುತ್ತಿರುವ ಸ್ಥಳೀಯರೊಬ್ಬರ ಪ್ರಕಾರ ಅಲ್ಲಿ ಕಾಜರು (ಗಾಜಿನ ಪಾತ್ರೆ ಮಾಡುವವರು) ವಾಸಿಸುತ್ತಿದ್ದರಂತೆ. ಅವರಿಗೆ ಮೂಲಸ್ಥಾನವಾಗಿದ್ದು ಅವರು ದೇವಿಯನ್ನು ಪೂಜಿಸುತ್ತಿದ್ದು, ಅಲ್ಲಿ ಜೀವಿಸುತ್ತಿದ್ದುದರಿಂದ ಆ ಸ್ಥಳಕ್ಕೆ ಕಾಜಿರಹಳ್ಳಿ ಎಂದೇ ಜನಜನಿತವಾಯಿತು.. ಅದು ಬಳಕೆಯಾಗುತ್ತಾ ಕಾಜ್ರಳ್ಳಿ ಎಂದಾಯಿತು ಎಂಬುದು ಅವರ ಅಂಬೋಣ.

ಡಂಬಜಾಸುರ ಎನ್ನುವ ರಾಕ್ಷಸ ಹಂಗಾಪುರದ ಜನರಿಗೆ ನಾನಾ ರೀತಿಯ ಕಿರುಕುಳ ಕೊಡುತ್ತಿದ್ದು, ಅವನ ಸಂಹಾರ ಮಾಡಲಿಕ್ಕಾಗಿ ಜಂಬು ಋಷಿ ಘೋರ ತಪಸ್ಸು ಮಾಡಲನುವಾದಾಗ, ತಪಸನ್ನು ಭಗ್ನಗೊಳಿಸಲು ಕಿರುಕುಳ ನೀಡತೊಡಗಿದ. ಆದರೆ ಋಷಿ ಮುನಿ ಎಲ್ಲವನ್ನೂ ಸಹಿಸಿಕೊಂಡು ಚಿತ್ತವಿಕಲನಾಗದೆ ಶಿವನನ್ನು ಪ್ರಾರ್ಥಿಸಿದಾಗ, ಶಿವನು ಪ್ರತ್ಯಕ್ಷನಾಗಿ, ಆತನ ಸಂಹಾರ ಮಾಡಲು ಆಗದಿದ್ದಾಗ ಪಾರ್ವತಿ ದೇವಿಯನ್ನು ನೆನೆಸಿಕೊಂಡಾಗ, ಪಾರ್ವತೀ ದೇವಿ ಕಾಲಿರಿಸಿದ ಜಾಗವೇ ಕಾಜರಹಳ್ಳಿ (ಕಾಜ್ರಳ್ಳಿ). ಪಾರ್ವತಿ ದೇವಿ ರಾಕ್ಷಸನನ್ನು ಅಲ್ಲಿಯೇ ಸಂಹರಿಸಿದಳು ಎಂಬ ಪ್ರತೀತಿ ಇದೆ.

ಈಗಲೂ ಮರದ ಬುಡದಲ್ಲಿ ಪಾರ್ವತಿ ದೇವಿಯ ಹೆಜ್ಜೆ ಗುರುತುಗಳನ್ನು ಕಾಣಬಹುದಾಗಿದೆ. ತದನಂತರ ವನದುರ್ಗಾದೇವಿ ಕಾಜ್ರಳ್ಳಿಯಲ್ಲಿ ನೆಲೆನಿಂತು ಅರ್ಪಣಾ ಮನೋಭಾವದಿಂದ, ಶರಣಾದವರ ಕಷ್ಟಗಳನ್ನು ಪರಿಹರಿಸುತ್ತಾ ಇಷ್ಟಾರ್ಥಗಳನ್ನು ಪೂರೈಸುತ್ತಾ ಇದ್ದಾಳೆ ಎಂಬುದು ಬಲವಾದ ನಂಬಿಕೆ. ಈ ಕ್ಷೇತ್ರದಲ್ಲಿ ತಪ್ಪು ಮಾಡಿದಲ್ಲಿ ಅದಕ್ಕೆ ತಕ್ಕ ಶಿಕ್ಷೆ ವನದುರ್ಗಾ ದೇವಿ ನೀಡುತ್ತಾಳೆ ಎಂಬುದು ಬಲವಾದ ನಂಬಿಕೆ. ಹೊರಗಡೆಯೇ ನೂರಾರು ವಸ್ತುಗಳಿವೆ. ಆದರೆ ಇಷ್ಟರವರೆಗೆ ಕಳ್ಳತನವಾಗಿಲ್ಲ. ಇದು ದೇವಿಯ ಮಹಿಮೆಗೆ ಜೀವಂತ ನಿದರ್ಶನ ಎಂದರೆ ಉತ್ತೇಕ್ಷೆಯಾಗಲಾರದು.

'ಪ್ರವಾಸ ಮನಸ್ಸಿಗೆ ಶಾಂತಿ ನೀಡುವ ಸಾಧನ. ನಗರಗಳ ಗದ್ದಲದಿಂದ ದೂರವಾಗಿ ಪ್ರಕೃತಿಯ ಮಡಿಲಲ್ಲಿ ಕಾಲ ಕಳೆಯುವುದು ಆತ್ಮಸಂತೋಷ ನೀಡುತ್ತದೆ'.

"ದೈವತ್ವದ ಅಮೋಘ ಸಂಗಮ, ನೈಜ ಐತಿಹ್ಯಗಳ ಕುರುಹುಗಳ ಸಾಕ್ಷಿ, ಬೇಡಿದನ್ನು ದಯಪಾಲಿಸುವ ತಾಯಿಯ ಸನ್ನಿಧಿ, ಹಸಿರಿನ ಮಡಿಲಲ್ಲಿ ಶಾಂತಿಯ ಈ ತಾಣ ಕಾಜ್ರಳ್ಳಿ."

ಮತ್ತೆ ಮುಂದಿನ 'ಪಯಣ' ಸಂಚಿಕೆಯಲ್ಲಿ ಸಿಗೋಣವೇ, ನಮಸ್ಕಾರ.
 (ಚಿತ್ರಗಳು : ಅಂತರ್ಜಾಲ ಕೃಪೆ)
......................... ರಮೇಶ ನಾಯ್ಕ, ಉಪ್ಪುಂದ
ಕನ್ನಡ ಭಾಷಾ ಶಿಕ್ಷಕರು 
ನೇತಾಜಿ ಸುಭಾಶ್ಚಂದ್ರ ಬೋಸ್ 
ಸರಕಾರಿ ಪ್ರೌಢಶಾಲೆ, ಮರವಂತೆ
ಬೈಂದೂರು ತಾಲೂಕು, ಉಡುಪಿ ಜಿಲ್ಲೆ.
ಮೊಬೈಲ್ : +91 94488 87713
****************************************



Ads on article

Advertise in articles 1

advertising articles 2

Advertise under the article